ಸಾಧ್ವಿ ಪ್ರಜ್ಞಾ ಸಿಂಗ್, ಮೀನಾಕ್ಷಿ ಲೇಖಿ ಸೇರಿ 33 ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್: ಸುಷ್ಮಾ ಪುತ್ರಿಗೆ ಡೆಲ್ಲಿ ಟಿಕೆಟ್

By Anusha KbFirst Published Mar 3, 2024, 11:37 AM IST
Highlights

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟ ಬಿಡುಗಡೆ ಮಾಡಿದ್ದು, 33 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ವಿವಾದಾತ್ಮಕ ಹೇಳಿಕೆ ನೀಡಿ ಪಕಕ್ಕೆ ಮುಜುಗರ ಉಂಟು ಮಾಡುತ್ತಿದ್ದವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟ ಬಿಡುಗಡೆ ಮಾಡಿದ್ದು, 33 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ವಿವಾದಾತ್ಮಕ ಹೇಳಿಕೆ ನೀಡಿ ಪಕಕ್ಕೆ ಮುಜುಗರ ಉಂಟು ಮಾಡುತ್ತಿದ್ದವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪ್ರಮುಖವಾಗಿ ಭೋಪಾಲ್ ಕ್ಷೇತ್ರದಿಂದ ಸಂಸದರಾಗಿದ್ದ ವಿವಾದಿತ ಫೈ‌ರ್ ಬ್ರಾಂಡ್ ಸಂಸದೆ ಸಾಧಿ ಪ್ರಜ್ಞಾ ಸಿಂಗ್ ಅವರಿಗೆ ಟಿಕೆಟ್ ಮಿಸ್ ಆಗಿದ್ದು, ದೆಹಲಿಯಲ್ಲಿ ಪ್ರಕಟಿಸಲಾದ 5 ಕ್ಷೇತ್ರಗಳ ಪೈಕಿ ನಾಲ್ವರು ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಅಲ್ಲಿ ಘಟಾನುಘಟಿಗಳಾದ ಮೀನಾಕ್ಷಿ ಲೇಖಿ, ಹರ್ಷವರ್ಧನ್ ಹಾಗೂ ರಮೇಶ್ ಬಿಧೂರಿಗೆ ಟಿಕೆಟ್ ಮಿಸ್ ಆಗಿದೆ. ಅಲ್ಲದೆ ಕೇಂದ್ರ ಸಚಿವರಾಗಿರುವ ರಾಮೇಶ್ವ‌ರ್ ತೇಲಿ, ಹಜಾರಿ ಬಾಗ್‌ನವರಾದ ಮಾಜಿ ಕೇಂದ್ರ ಸಚಿವ ಜಯಂತ ಸಿನ್ಹಾ ಅವರಿಗೂ ಕೊಕ್ ನೀಡಲಾಗಿದೆ. ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್  ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೂ ನವದೆಹಲಿ ಕ್ಷೇತ್ರದಿಂದ ಸಂಸತ್‌ಗೆ ಟಿಕೆಟ್ ಸಿಕ್ಕಿದೆ. 

ಹಲವು ರಾಜ್ಯಸಭೆ ಸದಸ್ಯರಿಗೆ ಟಿಕೆಟ್

ನವದೆಹಲಿ: ಬಿಜೆಪಿ ಪ್ರಕಟಿಸಿರುವ ತನ್ನ ಮೊದಲ ಪಟ್ಟಿಯಲ್ಲಿ ಹಲವು ರಾಜ್ಯಸಭಾ ಸದಸ್ಯರಿಗೆ ಸ್ಥಾನ ಕಲ್ಪಿಸಿದೆ. ಪ್ರಮುಖವಾಗಿ ತಿರುವನಂತಪುರ ಕ್ಷೇತ್ರದಿಂದ ರಾಜೀವ್ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಲಾಗಿದೆ. ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಆರೋಗ್ಯ ಸಚಿವ ಮನಸುಖ್ ಮಾಂಡವೀಯ, ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ, ಭೂಪೇಂದ್ರ ಯಾದವ್ ಮತ್ತು ಅಸ್ಸಾಂನ ಸರ್ಬಾನಂದ ಸೋನೋವಾಲ್‌ ಅವರಿಗೂ ಸಹ ಲೋಕಸಭಾ ಟಿಕೆಟ್ ನೀಡಲಾಗಿದೆ.

