ಹಲಾಲ್‌ ಎಂಬ ಬಿಜೆಪಿಗರು ಈಗ ಚುನಾವಣೆಗೆ ಬರಲಿ, ಡಿಕೆಶಿ ಸವಾಲ್!

By Kannadaprabha News  |  First Published Apr 16, 2022, 5:19 AM IST

* ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗುತ್ತಿರುವ ಬಿಜೆಪಿ

* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ ಈಗ ಚುನಾವಣೆ ನಡೆಸಲಿ

* ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸವಾಲು


ಬೆಂಗಳೂರು(ಏ.16): ಅದ್ಯಾವುದೋ ಹಲಾಲ್‌, ಝಟ್ಕಾ ಕಟ್‌, ಗುಡ್ಡೆ ಮಾಂಸ ಎಂದು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗುತ್ತಿರುವ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ ಈಗ ಚುನಾವಣೆ ನಡೆಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿನ 24 ಗಂಟೆಗಳ ಅಹೋರಾತ್ರಿ ಧರಣಿ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಪಂಚಾಯ್ತಿಯಿಂದ ಮುಖ್ಯಮಂತ್ರಿಗಳ ಕಚೇರಿವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಇಲಾಖೆಯಲ್ಲೂ ಶೇ.40 ರಷ್ಟುಕಮಿಷನ್‌ಗೆ ಒತ್ತಾಯ ಮಾಡುತ್ತಿದ್ದಾರೆ. ಇಂತಹದ್ದೇ ಒತ್ತಾಯ, ಕಿರುಕುಳಕ್ಕಾಗಿ ಸಂತೋಷ್‌ ಪಾಟಿಲ್‌ ಜೀವ ಕಳೆದುಕೊಂಡಿದ್ದಾರೆ. ಇಂತಹ ವಿಚಾರಗಳನ್ನು ಮುಚ್ಚಿಡಲು ನೈತಿಕ ಪೊಲೀಸ್‌ಗಿರಿಗೆ ಬೆಂಬಲ ನೀಡಿದಿರಿ. ಅದ್ಯಾವುದೋ ಹಲಾಲ್‌, ಝಟ್ಕಾ, ಗುಡ್ಡೆ ಮಾಂಸ ಎಂದು ಹೋಗುತ್ತಿದ್ದರು. ತಾಕತ್ತಿದ್ದರೆ ಈಗ ಚುನಾವಣೆ ನಡೆಸಲಿ ಎಂದರು.

Tap to resize

Latest Videos

ವಿಧಾನಸೌಧ ಗೋಡೆಯೂ ಕಾಸು, ಕಾಸು ಎನ್ನುತ್ತದೆ

ಬಿಜೆಪಿ ಆಡಳಿತದಲ್ಲಿ ರಾಜ್ಯವು ಭ್ರಷ್ಟಾಚಾರದ ರಾಷ್ಟ್ರ ರಾಜಧಾನಿ ಆಗಿದೆ. ಪ್ರತಿಯೊಂದರಲ್ಲೂ ಲಂಚದ್ದೇ ಕಾರುಬಾರು ನಡೆಯುತ್ತಿದೆ. ವಿಧಾನಸೌಧದ ಗೋಡೆ ತಟ್ಟಿದರೂ ಕಾಸು, ಕಾಸು ಎನ್ನುತ್ತದೆ. ಅಷ್ಟರ ಮಟ್ಟಿಗೆ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ವಿಧಾನಸೌಧದ ಗೋಡೆ ತಟ್ಟಿಡಿ.ಕೆ. ಶಿವಕುಮಾರ್‌ ಆರೋಪ ಮಾಡಿದರು.

ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹಾಗೂ ಸ್ಪಷ್ಟಸಾಕ್ಷ್ಯಗಳು ಇದ್ದರೂ ಎಫ್‌ಐಆರ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಖುದ್ದು ಮುಖ್ಯಮಂತ್ರಿಯೇ ಸಚಿವರು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಧೀಶರಂತೆ ತೀರ್ಪು ನೀಡುತ್ತಾರೆ. ಮುಖ್ಯಮಂತ್ರಿಗಳೇ ಹೀಗೆ ಪ್ರಮಾಣಪತ್ರ ನೀಡಿದ ಮೇಲೆ ಪೊಲೀಸರು ತನಿಖೆ ನಡೆಸಲು ಸಾಧ್ಯವೇ? ಎಂದು ಕಿಡಿ ಕಾರಿದ್ದಾರೆ.

