ನಾನು Pay Cm ಟೀ ಶರ್ಟ್ ಧರಿಸುವೆ, ಬಿಜೆಪಿ ಏನು ಮಾಡುತ್ತೆ ನೋಡ್ತಿನಿ: ಸರ್ಕಾರಕ್ಕೆ ಡಿಕೆಶಿ ಸವಾಲ್

By Anusha Kb  |  First Published Oct 3, 2022, 1:10 PM IST

ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ಪೇ ಸಿಎಂ ಟೀ ಶರ್ಟ್‌ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಟೀ ಶರ್ಟ್ ತೆಗೆಸಿದ ಹಾಗೂ ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಮೈಸೂರು: ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ಪೇ ಸಿಎಂ ಟೀ ಶರ್ಟ್‌ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಟೀ ಶರ್ಟ್ ತೆಗೆಸಿದ ಹಾಗೂ ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಪೇ ಸಿಎಂ ಟೀ ಶರ್ಟ್ ಧರಿಸುತ್ತೇವೆ. ಆಗ ಬಿಜೆಪಿಯವರು ಏನು ಮಾಡುತ್ತಾರೆ ನೋಡುತ್ತೇನೆ  ಎಂದು ಡಿಕೆಶಿ ಕಿಡಿಕಾರಿದ್ದಾರೆ.

ನಂಜನಗೂಡಿನಲ್ಲಿ(Nanjanagud) ಭಾರತ್ ಜೋಡೋ ಸಮಾವೇಶದ ವೇಳೆ ಮಾತನಾಡಿದ ಡಿಕೆಶಿ (DKS), 'ನಾನು ಸಿದ್ದರಾಮಯ್ಯ (Siddaramaia) ಹಾಗೂ ಪಕ್ಷದ ಇತರ ನಾಯಕರು ಪೇ ಸಿಎಂ ಟೀ ಶರ್ಟ್ ಧರಿಸಿ ಭಾರತ್ ಜೋಡೋ(Bharat jodo) ಯಾತ್ರೆಯಲ್ಲಿ ಭಾಗವಹಿಸುತ್ತೇವೆ. ನೋಡೋಣ ಬಿಜೆಪಿಯವರು ನಮಗೇನು ಮಾಡುತ್ತಾರೆ ಎಂದು.. ' ಎಂದು ಹೇಳಿದರು. ಗುಂಡ್ಲುಪೇಟೆಯಲ್ಲಿ ಪೇ ಸಿಎಂ ಧರಿಸಿ ಭಾಗವಹಿಸಿದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು(Police case) ಪ್ರಕರಣ ದಾಖಲಿಸಿದ್ದಾರೆ. ಇಂತಹ ಕೇಸುಗಳಿಗೆಲ್ಲ ನಾವು ಹೆದರುವುದಿಲ್ಲ ಎಂದು ಹೇಳಿದರು. 

Tap to resize

Latest Videos

Pay CM Posters: ಕಾಂಗ್ರೆಸ್‌, ಬಿಜೆಪಿ ಪೋಸ್ಟರ್‌ ಫೈಟ್‌: ಪೇ ಸಿಎಂಗೆ ಕಮಲ ಪಡೆ ಕೌಂಟರ್

ಶನಿವಾರ ಭಾರತ್ ಜೋಡೋ ಯಾತ್ರೆ ವೇಳೆ ಪೊಲೀಸರು ಕೆಲ ಕಾಂಗ್ರೆಸ್ ಕಾರ್ಯಕರ್ತರು ಧರಿಸಿದ್ದ ಟೀಶರ್ಟ್‌ಗಳನ್ನು ತೆಗೆಸಿದ್ದರು. ಅಲ್ಲದೇ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೇ ಸಿಎಂ ಇದು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ(Basavaraja bommai) ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶುರು ಮಾಡಿರುವ ಭ್ರಷ್ಟಾಚಾರದ ವಿರುದ್ಧದ ಅಭಿಯಾನವಾಗಿದೆ. ಸರ್ಕಾರ ಎಲ್ಲದರಲ್ಲೂ 40 ಶೇಕಡಾ ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬೊಮ್ಮಾಯಿ ಫೋಟೋದ ಸ್ಕ್ಯಾನ್ ಕೋಡ್ ನಿರ್ಮಿಸಿ ಪೇ ಸಿಎಂ ಎಂಬ ಪೋಸ್ಟರ್‌ನ್ನು(Poster) ತಯಾರಿಸಿ ಅಂಟಿಸಲು ಶುರು ಮಾಡಿದ್ದರು. ಪೋಸ್ಟರ್ ಕೆಳಗೆ 40 ಶೇಕಡಾ ಇಲ್ಲಿ ಸ್ವೀಕರಿಸಲಾಗುತ್ತದೆ ಎಂಬ ಸಂದೇಶವಿತ್ತು. 

