ಸೋದರರ ಜಿದ್ದಾಜಿದ್ದಿನ ಕಣಕ್ಕೆ ಮತ್ತೊಮ್ಮೆ ಸೊರಬ ಸಾಕ್ಷಿಯಾಗಿದೆ. ಸೋದರನ ವಿರುದ್ಧ ಸದಾ ಸಿಡಿದೇಳುತ್ತಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ ಬಳಿಕ ಚುನಾವಣೆಗೆ ಸರಿಯಾದ ಸಿದ್ಧತೆಯನ್ನೇ ಮಾಡಿಕೊಂಡಿದ್ದರು.
ಶಿವಮೊಗ್ಗ (ಮೇ.14): ಸೋದರರ ಜಿದ್ದಾಜಿದ್ದಿನ ಕಣಕ್ಕೆ ಮತ್ತೊಮ್ಮೆ ಸೊರಬ ಸಾಕ್ಷಿಯಾಗಿದೆ. ಸೋದರನ ವಿರುದ್ಧ ಸದಾ ಸಿಡಿದೇಳುತ್ತಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ ಬಳಿಕ ಚುನಾವಣೆಗೆ ಸರಿಯಾದ ಸಿದ್ಧತೆಯನ್ನೇ ಮಾಡಿಕೊಂಡಿದ್ದರು. ಆಡಳಿತದ ಲೋಪವನ್ನು ಎಳೆಎಳೆಯಾಗಿ ಜನರಿಗೆ ತಲುಪಿಸಿದಲ್ಲದೇ, ಸ್ಥಳೀಯ ಸಮಸ್ಯೆ, ಬಗರ್‌ಹುಕುಂ ಸಮಸ್ಯೆ ಪರಿಹಾರಕ್ಕೆ ಪಾದಯಾತ್ರೆ ನಡೆಸುವ ಮೂಲಕ ಪಕ್ಷ ಸಂಘಟನೆ ಮಾಡಿದರು. ಹಾಲಿ ಶಾಸಕರ ವಿರುದ್ಧ ಎದ್ದ ಅಸಮಾಧಾನವನ್ನೇ ಗುಡ್ಡೆ ಹಾಕಿ ತಮ್ಮ ಮತವಾಗಿ ಪರಿವರ್ತಿಸುವ ಪ್ರಯತ್ನ ನಡೆಸಿದ್ದು, ಕೊನೆಗೂ ಯಶಸ್ಸು ತಂದುಕೊಟ್ಟಿದೆ.
ಆದರೂ ಈ ಮಟ್ಟದ ಲೀಡ್ ಅನ್ನು ಅವರೇ ನಿರೀಕ್ಷಿಸಿದಂತಿರಲಿಲ್ಲ. ಮಧು ಬಂಗಾರಪ್ಪ ಭರ್ಜರಿಯಾಗಿ 98,912 ಮತ ಗಳಿಸಿದರು. ಎದುರಾಳಿಯಾಗಿದ್ದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ 54650 ಮತ ಗಳಿಸಿದರು. ಅಂತಿಮವಾಗಿ ಮಧು ಬಂಗಾರಪ್ಪ ಭರ್ಜರಿ 44,212 ಲೀಡ್ ಪಡೆದರು. ಶಾಸಕರಾದಾಗಿನಿಂದಲೂ ಸ್ವಪಕ್ಷೀಯರಿಂದ, ಅಧಿಕಾರಿ ವರ್ಗದಿಂದ ಅಸಮಾಧಾನ ಎದುರಿಸುತ್ತಿದ್ದ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಚುನಾವಣಾ ಫಲಿತಾಂಶ ತೀವ್ರ ಆಘಾತ ನೀಡಿದೆ. ಚುನಾವಣೆ ಆರು ತಿಂಗಳು ಇರುವಾಗಲೇ ನಡೆಯುತ್ತಿದ್ದ ಘಟನೆಗಳಿಂದ ಕುಮಾರ್ ಬಂಗಾರಪ್ಪ ಅವರ ಚುನಾವಣೆ ಸುಲಭವಲ್ಲ ಎಂಬ ಮಾತುಗಳು ಕೇಳಿ ಬಂದಿದ್ದರೂ, ಇದನ್ನು ಸರಿಪಡಿಸುವ ಗೋಜಿಗೆ ಹೋಗದ ಅವರು ಗೆದ್ದೇ ಗೆಲ್ಲುತ್ತೇನೆಂಬ ದುಸ್ಸಾಹಸದ ಮನಃಸ್ಥಿತಿಯನ್ನು ಪ್ರದರ್ಶಿಸಿದ್ದೇ ಈ ಫಲಿತಾಂಶಕ್ಕೆ ಕಾರಣ ಎನ್ನಲಾಗುತ್ತಿದೆ.
