* ಊಡುಪಿ ಜಿಲ್ಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದ
* ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ
* ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಕಿಡಿ
ಬೆಂಗಳೂರು, (ಫೆ.04): ಉಡುಪಿ (Udupi) ಜಿಲ್ಲೆಯ ಕಾಲೇಜುಗಳಲ್ಲಿ ಹಿಜಾಬ್ (Hijab) ವಿವಾದ ತಾರಕಕ್ಕೇರಿದ್ದು, ಇದೀಗ ಇದು ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗುತ್ತಿದೆ.
ಇನ್ನು ಈ ಹಿಜಾಬ್ ವಿವಾದದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಪ್ರತಿಕ್ರಿಯಿಸಿದ್ದು, ತಮ್ಮ ಧರ್ಮಗಳಿಗೆ ಅನುಗುಣವಾಗಿ ವಸ್ತ್ರಧಾರಣೆ ಮಾಡುವ ಹಕ್ಕನ್ನು ದೇಶದ ಸಂವಿಧಾನ ನೀಡಿದೆ ಎಂದು ಹೇಳುವ ಮೂಲಕ ಹಿಜಾಬ್ ಪರ ಬ್ಯಾಟಿಂಗ್ ಮಾಡಿದ್ದಾರೆ.
Hijab Row ಹಿಜಾಬ್ ವಿವಾದ, ಮಹತ್ವದ ಸೂಚನೆ ಕೊಟ್ಟ ಕರ್ನಾಟಕ ಶಿಕ್ಷಣ ಇಲಾಖೆ
ಬೆಂಗಳೂರಿನಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಧರ್ಮಗಳಿಗೆ ಅನುಗುಣವಾಗಿ ವಸ್ತ್ರಧಾರಣೆ ಮಾಡುವ ಹಕ್ಕನ್ನು ದೇಶದ ಸಂವಿಧಾನ ನೀಡಿದೆ. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಯಾವ ಕಾನೂನು ಕೂಡಾ ಇಲ್ಲ. ಹೀಗಿರುವಾಗ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದರು.
ಕುಂದಾಪುರದ ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರು ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಲೇಜು ಗೇಟ್ ಹಾಕಿ ಪ್ರವೇಶ ನಿರಾಕರಿಸಿರುವುದು ಅಮಾನವೀಯ ಮಾತ್ರವಲ್ಲ ಸಂವಿಧಾನ ಬಾಹಿರವೂ ಹೌದು. ಕೂಡಲೇ ಕಾಲೇಜಿನ ಪ್ರಾಂಶುಪಾಲರನ್ನು ವಜಾಗೊಳಿಸಬೇಕು ಆಗ್ರಹಿಸಿದರು.
ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೇ ಸಂಘ ಪರಿವಾರದ ನಿಜವಾದ ಅಜೆಂಡಾ, ಹಿಜಾಬ್ ಒಂದು ನೆಪ ಅಷ್ಟೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಆಗಾಗ ಘೋಷಣೆ ಕೂಗುವ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಈ ವಿವಾದ ಬಂದಿಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಮತ್ತು ಸಂಘ ಪರಿವಾರ ಬಹಳ ವ್ಯವಸ್ಥಿತವಾಗಿ ಹಿಜಾಬ್ ವಿವಾದವನ್ನು ರಾಜ್ಯದಾದ್ಯಂತ ಪಸರಿಸುವ ಪ್ರಯತ್ನ ನಡೆಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಇಂತಹ ಕೃತ್ಯಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ವಿವಾದ ತಾರಕಕ್ಕೆ
ಇತ್ತೀಚಿಗೆ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇಂದು (ಫೆ.04) 20 ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ಆಗಮಿಸಿದ್ದಾರೆ. ಅವರನ್ನು ಕಾಲೇಜಿನ ಗೇಟ್ ಬಳಿಯಲ್ಲೇ ತಡೆದಂತ ಪ್ರಾಂಶುಪಾಲರು, ಉಪನ್ಯಾಸಕರು, ಹಿಜಾಬ್ ಧರಿಸಿ ಬಂದ್ರೇ ಒಳಗೆ ಬಿಡೋದಿಲ್ಲ ಎಂದು ನಿರಾಕರಿಸಲಾಗಿದೆ.
ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರ ಜೊತೆಗೆ ಪೋಷಕರು ಆಗಮಿಸಿದ್ದು, ಕಾಲೇಜಿಗೆ ಹಿಜಾಬ್ ಧರಿಸಿ ಪ್ರವೇಶಿಸೋದಕ್ಕೆ ಅವಕಾಶ ನೀಡಬೇಕು ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ರೆ ಮಧ್ಯಪ್ರವೇಶಿಸಿದಂತೆ ಪೊಲೀಸ್ ಅಧಿಕಾರಿ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಮನವೊಲಿಕೆಯ ಪ್ರಯತ್ನ ನಡೆಸಿದ್ದಾರೆ.
ಹೈಕೋರ್ಟ್‌ನಲ್ಲಿ ಹಿಜಾಬ್
ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿ ಪಡಿಸಿದ ಘಟನೆ ಈಗ ಕೋರ್ಟ್ ಮೇಟ್ಟಿಲೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. ಉಡುಪಿ ಶಾಸಕ ರಘುಪತಿ ಭಟ್ ಅವರು ಕಾನೂನುಬಾಹಿರವಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆಕ್ಷೇಪಿಸಲಾಗಿದ್ದು, ಈ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಲಾಗಿದೆ.
ವಿದ್ಯಾರ್ಥಿನಿಯರಾದ ಆಯೇಷಾ ಹಜೀರಾ ಅಲ್ಮಾಸ್, ರೇಶಮ್ ಫಾರೂಕ್, ಅಲಿಯಾ ಅಸ್ಸಾದಿ, ಶಫಾ, ಶಮೀಮ್, ಮುಸ್ಕಾನ್ ಜೈನಬ್ ಅವರನ್ನು ಅವರ ತಾಯಂದಿರುವ ಪ್ರತಿನಿಧಿಸಿದ್ದು, ವಕೀಲ ಮೊಹಮ್ಮದ್ ತಾಹೀರ್ ಅವರ ಮೂಲಕ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿ, ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಉಡುಪಿ ಶಾಸಕ ರಘುಪತಿ ಭಟ್ ಅವರಲ್ಲದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕರು, ಉಡುಪಿ ಜಿಲ್ಲಾಧಿಕಾರಿ, ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಪ್ರತಿವಾದಿಗಳನ್ನಾಗಿಸಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿದೆ. ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 8) ಮುಂದೂಡಲಾಗಿದೆ.