* ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
* ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್ ಬಿಗಿಪಟ್ಟು
* ಕಾಂಗ್ರೆಸ್ ನಾಯಕ ಪ್ರತಿಭಟನೆಗೆ ಈಶ್ವರಪ್ಪ ತಿರುಗೇಟು
ಶಿವಮೊಗ್ಗ, (ಏ.16): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬುದು ಎಲ್ಲರ ಅಭಿಪ್ರಾಯ. ಇದು ಆತ್ಮಹತ್ಯೆಯೋ, ಹತ್ಯೆಯೋ ಎಂಬ ಅನುಮಾನ ಶುರು ಆಗಿದೆ. ಸಂತೋಷ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ನಷ್ಟ ಮಾಡಲು ರಾಹುಲ್ ಗಾಂಧಿ ಅಜ್ಜಿಯಿಂದಲೇ ಆಗಿಲ್ಲ, ಇನ್ನು ಮೊಮ್ಮಗನಿಂದ ಏನಾಗುತ್ತೆ ಎಂದು ಕೆ.ಎಸ್. ಈಶ್ವರಪ್ಪ ಟಾಂಗ್ ಕೊಟ್ಟರು.
40% ಕಮಿಷನ್ ಆರೋಪಕ್ಕೆ ತಿರುಗೇಟು ನೀಡಲು ಬಿಜೆಪಿ ಪ್ಲಾನ್
ಸಂತೋಷ್‌ರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಯಾರಿದ್ದಾರೆಂಬುದು ಹೊರಗೆ ಬರಬೇಕು. ಇದರ ಹಿಂದೆ ಡಿಕೆಶಿ ಇದ್ದಾರಾ ಎಂಬುದು ಬಯಲಾಗಬೇಕಿದೆ. ಆ ನಂತರ ನಾನು ಡಿ.ಕೆ. ಶಿವಕುಮಾರ್ ಬಗ್ಗೆ ಮಾತಾಡುತ್ತೇನೆ. ಮನಃಸಾಕ್ಷಿ ಇದ್ದಿದ್ದರೆ ನನ್ನನ್ನು ಬಂಧಿಸುವಂತೆ ಒತ್ತಡ ಹಾಕ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ ಕುಮಾರಸ್ವಾಮಿ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಆಗಲಿ. ನಾನು ನಿರ್ದೋಷಿಯಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ. ಅವರವರ ಮನೆ ದೇವರನ್ನು ನಂಬದಿದ್ದರೂ ಚಿಂತೆಯಿಲ್ಲ. ಕನಿಷ್ಠ ಮನಃಸಾಕ್ಷಿಯನ್ನಾದರೂ ಒಮ್ಮೆ ಕೇಳಿಕೊಳ್ಳಲಿ. ನನ್ನ ಬಂಧನ ಬಗ್ಗೆ ಕೇಳುವವರು ಮನಃಸಾಕ್ಷಿಯನ್ನ ಕೇಳಿಕೊಳ್ಳಲಿ. ಈ ಹಿಂದೆ ಕೆ.ಜೆ. ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಈಗ ನನ್ನ ಬಂಧನಕ್ಕೆ ಏಕೆ ಒತ್ತಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳು ಭೇಟಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮನೆಗೆ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ. ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ, ಸಹಿತ ಒಟ್ಟು 9 ಸ್ವಾಮೀಜಿಗಳು ಈಶ್ವರಪ್ಪ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ಈಶ್ವರಪ್ಪ ರಾಜೀನಾಮೆ ಹಿನ್ನೆಲೆ ಈಶ್ವರಪ್ಪಗೆ ಸ್ವಾಮೀಜಿಗಳು ಧೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲದೆ, ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿದ ಮಂತ್ರಾಲಯದ ಶ್ರೀಗಳು ನೀವು ಯಾವುದಕ್ಕೂ ವಿಚಲಿತರಾಗಬೇಡಿ, ನೀವು ರಾಮ ಭಕ್ತರು. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
ಸಂತೋಷ್ ಪ್ರಕರಣದ ಬಗ್ಗೆ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ವಿವರಣೆ ನೀಡಿದ್ದಾರೆ. ಪಕ್ಷದ ವರಿಷ್ಠರ ಜೊತೆ ಚರ್ಚಿಸಿಯೇ ರಾಜೀನಾಮೆ ನೀಡಿರುವೆ. ಎರಡು ದಿನ ಮೊದಲೇ ರಾಜೀನಾಮೆಯನ್ನ ನೀಡಲು ತೆರಳುತ್ತಿದ್ದೆ. ರಾಜೀನಾಮೆ ನೀಡಲು ಮೈಸೂರಿನಿಂದ ಬೆಂಗಳೂರಿಗೆ ಹೋಗ್ತಿದ್ದೆ. ಆತುರಬೇಡವೆಂಬ ಸೂಚನೆ ಹಿನ್ನೆಲೆ ರಾಜೀನಾಮೆಗೆ ತಡ ಮಾಡಿದ್ದೆ ಎಂದು ಕಾಗಿನೆಲೆ ಶ್ರೀ ಸೇರಿದಂತೆ ವಿವಿಧ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಆದರೂ ಪ್ರತಿಪಕ್ಷ ಕಾಂಗ್ರೆಸ್ ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಪ್ರತಿಭಟನೆಗಳನ್ನ ಮಾಡುತ್ತಿದೆ. ಅಲ್ಲದೇ ಪ್ರತಿಭಟನೆಯನ್ನು ರಾಜ್ಯಾದ್ಯಂತ ಮಾಡಲು ಕಾಂಗ್ರೆಸ್ ತೀರ್ಮಾನಿಸಿದ್ದು, ಇದಕ್ಕೆ ಬಿಜೆಪಿ ಯಾವು ರೀತಿ ತಿರುಗೇಟು ಕೊಡುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.