ಸಿಎಂ ಕೂಗು ನಿಲ್ಲಿಸಿ: ಡಿಕೆಶಿ, ಸಿದ್ದುಗೆ ರಾಹುಲ್‌ ವಾರ್ನಿಂಗ್!

By Kannadaprabha NewsFirst Published Jul 21, 2021, 7:25 AM IST
Highlights

* ಸಾಮೂಹಿಕ ನಾಯಕತ್ವ ಮಂತ್ರ ಜಪಿಸಿದ ಕಾಂಗ್ರೆಸ್‌ ನಾಯಕ

* ರಾಜ್ಯದಲ್ಲಿ 150+ ಸ್ಥಾನ ಗೆಲ್ಲಲು ಇಬ್ಬರೂ ನಾಯಕರಿಗೆ ಗುರಿ

* ಸಿಎಂ ಕೂಗು ನಿಲ್ಲಿಸಿ: ಡಿಕೆಶಿ, ಸಿದ್ದುಗೆ ರಾಹುಲ್‌ ತಾಕೀತು

ನವದೆಹಲಿ(ಜು.21): ಕಾಂಗ್ರೆಸ್‌ ಪಕ್ಷ ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. ಹೀಗಾಗಿ, ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಗೊಂದಲ ನಿರ್ಮಾಣವಾಗದಂತೆ ನೋಡಿಕೊಳ್ಳಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸ್ಪಷ್ಟನಿರ್ದೇಶನ ನೀಡಿದೆ.

ಪೆಗಾಸಸ್ ಬಳಿಕ ಛತ್ತೀಸ್‌ಗಢ ಫೋನ್ ಟ್ಯಾಪಿಂಗ್ ಸದ್ದು, ಗಾಂಧಿ ಕುಟುಂಬಕ್ಕೆ ಸವಾಲು!

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನವದೆಹಲಿಯಲ್ಲಿ ಮಂಗಳವಾರ ಸರಣಿ ಸಭೆಗಳನ್ನು ನಡೆಸಿದರು. ಈ ವೇಳೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತು ಕಾಂಗ್ರೆಸ್‌ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ವಿವರ ಪಡೆದ ಅವರು ಉಭಯ ನಾಯಕರಿಗೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 150ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವ ಗುರಿ ನೀಡಿದ್ದಾರೆ. ಜೊತೆಗೆ ಮುಂದಿನ ಸಿಎಂ ಕೂಗು ನಿಲ್ಲಿಸಲು ತಮ್ಮ ಬೆಂಬಲಿಗರಿಗೆ ಸೂಚಿಸುವಂತೆ ಖಡಕ್‌ ಸೂಚನೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಮಂಗಳವಾರ ಎರಡು ಹಂತಗಳಲ್ಲಿ ಸಭೆ ನಡೆಸಿದರು. ಮೊದಲ ಹಂತದಲ್ಲಿ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಜೊತೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಅರ್ಧ ಗಂಟೆ ಮಾತುಕತೆ ನಡೆಸಿದರು. ನಂತರ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಜೊತೆ ಪ್ರತ್ಯೇಕವಾಗಿ ಅರ್ಧ ಗಂಟೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಅವರು, ‘ಕರ್ನಾಟಕದಲ್ಲಿ ಬಿಜೆಪಿ ವರ್ಚಸ್ಸು ದಿನೇ ದಿನೇ ಕುಸಿಯುತ್ತಿದೆ. ಇದು ಪಕ್ಷಕ್ಕೆ ಅತ್ಯಂತ ಅನುಕೂಲಕರ. ಈ ಪರಿಸ್ಥಿತಿ ಕೈ ತಪ್ಪಿಹೋಗದಂತೆ ನಾಯಕರು ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಂದಿನ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾಪ ಮಾಡದಂತೆ ಬೆಂಬಲಿಗರಿಗೆ ಸೂಚಿಸಿ’ ಎಂದರು.

ಪೆಗಾಸಸ್ ಪೂರ್ವನಿಯೋಜಿತ ಪಿತೂರಿ; ಕಾಂಗ್ರೆಸ್ ರಾಜಕೀಯದಾಟ ತೆರೆದಿಟ್ಟ ರವಿಶಂಕರ್ ಪ್ರಸಾದ್!

ಪಕ್ಷ ಸಂಘಟನೆಗೆ ಸಂಬಂಧ ಪಟ್ಟವಿಚಾರಗಳಲ್ಲಿ ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿಯಿಡಿ. ಪಕ್ಷ ಸಂಘಟನೆಗೆ ಒತ್ತು ನೀಡುವಂತೆ, ಎಲ್ಲರೂ ಒಟ್ಟಾಗಿ ಹೋಗುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ರಾಜ್ಯದಲ್ಲಿ ಪಕ್ಷವನ್ನು ಗ್ರಾಮ ಮತ್ತು ವಾರ್ಡ್‌ ಮಟ್ಟದಲ್ಲಿ ಬಲಪಡಿಸುವ ಮೂಲಕ ಸಂಘಟಿಸುವ ಬಗ್ಗೆ ಚರ್ಚೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ಒಟ್ಟಾಗಿ ಹೋಗುತ್ತೇವೆ

ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇವೆ. ಆಂತರಿಕ ಪ್ರಜಾಪ್ರಭುತ್ವ ಇರುವ ಕಡೆ ಸಣ್ಣಪುಟ್ಟಅಭಿಪ್ರಾಯ ಇರುತ್ತವೆ. ಇವು ಪಕ್ಷಕ್ಕೆ ಡ್ಯಾಮೇಜ್‌ ಆಗಲ್ಲ. ಎಲ್ಲರೂ ಒಟ್ಟಾಗಿ ಹೋಗಿ ಅಂಥ ರಾಹುಲ… ಗಾಂಧಿ ಹೇಳಿದ್ದಾರೆ. ಅದರಂತೆ ಹೋಗುತ್ತೇವೆ.