ಇಲ್ಲಿ ಈಡಿಗ ಮತಗಳು ಬಹುತೇಕವಾಗಿ ಮಧು ಪರವಾಗಿ ಬಿದ್ದಂತೆ ಕಾಣುತ್ತದೆ. ಜೊತೆಗೆ ಹಿಂದುಳಿದ ವರ್ಗಗಳ ಮತಗಳು ಕೂಡ ಅವರ ಕೈ ಹಿಡಿದಿವೆ. ಸಾಂಪ್ರದಾಯಿಕ ಬಿಜೆಪಿ ಮತಗಳು ಮಾತ್ರ ಕುಮಾರ್ ಪರವಾಗಿ ಬಿದ್ದಿದೆ. ಆನವಟ್ಟಿಭಾಗದಲ್ಲಿ ಮಾತ್ರ ಇವರಿಗೆ ಹೆಚ್ಚು ಮತ ಬಿದ್ದಿದೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಾಸೂರು ಚಂದ್ರಪ್ಪಗೌಡ 6477 ಮತ ಪಡೆದರು. ಇವರು ಇನ್ನಷ್ಟುಪೈಪೋಟಿ ಒಡ್ಡುವ ನಿರೀಕ್ಷೆ ಇತ್ತು. ಸ್ಪರ್ಧಾ ಕಣದಲ್ಲಿ ಒಟ್ಟು 10 ಜನ ಇದ್ದರು. ನೋಟಾ ಪರವಾಗಿ 1010 ಮತಗಳು ಬಿದ್ದಿವೆ.
Karnataka election 2023: ಬಿಜೆಪಿ ಬೆಲೆ ಏರಿಕೆಯಿಂದ ಜನ ತತ್ತರ: ಮಧು ಬಂಗಾರಪ್ಪ
ಬೇಳೂರು ಕೈ ಹಿಡಿದ ಗೆಲ್ಲಿಸಿದ ಯುವಜನರು, ಈಡಿಗರು: ಅಚ್ಚರಿಯ ಫಲಿತಾಂಶ ನೀಡಿದ ಕ್ಷೇತ್ರಗಳಲ್ಲಿ ಸಾಗರವೂ ಒಂದು. ಟಿಕೆಟ್ ಪಡೆದ ಕ್ಷಣದಿಂದ ಪಕ್ಷದ ಒಳಗಿನ ಬೇಗುದಿಯಲ್ಲಿ ಸಿಲುಕಿದ್ದ, ನಿತ್ಯ ಒಬ್ಬೊಬ್ಬ ನಾಯಕರನ್ನು ಕಳೆದುಕೊಳತ್ತಿದ್ದ ಕಾಂಗ್ರೆಸ್‌ನ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಒಂದು ಹಂತದಲ್ಲಿ ಕಂಗಾಲಾಗಿ ನಿಂತಿದ್ದು ನಿಜ. ಕಾಂಗ್ರೆಸ್ ಪಕ್ಷದ ದಂಡನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಕೂಡ ಬಿಜೆಪಿ ಸೇರಿದರು. ಆನಂದಪುರ ಹೋಬಳಿಯ ಪ್ರಭಾವಿ ರತ್ನಾಕರ ಹೊನಗೋಡು ಸೇರಿದಂತೆ ಪ್ರಭಾವಿಗಳೆಲ್ಲರೂ ಬಿಜೆಪಿ ಸೇರಿ, ಬೇಳೂರು ವಿರುದ್ಧ ಸಂಘಟಿತ ಹೋರಾಟ ಆರಂಭಿಸಿದಾಗ ಬೇಳೂರು ಗೋಪಾಲಕೃಷ್ಣ ಕತೆ ಕಷ್ಟಎಂದೇ ಭಾವಿಸಿದ್ದರು. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇರುವ ಬೆಂಬಲಿಗರು, ಕಾರ್ಯಕರ್ತರನ್ನು ಒಟ್ಟಿಗಿಟ್ಟುಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸಿದ ಬೇಳೂರು ಗೋಪಾಲಕೃಷ್ಣ ಕೊನೆಗೂ ಗೆದ್ದುಬಿಟ್ಟಿದ್ದಾರೆ.
