* ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು
* ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ
* ಸೋಲಿನ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಶಿವಕುಮಾರ್ ಉದಾಸಿ
ಹಾವೇರಿ, (ನ.11): ಸಿಎಂ ಬೊಮ್ಮಾಯಿ ಪ್ರತಿಷ್ಠೆಗೆ ಕಾರಣವಾಗಿದ್ದ ಹಾನಗಲ್ ಉಪಚುನಾವಣೆಯಲ್ಲಿ(Hangal By Election) ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದರಿಂದ ಬಸವರಾಜ ಬೊಮ್ಮಾಯಿಗೆ (Basavaraj Bommai)ಭಾರೀ ಮುಖಭಂಗವಾಗಿದೆ.
ಇನ್ನು ಈ ಸೋಲಿನ ಹೊಣೆ ಹಾಗೂ ಕಾರಣಗಳ ಬಗ್ಗೆ ರಾಜ್ಯ ಬಿಜೆಪಿಯಲ್ಲಿ (BJP) ಗಂಭೀರ ಚರ್ಚೆಗಳಾಗಿವೆ. ಇದರ ಮಧ್ಯೆ ನಮ್ಮ ತಪ್ಪಿನಿಂದಲೇ ಹಾನಗಲ್ ಉಪ-ಚುನಾವಣೆಯಲ್ಲಿ ಸೋತೆವು ಎಂದು ಸಂಸದ ಶಿವಕುಮಾರ್ ಉದಾಸಿ (Shivakumar Udasi) ಅಚ್ಚರಿ ಹೇಳಿಕೆ ನೀಡಿದ್ದಾರೆ.
ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ
ಹೌದು....ಹಾನಗಲ್ ಪಟ್ಟಣದ ಉದಾಸಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಹಾನಗಲ್ ಉಪ-ಚುನಾವಣೆಯಲ್ಲಿ ನಮ್ಮ ತಪ್ಪಿನಿಂದಲೇ ಸೋತೆವು. ಹಣದಿಂದ ರಾಜಕಾರಣ ಮಾಡಬೇಡಿ, ಹೋರಾಟದಿಂದ ರಾಜಕಾರಣ ಮಾಡಿ ಎಂದು ನಮ್ಮ ತಂದೆ ಹೇಳುತ್ತಿದ್ದರು. ಅವರ ಆ ಮಾತು ನೆನಪಿಸಿಕೊಂಡರೆ ದುಃಖವಾಗುತ್ತದೆ ಎಂದರು.
ಕೊನೆಯ ದಿನದವರೆಗೂ ನಾವು ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ್ದೆವು. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದ್ದ ಗೆಲುವಿನ ಹಸಿವು ನಮ್ಮಲ್ಲಿರಲಿಲ್ಲ. ನಾನು ಸಮೀಕ್ಷೆ ಮಾಡಿಸಿದ್ದ ಹುಡುಗನೂ ಈ ಮಾತು ಹೇಳಿದ್ದ ಎಂದು ನೆನಪಿಸಿಕೊಂಡರು. 2023ರಲ್ಲಿ ಯಾರನ್ನೇ ಪಕ್ಷವು ಅಭ್ಯರ್ಥಿಯಾಗಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಹೆಚ್ಚು ಕಾಲ ನಿಮ್ಮ ಜೊತೆ ಇರುತ್ತೇನೆ ಎಂದರು.
ಸೋತವರ ಬಳಿಗೆ ಜನರು ಹೋಗುವುದಿಲ್ಲ. ಗೆದ್ದವರ ಜೊತೆಗೆ ಗುರುತಿಸಿಕೊಳ್ಳಲು ಹೋಗುತ್ತಾರೆ. ರಾಜಕಾರಣ ನಿಂತ ನೀರಲ್ಲ. ಬಹಳಷ್ಟು ಬದಲಾವಣೆಗಳು ಆಗಿವೆ, ಇನ್ನಷ್ಟು ಬದಲಾವಣೆಗಳು ಆಗುತ್ತವೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತ ಹಾಕಿಸಬೇಕು ಎಂದು ಕರೆ ನೀಡಿದರು.
