* ಇಬ್ಬರೂ ಅವಕಾಶವಾದಿ ರಾಜಕಾರಣಿಗಳು
* ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಆ ಪಕ್ಷಕ್ಕೆ ಹಾರುವುದು ಇವರ ಜಾಯಮಾನ
* ಯಾವುದೇ ಅಧಿಕಾರ ಸಿಗದಿದ್ದರೆ ಇಬ್ಬರೂ ಪಕ್ಷ ಬಿಡುವ ಮಾತನಾಡುತ್ತಾರೆ
ಶಿವಮೊಗ್ಗ(ಜ.30): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaia) ಮತ್ತು ಕಾಂಗ್ರೆಸ್ ತೊರೆದಿರುವ ಸಿ.ಎಂ. ಇಬ್ರಾಹಿಂ(CM Ibrahim) ಇಬ್ಬರೂ ಅವಕಾಶವಾದಿ ರಾಜಕಾರಣಿಗಳಾಗಿದ್ದು, ಅವಳಿ ಜವಳಿಯಿದ್ದಂತೆ ಎಂದು ಸಚಿವ ಕೆ.ಎಸ್‌ಈಶ್ವರಪ್ಪ(KS Eshwarappa) ಲೇವಡಿ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಬ್ಬರೂ ಬೇರೆ ಬೇರೆ ಅಲ್ಲ. ಅವರಿಗೆ ಆ ಪಕ್ಷ ಈ ಪಕ್ಷ ಯಾವುದೂ ಇಲ್ಲ . ಇಬ್ಬರಿಗೂ ಅಧಿಕಾರದ ಆಸೆ. ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಆ ಪಕ್ಷಕ್ಕೆ ಹಾರುವುದು ಇವರ ಜಾಯಮಾನ. ಯಾವುದೇ ಅಧಿಕಾರ ಸಿಗದಿದ್ದರೆ ಇಬ್ಬರೂ ಪಕ್ಷ ಬಿಡುವ ಮಾತನಾಡುತ್ತಾರೆ. ಹಾಗಾಗಿ ಅವರು ಯಾವ ಪಕ್ಷಕ್ಕೆ ಹಾರುತ್ತಾರೆ ಎಂಬುದಕ್ಕೆ ಮಹತ್ವವಿಲ್ಲ ಎಂದರು.
Karnataka Politics: ಸೋನಿಯಾ ಕರ್ನಾಟಕ್ಕೆ ಮಹಾದಾಯಿ ನೀರು ಕೊಡಲ್ಲ ಅಂದಿದ್ರು: ಈಶ್ವರಪ್ಪ
ಜಿಪಂ, ತಾಪಂ ಎಲೆಕ್ಷನ್ ಬಗ್ಗೆ ಶೀಘ್ರವೇ ನಿರ್ಧಾರ
ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯನ್ನು(ZP and TP Election) ನಡೆಸುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಈ ಹಿಂದೆ ಜಿಪಂ, ತಾಪಂ ಚುನಾವಣೆಗೆ ನಿಗದಿ ಮಾಡಿದ್ದ ಮೀಸಲಾತಿ ಆಕ್ಷೇಪಿಸಿ 780ಕ್ಕೂ ಹೆಚ್ಚು ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಎಲ್ಲ ಜಿಲ್ಲೆಗಳಿಂದ ಕ್ಷೇತ್ರ ವಿಂಗಡನೆ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಈ ಸಮಿತಿ ವರದಿ ಸಲ್ಲಿಸಿದ ಬಳಿಕ ಮೀಸಲಾತಿ ನಿಗದಿಪಡಿಸಿ ಚುನಾವಣೆ ದಿನಾಂಕ ಪ್ರಕಟಿಸಲಾಗುವುದು ಎಂದರು.
