'ಮೋದಿ ಬಂದರೂ ಕ್ಷೇತ್ರದ ಜನ ನನ್ನ ಕೈಬಿಡಲ್ಲ'

By Kannadaprabha News  |  First Published Apr 19, 2023, 11:30 PM IST

ನಾನು ರಾಜಕೀಯದಲ್ಲಿ ಜಾತಿ, ಪಕ್ಷ ಮಾಡಿಲ್ಲ. ಯಾವುದೇ ವ್ಯಕ್ತಿಯೊಂದಿಗೆ ಶಾಮೀಲಾಗದೇ ಇಡೀ ಸಮಾಜದೊಂದಿಗೆ ಶಾಮೀಲಾಗಿ ಕೆಲಸ ಮಾಡಿದ್ದರಿಂದಾಗಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ: ಶಾಸಕ ಶಿವಾನಂದ ಪಾಟೀಲ 


ಬಸವನಬಾಗೇವಾಡಿ(ಏ.19): ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ನಂತರ ಮಾಡಿರುವ ಅನೇಕ ಅಭಿವೃದ್ಧಿ ಕೆಲಸಗಳಿಂದ ಮತಕ್ಷೇತ್ರದ ಜನರು ಆಶೀರ್ವಾದ ಮಾಡುವ ವಿಶ್ವಾಸವಿದೆ. ಈ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಪ್ರಚಾರ ಮಾಡಿದರೂ ಕೂಡ ಕ್ಷೇತ್ರದ ಜನರು ನನ್ನನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನದ ಬಯಲು ರಂಗಮಂದಿರದಲ್ಲಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಲ್ಲಿ ಜಾತಿ, ಪಕ್ಷ ಮಾಡಿಲ್ಲ. ಯಾವುದೇ ವ್ಯಕ್ತಿಯೊಂದಿಗೆ ಶಾಮೀಲಾಗದೇ ಇಡೀ ಸಮಾಜದೊಂದಿಗೆ ಶಾಮೀಲಾಗಿ ಕೆಲಸ ಮಾಡಿದ್ದರಿಂದಾಗಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ. ಈ ಕ್ಷೇತ್ರಕ್ಕೆ ಕೆಲವರು ದುರುದ್ದೇಶದಿಂದ ನನ್ನನ್ನು ಕರೆ ತಂದಿದ್ದರೂ ಮತಕ್ಷೇತ್ರಕ್ಕೆ ಬಂದಿದ್ದು ಬಯಸದೇ ಬಂದ ಭಾಗ್ಯ. ವಿಶ್ವಗುರು ಬಸವೇಶ್ವರರ ಆಶೀರ್ವಾದ ಬಲದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಅವಕಾಶ ನನಗೆ ಸಿಕ್ಕಿತು. ಇದರಿಂದಾಗಿ ಕ್ಷೇತ್ರವು ಬದಲಾವಣೆಗೆ ನಾಂದಿಯಾಗುತ್ತಿದೆ. ನಾನು ಈ ಕ್ಷೇತ್ರದಿಂದ ನಾಲ್ಕು ಸಲ ಸ್ಪರ್ಧೆ ಮಾಡಿ ಮೂರು ಸಲ ಶಾಸಕನಾಗಿ ಜನರು ಆಯ್ಕೆ ಮಾಡಿದ್ದಾರೆ. ಒಂದು ಸಲ ಕೆಲವರ ಕುಹಕ ಮಾತುಗಳನ್ನು ಕೇಳಿ ಜನರು 2008ರಲ್ಲಿ ಆಯ್ಕೆ ಮಾಡಲಿಲ್ಲ. ಮುಂದೆ ನನ್ನ ಸೋಲೇ ನನಗೆ ಗೆಲುವಿನ ಸೋಪಾನವಾಯಿತು ಎಂದರು.

Tap to resize

Latest Videos

ವಿಜಯಪುರ: ನಾಗಠಾಣಕ್ಕೆ ಬಿಜೆಪಿ ಅಚ್ಚರಿಯ ಅಭ್ಯರ್ಥಿ..!

