ಹೆಂಡ್ತಿ ಹೇಳಿದ ಒಂದೇ ಒಂದು ಮಾತಿಗೆ 'ಡಿಸಿ' ಹುದ್ದೆಗೆ ರಾಜೀನಾಮೆ: ಸಂಸದ ಸಸಿಕಾಂತ್ ಸೆಂಥಿಲ್

By Sathish Kumar KH  |  First Published Sep 3, 2024, 5:31 PM IST

ತಮಿಳುನಾಡು ಸಂಸದ ಸಸಿಕಾಂತ್ ಸೇಂಥಿಲ್ ಅವರು ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಲು ಕಾರಣವಾದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಪತ್ನಿ ಆಡಿದ ಮಾತೊಂದು ಅವರ ಮನಸ್ಸಿಗೆ ನೋವುಂಟುಮಾಡಿ ರಾಜೀನಾಮೆ ನಿರ್ಧಾರಕ್ಕೆ ದೂಡಿದೆ ಎಂದು ತಿಳಿಸಿದ್ದಾರೆ.


ದಕ್ಷಿಣ ಕನ್ನಡ (ಸೆ.03): ಮಂಗಳೂರಿನಲ್ಲಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ ಹೆಂಡತಿಯೊಟ್ಟಿಗೆ ಕುಳಿತು ಟಿವಿ ನೋಡುವಾಗ, ಆಕೆ ನೀನು ಕಾಲೇಜು ದಿನಗಳಲ್ಲಿ ಎಷ್ಟು ರೆಬೆಲ್ ಆಗಿದ್ದೆ ನೆನಪಿದೆಯಾ.? ಎಂದು ಹೇಳಿದಳು. ಈ ಒಂದೇ ಒಂದು ಮಾತಿನಿಂದ ರಾತ್ರಿಯಿಡೀ ಮನಸ್ಸಿಗೆ ಭಾರಿ ನೋವುಂಟಾಯಿತು. ಮರುದಿನ ಬೆಳಗ್ಗೆ ನನ್ನ ಹೆಂಡತಿಗೆ ಡಿಸಿ ಹುದ್ದೆಗೆ ರಾಜೀನಾಮೆ ಕೊಡುವುದಾಗಿ ತಿಳಿಸಿದೆ. ಆಗ 3 ದಿನದಲ್ಲಿ ನನ್ನ ಎಲ್ಲ ಬಾಕಿ ಕೆಲಸ ಮುಕ್ತಾಯಗೊಳಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ತಮಿಳುನಾಡು ಸಂಸದ ಸಸಿಕಾಂತ್ ಸೇಂಥಿಲ್ ತಮ್ಮ ರಾಜೀನಾಮೆ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಂಗಳವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಈ ವೇದಿಕೆಯಲ್ಲಿ ಬಂದು ಮಾತನಾಡ್ತೀನಿ ಅಂತ ಊಹಿಸಿರಲಿಲ್ಲ. ಎರಡು ವರ್ಷ ಈ ಪಕ್ಷ ಸೇರಿದ ಮೇಲೆ ಸಂಘಟನೆ ಮೇಲೆ ಪ್ರೀತಿ ಆಗಿದೆ. ನಾನು ಇಲ್ಲಿ ರಾಜೀನಾಮೆ ಕೊಟ್ಟು ಕಾರ್ಯದರ್ಶಿಗೆ ಕಳುಹಿಸಿ ಹೋಗಿ ಬಿಟ್ಟೆ. ನನ್ನ ಸಿಬ್ಬಂದಿ ಹಾಗೂ ಹಲವರು ಬೇರೆ ಬೇರೆ ಕಾರಣ ಕೊಟ್ಟರು. ಆದರೆ, ಈವರೆಗೆ ನಾನು ರಾಜೀನಾಮೆಗೆ ಸ್ಪಷ್ಟ ಕಾರಣ ಕೊಟ್ಟಿಲ್ಲ. ಆದರೆ, ಈ ವೇದಿಕೆಯಲ್ಲಿ ಅದಕ್ಕೆ ಸ್ಪಷ್ಟ ಕಾರಣ ಕೊಡಬೇಕು ಎಂದಿದ್ದೇನೆ. ನನ್ನದು ದಲಿತ ಕುಟುಂಬ, ನಾವು ತುಂಬಾ ಬಡವರು. ವ್ಯವಸ್ಥೆಯ ಎಲ್ಲಾ ಕಷ್ಟವನ್ನು ನನ್ನ ತಂದೆ ಅನುಭವಿಸಿದ್ದಾರೆ ಎಂದು ತಮ್ಮ ಕಷ್ಟ ಬಿಚ್ಚಿಟ್ಟರು.

