ಬಿಎಸ್‌ವೈ ಬದಲಾದ್ರೆ, ಕೆಪಿಸಿಸಿಗೆ ಲಿಂಗಾಯತ ಅಧ್ಯಕ್ಷ?: ಸಿದ್ದು ಮಾಸ್ಟರ್‌ ಪ್ಲಾನ್!

By Kannadaprabha NewsFirst Published Jul 21, 2021, 7:17 AM IST
Highlights

* ಲಿಂಗಾಯತರ ಮತ ಕಾಂಗ್ರೆಸ್‌ನತ್ತ ಸೆಳೆಯಲು ಅನುಕೂಲ

* ಬಿಜೆಪಿಗಾಗುವ ನಷ್ಟ, ಕಾಂಗ್ರೆಸ್‌ಗೆ ಲಾಭ: ಸಿದ್ದು ಬಣ ಸಲಹೆ

* ಹೀಗಾದಲ್ಲಿ, ಡಿಕೆಶಿಯನ್ನು ಬದಿಗೆ ಸರಿಸಿ ಸಿದ್ದು ಹಾದಿ ಸಲೀಸು

* ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಮಾಸ್ಟರ್‌ ಪ್ಲಾನ್‌

 ಬೆಂಗಳೂರು(ಜು.21): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪದಚ್ಯುತಿಗೊಂಡರೆ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಲಿಂಗಾಯತ ನಾಯಕರೊಬ್ಬರನ್ನು ಪ್ರತಿಷ್ಠಾಪಿಸುವ ದೂರಗಾಮಿ ಪ್ರಯತ್ನವೊಂದು ಆರಂಭಗೊಂಡಿದೆ.

ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರೆನಿಸಿದ ಯಡಿಯೂರಪ್ಪ ಅವರು ಹುದ್ದೆ ಕಳೆದುಕೊಂಡರೆ ಸಹಜವಾಗಿಯೇ ಆ ಸಮುದಾಯ ಕ್ರುದ್ಧಗೊಳ್ಳುತ್ತದೆ. ಅದರ ಲಾಭವನ್ನು ಕಾಂಗ್ರೆಸ್‌ ಸುಲಭವಾಗಿ ಪಡೆಯಬಹುದು. ಹೀಗಾಗಬೇಕಾದರೆ ಲಿಂಗಾಯತ ನಾಯಕರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಕೂರಿಸಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ಬಣದಿಂದ ಸಲಹೆಯೊಂದು ರವಾನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಹೈಕಮಾಂಡ್‌ ಹೇಳಿದಂತೆ ಕೇಳಬೇಕಾಗುತ್ತೆ: ಶ್ರೀಗಳ ಮುಂದೆ ಬಿಎಸ್‌ವೈ ಅಸಹಾಯಕತೆ!

ಈ ಮೂಲಕ ಒಂದೇ ಏಟಿಗೆ ಎರಡು ಗುರಿ ಸಾಧಿಸುವ ಉದ್ದೇಶ ಸಿದ್ದರಾಮಯ್ಯ ಅವರ ಬಣದ್ದು ಎನ್ನಲಾಗಿದೆ. ಅದು ತಮ್ಮನ್ನು ಪ್ರತಿ ಹೆಜ್ಜೆಯಲ್ಲೂ ವಿರೋಧಿಸುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಬದಲಾಯಿಸುವುದು. ಜತೆಗೆ, ತಮ್ಮ ಆಪ್ತ ಲಿಂಗಾಯತ ನಾಯಕರೊಬ್ಬರನ್ನು ಹುದ್ದೆಯಲ್ಲಿ ಪ್ರತಿಷ್ಠಾಪಿಸುವುದು ಎನ್ನಲಾಗಿದೆ.

ಸಿದ್ದರಾಮಯ್ಯ ಅವರು ಇಂತಹದೊಂದು ಸಲಹೆಯನ್ನು ಹೈಕಮಾಂಡ್‌ಗೆ ನೀಡುವ ಮುನ್ಸೂಚನೆ ಅರಿತಿದ್ದರಿಂದಲೇ ಕಾಂಗ್ರೆಸ್‌ ಮುಖಂಡ ಎಂ.ಬಿ. ಪಾಟೀಲ್‌ ಅವರು ಗಟ್ಟಿಧ್ವನಿಯಲ್ಲಿ ಯಡಿಯೂರಪ್ಪ ಪರ ಹೇಳಿಕೆ ನೀಡತೊಡಗಿದ್ದಾರೆ ಎನ್ನಲಾಗುತ್ತಿದೆ.

