ಹೈಕಮಾಂಡ್‌ ಹೇಳಿದಂತೆ ಕೇಳಬೇಕಾಗುತ್ತೆ: ಶ್ರೀಗಳ ಮುಂದೆ ಬಿಎಸ್‌ವೈ ಅಸಹಾಯಕತೆ!

By Kannadaprabha News  |  First Published Jul 21, 2021, 7:31 AM IST

* ಸಿಎಂ ಸ್ಥಾನದಲ್ಲಿರಿ ಎಂದರೆ ಇರ್ತೀನಿ ಬೇಡ ಎಂದರೆ ರಾಜೀನಾಮೆ ಕೊಡ್ತೀನಿ

* ಹೈಕಮಾಂಡ್‌ ಹೇಳಿದಂತೆ ಕೇಳಬೇಕಾಗುತ್ತೆ: ಶ್ರೀಗಳ ಮುಂದೆ ಬಿಎಸ್‌ವೈ ಅಸಹಾಯಕತೆ

* ಈ ಬಗ್ಗೆ ಹಿಂದೆಯೂ ನಾನು ಹೇಳಿಕೆ ನೀಡಿದ್ದೆ, ಅದರಲ್ಲಿ ಬದಲಿಲ್ಲ


ಬೆಂಗಳೂರು(ಜು.21): ತಮ್ಮನ್ನು ಭೇಟಿಯಾದ ಸ್ವಾಮೀಜಿಗಳ ನಿಯೋಗದ ಮುಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾಯಕತ್ವ ಬದಲಾವಣೆ ವದಂತಿ ಹಿನ್ನೆಲೆಯಲ್ಲಿ ಮಂಗಳವಾರ ದಿಂಗಾಲೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸುಮಾರು 35ಕ್ಕೂ ಹೆಚ್ಚು ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಯಾವುದೇ ಕಾರಣಕ್ಕೂ ತಾವು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಬಾರದು ಎಂಬ ಒತ್ತಾಯವನ್ನೂ ಮಾಡಿದರು.

Latest Videos

undefined

ಯಡಿಯೂರಪ್ಪ ಪದಚ್ಯುತಿ ವಿರುದ್ಧ ಲಿಂಗಾಯತ ಅಸ್ಮಿತೆ: ಕಾಂಗ್ರೆಸ್ ನಾಯಕರ ಬೆಂಬಲ!

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಇದರಲ್ಲಿ ನನ್ನ ನಿರ್ಧಾರವೇನೂ ಇಲ್ಲ. ಪಕ್ಷದ ಹೈಕಮಾಂಡ್‌ ಹೇಳಿದಂತೆ ಕೇಳಬೇಕಾಗುತ್ತದೆ. ವರಿಷ್ಠರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ರಾಜೀನಾಮೆ ನೀಡಬೇಕು ಎಂದರೆ ರಾಜೀನಾಮೆ ನೀಡುತ್ತೇನೆ. ಈ ಬಗ್ಗೆ ಹಿಂದೆಯೂ ನಾನು ಹೇಳಿಕೆ ನೀಡಿದ್ದೆ. ಈಗಲೂ ನನ್ನ ಆ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂಬ ಅಸಹಾಯಕತೆಯನ್ನು ಹೊರಹಾಕಿದರು ಎನ್ನಲಾಗಿದೆ.

‘ನನಗೆ ಮುಖ್ಯಮಂತ್ರಿಯಾಗಿ ಸಿಕ್ಕ ಅವಧಿಯಲ್ಲಿ ಸಾಧ್ಯವಾದಷ್ಟುಒಳ್ಳೆಯ ಕೆಲಸ ಮಾಡಿದ್ದೇನೆ. ಸರ್ಕಾರದ ಅವಧಿ ಇನ್ನೂ ಎರಡು ವರ್ಷವಿದೆ. ಮುಖ್ಯಮಂತ್ರಿಯಾಗಿ ಮುಂದುವರೆದಲ್ಲಿ ಇನ್ನಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಇಲ್ಲದಿದ್ದರೆ ಇಷ್ಟಕ್ಕೇ ತೃಪ್ತಿಪಡುವೆ ಎಂದೂ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾವಣೆ, ಬಿಜೆಪಿಗೆ ಹೊಸ ಭೀತಿ': 26ಕ್ಕಲ್ಲ, ಆ. 6ಕ್ಕೆ ಕ್ಲೈಮ್ಯಾಕ್ಸ್!

ಆದರೆ, ಯಡಿಯೂರಪ್ಪ ಅವರ ಅಸಹಾಯಕತೆಯ ಮಾತುಗಳನ್ನು ಸ್ವಾಮೀಜಿಗಳು ಒಪ್ಪಲಿಲ್ಲ. ‘ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದು ಬೇಡ. ನಿಮ್ಮ ಅವಧಿಯನ್ನು ಪೂರ್ಣಗೊಳಿಸಬೇಕು. ನಿಮ್ಮಿಂದ ಇನ್ನೂ ಅನೇಕ ಕಲ್ಯಾಣ ಕಾರ್ಯಗಳು ನಡೆಯಬೇಕು. ನಮ್ಮೆಲ್ಲರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ’ ಎಂದು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.

click me!