
ಬೆಂಗಳೂರು: ಹೆಬ್ಬಾಳದ ಬಳಿ ಮೆಟ್ರೋ ಕಾಮಗಾರಿ ಮುನ್ಸೂಚನೆಯ ಪ್ರಕಾರ ನಡೆಯಬೇಕಿದ್ದರೂ, ಭೂಮಿ ಹಂಚಿಕೆಯಲ್ಲಿ ರಾಜ್ಯ ಸರ್ಕಾರದಿಂದಾದ ವಿಳಂಬಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿದೆ. ಈ ಕುರಿತು ಸ್ಥಳಕ್ಕೆ ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮೆಟ್ರೋ ಅಧಿಕಾರಿಗಳು ಕೂಡಾ ಅವರೊಂದಿಗೆ ಉಪಸ್ಥಿತರಿದ್ದರು.
ಬೆಂಗಳೂರು ಮೆಟ್ರೋ ರೈಲು ನಿಗಮವು ಒಟ್ಟು 45 ಎಕರೆ ಭೂಮಿಗೆ ಸರ್ಕಾರದಿಂದ ಬೇಡಿಕೆ ಇಟ್ಟಿದ್ದರೂ, ರಾಜ್ಯ ಸರ್ಕಾರ ಕೇವಲ 9 ಎಕರೆ ಜಾಗವನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಯೋಜನೆಯ ಭವಿಷ್ಯ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ. ಈ ಭೂಮಿ ಹಂಚಿಕೆ ವಿವಾದದಲ್ಲಿ ಈಗಾಗಲೇ ಬಿಜೆಪಿ ನಾಯಕರು ವಿ.ಸೋಮಣ್ಣ, ಶಾಸಕ ಎಸ್. ಸುರೇಶ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರವು ಖಾಸಗಿ ಡೆವೆಲಪರ್‌ಗಳಿಗೆ ಲಾಭವಾಗುವಂತೆ ಜಮೀನನ್ನು ನೀಡಲು ಮುಂದಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಶೋಭಾ ಕರಂದ್ಲಾಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ಜಾಗವನ್ನು ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಕೆಐಎಡಿಬಿ ರೈತರಿಂದ ವಶಪಡಿಸಿಕೊಂಡಿತ್ತು. ಈವರಗೆ ರೈತರಿಗೆ ಪರಿಹಾರ ನೀಡಲಾಗಿಲ್ಲ. ಜಮೀನು ಖಾಲಿಯಾಗಿಯೇ ಇದೆ. ಈಗ ಕಸದಿಂದ ಕೂಡಿದೆ. ಈ 48 ಎಕರೆ ಪ್ರದೇಶವನ್ನು ಮೆಟ್ರೋ ಯೋಜನೆಗೆ ಬಳಸಬೇಕು. ಇದೇ ಮಾರ್ಗದಲ್ಲಿ ಏರ್‌ಪೋರ್ಟ್ ಮೆಟ್ರೋ ಹಾದು ಹೋಗುತ್ತದೆ. ಈ ಪ್ರದೇಶದಲ್ಲಿಯೇ ಬೋರ್ಡಿಂಗ್ ಪಾಸ್, ಇಮಿಗ್ರೇಷನ್ ಕಚೇರಿಗಳನ್ನು ನಿರ್ಮಾಣ ಮಾಡಬೇಕಾಗಿದೆ. ಇದು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
2024ರ ಮೇ 1ರಂದು ಕಾಂಗ್ರೆಸ್ ಸರ್ಕಾರ 48 ಎಕರೆ ಭೂಮಿಯನ್ನು ಮೆಟ್ರೋ ಯೋಜನೆಗೆ ನೀಡಲು ತೀರ್ಮಾನಿಸಿತ್ತು. ಆದರೆ ಕೇವಲ ಒಂದು ತಿಂಗಳಲ್ಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿರುವುದು ಗಂಭೀರ ಸಂಶಯಗಳಿಗೆ ಕಾರಣವಾಗಿದೆ. “ಯಾವ ರಿಯಲ್ ಎಸ್ಟೇಟ್ ಕಂಪನಿಗೆ ಸರ್ಕಾರ ಸೂಟ್‌ಕೇಸ್ politics ಆಡುತ್ತಿದೆ? ಸರ್ಕಾರ ತನ್ನ ನಿರ್ಧಯವನ್ನೇ ಏಕೆ ಕೈಬಿಡುತ್ತಿದೆ? ಇದರ ಬಗ್ಗೆ ಸರ್ಕಾರ ಜನತೆಗೆ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.
ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ಹೆಬ್ಬಾಳ ಪ್ರದೇಶದಲ್ಲಿ ಕೆಲವೊಂದು ಪ್ರಮುಖ ಸಮಸ್ಯೆಗಳ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎರಡು ಪ್ರಮುಖ ವಿಷಯಗಳು ಮುಂದಿಟ್ಟಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ ಹಾಗೂ ಅಕ್ರಮ ವಲಸಿಗರ ಹಾವಳಿ ಮಾತನಾಡಿದರು.
ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿಕಾರರು ಎದುರಿಸುತ್ತಿರುವ ಜಿಎಸ್‌ಟಿ ಬರೆ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, “ಇದರ ಬಗ್ಗೆ ನಮ್ಮ ಹಣಕಾಸು ಸಚಿವರು ಮಾತಾಡುತ್ತಾರೆ. ಜನತೆಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರವಾಗಬೇಕೆಂಬ ನಿಲುವಿನಲ್ಲಿ ಚರ್ಚೆ ನಡೆಯಲಿದೆ,” ಎಂದು ಹೇಳಿದರು.
ಹೆಬ್ಬಾಳದ ಕೆಂಪಾಪುರದ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ, ಈ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶ ಮತ್ತು ರೋಹಿಂಗ್ಯಾ ಮೂಲದ ವಲಸಿಗರ ಹಾವಳಿ ಕುರಿತು ಕಳವಳ ವ್ಯಕ್ತಪಡಿಸಿದರು. ಆಧಾರ್ ಮತ್ತು ವೋಟರ್ ಐಡಿ ಪರಿಶೀಲನೆ: ಸ್ಲಂ ನಿವಾಸಿಗಳ ಆಧಾರ್, ವೋಟರ್ ಐಡಿ ಮತ್ತು ಬೈಕ್ ರೆಜಿಸ್ಟ್ರೇಶನ್‌ಗಳನ್ನು ಪರಿಶೀಲಿಸಿದ ಅವರು, ಈವರೆಗೂ ನಕಲಿ ದಾಖಲೆಗಳಿಂದ ಭಾರತದಲ್ಲಿ ನೆಲೆಸಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದರು.
“ಹೆಬ್ಬಾಳದ ಈ ಭಾಗದಲ್ಲಿ ಸಾವಿರಾರು ಅಕ್ರಮ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾ ಮೂಲದ ವಲಸಿಗರು ವಾಸಿಸುತ್ತಿದ್ದಾರೆ. ಇವರಲ್ಲಿ ಹಲವರ ಆಧಾರ್ ಕಾರ್ಡ್ ನಕಲಿ ಎಂದು ನನಗೆ ಅನುಮಾನವಿದೆ. ಈ ಬಗ್ಗೆ ನಾನು ಎನ್‌ಐಎ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇನೆ,” ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಈ ಭಾಗದಲ್ಲಿ ನೂರಾರು ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ರೋಹಿಂಗ್ಯಾಗಳು ನಕಲಿ ದಾಖಲೆಗಳ ಆಧಾರದಲ್ಲಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪವನ್ನೂ ಶೋಭಾ ಕರಂದ್ಲಾಜೆ ಮುಂದಿಟ್ಟಿದ್ದಾರೆ. ಇಡೀ ಪ್ರದೇಶದಲ್ಲಿ ಪೊಲೀಸರ ಸಕ್ರಿಯ ತಪಾಸಣೆ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದು, ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.