* ಕಾವೇರಿ, ಕೃಷ್ಣಾ ಸೇರಿ 6 ನದಿ ಜೋಡಣೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ
* ನದಿ ಜೋಡಣೆಗೆ ವಿರೋಧಿಸಿದ ಸಿದ್ದರಾಮಯ್ಯ
* ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದ ಸಿದ್ದು
ಬೆಂಗಳೂರು, (ಫೆ.04): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ನದಿ ಜೋಡಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದ್ರೆ, ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದು, ಇದರಿಂದ ನಮಗೆ(ಕರ್ನಾಟಕ) ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದಿದ್ದಾರೆ. ಅದು ಹೇಗೆ ಎನ್ನುವುದನ್ನು ಸಿದ್ದರಾಮಯ್ಯ ವಿವರವಾಗಿ ಹೇಳಿದ್ದು, ಈ ಕೆಳಗಿನಂತಿದೆ ಓದಿ
ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು
ಕರ್ನಾಟಕವೂ ಸೇರಿದಂತೆ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸದೆ, ರಾಜ್ಯದ ಜನರ ಅಭಿಪ್ರಾಯ ಪಡೆಯದೆ ನದಿ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡಿರುವ ದ್ರೋಹ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಕ್ಷಿಣದ ನದಿಗಳ ಜೋಡನೆಗೆ ರೂ. 46,000 ಕೋಟಿ ಅನುದಾನದ ಭರವಸೆ ನೀಡಿದ್ದಾರೆ. ಸಚಿವರ ತಮಿಳುನಾಡಿನವರಾಗಿದ್ದ ಕಾರಣಕ್ಕೆ ಈ ಯೋಜನೆ ಪ್ರಸ್ತಾಪ ಮಾಡಿರಬಹುದು. ಇದರಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Union Budget 2022: ವಾಜಪೇಯಿ ಸಂಕಲ್ಪ, ಮೋದಿ ಸಿದ್ದಿ, ಕಾವೇರಿ, ಕೃಷ್ಣಾ ಸೇರಿ 6 ನದಿಗಳ ಜೋಡಣೆ
ಕೃಷ್ಣ, ಗೋಧಾವರಿ, ಪೆನ್ನಾರ್ ಮತ್ತು ಕಾವೇರಿ ನದಿಗಳ ಜೋಡಣೆ ಬಗ್ಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಯಲ್ಲಿ ಚರ್ಚಿಸಲಾಗಿದೆ, ಯೋಜನೆಯಿಂದ 347 ಟಿ.ಎಂ.ಸಿ ನೀರು ಸಿಗಲಿದ್ದು, ದಕ್ಷಿಣದ ರಾಜ್ಯಗಳಿಗೆ ಹಂಚಿಕೆ ಮಾಡುವ ಯೋಜನೆ ಇದಾಗಿದೆ. ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ಶೇ. 70 ಕೃಷಿ ಭೂಮಿ ಮಳೆ ಆಶ್ರಿತ ಪ್ರದೇಶವಾಗಿದೆ. ನದಿಗಳ ಜೋಡಣೆಯಿಂದ ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತೆ. ಹೀಗಿದ್ದಾಗ ನಾವೇಕೆ ಈ ಯೋಜನೆಯನ್ನು ಒಪ್ಪಬೇಕು? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ತಕ್ಷಣ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆದು ನದಿಜೋಡಣೆ ಬಗ್ಗೆ ಚರ್ಚೆ ನಡೆಸಬೇಕು. ನದಿಯಲ್ಲಿರುವ ನೀರಿನ ಲಭ್ಯತೆ ಮತ್ತು ಅದರಲ್ಲಿ ರಾಜ್ಯಗಳ ಪಾಲಿನ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜ್ಯಗಳಿಗೆ ನೀಡಬೇಕು ಎಂದರು.
1978 ರಲ್ಲಿ ಮೊರಾರ್ಜಿ ದೇಸಾಯಿ, ನಂತರ ಪ್ರಧಾನಿ ಎ.ಬಿ.ವಾಜಪೇಯಿ ಅವರು ನದಿ ಜೋಡಣೆ ಯೋಜನೆಯ ಪ್ರಸ್ತಾಪ ಮಾಡಿದ್ದರು. ಗಂಗಾ ನದಿ ಹಿಮಾಲಯದಲ್ಲಿ ಹುಟ್ಟುವ ಕಾರಣಕ್ಕೆ ವರ್ಷವಿಡೀ ತುಂಬಿ ಹರಿಯುವುದರಿಂದ ನಮ್ಮ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಅದು ಹುಸಿಯಾಗಿದೆ. ವಾಜಪೇಯಿ ಅವರು ಗಂಗಾ - ಕಾವೇರಿ ನದಿ ಜೋಡಣೆ ಯೋಜನೆಯನ್ನು ಪ್ರಸ್ತಾಪ ಮಾಡಿದರಾದರೂ ಆ ಬಗ್ಗೆ ಕ್ರಮ ಕೈಗೊಂಡಿಲ್ಲ. ಈಗಿನ ಬಿಜೆಪಿ ಸರ್ಕಾರ ಮತ್ತೆ ನದಿ ಜೋಡಣೆ ಪ್ರಸ್ತಾಪ ಮಾಡಿದೆ. ಇದರ ಸಾಧಕ ಬಾಧಕಗಳ ಬಗ್ಗೆ ರಾಜ್ಯದ ಜನರಿಗೆ ಮೊದಲು ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.
ಬಜೆಟ್ ಮಂಡಿಸಿ ಮೂರು ದಿನಗಳಾದರೂ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿರುವ ನದಿ ಜೋಡಣೆ ಪ್ರಸ್ತಾಪಕ್ಕೆ ಯಾವೊಬ್ಬ ಸಂಸದ, ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಮಾತನಾಡಿಲ್ಲ. ಇವರು ರಾಜ್ಯದ ಹಿತರಕ್ಷಣೆ ಮಾಡುತ್ತಾರ? ಎಂದು ಕಿಡಿಕಾರಿದರು.
ಕರ್ನಾಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನದಿ ಜೋಡಣೆ ಯೋಜನೆ ಘೋಷಣೆ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ತಕ್ಷಣ ಸರ್ವಪಕ್ಷ ಸಭೆ ಕರೆದು, ಚರ್ಚಿಸಿ, ಒಮ್ಮತದ ವಿರೋಧವನ್ನು ಕೇಂದ್ರಕ್ಕೆ ತಿಳಿಸಬೇಕು ಎಂದು ಆಗ್ರಹಿಸುತ್ತೇನೆ.
ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಮೇಕೆದಾಟು ಯೋಜನೆಗೆ ಮೊದಲು ಪರಿಸರ ಅನುಮತಿ ಪತ್ರ ಕೊಡಿಸಲಿ. ದಕ್ಷಿಣದ ನದಿಗಳ ಜೋಡಣೆ ಆ ಮೇಲೆ ನೋಡೋಣ ಎಂದು ತಿವಿದರು.