Tap to resize

Latest Videos

undefined

ನಮ್ ಶಾಲೇಲಿ ಟೀಚರ್ ಇಲ್ಲ, ನಿವೇ ಪಾಠ ಮಾಡಿ ಎಂದು ಬಿಇಒ ಕಚೇರಿಗೆ ಬಂದ ಮಕ್ಕಳು!

ನಾನು ಐಎಎಸ್ ಆದ ಬಳಿಕವೂ ನನಗೆ ಜನರ ಬಗ್ಗೆಯೇ ಹೆಚ್ಚು ಚಿಂತೆಯಿದೆ. ನಾನು ಜಿಲ್ಲಾಧಿಕಾರಿ ಆಗಿದ್ದಾಗ ನಾನು ರಾತ್ರಿ ಮಲಗಿ ಮಕ್ಕಳ ಬಗ್ಗೆ ಯೋಚಿಸ್ತಾ ಇದ್ದೆ. ಆಗೆಲ್ಲಾ ಮಳೆಗೆ ಡಿಡಿಪಿಐಗೆ ಕರೆ ಮಾಡಿ ಶಾಲೆಗೆ ರಜೆ ಕೊಡಿ ಅಂತಿದ್ದೆ. ಒಮ್ಮೆ ನಿರಂತರವಾಗಿ 17 ದಿನ ದ‌ಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಕೊಟ್ಟಿದ್ದೆನು. ನಾನು ಜನರ ಎಮೋಷನ್ಸ್ ವಿಚಾರದಲ್ಲಿ ತುಂಬಾ ಭಾಗಿಯಾಗುತ್ತಿದ್ದೆ. ಆದರೆ,‌ ಜನರನ್ನ ಜನರ ಮಧ್ಯೆ ಎತ್ತಿ ಕಟ್ಟುವ ರಾಜಕೀಯ ನನಗೆ ನೋಡಲು ಆಗಲಿಲ್ಲ. 2002ರ ಗೋದ್ರಾ ಗಲಾಟೆಯಿಂದಲೇ ನಾನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದೆ. ಮಂಗಳೂರು ಮಾತ್ರವಲ್ಲದೇ ಇಡೀ ದೇಶದಲ್ಲಿ ಗಮನಿಸ್ತಾ ಇದ್ದೆ. 2014ರಲ್ಲಿ ಗೋದ್ರಾ ಗಲಭೆ ಮಾಡಿದವರೇ ಭಾರತದ ಪ್ರಧಾನಿ ಆದರು. ಆಗ ನಾನು ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಆಗಿದ್ದೆ. ನಂತರ, 2019ರ ಚುನಾವಣೆಯಲ್ಲಿ ನಾನು ದಕ್ಷಿಣ ಕನ್ನಡ ಡಿಸಿಯಾಗಿದ್ದೆ. ಆಗ ಲೋಕಸಭಾ ಚುನಾವಣೆ ನಡೆದು ಮತ್ತೆ ಬಿಜೆಪಿಗೆ ಹೆಚ್ಚು ಮತಗಳು ಬಿದ್ದು, ಅವರೇ ಪ್ರಧಾನಿಯಾದರು. ಆದರೆ ನಾನು ಜಿಲ್ಲಾಧಿಕಾರಿ ಆಗಿದ್ದರಿಂದ ಜನರಿಗೆ ಯಾವುದೇ ಬೇದಭಾವ ಮಾಡಲಿಲ್ಲ ಎಂದರು.

