ರೇವಣ್ಣ ಮತ್ತೊಬ್ಬ ಪುತ್ರ ಸೂರಜ್‌ ರಾಜಕೀಯಕ್ಕೆ : ಚುನಾವಣೆಗೆ ಟಿಕೆಟ್‌?

By Kannadaprabha News  |  First Published Nov 11, 2021, 7:02 AM IST
  •  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸ್ಥಾನಗಳಿಗೆ ಚುನಾವಣೆ ಘೋಷಣೆ
  • ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. 
     

ಹಾಸನ (ನ.11): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸ್ಥಾನಗಳಿಗೆ (MLC Election) ಚುನಾವಣೆ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ (JDS) ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಅವರ ಪುತ್ರ ಡಾ.ಸೂರಜ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. 

ಇತ್ತೀಚೆಗೆ ಪಕ್ಷದ ಸಭೆಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೂರಜ್‌ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಈಗಾಗಲೇ ರೇವಣ್ಣ ಅವರ ಹಿರಿಯ ಪುತ್ರ ಪ್ರಜ್ವಲ್‌ ರೇವಣ್ಣ (Prajwal Revanna) ಹಾಸನ ಸಂಸದರಾಗಿದ್ದಾರೆ. 

Latest Videos

undefined

ಇದೀಗ ಸೂರಜ್‌ ಅವರನ್ನು ಮೇಲ್ಮನೆಗೆ ಕಳುಹಿಸಲು ಭಾರೀ ಕಸರತ್ತು ನಡೆದಿದೆ ಎನ್ನಲಾಗಿದೆ. ಇನ್ನು ಸೂರಜ್‌ಗೆ ಜತೆಗೆ ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ, ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹೆಸರು ಚಾಲ್ತಿಯಲ್ಲಿದೆ. ಆದರೆ, ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡರು (HD Devegowda) ಯಾರಿಗೆ ಟಿಕೆಟ್‌ ನೀಡುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ದಳ ಬಿಡುತ್ತಿರುವವರ ಸೋಲಿಸಲು ಮಾಸ್ಟರ್ ಪ್ಲಾನ್ : 

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ (MLC election) ಘೋಷಣೆ ಆಗುತ್ತಿದ್ದಂತೆ ಈಗಾಗಲೇ ಮಾನಸಿಕವಾಗಿ ಪಕ್ಷದಿಂದ ಹೊರ ಹೋಗಿರುವವರಿಗೆ ಪ್ರತಿಸ್ಪರ್ಧಿಯಾಗಿ ಯಾರಿಗೆ ಟಿಕೆಟ್‌ (Election Ticket) ನೀಡಬೇಕು ಎಂಬ ಚರ್ಚೆ ಜೆಡಿಎಸ್‌ನಲ್ಲಿ (JDS) ಪ್ರಾರಂಭವಾಗಿದೆ.

ಜೆಡಿಎಸ್‌ ಪಕ್ಷದಿಂದ ಪರಿಷತ್ತಿನ ನಾಲ್ವರು ಸದಸ್ಯರ ಅವಧಿ ಅಂತ್ಯವಾಗಲಿದೆ. ಎನ್‌.ಅಪ್ಪಾಜಿ ಗೌಡ (ಮಂಡ್ಯ) , ಸಂದೇಶ್‌ ನಾಗರಾಜ್‌ (ಮೈಸೂರು), ಸಿ.ಆರ್‌.ಮನೋಹರ್‌ (ಕೋಲಾರ) ಹಾಗೂ ಕಾಂತರಾಜು (ತುಮಕೂರು) ಅವರ ಅವಧಿ ಪೂರ್ಣವಾಗಲಿದೆ.