ಅವರು 88179 ಮತಗಳನ್ನು ಪಡೆದರೆ, ಬಿಜೆಪಿಯ ಹರತಾಳು ಹಾಲಪ್ಪ 72,263 ಮತಗಳನ್ನು ಪಡೆದರು. ಗೆಲುವಿನ ಅಂತರ 15916 ಮತಗಳು. ಹರತಾಳು ಹಾಲಪ್ಪ ಅವರಿಗೂ ಚುನಾವಣಾ ಹೊತ್ತಿಗೆ ಸಂಕಷ್ಟಎದುರಾಗಿತ್ತು. ಪಕ್ಷದೊಳಗಿನ ಅಸಮಾಧಾನ ಹೊರ ಬಂದಿತ್ತು. ಮೂಲ ಬಿಜೆಪಿಗರು ಅಪಸ್ವರ ಎತ್ತಿದ್ದರು. ಆದರೆ ಇದೆಲ್ಲವನ್ನೂ ಜಾಣತನದಿಂದ ಸರಿಪಡಿಸಿಕೊಂಡು ಚುನಾವಣೆ ಗೆಲ್ಲುವ ಲೆಕ್ಕಾಚಾರದಲ್ಲಿ ಹಾಲಪ್ಪ ಇದ್ದರು. ಏನೇ ವ್ಯತ್ಯಾಸವಾದರೂ ತೆಳುವಾದ ಅಂತರ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಇದೆಲ್ಲವೂ ಉಲ್ಟಾಪಲ್ಟಾಆಗಿದ್ದು, ಬೇಳೂರು ಗೋಪಾಲಕೃಷ್ಣ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ಹಿಂದೆ ಯುವ ಮತದಾರರು, ಯುವಕರು ಇವರ ಹಿಂದೆ ನಿಂತಿರುವುದು, ಈಡಿಗ ಸಮುದಾಯದ ಬಹುತೇಕರು ಗೋಪಾಲಕೃಷ್ಣ ಪರವಾಗಿ ವಾಲಿದ್ದು, ಹಿಂದುಳಿದ ವರ್ಗದವರು ಸಿದ್ದರಾಮಯ್ಯ ಮುಖ ನೋಡಿ ಕಾಂಗ್ರೆಸ್ ಬೆಂಬಲಿಸಿದ್ದು ಮತ್ತು ಕೊನೆಯಲ್ಲಿ ಗ್ಯಾರಂಟಿ ಕಾರ್ಡ್ ಯಶಸ್ವಿಯಾಗಿ ವರ್ಕ್ಔಟ್ ಆಗಿರುವುದು ಕಾಣುತ್ತದೆ. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ದಿವಾಕರ್ ಇನ್ನಷ್ಟುಮತಗಳನ್ನು ಗಳಿಸುವ ನಿರೀಕ್ಷೆಯಿತ್ತು. ತಮಗೆ ಬೇಳೂರು ಮಾತ್ರ ಪ್ರತಿಸ್ಪರ್ಧಿ ಎಂದೂ ಹೇಳಿದ್ದರು. ಆದರೆ ಇವರು ಗಳಿಸಿದ್ದು ಕೇವಲ 1029 ಮತಗಳು ಮಾತ್ರ. ನೋಟಾ ಮತಗಳೇ ಇದಕ್ಕಿಂತ ಹೆಚ್ಚಿಗೆ ಬಿದ್ದಿದ್ದು, ಈ ಸಂಖ್ಯೆ 1349.
