Reporters Dairy: ಯುವಕರ ಕ್ರಿಕೆಟ್‌ ‘ಆಟ’ಕ್ಕೆ ಜನನಾಯಕರು ಬೇಸ್ತು: ಟೂರ್ನಿ ಹೆಸರಲ್ಲಿ ನಾಯಕರಿಂದ ದೇಣಿಗೆ ಸಂಗ್ರಹ

Published : Feb 27, 2023, 11:34 AM IST
Reporters Dairy: ಯುವಕರ ಕ್ರಿಕೆಟ್‌ ‘ಆಟ’ಕ್ಕೆ ಜನನಾಯಕರು ಬೇಸ್ತು: ಟೂರ್ನಿ ಹೆಸರಲ್ಲಿ ನಾಯಕರಿಂದ ದೇಣಿಗೆ ಸಂಗ್ರಹ

ಸಾರಾಂಶ

ರಾಜ್ಯದಲ್ಲಿ ಚುನಾವಣೆ ಬಿಸಿ ಹೆಚ್ಚುತ್ತಿರುವಂತೆ ನಮ್‌ ಚಿಕ್‌ಮಗಳೂರಿನಲ್ಲಿ ಕ್ರಿಕೆಟ್‌ ಟೂರ್ನಿಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಚುನಾವಣೆಗೂ ಕ್ರಿಕೆಟ್‌ಗೂ ಎತ್ತಣಿಂದೆತ್ತಣ ಸಂಬಂಧ ಎನ್ನಬೇಡಿ. ಡೀಪ್‌ ಸಂಬಂಧ ಐತೆ, ಸ್ವಲ್ಪ ಓದ್ಕಳಿ...

ಚಿಕ್ಕಮಗಳೂರು (ಫೆ.27): ರಾಜ್ಯದಲ್ಲಿ ಚುನಾವಣೆ ಬಿಸಿ ಹೆಚ್ಚುತ್ತಿರುವಂತೆ ನಮ್‌ ಚಿಕ್‌ಮಗಳೂರಿನಲ್ಲಿ ಕ್ರಿಕೆಟ್‌ ಟೂರ್ನಿಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಚುನಾವಣೆಗೂ ಕ್ರಿಕೆಟ್‌ಗೂ ಎತ್ತಣಿಂದೆತ್ತಣ ಸಂಬಂಧ ಎನ್ನಬೇಡಿ. ಡೀಪ್‌ ಸಂಬಂಧ ಐತೆ, ಸ್ವಲ್ಪ ಓದ್ಕಳಿ... ಕ್ರಿಕೆಟ್‌ ಆಡೋಕೆ, ಬ್ಯಾಟು, ಬಾಲು, ವಿಕೆಟು, ಗೆದ್ದವರಿಗೆ ಗಿಫ್ಟ್‌, ಪಂದ್ಯಾವಳಿ ನಡೆಸಲು ಫಂಡು ಇವೆಲ್ಲ ಬೇಕಾ? ಅದನ್ನ ಕೊಡೋಕೆ ದಾನಿಗಳು ಬೇಕಾ? ಇಂತಹ ದಾನಿಗಳು ಸಾಮಾನ್ಯ ದಿನಮಾನಗಳಲ್ಲಿ ಎಲ್ಲಿ ಸಿಗುತ್ತಾರೆ ಸ್ವಾಮಿ? ಆದರೆ, ಚುನಾವಣೆ ಟೈಂ ಅಂದ್ರೆ ಅದರ ಗಮ್ಮತ್ತೇ ಬೇರೆ. ಯುವಕರ ಮತದ ಮೇಲೆ ಕಣ್ಣಿಟ್ಟ ಟಿಕೆಟ್‌ ಆಕಾಂಕ್ಷಿಗಳೆಂಬ ದಾನಿಗಳು ನಾ ಮುಂದು, ತಾ ಮುಂದು ಅಂತ ದಾನ ಕೊಡೋಕೆ ಲೈನ್‌ ನಿಲ್ಲುತ್ತಾರೆ.

