ಆರ್.ವಿ. ದೇಶಪಾಂಡೆ ಅವರು ಯಾರೋ ಕೇಳಿದ ಪ್ರಶ್ನೆಗೆ ಸಹಜವಾಗಿ ಮಾತನಾಡಿದ್ದಾರೆ. ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ಕೇಳಿದ್ದಾರೆ. ಅದು ವಿಷಯವೇ ಅಲ್ಲ, ಅದನ್ನು ಅಲ್ಲಿಗೆ ಬಿಟ್ಟುಬಿಡಿ ಎಂದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು(ಸೆ.03): ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣಲು ಯಾರೂ ಹೋಗುವುದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಶಕ್ತಿಶಾಲಿ ಆಗಿದ್ದಾರೆ. ಇನ್ನಷ್ಟು ಶಕ್ತಿಶಾಲಿ ಯಾಗುತ್ತಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಸಷ್ಟಪಡಿಸಿದ್ದಾರೆ.
ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ದೇಶಪಾಂಡೆ ಅವರ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ ಅವರು, 'ಆರ್.ವಿ. ದೇಶಪಾಂಡೆ ಅವರು ಯಾರೋ ಕೇಳಿದ ಪ್ರಶ್ನೆಗೆ ಸಹಜವಾಗಿ ಮಾತನಾಡಿದ್ದಾರೆ. ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ಕೇಳಿದ್ದಾರೆ. ಅದು ವಿಷಯವೇ ಅಲ್ಲ, ಅದನ್ನು ಅಲ್ಲಿಗೆ ಬಿಟ್ಟುಬಿಡಿ' ಎಂದು ಹೇಳಿದರು.
ಉಳಿದಂತೆ ಹೇಳುವುದಾದರೆ ಮುಖ್ಯಮಂತ್ರಿ ವಿಚಾರವಾಗಿ ಯಾರೂ ಹಗಲು ಕನಸು ಕಾಣುವುದು ಬೇಡ. ಹೈಕೋರ್ಟ್ ತೀರ್ಪಿನಲ್ಲಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಆಗುವ ಪ್ರಶ್ನೆಯೇ ಇಲ್ಲ. ಮುಡಾದಲ್ಲಿ ಅವರು ಭಾಗಿಯಾಗಿಲ್ಲ, ಹೀಗಾಗಿ ದೋಷಮುಕ್ತರಾಗುತ್ತಾರೆ ಎಂದು ಸ್ಪಷ್ಟಪಡಿಸಿದರು.