ರಾಜೀನಾಮೆ ರಹಸ್ಯ ರಿವೀಲ್:
ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರದ ಆರ್ಟಿಕಲ್ 370 ತೆಗೆದು ಹಾಕಿದರು. ಅದರ ಜೊತೆಗೆ ಇಡೀ ಕಾಶ್ಮೀರದಲ್ಲಿ ಆರ್ಮಿ ಹಾಕಿ ಗೃಹಬಂಧನ ಮಾಡಿದ್ದರು. ಆಗ ನಾನು‌ ಇವತ್ತು ಕಾಶ್ಮೀರಕ್ಕೆ ಆದ ಪರಿಸ್ಥಿತಿ ನಾಳೆ ಮಂಗಳೂರಿಗೂ ಆಗಬಹುದು ಅಂದುಕೊಂಡೆ. ಇದೇ ಹೊತ್ತಲ್ಲಿ ನನ್ನ ಪತ್ನಿ ಮಂಗಳೂರಿಗೆ ಬಂದಳು. ನಾವು ಮಂಗಳೂರಲ್ಲಿ ಟಿವಿ ನೋಡುತ್ತಿದ್ದಾಗ, ಕಾಶ್ಮೀರದ ಮಿಲಿಟರಿ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆಗ ನನ್ನ ಪತ್ನಿ ನನಗೆ ಕಾಲೇಜು ದಿನದ ಸೆಂಥಿಲ್ ಹೇಗಿದ್ದ ಅಂದಳು. ನೀನು ಕಾಲೇಜ್‌ನಲ್ಲಿ ರೆಬಲ್ ಆಗಿದ್ದೆ. ಈಗ ಡಿಸಿಯಾಗಿ ಸರ್ಕಾರಿ ಬಂಗ್ಲೆಯಲ್ಲಿ ಜಾಲಿಯಾಗಿದ್ದೀಯಾ ಅಂದಳು. ಇದು ನನಗೆ ಇಡೀ ರಾತ್ರಿ ತುಂಬಾ ನೋವು ಕೊಟ್ಟಿತು. ಮರುದಿನ ಬೆಳಿಗ್ಗೆ ಎದ್ದು ಪತ್ನಿ ಬಳಿ ರಾಜೀನಾಮೆ ಕೊಡುತ್ತೇನೆ ಎಂದೆ. ಇದಾದ ಮೂರು ದಿನಗಳಲ್ಲಿ ನನ್ನ ಡಿಸಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದೆ ಎಂದು ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ವಸ್ತ್ರಸಂಹಿತೆ, ಮೊಬೈಲ್ ಬಳಕೆ ನಿಷೇಧ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಸಿಎಂ!

ಇಲ್ಲಿ ಡಿಸಿ ಹುದ್ದೆಗೆ ರಾಜೀನಾಮೆ ಕೊಟ್ಟ ನಂತರ ಸೀದಾ ನನ್ನ ಹುಟ್ಟೂರಿಗೆ ಬಂದು ಬಿಟ್ಟೆ. ಆಗ ಎನ್‌ಆರ್ ಸಿ ತಂದಾಗ ಮತ್ತಷ್ಟು ಆಕ್ರೋಶ ಹೆಚ್ಚಾಯಿತು. ಕೊನೆಗೂ ನನಗೆ ಕಾಂಗ್ರೆಸ್ ಪಕ್ಷವೇ ಸೂಕ್ತ ಅಂತ ಅನಿಸಿ ಬಿಡ್ತು. ಆಗ ನಾನೇ ಸ್ವತಃ ಕಾಂಗ್ರೆಸ್‌ಗೆ ಹೋಗಿ ನಾನು ಪಕ್ಷ ಸೇರ್ತೀನಿ ಅಂದೆ. ಅವರು ನನ್ನ ಕರೆದಿಲ್ಲ, ನಾನೇ ಹೋಗಿ ಕಾಂಗ್ರೆಸ್ ಸೇರಿದ್ದು ಎಂದು ಮಾಹಿತಿ ನೀಡಿದರು.

click me!