ಇದು ನಮ್‌ 2023ರ ಯೂತ್ಸ್‌ಗೆ ಚೆನ್ನಾಗಿ ಗೊತ್ತು. ಸೋ, ಈ ಆಕಾಂಕ್ಷಿಗಳೆಂಬ ಬಕ್ರಾಗಳ ಮನೆಬಾಗಿಲಿಗೆ ಎಡತಾಕುವ ನಮ್‌ ಯೂತ್‌ಗಳು, ಅಣ್ಣಾ ಊರಲ್ಲಿ ಕ್ರಿಕೆಟ್‌ ಇದೆ, ಉದ್ಘಾಟನೆಗೆ ಬನ್ನಿ ಅಂತ ಆಹ್ವಾನಿಸುತ್ತಾರೆ. ಜತೆಗೆ, ತಮಗೆ ಏನೇನು ದಾನ ಬೇಕು ಅಂತ ಪಟ್ಟಿಯನ್ನು ಕೊಡುತ್ತಾರೆ. ಜಾದೂ ಅಂದ್ರೆ, ಪಟ್ಟಿಯಲ್ಲಿದ್ದ ಸರಂಜಾಮುಗಳು ಆ ಕ್ಷಣಕ್ಕೆ ಮಂಜೂರಾಗಿ ಬಿಡುತ್ತವೆ. ಅದನ್ನೆಲ್ಲ ಪಡೆದುಕೊಂಡ ನಮ್ಮ ಯುವ ಪಡೆ ‘ಅಣ್ಣ ಪಂದ್ಯಾವಳಿ ಉದ್ಘಾಟನೆಗೆ ಬರಲೇ ಬೇಕು. ನಿಮಗೆ ನಾವು ಜೈಕಾರ ಹಾಕಲೇ ಬೇಕು’ ಅಂತೇಳಿ ಆಕಾಂಕ್ಷಿಗಳೆಂಬ ದಾನಿಗಳನ್ನು ಖುಷಿ ಪಡಿಸಿರುತ್ತಾರೆ. ಇಂತಹದೊಂದು ಪಂದ್ಯಾವಳಿಯ ಉದ್ಘಾಟನೆ ಮೊನ್ನೆ ಇತ್ತು. ಆ ವೇದಿಕೆ ಮೇಲೆ ಎಲ್ಲಾ ಪಕ್ಷಗಳ, ಅಷ್ಟೂಮಂದಿ ಆಕಾಂಕ್ಷಿಗಳು ಇದ್ದರು. ಅಫ್‌ಕೋರ್ಸ್‌ ಅವರ ಮುಖ ಪೆಚ್ಚಾಗಿತ್ತು. ವೇದಿಕೆ ಕೆಳಗಿದ್ದ ಯುವಕರು, ಎಲ್ಲರಿಗೂ ಸೇರಿಸಿಯೇ ಹಾಕುತ್ತಿದ್ದರು... ಜೈಕಾರ!!!

ರೋಹಿಣಿ ವಿರುದ್ಧ ಮತ್ತೆ ರೂಪಾ ಫೇಸ್ಬುಕ್‌ ಪೋಸ್ಟ್‌: ಪತ್ರಿಕೆಯಲ್ಲಿ ಪ್ರಕಟವಾದ ವರದಿ ಲಗತ್ತಿಸಿ ಗರಂ

ರಾಜಕಾರಣಿಗಳಿಗೆ ಈಗ ಕುಕ್ಕರ್‌ದೇ ಚಿಂತೆ
ಮೈಸೂರು:
ಮತ ಬೇಕೆ, ಕುಕ್ಕರ್‌ ಕೊಡಿ!: ಹೀಗಂತ ಅದ್ಯಾವ ಮಹಾನುಭಾವ ಐಡಿಯಾ ಕೊಟ್ಟನೋ ಗೊತ್ತಿಲ್ಲ. ಹಳ್ಳಿಯಿಂದ ಬೆಂಗಳೂರೆಂಬ ‘ಡಿಲ್ಲಿ’ ವರೆಗೂ ಈಗ ಕುಕ್ಕರ್‌ದೇ ಸೀಟಿ! ಕಿಂದರಜೋಗಿಯ ಕಿನ್ನರಿ ದನಿ ಕೇಳಿದ ಇಲಿಗಳಂತೆ ಈ ಸೀಟಿ ಸದ್ದಿಗೆ ಮರುಳಾಗಿ ಮತದಾರರು ತಪತಪನೇ ವೋಟ್‌ ಹಾಕಿಬಿಡುತ್ತಾರೆ ಎಂಬ ಭ್ರಮೆ ಭರ್ಜರಿಯಾಗಿದೆ. ಪರಂತು, ಹಂಚಿದ ಕುಕ್ಕರ್‌ ಸೀಟಿ ಹೊಡೆಯದೇ ಬ್ಲಾಸ್ಟ್‌ ಆದ ಘಟನೆಗಳು ಹೆಚ್ಚುತ್ತಿರುವಂತೆಯೇ ಫ್ರೀ ಕುಕ್ಕರ್‌ ಅಂದರೆ ಸಾಕು ಜನ ಹೆದರಿ ಓಡುತ್ತಿದ್ದಾರೆ. ಈ ಬೆಳವಣಿಗೆ ಸ್ವಲ್ಪ ತಡವಾಗಿ ಕುಕ್ಕರ್‌ ಕೊಡೋಣ ಅಂತ ಕಾಯುತ್ತಿದ್ದ ರಾಜಕಾರಣಿಗಳ ಪಾಲಿಗೆ ತಾಪತ್ರಯ ತಂದಿದೆ. ಗೌಡೋನ್‌ನಲ್ಲಿಟ್ಟ ಕುಕ್ಕರ್‌ ಖಾಲಿ ಮಾಡೋದು ಹೇಗೆ ಎಂಬ ತಲೆನೋವು ಕಾಡಿದೆ. ಇದಕ್ಕೆ ನಮ್‌ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಬುದ್ಧಿವಂತ ರಾಜಕಾರಣಿ ಹೊಸ ಐಡಿಯಾ ಹುಡುಕಿದ್ದಾರೆ.