ಸಂಗಮೇಶ್ ವಿರುದ್ಧ ಪ್ರಥಮ ಪ್ರಯತ್ನದಲ್ಲೇ ಶಾರದಗೆ ಮುಖಭಂಗ: ಕಳೆದ 30 ವರ್ಷಗಳಿಂದ ಇಲ್ಲಿ ಪಕ್ಷವಿಲ್ಲ, ಬರೀ ವ್ಯಕ್ತಿಗಳದ್ದೇ ದರ್ಬಾರು. ಇವರು ಚುನಾವಣಾ ಕಣಕ್ಕೆ ಇಳಿಯಲು ಹೆಸರಿಗೊಂದು ಪಕ್ಷ ಎಂಬ ಮಾತು ಜನಜನಿತ. ಬಿ.ಕೆ. ಸಂಗಮೇಶ್ ಮತ್ತು ಎಂ.ಜೆ. ಅಪ್ಪಾಜಿಗೌಡ ಪ್ರತಿ ಬಾರಿಯೂ ಮುಖಾಮುಖಿ ಆಗುತ್ತಿದ್ದರು. ಆದರೆ ಅಪ್ಪಾಜಿಗೌಡ ನಿಧನದ ಬಳಿಕ ಎದುರಾದ ಮೊದಲ ಚುನಾವಣೆಯಲ್ಲಿ ಬಿ.ಕೆ. ಸಂಗಮೇಶ್‌ಗೆ ಎದುರಾದದ್ದು ಜೆಡಿಎಸ್‌ನಿಂದ ಸ್ಪರ್ಧಿಸಿದ ಶಾರದಾ ಅಪ್ಪಾಜಿಗೌಡ ಅನುಕಂಪ ಕೆಲಸ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಚುನಾವಣಾ ಪ್ರಚಾರದಲ್ಲಿಯೂ ಇದು ಢಾಳಾಗಿ ಕಾಣಿಸಿತ್ತು. ಆದರೆ ಫಲಿತಾಂಶ ಮಾತ್ರ ಬೇರೆಯದೇ ಆಗಿದ್ದು, ಬಿ. ಕೆ. ಸಂಗಮೇಶ್ ಮತ್ತೊಮ್ಮೆ ಗೆದ್ದಿದ್ದಾರೆ. ಅವರು 65883 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ 63298 ಮತ ಪಡೆದ ಶಾರದಾ ಅಪ್ಪಾಜಿಗೌಡ ಅವರನ್ನು 2585 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮತ ಎಣಿಕೆಯ ಆರಂಭದಲ್ಲಿ ಸಂಗಮೇಶ್ ಮುಂದಿದ್ದರು. ಕೆಲವು ಸುತ್ತಗಳ ಬಳಿಕ ಶಾರದಾ ಅಪ್ಪಾಜಿಗೌಡ ಮುಂದಕ್ಕೆ ಬಂದರು. ಇನ್ನೇನು ಅವರೇ ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎನ್ನುವಾಗಲೇ ಮತ್ತೆ ಸಂಗಮೇಶ್ ಮುನ್ನಡೆ ಸಾಧಿಸಿದರು. ಹೀಗೆ ಹಾವು ಏಣಿಯಾಟದ ಮತ ಎಣಿಕೆಯ ಫಲಿತಾಂಶದಲ್ಲಿ ಅಂತಿಮವಾಗಿ ಬಿ. ಕೆ. ಸಂಗಮೇಶ್ ಗೆಲುವಿನ ನಗೆ ಬೀರಿದರು. ಬಿಜೆಪಿ ವತಿಯಿಂದ ಮಂಗೋಟೆ ರುದ್ರೇಶ್ ಕಣಕ್ಕೆ ಇಳಿದಿದ್ದರು. ಇಲ್ಲಿ ಬಿಜೆಪಿಗೆ ಭದ್ರ ನೆಲೆಯೇನೂ ಇಲ್ಲ. ಆದರೆ ಈ ಬಾರಿ ಮಂಗೋಟೆ ರುದ್ರೇಶ್ 21137 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಆನಂದಮೂರ್ತಿ 1378 ಮತಗಳನ್ನು ಪಡೆದರು. ಒಟ್ಟು 14 ಮಂದಿ ಸ್ಪರ್ಧಾ ಕಣದಲ್ಲಿದ್ದು, ನೋಟಾ ಪರವಾಗಿ 802 ಮತಗಳು ಬಿದ್ದಿವೆ.