ರಾಜ್ಯಭ್ರಷ್ಟಾಚಾರದ ರಾಷ್ಟ್ರ ರಾಜಧಾನಿ:

ರಾಜ್ಯದಲ್ಲಿನ 40 ಪರ್ಸೆಂಟ್‌ ಕಮಿಷನ್‌ ಆಡಳಿತವನ್ನು ಇಡೀ ದೇಶ ನೋಡುತ್ತಿದೆ. ದೇಶದಲ್ಲೇ ಕರ್ನಾಟಕ ರಾಜ್ಯ ಭ್ರಷ್ಟಾಚಾರದ ಮಹಾ ರಾಜಧಾನಿ ಆಗಿದೆ. ಇವುಗಳನ್ನು ಮುಚ್ಚಿಡಲು ಮುಖ್ಯಮಂತ್ರಿಯವರು, ಸಚಿವರು ಏನೇನೆಲ್ಲಾ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿದರು ಎಂಬುದನ್ನೂ ನೋಡಿದ್ದಾರೆ. ನೈತಿಕ ಪೊಲೀಸ್‌ಗಿರಿ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದ್ದಿರಿ. ಈ ಭ್ರಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜೆ.ಪಿ. ನಡ್ಡಾ ಅವರಿಗೆ ಮಾಹಿತಿ ಇದ್ದರೂ ಪ್ರಶ್ನಿಸದೆ ಸಮ್ಮತಿ ಸೂಚಿಸಿದರು. ಇದನ್ನು ಜನರನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ನ್ಯಾಯಾಂಗ ತನಿಖೆ:

ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಬಿಜೆಪಿ ಕಾರ್ಯಕರ್ತನ ಜೀವ ಬಲಿಯಾಗಿದೆ. ನಾವು 3 ದಿನಗಳಿಂದ ಸಚಿವರ ರಾಜೀನಾಮೆ ಬಗ್ಗೆ ಮಾತನಾಡಿಲ್ಲ. ಮೊದಲು ಭ್ರಷ್ಟಾಚಾರ ಆರೋಪದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಮುಖ್ಯಮಂತ್ರಿಗಳು ಹಾಗೂ ಯಡಿಯೂರಪ್ಪನವರು ಈಗಲೇ ಈಶ್ವರಪ್ಪ ನಿರ್ದೋಷಿ ಎಂದು ತೀರ್ಪು ನೀಡುತ್ತಿದ್ದಾರೆ. ಯಡಿಯೂರಪ್ಪನವರು 3 ತಿಂಗಳಲ್ಲಿ ಈಶ್ವರಪ್ಪನವರು ಮತ್ತೆ ಮಂತ್ರಿಯಾಗುತ್ತಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇವರಿಂದ ನ್ಯಾಯ ಸಿಗುವುದಿಲ್ಲ, ಹೈಕೋರ್ಚ್‌ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಈ ಪ್ರಕರಣದ ತನಿಖೆ ನಡೆಯಬೇಕು ಎಂದು ಒತ್ತಾಯ ಮಾಡಿದರು.

ಜಾರಕಿಹೊಳಿ ವಿರುದ್ಧ ಮತ್ತೆ ಡಿಕೇಶಿ ಆಕ್ರೋಶ

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಹಿಂದೆ ಕಾಂಗ್ರೆಸ್‌ ಮಹಾನಾಯಕ ಇದ್ದಾನೆ ಎಂದಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಈಶ್ವರಪ್ಪ ಮೊದಲು ಸಂತೋಷ್‌ ಯಾರು ಎಂಬುದೇ ಗೊತ್ತಿಲ್ಲ ಎನ್ನುತ್ತಿದ್ದರು. ಇದೀಗ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲು ಮಂಚದ ಕೇಸ್‌ನವನೂ ಸಹ ಇದೇ ರೀತಿ ಏನೂ ಗೊತ್ತಿಲ್ಲ ಎಂದಿದ್ದ. ಬಳಿಕ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಬಿಚ್ಚಿದ್ದನ್ನು ಎಲ್ಲರೂ ಹಿಂದೆ, ಮುಂದೆ ಈಗಾಗಲೇ ನೋಡಿದ್ದಾರೆ. ಹೊಸದಾಗಿ ಏನು ಬಿಚ್ಚುತ್ತಾನೋ ಬಿಚ್ಚಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!