ರಾಜೀವ್‌ ಚಂದ್ರಶೇಖರ್‌ಗೆ ತಿರುವನಂತಪುರ ಟಿಕೆಟ್

ನವದೆಹಲಿ: ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಈವರೆಗೆ ರಾಜ್ಯಸಭೆ ಸದಸ್ಯರಾಗಿದ್ದ ರಾಜೀವ್ ಇದೇ ಮೊದಲ ಬಾರಿ ಲೋಕಸಭೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ತಿರುವನಂತಪುರದಲ್ಲಿ ಕಾಂಗ್ರೆಸ್‌ನ ಶಶಿ ತರೂ‌ರ್ ಹಾಲಿ ಸಂಸದರಾಗಿದ್ದು, ಅವರ ವಿರುದ್ಧ ರಾಜೀವ್ ಕಣಕ್ಕೆ ಇಳಿಯುತ್ತಿರುವುದು ವಿಶೇಷವಾಗಿದೆ.

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಇತ್ತೀಚೆಗೆ ಮುಕ್ತಾಯವಾಗಿದ್ದು, ಅವರಿಗೆ ಮತ್ತೆ ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ಉಮೇದುವಾರಿಕೆ ನೀಡಿರಲಿಲ್ಲ, ಅಲ್ಲದೇ ಸ್ವತಃ ರಾಜೀವ್ ಚಂದ್ರಶೇಖ‌ರ್ ಸಹ ಹಲವು ಸಂದರ್ಶನಗಳಲ್ಲಿ ಲೋಕಸಭಾ ಚುನಾವಣೆಗೆ ಸರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆ: ಪ್ರಧಾನಿ ಮಹತ್ವದ ಸಭೆ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3ರ ಭಾನುವಾರ ಕೇಂದ್ರ ಮಂತ್ರಿ ಪರಿಷತ್‌ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಪುಟ ದರ್ಜೆ ಹಾಗೂ ಎಲ್ಲ ರಾಜ್ಯ ದರ್ಜೆ ಸಚಿವರು ಭಾಗಿಯಾಗಲಿದ್ದಾರೆ. ಚಾಣಕ್ಯಪುರಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಮಂತ್ರಿಮಂಡಲದ ಸಭೆ ನಡೆಯಲಿದೆ. ಪ್ರಮುಖ ನೀತಿ ವಿಷಯಗಳ ಬಗ್ಗೆ ಚರ್ಚಿಸಲು, ವಿವಿಧ ಉಪಕ್ರಮಗಳ ಅನುಷ್ಠಾನದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮತ್ತು ಆಡಳಿತದ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಪ್ರಧಾನಿ ಈ ಸಭೆ ಕರೆದಿದ್ದಾರೆ. ಮುಂದಿನ ಚುನಾವಣೆ ಬಗ್ಗೆಯೂ ಚರ್ಚೆ ಆಗಲಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಮೋದಿ ಅವರು ಎಲ್ಲ ಮಂತ್ರಿಗಳಿಗೆ ‘ಕ್ರಿಯಾತ್ಮಕ, ಸ್ಪಷ್ಟ ವ್ಯಾಖ್ಯಾನ ಇರುವ ಹಾಗೂ ಗಮನಾರ್ಹ’ ಎನ್ನಬಹುದಾದ ಸರ್ಕಾರದ 100 ದಿನಗಳ ಕ್ರಿಯಾಯೋಜನೆ ಸಿದ್ಧಪಡಿಸಿ ತಮ್ಮ ಮುಂದೆ ಮಂಡಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಈ 100 ದಿನಗಳ ಕಾರ್ಯಸೂಚಿಯು ಬಿಜೆಪಿ ಪ್ರಣಾಳಿಕೆಯೂ ಆಗಬಹುದು ಅಥವಾ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಜಾರಿಗೆ ತರಬಹುದಾದ ಯೋಜನೆಗಳ ಅಜೆಂಡಾ ಕೂಡ ಇರಬಹುದು ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಪ್ರಾರಂಭಿಸಿದೆ. ಮಾ.13ರ ನಂತರ ಯಾವುದೇ ಕ್ಷಣ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುವ ನಿರೀಕ್ಷೆಯಿದೆ. 2014 ರಲ್ಲಿ ಚುನಾವಣಾ ಆಯೋಗವು ಮಾ. 5 ರಂದು 9 ಹಂತಗಳ ಲೋಕಸಭೆ ಚುನಾವಣೆ ಘೋಷಿಸಿತ್ತು ಮತ್ತು ಮೇ 16 ರಂದು ಫಲಿತಾಂಶ ಘೋಷಿಸಲಾಗಿತ್ತು. 2019ರಲ್ಲಿ, ಮಾ. 10 ರಂದು 7 ಹಂತಗಳ ಲೋಕಸಭಾ ಚುನಾವಣೆಯನ್ನು ಘೋಷಿಸಿತ್ತು ಮತ್ತು ಮೇ 23ರಂದು ಫಲಿತಾಂಶ ಪ್ರಕಟಿಸಲಾಗಿತ್ತು.

