
ಮೈಸೂರು (ಜು.19): ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ವೇದಿಕೆ ಆಗಬೇಕಿದ್ದ ಸಾಧನಾ ಸಮಾವೇಶ, ಕಾಂಗ್ರೆಸ್‌ನ ಉನ್ನತ ನಾಯಕರ ಅಸಮಾಧಾನಕ್ಕೆ ವೇದಿಕೆಯಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ವೈಮನಸ್ಯ ನೇರಾನೇರವಾಗಿ ಕಂಡಿದೆ.
ಸಿದ್ಧರಾಮಯ್ಯ ಭಾಷಣ ಮಾಡುವ ಮುನ್ನವೇ ಡಿಕೆ ಶಿವಕುಮಾರ್ ವೇದಿಕೆಯಿಂದ ಕೆಳಗಿಳಿದು ಬೆಂಗಳೂರಿನತ್ತ ಹೊರಟರೆ, ಇನ್ನೊಂದೆಡೆ ಸಿಎಂ ಸಿದ್ಧರಾಮಯ್ಯ ವೇದಿಕೆಯ ಮೇಲೆಯೇ ಡಿಕೆ ಶಿವಕುಮಾರ್‌ಗೆ ಟಾಂಗ್ ನೀಡಿದರು.
ಭಾಷಣ ಆರಂಭದ ವೇಳೆ ಎಲ್ಲರಿಗೂ ಸ್ವಾಗತ ಮಾಡಲು ಮುಂದಾದ ಸಿದ್ಧರಾಮಯ್ಯ ಅವರಿಗೆ, ಡಿ ಕೆ ಶಿವಕುಮಾರ್ ಹೆಸರು ಪ್ರಸಾಪಿಸಲಿಲ್ಲ ಎಂದು ಕಾಂಗ್ರೆಸ್ ಮುಖಂಡ ನಟ ಸಾಧುಕೋಕಿಲ ತಿಳಿಸಿದರು. ಈ ವೇಳೆ ಸಿಎಂ,'ಸ್ವಾಗತ ಮಾಡೋದು ಇಲ್ಲಿ ಇರೋರಿಗೆ. ಮನೆಯಲ್ಲಿ ಕೂತಿರೋ ಅವರಿಗೆ ಅಲ್ಲ' ಎಂದು ಹೇಳುವ ಮೂಲಕ ಕಾರ್ಯಕ್ರಮದ ಮಧ್ಯದಲ್ಲೇ ವೇದಿಕೆಯಿಂದ ಹೊರಟ ಡಿಸಿಎಂ ಡಿಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.
ಅದೇ ವಿಚಾರವನ್ನು ತಿರುಗಿ ವೇದಿಕೆಗೆ ಸಿಎಂ ಸ್ಪಷ್ಟಪಡಿಸಿದರು. ಡಿಕೆ.ಶಿವಕುಮಾರ್ ಗೆ ಸ್ವಾಗತಿಸಿಲ್ಲ ಎಂದು ಕೇಳಿದ್ದರು. ವೇದಿಕೆ ಮೇಲಿರುವವರ ಹೆಸರನ್ನು ಹೇಳಿ ಸ್ವಾಗತಿಸಿದ್ದೇನೆ. ಡಿ ಕೆ ಶಿವಕುಮಾರ್ ವೇದಿಕೆಯಲ್ಲಿ ಇಲ್ಲ. ಅವರು ಬೆಂಗಳೂರಿಗೆ ಹೋದರು. ವೇದಿಕೆಯ ಮೇಲೆ ಅವರು ಇಲ್ಲದ ಕಾರಣ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಹೇಳಿದರು.
ಸಿಎಂ ಭಾಷಣ ಆರಂಭ ಮಾಡುತ್ತಿದ್ದಂತೆ ಜನರು ವೇದಿಕೆಯಿಂದ ಖಾಲಿಯಾಗಲು ಆರಂಭಿಸಿದರು. ಈ ವೇಳೆ ಗದರಿದ ಸಿಎಂ ಅಲ್ಲಿಯೇ ಕುಳಿತುಕೊಳ್ಳುವಂತೆ ತಿಳಿಸಿದರು. ನಿಮಗಾಗಿ ಲಕ್ಷಾಂತರ ಖರ್ಚು ಮಾಡಿ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಬಂದು 2 ವರ್ಷ 1 ತಿಂಗಳು ಆಗಿದೆ. ಎರಡು ವರ್ಷದಲ್ಲಿ ನಾವು ಏನು ಮಾಡಿದ್ದೇವೆ ನಿಮಗೆ ತಿಳಿಸಬೇಕು. 20-25 ನಿಮಿಷ ಸಮಯ ಕೊಡಿ. ನಾನು ಅದನ್ನು ಹೇಳುತ್ತೇನೆ ಎಂದು ಕೇಳಿಕೊಂಡು ಸಿಎಂ ಭಾಷಣ ಮುಂದುವರಿಸಿದರು.
