ಬಿಜೆಪಿಯನ್ನು ತೊರೆದಿರುವ ಲಕ್ಷ್ಮಣ ಸವದಿ ಅವರ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರುತ್ತೀರಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರ (ಏ.16): ಬಿಜೆಪಿಯನ್ನು ತೊರೆದಿರುವ ಲಕ್ಷ್ಮಣ ಸವದಿ ಅವರು ನನ್ನ ಹೆಣವು ಕೂಡ ಬಿಜೆಪಿ ಕಚೇರಿ ಎದುರು ತರಡಬೇಡಿ ಎಂದು ಹೇಳಿದ್ದಕ್ಕೆ ತಿರುಗೇಟು ನೀಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಸವದಿ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರುತ್ತೀರಿ ಎಂದು ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಪ್ರಧಾನಮಂತ್ರಿ ಆಗಿದ್ದ ಪಿ.ವಿ. ನರಸಿಂಹರಾವ ಅವರ ಹೆಣವೂ ಕಾಂಗ್ರೆಸ್ ಕಚೇರಿ ಎದುರು ಬಂದಿರಲಿಲ್ಲ. ಬಿಜೆಪಿ ಕಚೇರಿ ಎದುರು ಯಾರದಾದ್ರೂ ಹೆಣಗಳು ಬರ್ತಾವಾ? ಜೀವಂತ ಇದ್ದವರು ಅಷ್ಟೆ ಬರ್ತಾರೆ, ಹೆಣಗಳು ಇದ್ದರೆ ಸ್ಮಶಾನಕ್ಕೆ ಹೋಗಗುತ್ತವೆ. ಬಿಜೆಪಿ ಕಚೇರಿಗೆ ಯಾಕೆ ಬರ್ತಾವು. ಯಾರಾದ್ರೂ ರಾಷ್ಟ್ರೀಯ ನಾಯಕರು, ಬಿಜೆಪಿಗೆ ಬಹಳ ದುಡಿದಿದ್ರೆ ಬರ್ತಾವೆ ಎಂದು ವ್ಯಂಗ್ಯವಾಡಿರು.
ರಾಜ್ಯಸಭಾ ಸದಸ್ಯ ಆಫರ್ ತಿರಸ್ಕರಿಸಿ, ಎಂಎಲ್‌ಎ ಟಿಕೆಟ್ ಕೇಳಿದೆ: ಜಗದೀಶ್ ಶೆಟ್ಟರ್
ವಾಜಿಪೇಯಿ, ಅನಂತಕುಮಾರ್‌ಗೆ ಗೌರವ: ಇನ್ನು ರಾಜ್ಯದಲ್ಲಿ ಅನಂತಕುಮಾರ್ ಅವರ ಅಂತ್ಯಕ್ರಿಯೆಗೂ ಮೊದಲು ಬಿಜೆಪಿ ಕಚೇರಿ ಬಳಿ ಬಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯಾಕಂದ್ರೆ ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಕಾರಣೀಕರ್ತರು, ಅವರಿಗೆ ಗೌರವ ಕೊಡಬೇಕು ಎಂದು ಗೌರವಿಸಲಾಯಿತು. ಗೌರವ ಎಲ್ಲರಿಗೂ ಸಿಗೋದಿಲ್ಲಾ, ಯಾರು ಪಕ್ಷಕ್ಕಾಗಿ ದುಡಿದಿರ್ತಾರೆ, ಪಕ್ಷಕ್ಕಾಗಿ ತ್ಯಾಗ ಮಾಡಿರ್ತಾರೆ ಅಂತವರಿಗೆ ಸಿಗುತ್ತದೆ. ಕಾಂಜಿ ಪಿಂಜಿಗಳಿಗೆಲ್ಲ ಗೌರವ ಸಿಗಲ್ಲ ಎಂದು ಸವದಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್ ಅವರು, ಅಟಲ್ ಬಿಹಾರಿ ವಾಜಪೇಯಿ ಅಂತಹವರಿಗೆ ಗೌರವ ಸಿಗ್ತದೆ. ಯಾರು ಹಾದಿಬೀದಿಗೆ ಹೋಗೋರಿಗೆಲ್ಲಾ ಕರೆದು ಗೌರವ ಕೊಡ್ತಾರಾ? ಎಂದು ಹೇಳಿದರು.
ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋಗುವವರಿಗೆ ಮಾನ ಮರ್ಯಾದೆ ಇಲ್ಲ: ನೀವೆಲ್ಲಾ ಅಯೋಧ್ಯೆ, ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ನಿಮ್ಮನ್ನು ಬಿಜೆಪಿ ಸಚಿವರನ್ನಾಗಿ, ಉಪಮಖ್ಯಮಂತ್ರಿಗಳನ್ನಾಗಿ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟೆಲ್ಲಾ ಅನುಭವಿಸಿ ಈಗ ಕಾಂಗ್ರೆಸ್ ಗೆ ಹೋಗ್ತಿರಲ್ಲಾ, ನಿಮಗೆ ಮಾನ ಮರ್ಯಾದೆ, ಸ್ವಾಭಿಮಾನ ಇದೆಯಾ? ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್‌ಗೆ ಟಾಂಗ್ ನಿಡಿದರು. ಬಿಜೆಪಿ ಸರ್ಕಾರ ದಲಿತರಿಗೆ, ಮುಸ್ಲಿಂರಿಗೆ, ಮರಾಠರಿಗೆ, ಬ್ರಾಹ್ಮಣರಿಗೆ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಅನುಕೂಲ ಮಾಡಿದೆ. ಎಸ್ ಡಿ ಪಿ ಐ ಸಂಘಟನೆ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಗೆ ಹೋಗಲು ನಿಮಗೆ ನಾಚಿಕೆ ಬರುತ್ತೋ ಇಲ್ವೊ ಎಂದು ಕಿಡಿ ಕಾರಿದರು.
