* ಭಾರಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಹಗರಣ
* ಸಿಎಂ ಮೇಲೆ ಮುಗಿಬಿದ್ದ ಕಾಂಗ್ರೆಸ್ ನಾಯಕರು
* ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ಬಲಿಯಾಗ್ತಾರೆ ಎಂದು ಆರೋಪಿಸಿದ ಕಾಂಗ್ರೆಸ್
* ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ
ರಾಮನಗರ, (ನ.11): ಬಿಟ್ ಕಾಯಿನ್ ಹಗರಣ (Bitcoin Scam) ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಗಳನ್ನ ಮಾಡುತ್ತಿದ್ದಾರೆ.
ಅದರಂತೆ ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಬಲಿಯಾಗುತ್ತಿದೆ ಎನ್ನುವ ಆರೋಪಗಳನ್ನ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿಗಳ ವಿಚಾರವಾಗಿ ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.
Bitcoin Scam: ಬಿಟ್ ಕಾಯಿನ್ ಹಗರಣ ಸಿಎಂ ಬಲಿ ಪಡೆಯುತ್ತೆ: ಶಾಸಕ ಸ್ಫೋಟಕ ಹೇಳಿಕೆ
ಮಾಗಡಿಯ ಕೆಂಪಸಾಗರ ಗ್ರಾಮದಲ್ಲಿ ಶ್ರೀವಿಶ್ವೇಶ್ವರ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬದಲಾವಣೆ ಬೆಳವಣಿಗೆ ಇಲ್ಲ, ಯಾವುದು ಸತ್ಯ ಅಲ್ಲ ಎಂದು ಅಲ್ಲಗಳೆದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಬೇರೆ ಕಾರಣಗಳಿವೆ. ಕೆಲ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡುತ್ತಿದ್ದಾರೆ. ಪ್ರತಿಪಕ್ಷದವರ ಎಲ್ಲಾ ಟೀಕೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತೇವೆ ಎಂದರು.
ಮುಖ್ಯಮಂತ್ರಿಗಳಿಗೆ ಕನ್ನಡಿ ಹಿಡಿಯುವಂತಹ ಕೆಲಸ ಮಾಡುತ್ತೇವೆ. ಅವರ ಘನಸಾಧನೆಗಳನ್ನು ಬಹಳಷ್ಟು ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ಮಾಡುತ್ತೇವೆ. ಇಲ್ಲಿ ಮುಚ್ಚುಮರೆ ಮಾಡುವುದು ಯಾವುದು ಇಲ್ಲ. ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ಧರಿದ್ದು, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ವಹಿಸಲಾಗಿದೆ. ಮುಂದೆಯೂ ಸಹ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪ್ರತಿಪಕ್ಷದವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ "ಬಿಟ್ ಕಾಯಿನ್ ವಿಚಾರವಾಗಿ ತನಿಖೆ ಮಾಡಿಸಲು ನಮ್ಮ ಸರಕಾರ ಸಿದ್ಧವಿದೆ. ಈಗಾಗಲೇ ಸೆಂಟ್ರಲ್ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸಲು ಸಿಎಂ ಸಿದ್ಧರಿದ್ದಾರೆ ಎಂದು ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.
ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ, ಏನಾದರೂ ಪುರಾವೆ ಇದ್ದರೆ ಹಂಚಿಕೊಳ್ಳಲಿ. ಸರ್ಕಾರಕ್ಕೂ ದಾಖಲೆಗಳನ್ನು ಕೊಡಲಿ," ಅಂತಾ ವಿರೋಧ ಪಕ್ಷದವರಿಗೆ ಸವಾಲೆಸೆದರು. "ಬಿಟ್ ಕಾಯಿನ್ ಹಗರಣದ ವಿಚಾರಣೆ ನಡೆಯಬೇಕಾದರೆ ಏನು ಹೇಳಲು ಸಾಧ್ಯ? ಅವರೂ ಅಧಿಕಾರದಲ್ಲಿ ಇದ್ದರು. ಆಗ ಪ್ರಕರಣಗಳ ತನಿಖೆ ನಡೆಯಬೇಕಾದರೆ ಯಾವ್ಯಾವ ಮಾಹಿತಿ ಹೇಳಿದ್ದಾರೆ ಅಂತಾ ಹೇಳಲಿ ಎಂದು ವಿರೋಧ ಪಕ್ಷದವರಿಗೆ ಸವಾಲು ಹಾಕಿದರು.
ಸಿಎಂ ಬಲಿಯಾಗ್ತಾರೆ ಎಂದಿದ್ದ ಪ್ರಿಯಂಕ್ ಖರ್ಗೆ
ಬಿಟ್ ಕಾಯಿನ್ ಪ್ರಕರಣದಲ್ಲಿ ಬೊಮ್ಮಾಯಿ ಅವರು ಸಿಎಂ ಸ್ಥಾನ ಹೋಗಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು, ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.