ನಾಯಕತ್ವ ಬದಲಾವಣೆ, ಬಿಜೆಪಿಗೆ ಹೊಸ ಭೀತಿ': 26ಕ್ಕಲ್ಲ, ಆ. 6ಕ್ಕೆ ಕ್ಲೈಮ್ಯಾಕ್ಸ್!

ಡಿ.ಕೆ. ಶಿವಕುಮಾರ್‌ ಅವರು ಅಧ್ಯಕ್ಷರಾದ ನಂತರ ಪಕ್ಷಕ್ಕೆ ಸಂಚಲನ ದೊರಕಿರುವುದು ನಿಜವಾದರೂ ಇಡೀ ಒಕ್ಕಲಿಗ ಸಮುದಾಯವನ್ನು ಪಕ್ಷದ ಪರ ತಿರುಗಿಸುವುದು ಸಾಧ್ಯವಿಲ್ಲ. ಏಕೆಂದರೆ, ಗ್ರಾಮೀಣ ಪ್ರದೇಶದಲ್ಲಿ ಒಕ್ಕಲಿಗ ಸಮುದಾಯ ಜೆಡಿಎಸ್‌ ಪರ ನಿಂತಿದ್ದರೆ, ನಗರ ಒಕ್ಕಲಿಗರ ಒಲವು ಈಗಲೂ ಬಿಜೆಪಿಯೇ ಆಗಿದೆ. ಯಡಿಯೂರಪ್ಪ ಅವರು ಪದಚ್ಯುತಿಗೊಂಡರೆ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿಯಿಂದ ಹೊರ ಚಿಮ್ಮಬಹುದು.

ಆಗ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಲಿಂಗಾಯತರಿದ್ದರೆ ಅದರ ಪ್ರಯೋಜನ ಸಹಜವಾಗಿ ಕಾಂಗ್ರೆಸ್‌ಗೆ ದೊರೆಯಲಿದೆ ಎಂದು ಅವರು ಹೈಕಮಾಂಡ್‌ಗೆ ಸಲಹೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನು ಮನಗಂಡೇ ಎಂ.ಬಿ. ಪಾಟೀಲ್‌ ಅವರು ಯಡಿಯೂರಪ್ಪ ಪರ ನಿಲ್ಲುವ ಮೂಲಕ ಸಮುದಾಯದ ಬೆಂಬಲ ಗಿಟ್ಟಿಸಲು ಯತ್ನಿಸುತ್ತಿದ್ದಾರೆ.

ಯಡಿಯೂರಪ್ಪ ಪದಚ್ಯುತಿ ವಿರುದ್ಧ ಲಿಂಗಾಯತ ಅಸ್ಮಿತೆ: ಕಾಂಗ್ರೆಸ್ ನಾಯಕರ ಬೆಂಬಲ!

ತನ್ಮೂಲಕ ವೀರಶೈವ-ಲಿಂಗಾಯತ ವಿಭಜನೆಗೆ ಮುಂದಾದರೂ ಎಂಬ ತಮ್ಮ ಮೇಲಿನ ಕಳಂಕವನ್ನು ಕಳೆದುಕೊಳ್ಳುವುದು ಜತೆಗೆ ಸಮುದಾಯದ ಬೆಂಬಲವನ್ನು ಗಿಟ್ಟಿಸುವುದು ಎಂ.ಬಿ. ಪಾಟೀಲ್‌ ಚಿಂತನೆ ಎನ್ನಲಾಗಿದೆ. ಇದು ಸಾಧ್ಯವಾದರೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಹಕ್ಕು ಜಮಾಯಿಸಲು ಅವಕಾಶ ದೊರೆಯಲಿದೆ ಎಂಬ ಆಲೋಚನೆಯನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ.

click me!