ಕ್ಷೇತ್ರದಲ್ಲಿ ಮೂರು ಸಲ ನನ್ನ ವಿರುದ್ದ ಸ್ಪರ್ಧೆ ಮಾಡಿದವರಿಗೆ ಜನರು ಅಧಿಕಾರ ನೀಡಿಲ್ಲ. ಅವರ ತಂದೆಯ ಕಾಲದಲ್ಲಿ ರಾಜಕಾರಣ ಮಾಡಿದವನು ನಾನು. ಈ ಸಲ ಅವರು ಪಕ್ಷ ಬದಲಾವಣೆ ಮಾಡಿ ಟಿಕೆಟ್‌ ತೆಗೆದುಕೊಂಡು ಸ್ಪರ್ಧೆ ಮಾಡಬೇಕೆಂದಾಗ ಟಿಕೆಟ್‌ ಸಿಗದೇ ಮತ್ತೆ ಅದೇ ಪಕ್ಷದಿಂದ ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ. ಆದರೆ, ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಅವರಿಗೆ ಅಧಿಕಾರ ಸಿಗುವುದಿಲ್ಲ. ಅವರು ನನ್ನನ್ನು ಸೋಲಿಸಿದರೆ ಖಂಡಿತ ಅವರಿಗೆ ನಾನು ತಲೆಬಾಗುತ್ತೇನೆ. ಒಂದು ವೇಳೆ ಅವರು ನನ್ನ ವಿರುದ್ಧ ಸೋತರೆ ಅವರು ನನಗೆ ತಲೆ ಬಾಗಬೇಕು ಎಂದು ಪರೋಕ್ಷವಾಗಿ ಮನಗೂಳಿಯ ಅಪ್ಪುಗೌಡ ಪಾಟೀಲ ಅವರಿಗೆ ಸವಾಲೆಸೆದರು.

ಕ್ಷೇತ್ರಕ್ಕೆ ಶಿವಾನಂದ ಪಾಟೀಲ ಬಂದರೆ ನೀರು ತರದೇ ಬೀರು ತರುತ್ತಾರೆ ಎಂದು ಟೀಕೆ ಮಾಡಿದವರೇ ಇಂದು ಎರಡು ಬಾರ್‌ ಅಂಗಡಿಗಳನ್ನು ತೆಗೆದಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅವರಿಗೆ ಹೇಳಿದ ಅವರು, ನಾನು ಯಾವುದೇ ಪಕ್ಷದಿಂದ ನಿಂತರೂ ಆಯ್ಕೆಯಾಗುವುದು ನಿಶ್ಚಿತ. ನಾನು ಜನರ ಏಳ್ಗೆ ಹೊಂದಬೇಕೆಂದು ಆಸೆ ಪಡುವವನು. ನನ್ನ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ. ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಸಲ ಜನರು ಆಶೀರ್ವಾದ ಮಾಡಿದರೆ ಮುಂದೆ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿ ಬದಲಾವಣೆ ಖಂಡಿತ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬಸವಣ್ಣನವರ ಸಾಕ್ಷಿಯಾಗಿ ಭವಿಷ್ಯದಲ್ಲಿ ಯಾವ ಕಾರ್ಯಕರ್ತನನ್ನು ಬಿಟ್ಟು ನಾನು ಕೆಲಸ ಮಾಡುವುದಿಲ್ಲ. ನನ್ನಿಂದ ತಪ್ಪುಗಳು ಆಗಿದ್ದರೆ ನೀವು ನನಗೆ ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ದ. ನನ್ನ ಹಿಂದಿನವರಿಂದ ತಪ್ಪುಗಳು ಆಗಿರುವುದು ನಿಜ. ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುವೆ. ಭವಿಷ್ಯದಲ್ಲಿ ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಇರಬೇಕಾದರೆ ಮತದಾರರು ನನಗೆ ಮತ ನೀಡುವ ಮೂಲಕ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಮೇ 13ರಂದು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ನಿಚ್ಚಳವಾಗಿ ಅಧಿಕಾರಕ್ಕೆ ಬರುತ್ತದೆ. ಇದರಿಂದಾಗಿ ರಾಜ್ಯದಲ್ಲಿರುವ ಬಡ ಜನರ, ಮಧ್ಯಮ ಜನರ ಅಭಿವೃದ್ಧಿಯಾಗಲಿದೆ. 60 ಸಾವಿರ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಜೊತೆಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ನನಗೆ ಆಶೀರ್ವಾದ ಮಾಡಬೇಕೆಂದರು.

ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ನಾಯಕ, ಸಂಗಮೇಶ ಓಲೇಕಾರ, ಅಪ್ಪಾಸಾಹೇಬ ಯರನಾಳ, ಚಂದ್ರಶೇಖರಗೌಡ ಪಾಟೀಲ, ಎಂ.ಎಂ.ಮುಲ್ಲಾ, ಶಂಕರಗೌಡ ಬಿರಾದಾರ ಮಾತನಾಡಿದರು.

ಮುದುಕಪ್ಪ ಹತ್ತರಕಿ ಅವರು ಕ್ರಿಕೆಟ್‌ ಕಾಮೆಂಟ್ರಿ ಶೈಲಿಯಲ್ಲಿ ಮಾತನಾಡಿದ್ದು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಲ.ರು.ಗೊಳಸಂಗಿ, ಲೋಕನಾಥ ಅಗರವಾಲ, ಸುರೇಶ ಹಾರಿವಾಳ, ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಪುನೀತಕುಮಾರ ಲೇಳಂಪಳಿ, ಉಸ್ಮಾನ ಪಟೇಲ, ಸಿದ್ದಣ್ಣ ನಾಗಠಾಣ, ಶೇಖರ ಗೊಳಸಂಗಿ, ಬಸಣ್ಣ ದೇಸಾಯಿ, ಭರತು ಅಗರವಾಲ, ರವಿಗೌಡ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ರವಿ ರಾಠೋಡ, ಅಶೋಕ ಹಾರಿವಾಳ, ಸುರೇಶಗೌಡ ಪಾಟೀಲ, ಸತ್ಯಜೀತ ಪಾಟೀಲ, ಇತರರು ಇದ್ದರು.

ಬಿಜೆಪಿ ಲಿಂಗಾಯತ ವಿರೋಧಿಯಲ್ಲ: ಶೆಟ್ಟರ್‌ ವಿರುದ್ಧ ಗುಡುಗಿದ ಬಸನಗೌಡ ಯತ್ನಾಳ

ನಾನು ಚಿಕ್ಕ ವಯಸ್ಸಿನಲ್ಲೆಯೆ ರಾಜಕಾರಣದಲ್ಲಿ ಅಧಿಕಾರಕ್ಕೆ ಬಂದಿದ್ದೇನೆ. ಅಧಿಕಾರಕ್ಕಾಗಿ ಪಕ್ಷ ಬದಲಿಸಿಲ್ಲ. ಜನರ ಅಭಿವೃದ್ಧಿಗಾಗಿ ನಾನು ಪಕ್ಷವನ್ನು ಬದಲಿಸಿದ್ದೇನೆ. ಕೆಲ ರಾಜಕಾರಣಿಗಳು ಕುಹಕದ ಮಾತುಗಳನ್ನು ಆಡುವ ಮೂಲಕ ಜನರನ್ನು ಮಾಡುತ್ತಿದ್ದಾರೆ. ಅಂಥವರಿಗೆ ಜನರು ಮನ್ನಣೆ ಕೊಡಬಾರದು. ನಾನು ಕ್ಷೇತ್ರವನ್ನು ಬಿಡುತ್ತೆನೆಂದರೂ ಬಸವಣ್ಣನವರು ನನ್ನನ್ನು ಬಿಡುತ್ತಿಲ್ಲ. ಬಸವಣ್ಣನವರ ಆಶೀರ್ವಾದ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ನಾನು ಈ ಕ್ಷೇತ್ರವನ್ನು ತೊರೆಯುವುದಿಲ್ಲ. ಈ ಕ್ಷೇತ್ರದಲ್ಲಿ ನಾನೊಬ್ಬನೇ ಶಾಸಕನಲ್ಲ. ಮತದಾರರೆಲ್ಲರೂ ಶಾಸಕರು ಅಂತ ಶಾಸಕ ಶಿವಾನಂದ ಪಾಟೀಲ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!