ಈ ಸ್ಕ್ಯಾನ್ ಕೋಡ್‌ನ್ನು ಸ್ಕ್ಯಾನ್ ಮಾಡಿದರೆ ಇದು 40 ಪರ್ಸಂಟ್ ಕಮೀಷನ್ ಸರ್ಕಾರ ಎಂಬ ನಕಲಿ ವೆಬ್‌ಸೈಟ್‌ಗೆ ಜನರನ್ನು ಕರೆದೊಯ್ಯುತ್ತಿತ್ತು.  ಆದರೆ ಕಾಂಗ್ರೆಸ್‌ನ ಈ ಭ್ರಷ್ಟಾಚಾರ ಆರೋಪವನ್ನು ಬಿಜೆಪಿ ಸರ್ಕಾರ ನಿರಾಕರಿಸಿದೆ.

‘ಪೇ-ಸಿಎಂ’ ಪೋಸ್ಟರ್‌ನಲ್ಲಿ ತಪ್ಪಿಲ್ಲ: ಡಿಕೆಶಿ ಸಮರ್ಥನೆ
ಪೇ ಸಿಎಂ ಟಿಶರ್ಟ್ ಧರಿಸಿದ್ದಕ್ಕಾಗಿ ಹಲ್ಲೆ ಆರೋಪ

ಇನ್ನೊಂದೆಡೆ ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಪೇ-ಸಿಎಂ ಟಿಶರ್ಟ್ ಧರಿಸಿದ್ದಕ್ಕಾಗಿ ಪೊಲೀಸರು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಯುವಕ ಅಕ್ಷಯಕುಮಾರ ಸಿಂದಗಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯನ್ನು ಕಾಂಗ್ರೆಸ್‌ ಸೇವಾದಳದ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಕ್ಷಯಕುಮಾರ ದೇವರಹಿಪ್ಪರಗಿ ಬ್ಲಾಕ್‌ ಸೇವಾದಳದ ಅಧ್ಯಕ್ಷರಾಗಿದ್ದಾರೆ. ಅವರು ಪೇ-ಸಿಎಂ ಟಿಶರ್ಟ್‌ ಧರಿಸಿದ್ದ ಕಾರಣಕ್ಕೆ ಪೊಲೀಸರು ಎಳೆದಾಡಿ ಅವರು ಧರಿಸಿದ್ದ ಅಂಗಿಯನ್ನು ಹರಿದು ಹಲ್ಲೆ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ಹಲ್ಲೆ ನಡೆಸಿದ್ದು, ತೀವ್ರ ಆಘಾತಕರ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಅದನ್ನು ಸಂವಿಧಾನಾತ್ಮಕವಾಗಿ ಎದುರಿಸಬೇಕೇ ಹೊರತು, ಈ ರೀತಿ ದಬ್ಬಾಳಿಕೆ ನಡೆಸಿ ಹತ್ತಿಕ್ಕಲು ಪ್ರಯತ್ನಿಸುವುದು ಸರ್ಕಾರಕ್ಕೆ ಗೌರವ ತರುವುದಿಲ್ಲ. ಪೇ-ಸಿಎಂ ಎಂದು ಟೀಶರ್ಟ್‌ ಧರಿಸಿದ ಕಾಂಗ್ರೆಸ್‌ ಕಾರ್ಯಕರ್ತ ಯಾವುದೇ ಅಪರಾಧ ಮಾಡಿಲ್ಲ. ಯಾವುದೇ ಸಮಾಜ ವಿರೋಧಿ ಕೃತ್ಯ ನಡೆಸಿಲ್ಲ. ದೇಶದ್ರೋಹದ ಕೆಲಸ ಮಾಡಿಲ್ಲ. ಅವರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಅಂಥವರ ಮೇಲೆ ಹಲ್ಲೆ ನಡೆಸಿ, ಕೇಸ್‌ ಹಾಕುತ್ತಿರುವುದು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ಪೊಲೀಸರ ಮೂಲಕ ಇಂಥ ಹೇಯ ಕೃತ್ಯ ಮಾಡಿಸುವುದನ್ನು ಕೈಬಿಡಬೇಕು. ಸರ್ಕಾರದ ದುರಾಡಳಿತದಿಂದ ಈಗಾಗಲೇ ಜನ ಬೇಸತ್ತಿದ್ದು, ಕೂಡಲೇ ಸರ್ಕಾರ ಇಂಥ ಜನವಿರೋಧಿ ವರ್ತನೆ ನಿಲ್ಲಿಸಬೇಕು. ಇಲ್ಲದಿದ್ದರೆ ಜನರು ಇಂಥ ದೌರ್ಜನ್ಯಗಳ ವಿರುದ್ಧ ಚುನಾವಣೆಯಲ್ಲಿ ಮತಗಳ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಬಣ್ಣಿ ಎಚ್ಚರಿಕೆ ನೀಡಿದ್ದಾರೆ.

click me!