ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್‌ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

By Sathish Kumar KHFirst Published May 20, 2023, 4:28 PM IST
Highlights

ಮೊದಲ ಸಚಿವ ಸಂಪುಟದಲ್ಲೇ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಬೆಂಗಳೂರು (ಮೇ 20): ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್‌ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಶನಿವಾರ ನಡೆದಿದ್ದು, ಮೊದಲ ದಿನವೇ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರ ರಚನೆಯಾಗಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ನಂತರ ಮೊದಲನೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಸಖಿ ಯೋಜನೆಗಳನ್ನು ಎಷ್ಟೇ ಹಣ ಖರ್ಚಾದರೂ ಜಾರಿಗೊಳಿಸುವುದಾಗಿ ತಿಳಿಸಿದರು. ನಾವು ಪ್ರಮುಖವಾಗಿ ನಮ್ಮ ಪ್ರಣಾಳಿಕೆ ಮೂಲಕ ಅನೇಕ ಭರವಸೆಗಳನ್ನು ಕೂಡ ಕೊಟ್ಟಿದ್ದೇವೆ. ಎಲ್ಲ ಭರವಸೆಗಳನ್ನು ಒಂದೇ ವರ್ಷದಲ್ಲಿ ಈಡೇರಿಸುವಂತಹದ್ದಲ್ಲ. 5 ವರ್ಷಗಳಲ್ಲಿ ಈಡೇರಿಸುತ್ತೇವೆ. 5 ಗ್ಯಾರಂಟಿಗಳನ್ನು ಜನತೆಗೆ ವಾಗ್ದಾನದ ರೂಪದಲ್ಲಿ ಕೊಟ್ಟಿದ್ದೆವು. ಮೊದಲ ಸಚಿವ ಸಂಪುಟ ಸಭೆಯಲ್ಲೇ 5 ಗ್ಯಾರಂಟಿ ಈಡೇರಿಸುವುದಾಗಿ ಭರವೆ ನೀಡಿದ್ದು, ಸಚಿವ ಸಂಪುಟದಲ್ಲಿ ನಿರ್ಣಯ ಪಡೆದು ಆದೇಶ ಹೊರಡಿಸುವುದಾಗಿ ಹೇಳಿದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕಾಂಗ್ರೆಸ್‌ ಸರ್ಕಾರದ ಮೊದಲ ಸಚಿವ ಸಂಪುಟ ಆರಂಭ: 5 ಗ್ಯಾರಂಟಿಗಳ ಜಾರಿಗೆ ಷರತ್ತುಗಳ ಚರ್ಚೆ

ರಾಜ್ಯದ 5 ಕಾಂಗ್ರೆಸ್‌ ಗ್ಯಾರಂಟಿಗಳನ್ನು ನಾವು ಕೊಡಲು ಸಿದ್ಧರಾಗಿದ್ದೇವೆ. ಪ್ರತಿವರ್ಷ ಬಜೆಟ್‌ ಮಂಡಿಸುವಾಗ ಕಾಂಗ್ರೆಸ್‌ ಭರವಸೆಗಳನ್ನು ಇಟ್ಟುಕೊಂಡೇ ಬಜೆಟ್‌ ಮಾಡುತ್ತೇವೆ. ಯಾವುದೇ ಸವಾಲುಗಳಿದ್ದರೂ, ಎಷ್ಟೇ ಹಣ ಖರ್ಚಾದರೂ ಸರಿಯೇ ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಈಗ ಮೊದಲ ಸಭೆಯಲ್ಲಿ ಎಲ್ಲ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, 2ನೇ ಕ್ಯಾಬಿನೆಟ್‌ ಸಭೆಯಲ್ಲಿ ಎಷ್ಟು ಹಣ ವೆಚ್ಚವಾಗುತ್ತದೆ ಎಂದು ತಿಳಿದುಕೊಂಡು ಸಂಪೂರ್ಣ ಯೋಜನೆಯೊಂದಿಗೆ ಜಾರಿ ಮಾಡುತ್ತೇವೆ ಎಮದು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳೇನು? 

ಗೃಹಜ್ಯೋತಿ- ಎಲ್ಲಾ ಮನೆಗಳಿಗೂ 200 ಯೂನಿಟ್‌ ಉಚಿತ ಕರೆಂಟ್ ಕೊಡುತ್ತೇವೆ. ಒಂದು ತಿಂಗಳಿಗೆ ಸುಮಾರು 1,200 ಕೋಟಿ ರೂ. ಆಗಬಹುದು. 
ಗೃಹಲಕ್ಷ್ಮಿ- ಪ್ರತಿ ಮನೆ ಯಜಮಾನಿಗೂ ಮಾಸಿಕ 2000 ರೂ. ಸಹಾಯಧನವನ್ನು ಅವರ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು ಹಾಕುತ್ತೇವೆ. 
ಅನ್ನಭಾಗ್ಯ - ಬಿಪಿಎಲ್‌ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ (7 ಕೆಜಿಯಿಂದ 10 ಕೆಜಿಗೆ ಹೆಚ್ಚಳ ಮಾಡುತ್ತೇವೆ- ಈಗ ಬಿಜೆಪಿ ಸರ್ಕಾರ 4 ಕೆಜಿ ಮಾತ್ರ ಕೊಡುತ್ತಿದೆ. 
ಯುವನಿಧಿ - ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ - ಪದವೀಧರರಿಗೆ ತಿಂಗಳಿಗೆ 3000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1500 ರೂ. ನೆರವು (ಈ ವರ್ಷ ಪಾಸಾದ ಪದವೀಧರರಿಗೆ ಮಾತ್ರ ಅನ್ವಯ) 
ಸಖಿ - ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಸಾಮಾನ್ಯ ಬಸ್ಸುಗಳಲ್ಲಿ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ (ಕರ್ನಾಟಕದ ಮಹಿಳೆಯರಿಗೆ ಮಾತ್ರ ಅನ್ವಯ) ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಮಗಳ ಮದುವೆ ಶರ್ಟ್‌ ಧರಿಸಿ ಬಂದ ಡಿಕೆಶಿ, ಗಂಗಾಧರ ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ

ಮೇ 22ರಿಂದ 24ರವರೆಗೆ ವಿಧಾನಸಭಾ ಅಧಿವೇಶನ: ಶಾಸಕರಿಗೆ 24ನೇ ತಾರೀಖಿನೊಳಗೆ ಪ್ರಮಾಣವಚನ ಸ್ವೀಕಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸೋಮವಾರ, ಮಂಗಳವಾರ ಮತ್ತು ಬುಧವಾರ ವಿಧಾನಸಭಾ ಮೊದಲ ಅಧಿವೇಶನ ಕರೆಯುತ್ತಿದ್ದೇವೆ. ಈ ವೇಳೆ ಅರೆಕಾಲಿಕ ವಿಧಾನಸಭಾ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಅವರ ನೇತೃತ್ವದಲ್ಲಿ ವಿಧಾನಸಭಾ ಅಧಿವೇಶನ ನಡೆಸಿ ನಂತರ ಪೂರ್ಣಕಾಲಿಕ ವಿಧಾನಸಭಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. 

click me!