ರಾತ್ರಿ ಮೂರೂವರೆಗೆ ಮನೆಗೆ ತೆರಳಿದ್ದ ಮೋದಿ ಮತ್ತೆ ಬೆಳಗ್ಗೆ 8ಕ್ಕೆ ವಿಮಾನದಲ್ಲಿ ಹಾಜರ್‌!

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರೀಯ ಮಂಡಳಿ ಸಭೆಯಲ್ಲಿ ಗುರುವಾರ ರಾತ್ರಿ 3:30ರವರೆಗೂ ಹಾಜರಿದ್ದರೂ, ಮನೆಗೆ ತೆರಳಿ ತಮ್ಮ ದೈನಂದಿನ ಕೆಲಸ ಮುಗಿಸಿ ವೇಳಾಪಟ್ಟಿಗೆ ಸರಿಯಾಗಿ ಬೆಳಗ್ಗೆ 8 ಗಂಟೆಗೆ ಜಾರ್ಖಂಡ್‌ಗೆ ತೆರಳಲು ವಿಮಾನ ಏರಲು ಬಂದ ಪ್ರಧಾನಿ ಮೋದಿಯ ಕರ್ತವ್ಯಪ್ರಜ್ಞೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ತಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ದೃಢ ವಿಶ್ವಾಸವಿದ್ದರೂ ಪ್ರಧಾನಿ ಮೋದಿಯವರು ಅತ್ಯಂತ ಬದ್ಧತೆಯಿಂದ ತಮ್ಮನ್ನು ತಾವು ದೇಶ ಸೇವೆಗೆ ಸಂಪೂರ್ಣ ಸಮರ್ಪಿಸಿಕೊಂಡಿರುವುದು ಯುವಜನತೆಗೆ ಸ್ಫೂರ್ತಿ ಮೂಡಿಸುತ್ತದೆ ಎಂದಿದ್ದಾರೆ. ಪ್ರಧಾನಿ ಮೋದಿ ವಿದೇಶಗಳಿಗೆ ವಿಮಾನದಲ್ಲಿ ತೆರಳುವಾಗಲೂ ರಾತ್ರಿ ಸಮಯವನ್ನೇ ಆಯ್ಕೆ ಮಾಡಿ, ಅಲ್ಲೇ ವಿಶ್ರಾಂತಿ ಪಡೆಯುವ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮಾಡುತ್ತಾರೆ.

click me!