ಆದರೆ, ಸಿಎಂ ಮನವಿ ಮಾಡಿಕೊಂಡರೂ ಆಲಿಸದೇ ಜನರು ಖುರ್ಚಿ ಖಾಲಿ ಮಾಡುತ್ತಿದ್ದರು. ಸಿದ್ದರಾಮಯ್ಯ ಕೇಳಿಕೊಂಡ ನಂತರವೂ ಜನರು ಸ್ಥಳದಿಂದ ಎದ್ದು ಹೋಗುತ್ತಿದ್ದರು. ಭಾಷಣ ಅರ್ಧಕ್ಕೆ ಬರುವ ವೇಳೆ ಮುಕ್ಕಾಲು ಭಾಗಕ್ಕೂ ಹೆಚ್ಚು ಜನ ಖಾಲಿ ಖಾಲಿಯಾಗಿದ್ದರು. ಜನರ ನಡವಳಿಕೆಯಿಂದ ಕಸಿವಿಯಾದ ಸಿದ್ದರಾಮಯ್ಯ. 'ಕೊನೆಗೆ ಸಮಯದ ಅಭಾವದಿಂದ ನನ್ನ ಭಾಷಣ ಮೊಟಕು ಮಾಡುತ್ತಿದ್ದೇನೆ..' ಎಂದು ಸಮಜಾಯಿಸಿ ನೀಡಿ ತಮ್ಮ ಭಾಷಣ ನಿಲ್ಲಿಸಿದರು.
ಬಿಜೆಪಿ, ಜೆಡಿಎಸ್ ಮುಖಂಡರ ಒಂದೇ ವೇದಿಕೆಗೆ ಬರಲಿ. ಅವರೇನೂ ಅಭಿವೃದ್ಧಿ ಮಾಡಿದ್ದಾರೆ. ನಾವೇನೂ ಅಭಿವೃದ್ಧಿ ಮಾಡಿದ್ದೇವೆ. ಎಂದು ಚರ್ಚೆ ಗೆ ನಾನು ಬರ್ತಿನಿ. ಬನ್ನಿ ಚರ್ಚೆ ಮಾಡೋಣ ಎಂದು ಜೆಡಿಎಸ್ - ಬಿಜೆಪಿ ಗೆ ಸಿಎಂ ಬಹಿರಂಗ ಸವಾಲು ಹಾಕಿದರು.
ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕಾಗಿ ಸಾಧನಾ ಸಮಾವೇಶ ಆಯೋಜನೆ ಮಾಡಿದ್ದಾರೆ ಎಂದು ಬಿಜೆಪಿ ಜೆಡಿಎಸ್ ನವರು ಅಪಪ್ರಚಾರ ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ನವರು ನಮ್ಮ ಸಾಧನೆಯನ್ನು ಸಹಿಸಿಕೊಳ್ಳಲಾಗದೇ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಎಂದೂ ಸಹ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂತು. ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಸ್ಥಾನಗಳ ಸಂಖ್ಯೆ ಕಡಿಮೆಯಾಗ್ತಿದೆ. ನಾನು ಜೆಡಿಎಸ್ ನಲ್ಲಿದ್ದಾಗ 59 ಸ್ಥಾನ ಗೆದ್ದಿತ್ತು. ಆ ನಂತರ ಜೆಡಿಎಸ್ ಏಕೆ ಹೆಚ್ಚು ಸ್ಥಾನ ಗೆದ್ದಿಲ್ಲ ದೇವೇಗೌಡ್ರೇ? ಕುಮಾರಸ್ವಾಮಿಯವರೇ? ಜೆಡಿಎಸ್ ಇನ್ನೆಂದೂ ಅಧಿಕಾರಕ್ಕೆ ಬರೋದಿಲ್ಲ. ಬಿಜೆಪಿ ಜೆಡಿಎಸ್ ಒಂದಾಗಿದ್ದರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.