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಸಾಮೂಹಿಕ ನಾಯಕತ್ವ

ನಮ್ಮಲ್ಲಿ ಒಂದು ಡಜನ್‌ ನಾಯಕರು ಇದ್ದಾರೆ. ನಾವು ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಸಾಮೂಹಿಕ ನಾಯಕತ್ವ ಕಾಂಗ್ರೆಸ್‌ನಲ್ಲಿದೆ. ಎಲ್ಲರೂ ಒಟ್ಟಾಗಿ ಚುನಾವಣೆ ಹೋಗುತ್ತೇವೆ. ಕಾಂಗ್ರೆಸ್‌ ಸರ್ಕಾರ ಮುಂದೆ ಬರುವುದು ಸಾಬೀತಾಗಿದೆ. ಜನರು ವಿಶ್ವಾಸದಿಂದ ಕಾಂಗ್ರೆಸ್‌ ನೋಡುತ್ತಿದ್ದಾರೆ. ಆ ವಿಶ್ವಾಸವನ್ನು ಕಾಂಗ್ರೆಸ್‌ ಉಳಿಸಿಕೊಳ್ಳುತ್ತದೆ.

-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

ಸಿದ್ದು, ಡಿಕೆಶಿ ಒಂದೇ ಕಾರಲ್ಲಿ ಪ್ರಯಾಣ!

ರಾಜ್ಯದಿಂದ ದೆಹಲಿಗೆ ಪ್ರತ್ಯೇಕವಾಗಿ ತೆರಳಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ರಾಹುಲ್‌ ಗಾಂಧಿ ನಿವಾಸಕ್ಕೆ ಒಂದೇ ಕಾರಿನಲ್ಲಿ ಪ್ರಯಾಣಿಸಿದರು. ಸಭೆಯ ಮುಗಿದ ನಂತರವೂ ರಾಹುಲ… ಗಾಂಧಿ ನಿವಾಸದಿಂದ ಒಂದೇ ಕಾರಿನಲ್ಲಿ ಎಐಸಿಸಿ ಕಚೇರಿಗೆ ತೆರಳಿದರು. ಡಿ.ಕೆ.ಶಿವಕುಮಾರ್‌ ಅವರಿಗೆ ಸಭೆಗೆ ತೆರಳುವ ಮುನ್ನ ಇದ್ದ ಹುಮ್ಮಸ್ಸು ಸಭೆಯ ಬಳಿಕ ಈರಲಿಲ್ಲ. ಸಿದ್ದರಾಮಯ್ಯ ಅವರಿಗೆ ಪ್ರಾಶಸ್ತ್ಯ ಕೊಟ್ಟು ಪ್ರತ್ಯೇಕ ಸಭೆ ನಡೆಸಿದ್ದು ಇದಕ್ಕೆ ಕಾರಣವಿರಬಹುದು ಎಂದು ಹೇಳಲಾಗಿದೆ.

Spyware Pegasus: 'ಟಾರ್ಗೆಟ್‌' ಪಟ್ಟಿಯಲ್ಲಿ ರಾಗಾ, ಪಿಕೆ, ಇಬ್ಬರು ಕೇಂದ್ರ ಸಚಿವರ ಹೆಸರು!

ಕಾಂಗ್ರೆಸ್‌ ಬಲವರ್ಧನೆಗೆ ಹೊಸ ಮಾದರಿ

ಬಿಜೆಪಿ ರಾಜ್ಯದಲ್ಲಿ ಸಂಘಟನೆಗೆ ಬೂತ್‌ ಮಟ್ಟದಲ್ಲಿ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿತ್ತು. ಇದೀಗ ಕಾಂಗ್ರೆಸ್‌ ಕೂಡ ಪಕ್ಷ ಸಂಘಟನೆಗೆ ಹೊಸ ಮಾದರಿ ಹುಡುಕಿದ್ದು ಗ್ರಾಮ ಮತ್ತು ವಾರ್ಡ್‌ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ತೀರ್ಮಾನಿಸಿದೆ. ಈ ಸಲುವಾಗಿ ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಗುರುವಾರದಿಂದ ಮುಂದಿನ ಮೂರು ವಾರಗಳಲ್ಲಿ 9 ದಿನಗಳ ಕರ್ನಾಟಕ ಪ್ರವಾಸ ನಡೆಸಿ ಶಾಸಕರು, ವಾರ್ಡ್‌ ಮತ್ತು ಬೂತ್‌ ಸದಸ್ಯರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಶಾಸಕರು, ಪಿಸಿಸಿ ಸದಸ್ಯರು, ಎಐಸಿಸಿ ಸದಸ್ಯರು, ಪದಾಧಿಕಾರಿಗಳು, ವಾರ್ಡ್‌ ಮಟ್ಟದ ಸದಸ್ಯರು, ಬೂತ್‌ ಮಟ್ಟದ ಸದಸ್ಯರು ಭಾಗಿಯಾಗಲಿದ್ದಾರೆ.

click me!