ಈ ನಾಲ್ವರ ಪೈಕಿ ಮೂವರು ಈಗಾಗಲೇ ಅನ್ಯ ಪಕ್ಷದತ್ತ ಮುಖಮಾಡಿದ್ದಾರೆ. ಸಂದೇಶ್‌ ನಾಗರಾಜ್‌ ಮತ್ತು ಸಿ.ಆರ್‌.ಮನೋಹರ್‌ ಅವರು ಬಿಜೆಪಿಗೆ (BJP) ಹೋಗುವ ಸಾಧ್ಯತೆ ಇದ್ದು, ಕಾಂತರಾಜು ಕಾಂಗ್ರೆಸ್‌ಗೆ (Congress) ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಅಪ್ಪಾಜಿ ಗೌಡ ಮಾತ್ರ ಜೆಡಿಎಸ್‌ನಲ್ಲೇ ಮುಂದುವರೆಯುವುದು ನಿಚ್ಚಳವಾಗಿದ್ದರಿಂದ ಮಂಡ್ಯ (Mandya) ಸ್ಥಳೀಯ ಸಂಸ್ಥೆಯಿಂದ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ತುಮಕೂರಿನಲ್ಲಿ (Tumakuru) ಕಾಂತರಾಜು ಕಾಂಗ್ರೆಸ್‌ (Congress) ಜತೆ ಗುರುತಿಸಿಕೊಂಡಿರುವುದರಿಂದ ಅಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದರ ಕುರಿತು ಸ್ಥಳೀಯ ಮುಖಂಡರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (Former CM HD Kumaraswamy) ಸಮಾಲೋಚನೆ ನಡೆಸಿದ್ದಾರೆ. ಇನ್ನು, ಕೋಲಾರ (Kolar) ಮತ್ತು ಮೈಸೂರು (Mysuru) ಜಿಲ್ಲೆಯಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ. ಜೆಡಿಎಸ್‌ (JDS) ತೊರೆದು ಇತರೆ ಪಕ್ಷದತ್ತ ನಾಯಕರು ಮುಖ ಮಾಡುತ್ತಿರುವುದರಿಂದ ಚುನಾವಣೆಯಲ್ಲಿ ಜೆಡಿಎಸ್‌ಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಕ್ಷ ತೊರೆದು ಹೋಗುತ್ತಿರುವ ಸದಸ್ಯರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಪ್ರತಿಸ್ಪರ್ಧಿಯಾಗಿ ಸ್ಥಳೀಯ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿರುವವರಿಗೆ ಟಿಕೆಟ್‌ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ದಳಪತಿಗಳು ರಾಜಕೀಯ (politics) ತಂತ್ರಗಾರಿಕೆ ರೂಪಿಸುವಲ್ಲಿ ತೊಡಗಿದ್ದಾರೆ. ಮನೋಹರ್‌, ಕಾಂತರಾಜು, ಸಂದೇಶ ನಾಗರಾಜ್‌ ಅವರು ಪಕ್ಷದಿಂದ ಸವಲತ್ತುಗಳನ್ನು ಪಡೆದುಕೊಂಡು, ರಾಜಕೀಯವಾಗಿ ನೆಲೆ ಕಂಡುಕೊಂಡ ಬಳಿಕ ಇತರೆ ಪಕ್ಷಕ್ಕೆ ವಲಸೆ ಹೋಗುತ್ತಿರುವುದು ಜೆಡಿಎಸ್‌ ವರಿಷ್ಠರಿಗೆ ಪಕ್ಷವನ್ನು ಭದ್ರಗೊಳಿಸಲು ಹಿನ್ನಡೆಯಾಗುತ್ತಿದೆ. ಹೀಗಾಗಿ ಅವರಿಗೆ ಚುನಾವಣೆಯಲ್ಲಿ ಬಲಿಷ್ಠ ಪ್ರತಿಸ್ಪರ್ಧಿಗಳನ್ನು ಹಾಕುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

2023ರ ಚುನಾವಣೆಗೆ ಶೀಘ್ರ ಅಭ್ಯರ್ಥಿ ಪಟ್ಟಿ ಬಿಡುಗಡೆ: ಎಚ್‌ಡಿಕೆ

ಮುಂದಿನ ಸಾರ್ವತ್ರಿಕ ಚುನಾವಣೆಗೆ ಶೀಘ್ರದಲ್ಲಿಯೇ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಸಮರ್ಥವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶೀಘ್ರದಲ್ಲಿಯೇ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಕಲಬುರಗಿ ಮೇಯರ್‌ ಚುನಾವಣೆಗೆ ವೇಳಾಪಟ್ಟಿಪ್ರಕಟವಾಗಿದೆ. ಈ ಚುನಾವಣೆಯಲ್ಲಿ ಪಕ್ಷ ಯಾವ ನಿಲುವು ತಳೆಯಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಇನ್ನೂ ಸಮಯಾವಕಾಶ ಇದೆ ಎಂದು ಹೇಳಿದರು.

click me!