ಅಶೋಕ್ ನಾಯ್ಕ್ಗೆ ಬೈ ಹೇಳಿ ಶಾರದಾ ಪೂರಾರಯನಾಯ್ಕ್ಗೆ ಮಣೆ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ಶಿವಮೊಗ್ಗ ಗ್ರಾಮಾಂತ್ರ ಕ್ಷೇತ್ರದಲ್ಲಿ ಹೆಸರಿಗೆ ತ್ರಿಕೋನ ಸ್ಪರ್ಧೆ ಎಂಬಂತಿದ್ದರೂ, ನಿಜವಾಗಿ ಎದುರಾಗಿದ್ದು ಬಿಜೆಪಿಯ ಅಶೋಕ್ ನಾಯ್ಕ್ ಮತ್ತು ಜೆಡಿಎಸ್‌ನ ಶಾರದಾ ಪೂರಾರಯನಾಯ್ಕ್ ಅವರು ಮಾತ್ರ. ಕಾಂಗ್ರೆಸ್‌ನ ಡಾ. ಶ್ರೀನಿವಾಸ ಕರಿಯಣ್ಣ ನಿರೀಕ್ಷಿತ ಪೈಪೋಟಿ ನೀಡದೆ ಇರುವುದು ಫಲಿತಾಂಶದ ಮೇಲಂತೂ ಪರಿಣಾಮ ಬೀರಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಶಾರದಾ ಪೂರಾರಯನಾಯ್ಕ್ ಅವರೇ ಮುಂದಿದ್ದಾರೆ ಎಂಬ ಅಂಕಿ ಅಂಶ ದೊರಕಿತ್ತು. ಆದರೆ ಕೊನೆಯ ದಿನಗಳಲ್ಲಿ ಬಿಜೆಪಿಯ ಕೆ. ಬಿ. ಅಶೋಕ್ನಾಯ್ಕ್ ಅವರು ತಮ್ಮ ಬಲವನ್ನು ವೃದ್ಧಿಸಿಕೊಳ್ಳುತ್ತಾ ಬಂದರು.
ಶಿವಮೊಗ್ಗದಲ್ಲಿ 2ನೇ ತಲೆಮಾರಿನ ರಾಜಕಾರಣ: ಮಾಜಿಗಳ ಪುತ್ರರದ್ದೇ ರಣಕಣ
ಆದರೆ ಚುನಾವಣೆಯ ಫಲಿತಾಂಶದಲ್ಲಿ ಮಾತ್ರ ಸಮೀಕ್ಷೆಯಂತೆ ಶಾರದಾ ಪೂರ್ಯಾನಾಯ್ಕ್ ಅವರೇ ಗೆಲುವಿನ ನಗೆ ಬೀರಿದ್ದಾರೆ. ಶಾರದಾ ಪೂರಾರಯನಾಯ್ಕ್ ಅವರು 86340 ಮತ ಗಳಿಸಿದರು. ಬಿಜೆಪಿಯ ಅಶೋಕ್ನಾಯ್ಕ್ ಗಳಿಸಿದ್ದು 71198 ಮತಗಳು. ಗೆಲುವಿನ ಅಂತರ 15,142 ಮತಗಳು. ಕಾಂಗ್ರೆಸ್‌ನ ಡಾ. ಶ್ರೀನಿವಾಸ್ ಕರಿಯಣ್ಣ ಕೇವಲ 18335 ಮತ ಗಳಿಸಿದರು. 2013 ರಲ್ಲಿ ಗೆಲುವು ಸಾಧಿಸಿದ್ದ ಶಾರದಾ ಪೂರಾರಯನಾಯ್ಕ್ ಜನರ ನಡುವೆ ಕೆಲಸ ಮಾಡಿದ್ದರು. ಆದರೆ 2018 ರ ಚುನಾವಣೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಬಲ ಗಾಳಿಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ್ ನಾಯ್ಕ್ ಗೆಲುವು ಸಾಧಿಸಿದ್ದರು. ಸೋತ ಶಾರದಾ ಪೂರಾರಯನಾಯ್ಕ್ ಅವರು ಒಂದು ದಿನವೂ ಮನೆಯಲ್ಲಿ ಕೂರದೆ ಇಡೀ ಕ್ಷೇತ್ರವನ್ನು ಸುತ್ತಿದ್ದಾರೆ. ಜನರ ಸಮಸ್ಯೆ ಬಗೆಹರಿಸುವ ಯತ್ನ ನಡೆಸಿದರು.