ಈಗಲೂ ಕಾಲ ಮಿಂಚಿಲ್ಲ ಬಿಜೆಪಿಗೆ ಶರಣಾಗತಿ ಆಗಿ: ಬಿಜೆಪಿ ಲಿಂಗಾಯತರನ್ನು ಮುಗಿಸುವ ಯತ್ನ ಮಾಡ್ತಿದೆ ಎಂದು ಆರೋಪಿಸುತ್ತಿದ್ದೀರಿ. ನೀವೆಲ್ಲಾ ಹುದ್ದೆಗಳನ್ನು ಅನುಭವಿಸಿದ್ದು, ಇದೇ ಲಿಂಗಾಯತ ಆಧಾರದ ಮೇಲೆ ಎಂಬುದು ನೆನಪಿರಲಿ. ಲಿಂಗಾಯತರನ್ನು ಕಡೆಗಣಿಸಿದ್ದಾರೆ ಎಂದು ಮಾತಾಡ್ತಿರಲ್ಲಾ? ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಏನು ಹೇಳಿದ್ದಾರೆ? ಕಾಂಗ್ರೆಸ್ ಬಂದ ಕೂಡಲೇ ಮೀಸಲಾತಿ ತೆಗೆದು ಹಾಕ್ತೆವೆ ಎಂದಿದ್ದಾರೆ. ಹಾಗಾದ್ರೆ ಲಿಂಗಾಯತರಿಗೆ, ಪರಿಶಿಷ್ಠ ಜಾತಿ, ಪಂಗಡಗಳಿಗೆ ಮೀಸಲಾತಿ ಸಿಕ್ಕಿದ್ದು ಸಮಾಧಾನ ಇಲ್ಲವೇ? ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೀರಿ, ಕಾಲ ಮಿಂಚಿಲ್ಲ. ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿ ಆಗಿ ಎಂದು ಹೇಳಿದರು.
ಚಾಮರಾಜನಗರದಲ್ಲಿ ನಾಗಶ್ರೀ ಬಂಡಾಯ ಶಮನ, ಸೋಮಣ್ಣ ಹಾದಿ ಸುಗಮ!
ನನಗೂ ಅನ್ಯಾಯವಾಗಿದೆ ಎಂದು ಅನಿಸುತ್ತದೆ: ಇನ್ನು ಪಕ್ಷ ನಡೆದುಕೊಂಡಿರುವ ಬಗ್ಗೆ ಅನ್ಯಾಯ ಆಗಿದೆ ಎಂದು ಕೆಲವೊಮ್ಮೆ ನಮಗೆ ಅನಿಸುತ್ತದೆ. ನನಗೂ ಸಚಿವನನ್ನಾಗಿ ಮಾಡಲಿಲ್ಲ, ನನಗೂ ಅನ್ಯಾಯ ಆಗಿದೆ ಎಂದು ಅನಿಸುತ್ತದೆ. ಮೇ 13ರಂದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈಗ ಹೋದವರದ್ದು ಯಾರದ್ದು ಡೆಪಾಸಿಟ್ ಉಳಿಯೋದಿಲ್ಲಾ. ಎಲ್ಲಾ ವೇಸ್ಟ್ ಬಾಡಿಗಳನ್ನು ತೆಗೆದು, ಕಸ ಕಡ್ಡಿಗಳನ್ನು ತೆಗೆಯಲು ಪ್ರಧಾನಿ ಪ್ರಯತ್ನ ಮಾಡಿದ್ದಾರೆ. ಮುಂದಿನ 5 ವರ್ಷ ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕರ್ನಾಟಕದಲ್ಲಿ ಸರ್ಕಾರ ಆಗಲಿದೆ. ಲಿಂಗಾಯತರ ಕಡೆಗಣನೆ ಆಗಿದೆ ಎಂದು ನೀವು ನಿಮ್ಮ ಸ್ವಾರ್ಥಕ್ಕಾಗಿ ಹೇಳ್ತಿದ್ದಿರಿ. ನಮ್ಮ ದೇಶ, ನಮ್ಮ ಸಿದ್ದಾಂತ, ನಮ್ಮ ಪ್ರಮಾಣಿಕತೆ ಇದೆಲ್ಲ ನಿಮಗೆ ಇಲ್ಲ. ಪಕ್ಷಕ್ಕೆ ಅನ್ಯಾಯ ಮಾಡ್ತಿದ್ದಿರಿ, ದೇವರು ನಿಮಗೆ ಒಳ್ಳೇದು ಮಾಡಲ್ಲಾ ಎಂದು ಕಿಡಿಕಾರಿದರು.
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.