ಕಾಂಗ್ರೆಸ್ ಗೆದ್ದಲು ತಿಂದ ಮರ: ಈಶ್ವರಪ್ಪ ವ್ಯಂಗ್ಯ
ಚಿಕ್ಕಮಗಳೂರು(Chikkamagaluru): ‘ಕಾಂಗ್ರೆಸ್(Congress) ಗೆದ್ದಲು ತಿಂದ ಮರ. ಇಲ್ಲಿ ಬಿಟ್ಟಿರೋ ಮಾವಿನ ಹಣ್ಣುಗಳು ಕೊಳೆತು ನಾರುತ್ತಿವೆ. ಇಲ್ಲಿ ಒಳ್ಳೆಯ ಹಣ್ಣು ಬಿಡೋದಿಲ್ಲ. ಹುಳ ಬಿದ್ದಿರುವ ಹಣ್ಣುಗಳು ಉದುರಿಹೋಗುತ್ತಿವೆ. ಕೊಳೆತ ಹಣ್ಣನ್ನು ಯಾರಾದರೂ ಖರೀದಿ ಮಾಡ್ತಾರಾ?’. ಇದು ಬಿಜೆಪಿಯ(BJP) ಕೆಲವು ಸಚಿವರು, ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿರುವ ಪರಿ.
ಜ. 25 ರಂದು ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಕೊಳತೆ ನಾರುತ್ತಿದೆ. ಬಿಜೆಪಿ ಮತ್ತು ಮೋದಿ ಸೇಬು. ಇದನ್ನು ಬಿಟ್ಟು ಯಾರಾದರೂ ಕೊಳೆತ ಮಾವಿನ ಹಣ್ಣಿನ ಹತ್ತಿರ ಹೋಗ್ತಾರಾ? ಅವರ ಪಕ್ಷಕ್ಕೆ ಬೇಡಿಕೆ ಕುದುರಿಸಲು ಈ ಆಟ ಆಡುತ್ತಿದ್ದಾರೆ ಎಂದು ಹೇಳಿದರು.
Karnataka Politics ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ, ಈಶ್ವರಪ್ಪ ಹೇಳಿದ್ದಿಷ್ಟು
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಿನಿಂದ ಇದನ್ನೇ ಹೇಳಿಕೊಳ್ಳುತ್ತಾ ಬಂದರು. ಜೆಡಿಎಸ್-ಕಾಂಗ್ರೆಸ್ ಸರ್ಕಾರ(JDS-Congress Government) ಇದ್ದಾಗಲೂ ಇದನ್ನೇ ಹೇಳುತ್ತಾ ಬಂದ್ರು, ಅವರ ಪಕ್ಷದಲ್ಲಿಯೇ ಇದ್ದ 17 ಜನ ಹೊರಗೆ ಬಂದರು. ಸಿಎಂ ಸ್ಥಾನ ಕಳೆದುಕೊಂಡರು. ಸರ್ಕಾರ ಕಳೆದುಕೊಂಡರು, ಇನ್ನು ಮಾನ ಮರ್ಯಾದೆ ಇಲ್ಲದ ಹಾಗೆ ಮಾತು ಆಡ್ತಾರಲ್ಲ ಎಂದರು.
ಡಿ.ಕೆ. ಶಿವಕುಮಾರ್(DK Shivakumar), ಸಿದ್ದರಾಮಯ್ಯಗೆ ಸವಾಲ್ ಹಾಕುವೆ. ಒಬ್ಬ ಬಿಜೆಪಿಯ ಸಿಂಹದಮರಿ ಎಂಎಲ್‌ಎ ಕಾಂಗ್ರೆಸ್ ಬರುವುದಾದರೆ ಅವರ ಹೆಸರು ಹೇಳಲಿ, ಬರೀ ಪುಕ್ಸಟ್ಟೆಮಾತುಗಳನ್ನು ಆಡುತ್ತಿದ್ದಾರೆ. ನಾನು ಬದುಕಿದ್ದೇನೆ, ಜೀವಂತವಾಗಿದ್ದೇನೆ ಎಂದು ಸೋನಿಯಾ ಗಾಂಧಿ ಅವರಿಗೆ ಅರ್ಥ ಮಾಡಿಸಲು ಈ ರೀತಿಯ ಉಡಾಫೆ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.