
ಬೆಂಗಳೂರು: ಇಂದು ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಎರಡನೇ ಭಾರಿಗೆ ಮತ್ತೆ ಮುಖ್ಯ ಮಂತ್ರಿಯಾಗಿದ್ದಾರೆ. ಬಳಿಕ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ 8 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರೆಲ್ಲಾ ಕಂಠೀರವ ಸ್ಟೇಡಿಯಂನಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಿದ್ದರಾಮಯ್ಯ ಅವರ ಸಂಪುಟ ದರ್ಜೆ ಸಚಿವರಾಗಿ ಪರಮೇಶ್ವರ್, ಪ್ರಿಯಾಂಕ ಖರ್ಗೆ, ಜಮೀರ್ ಅಹಮದ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸಮಾರಂಭದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಸ್ಟಾಲಿನ್, ನಟ ಕಮಲ್ ಹಾಸನ್, ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಜೇಂದ್ರ ಸಿಂಗ್ ಬಾಬು, ದುನಿಯಾ ವಿಜಯ್, ನಟಿ ರಮ್ಯಾ, ಭಾವನಾ, ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.
ಸರ್ಕಾರ ರಚನೆ ಬೆನ್ನಲ್ಲೇ ಉಚಿತ ಭರವಸೆ ಕುರಿತು ರಾಹುಲ್ ಗಾಂಧಿ ಮಹತ್ವದ ಸಂದೇಶ!
ಮೊದಲಿಗೆ ಡಾ.ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ಸರ್ಕಾರದ ಮೊದಲ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು, ಬಳಿಕ ಸಿದ್ದರಾಮಯ್ಯ ಅವರ ಬೆನ್ನು ತಟ್ಟಿದ್ದಾರೆ.
ನೂತನ ಸಚಿವರಾಗಿ ಕೆ. ಹೆಚ್. ಮುನಿಯಪ್ಪ ಪ್ರಮಾಣವಚನ ಸ್ವೀಕರಿಸಿದ್ದು, ಇವರು ದೇವರ ಹೆಸರಿನಲ್ಲಿ ಪದಗ್ರಹಣ ಮಾಡಿದ್ದಾರೆ.
ಬಳಿಕ ದೇವರ ಹೆಸರಿನಲ್ಲಿ ಕೆ.ಜೆ. ಜಾರ್ಜ್ ಪ್ರಮಾಣವಚನ ಸ್ವೀಕರಿಸಿದ್ದು, ಅವರಿಗೆ ಡಿಕೆಶಿ ಆತ್ಮಿಯ ಆಲಿಂಗನ ಮಾಡಿದ್ದಾರೆ.
ನಂತರ ದೇವರ ಹೆಸರಿನಲ್ಲಿ ಎಂ.ಬಿ. ಪಾಟೀಲ್ ಪ್ರಮಾಣ ಸ್ವೀಕರಿಸಿದ್ದು, ಅವರು ಸಿದ್ದರಾಮಯ್ಯ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ಡಿ.ಕೆ. ಶಿವಕುಮಾರ್ ಅವರ ಬೆನ್ನುತಟ್ಟಿದರು.
ಸಿದ್ದರಾಮಯ್ಯ ಸಂಪುಟದ ಸಚಿವರಾಗಿ ಸತೀಶ್ ಜಾರಕಿಹೊಳಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಮಾಡಿದರು.
ನೂತನ ಸಚಿವರಾಗಿ ಪ್ರಿಯಾಂಕ್ ಖರ್ಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ.
ಅಲ್ಲಾಹ್ ಮತ್ತು ತಾಯಿ ಹೆಸರಿನಲ್ಲಿ ಸಿದ್ದರಾಮಯ್ಯ ಸಂಪುಟದ ಸಚಿವರಾಗಿ ಬಿಝೆಡ್ ಜಮೀರ್ ಅಹ್ಮದ್ ಖಾನ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಿದ್ದರಾಮಯ್ಯ ಸಂಪುಟದ ಸಚಿವರಾಗಿ ರಾಮಲಿಂಗಾ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.