ಯಾರ ಮನೆಯಲ್ಲಿ ಸಾವು ನೋವಾದರೂ ಅಲ್ಲಿಗೆ ಹೋಗಿ ಸಾಂತ್ವನ ಹೇಳುತ್ತಿದ್ದರು. ಒಟ್ಟಾರೆಯಾಗಿ ಕೈಗೆ ಸಿಗುವ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ವೇಳೆ ಬಿಜೆಪಿಯ ಅಶೋಕ್ನಾಯ್ಕ್ ಅವರು ವ್ಯತಿರಿಕ್ತ ಅಭಿಪ್ರಾಯ ದಾಖಲಿಸಿದರು ಎಂಬ ಮಾತುಗಳು ಜನಜನಿತವಾಗಿ ಕೇಳಿ ಬಂದಿತು. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಇದರ ಜೊತೆಗೆ ಒಳ ಮೀಸಲಾತಿಯ ವಿವಾದದಿಂದಾಗಿ ಬಂಜಾರ ಸಮುದಾಯ ಬಿಜೆಪಿ ವಿರುದ್ಧ ನಿಂತಿತು. ಇದನ್ನು ಶಾರದಾ ಪೂರಾರಯನಾಯ್ಕ್ ತಮ್ಮ ಪರವಾಗಿ ಬಳಸಿಕೊಂಡರು. ಭೋವಿ ಸಮುದಾಯ ಕೂಡ ಇವರನ್ನೇ ಬೆಂಬಲಿಸಿತು. ಪರಿಶಿಷ್ಟವರ್ಗ ಮತ್ತು ಪಂಗಡಗಳ ಮತಗಳು ಜೊತೆಯಾಗಿ ಕೊನೆಗೂ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ಅಭ್ಯರ್ಥಿ ಡಾ. ಶೀನಿವಾಸ್ ಕರಿಯಣ್ಣ ಕ್ಷೇತ್ರಕ್ಕೆ ಅಪರಿಚಿತರಂತೆ ನಡೆದುಕೊಂಡರು ಎಂಬ ಮಾತುಗಳ ಜೊತೆಗೆ ಪಕ್ಷದೊಳಗಿನ ಒಳ ಬೇಗುದಿ ಅವರನ್ನು ಬಹುವಾಗಿ ಬಾಧಿಸಿದ್ದು ಸುಳ್ಳಲ್ಲ. ಒಟ್ಟು 11 ಮಂದಿ ಸ್ಪರ್ಧಿಸಿದ್ದ ಕಣದಲ್ಲಿ ಆಮ್ ಆದ್ಮಿ ಪಕ್ಷದ ಮಂಜುನಾಥ್ ಎಸ್. ಎಸ್. 1715 ಮತಗಳನ್ನು ಗಳಿಸಿದರು. ನೋಟಾ ಪರವಾಗಿ 1053 ಮತಗಳು ಬಂದವು.