
ಹಾವೇರಿ(ಏ.20): ಬೊಮ್ಮಾಯಿ ಮಾಮಾ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಅವರಿಗೆ ಕೆಲಸ ಮಾಡಲು ಇನ್ನೂ ಹೆಚ್ಚಿನ ಸಮಯ ಬೇಕಿದೆ. ಬೊಮ್ಮಾಯಿ ಮಾಮಾ ಅವರು ನಾಮ್‌ಕೇ ವಾಸ್ತೆ ಸಿಎಂ ಅಲ್ಲ, ಅವರು ಕಾಮ್‌ಕೇ ವಾಸ್ತೆ ಮುಖ್ಯಮಂತ್ರಿ ಎಂದು ಖ್ಯಾತ ನಟ ಸುದೀಪ್ ಹೇಳಿದರು.
ಶಿಗ್ಗಾಂವಿಯ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನೊಬ್ಬ ಭಾರತೀಯ ನಾಗರಿಕನಾಗಿ ಪ್ರಧಾನಿ ಮೋದಿಯವರ ಕೆಲಸಗಳನ್ನು ಮೆಚ್ಚುತ್ತೇನೆ. ನಾನು ಸುಮ್ಮನೆ ಬಿಜೆಪಿ ಕ್ಯಾಂಪೇನ್‌ಗೆ ಬಂದಿಲ್ಲ. ಕೆಲಸ ಆಗುವ ಕಡೆ ಮಾತ್ರ ಬರುತ್ತೇವೆ. ಆ ವಿಶ್ವಾಸ ಇರುವುದರಿಂದ ಬಂದಿದ್ದೇನೆ ಎಂದು ಹೇಳಿದರು.
ಯಾರೇ ಬರಲಿ ಜನ ತೀರ್ಮಾನ ಮಾಡ್ತಾರೆ: ಭರತ್ ಬೊಮ್ಮಾಯಿ
ಕನಕದಾಸರು, ಶರೀಫರು ಜನಿಸಿದ ನಾಡಿನಿಂದ ಕ್ಯಾಂಪೇನ್ ಆರಂಭಿಸಿದ್ದೇನೆ. ಮೊದಲ ಸಲ ಇಲ್ಲಿಗೆ ಬಂದಿದ್ದೇನೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕೆಲಸ ಮಾಡಲು ಅವಕಾಶ ಬೇಕು. ಅವರೊಂದಿಗೆ ಇನ್ನು ಮುಂದೆ ನಾನೂ ಇರುತ್ತೇನೆ. ‘ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ’ ಎಂಬ ಹಾಡನ್ನು ಉಲ್ಲೇಖಿಸಿ, ಈ ಬಗ್ಗೆ ನಿಮ್ಮ ನಂಬಿಕೆ ಇದ್ದರೆ ಕೆಲಸ ಚೆನ್ನಾಗಿ ಆಗುತ್ತದೆ ಎಂದು ಹೇಳಿದರು.
ಸಿಳ್ಳೆ, ಕೇಕೆ:
ಇದೇ ಮೊದಲ ಬಾರಿ ಬಿಜೆಪಿ ಕ್ಯಾಂಪೇನ್‌ಗೆ ಆಗಮಿಸಿದ ಕಿಚ್ಚ ಸುದೀಪ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತವೇ ದೊರೆಯಿತು. ಅವರು ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಮಿಂಚಿನ ಸಂಚಾರವಾದಂತೆ ನೆರೆದಿದ್ದ ಹತ್ತಾರು ಸಾವಿರ ಜನರ ಕೇಕೆ, ಸಿಳ್ಳೆ ಮುಗಿಲು ಮುಟ್ಟಿದವು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.