ಮುಂದಿನ ಚುನಾವಣೇಲಿ ನಾವೆಲ್ಲರೂ ಕೆಲಸ ಮಾಡೋಣ
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಹೆಚ್ಚು ಮತ ಹಾಕಿಸಿ ಗೆಲ್ಲಿಸಬೇಕು. ಯಾರೂ ಧೈರ್ಯ ಕಳೆದುಕೊಳ್ಳುವುದು ಬೇಡ. ಸೂಕ್ಷ್ಮ ಮನಃಸ್ಥಿತಿಯವರು ಇರುವವರು ರಾಜಕಾರಣಕ್ಕೆ ಬರಬಾರದು ಎಂದು ನಮ್ಮ ತಂದೆಯವರು ಹೇಳುತ್ತಿದ್ದರು. ಕಳೆದ ಚುನಾವಣೆ ವೇಳೆ ನಮ್ಮ ತಂದೆ ಕ್ಷೇತ್ರದ ಮೂವತ್ತು ಜನರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಅದರಲ್ಲಿ ಇಪ್ಪತ್ತೈದು ಜನರೂ ಅವರಿಗೆ ಮತ ಹಾಕಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಕೆಲಸ ಮಾಡಿದಾಗಲೂ ಅವು ಮತವಾಗಿ ಪರಿವರ್ತನೆ ಆಗುತ್ತವೆ ಎಂದು ತಿಳಿಯಲು ಆಗುವುದಿಲ್ಲ. ಚುನಾವಣೆ ಇದ್ದಾಗ ಕೊನೆಯ ಒಂದು ತಿಂಗಳು ರಾಜಕಾರಣ ಮಾಡಬೇಕು. ಮುಂದಿನ ಚುನಾವಣೇಲಿ ಯಾರಿಗೇ ಟಿಕೆಟ್ ಸಿಕ್ಕರೂ ನನಗೆ ಟಿಕೆಟ್ ಸಿಕ್ಕಿದೆ ಎನ್ನುವ ರೀತಿಯಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ನವರ ಅಪ್ರಚಾರ ಜನ ನಂಬಿಲ್ಲ
ಚುನಾವಣಾ ರಾಜಕಾರಣ ನಮಗೆ ಪಾಠ ಅನ್ನೋದಕ್ಕಿಂತ, ಇಲ್ಲಿ ನಮಗೆ ಕಲಿಯೋದು ಜಾಸ್ತಿ ಇರುತ್ತೆ. ಪಾಠ ಕಲಿಸಿದ್ದಾರೆ ಅಂತಾ ನಾನು ಹೇಳೋದಿಲ್ಲ. ನಮ್ಮ ತಪ್ಪಿನಿಂದ ನಾವು ಸೋತಿದ್ದೀವಿ, ಜನರು ನಮ್ಮನ್ನ ಯಾವಾಗಲೂ ಗೆಲ್ಲಿಸ್ತಾರೆ ಎನ್ನುವ ಮಾತನ್ನು ಪದೇಪದೆ ದಿವಂಗತ ಸಿ.ಎಂ.ಉದಾಸಿಯವರು ಹೇಳುತ್ತಿದ್ದರು. ಚುನಾವಣೆಯಲ್ಲಿ ಗೆಲ್ಲಬೇಕಾದರೂ ಎಲ್ಲ ಸಮಾಜದವರೂ ವೋಟು ಹಾಕ್ತಾರೆ. ಸೋಲಬೇಕಾದರೂ ಎಲ್ಲ ಸಮಾಜದವರೂ ವೋಟು ಹಾಕ್ತಾರೆ. ಕಾಂಗ್ರೆಸ್ನವರು ಎಷ್ಟೇ ಪ್ರಚಾರ, ಅಪಪ್ರಚಾರ ಮಾಡಿದರೂ ಎಂಬತ್ತು ಸಾವಿರಕ್ಕೂ ಅಧಿಕ ಜನರು ಅವರ ಮಾತು ನಂಬಲಿಲ್ಲ ಎಂದರು.
ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಸರ್ಕಾರಗಳಿವೆ. ನಾವು ಮಂಜೂರಾತಿ ಮಾಡಿಸಿಕೊಂಡು ಬಂದ ಕೆಲಸಗಳನ್ನು ಗೆದ್ದ ಕಾಂಗ್ರೆಸ್ ಅಭ್ಯರ್ಥಿ ನಾವೇ ಮಾಡಿಸಿದ್ದೇವೆ ಅಂತಾರೆ. ಅದಕ್ಕೆ ಯಾರೂ ಕಿವಿಗೊಡಬೇಡಿ. ಮುಂದಿನ ದಿನಗಳಲ್ಲಿ ಜಾಸ್ತಿ ದಿನಗಳ ಕಾಲ ನಿಮ್ಮ ಜೊತೆಗೆ ಇರ್ತೇನೆ ಎಂದು ಭರವಸೆ ನೀಡಿದರು.