ಅದುವೆ ಕುಕ್ಕರ್‌ ಕ್ಲಾರಿಫಿಕೇಷನ್‌!
ಅದು- ನಾವು ಹಂಚುತ್ತಿರುವ ಕುಕ್ಕರ್‌ ಪ್ರತಿಷ್ಠಿತ ಕಂಪನಿಯದು. ಕುಕ್ಕರ್‌ ಜೊತೆಗೆ ಐದು ವರ್ಷ ವಾರೆಂಟಿ ಇದೆ. ಅತ್ಯುತ್ತಮ ತಂತ್ರಜ್ಞಾನದ, ಅನಿಲ ಉಳಿತಾಯದ, ಅತ್ಯುತ್ತಮ ಸಲಕರಣೆಯ, ಐಎಸ್‌ಐ ಪ್ರಮಾಣಪತ್ರ ಇರುವ ಕುಕ್ಕರ್‌. ಗೂಗಲ್‌ ರೇಟಿಂಗ್‌ನಲ್ಲೂ ಅತ್ಯುತ್ತಮ ಕಂಪನಿದು. ಈವರೆಗೆ ಹಂಚಿರುವ ಕುಕ್ಕರ್‌ಗಳಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ, ಹಲವಾರು ಬಾರಿ ಪರಿಶೀಲಿಸಿ, ಗುಣಮಟ್ಟಖಾತರಿಪಡಿಸಿಕೊಂಡ ನಂತರವಷ್ಟೇ ವಿತರಿಸಲು ಮುಂದಾಗಿದ್ದೇವೆ.. ಈ ಕ್ಲಾರಿಫಿಕೇಷನ್‌ ಜತೆಗೆ ಎಲ್ಲೋ ನಡೆದ ಘಟನೆಯನ್ನು ಕೆಲವರು ತಾಲೂಕಿನ ಜೊತೆ ತಳಕು ಹಾಕುತ್ತಿದ್ದು, ಇದರ ಬಗ್ಗೆ ಯಾರೂ ಕಿವಿಗೊಡಬಾರದು. ಸಣ್ಣಪುಟ್ಟಲೋಪದೋಷಗಳು ಬಂದರೆ ಉಚಿತವಾಗಿ ಸವೀರ್‍ಸ್‌ ಮಾಡಿಕೊಡಲಾಗುವುದು ಅಂತ ಆಫರ್‌ ಕೊಟ್ಟಿದ್ದಾರೆ. ಅದಾಗಿ, ಈಗ ಮತ್ತೆ ಕುಕ್ಕರ್‌ ಸೀಟಿ ಸದ್ದು ಜೋರಾಗಿದೆ!

ಕಲ್ಬುರ್ಗಿ ಫ್ಯಾಮಿಲಿ ಫೈಟ್‌ ರಾಜಕಾರಣ
ಕಲಬುರಗಿ:
ಎರಡು ರೀತಿಯ ರಾಜಕಾರಣ ಐತ್ರಿ! ಒಂದು- ಕುಟುಂಬ ರಾಜಕಾರಣ. ಅದಕ್ಕೆ ಹಳೆ ಮೈಸೂರು ಭಾಗದಲ್ಲಿ ನಿಮಗೆ ಭರ್ಜರಿ ಉದಾಹರಣೆ ಸಿಗುತ್ತೆ. ಅದನ್ನು ಇಲ್ಲಿ ನಾವ್‌ ಹೇಳಾಂಗಿಲ್ಲ. ನೀವೇ ಅರ್ಥ ಮಾಡ್ಕೋರಿ. ಎರಡನೆಯದ್ದು - ಕುಟುಂಬ ಫೈಟ್‌ ರಾಜಕಾರಣ. ಇದಕ್ಕೆ ನಮ್‌ ಕಲ್ಬುರ್ಗಿಯಲ್ಲಿ ಎರಡು ಭರ್ಜರಿ ಉದಾಹರಣೆಯಿವೆ, ಕೇಳುವಂತವರಾಗಿ... ಏನಾಗಿದೆಯೆಂದರೆ, ಈ ಜಿಲ್ಲೆಯಲ್ಲಿ ಅಫಜಲ್ಪುರ ಅಸೆಂಬ್ಲಿ ಕಣ ಅಂತ ಐತ್ರಿ. ಅಲ್ಲಿ ಗುತ್ತೇದಾರ್‌ ಹಾಗೂ ಪಾಟೀಲ್‌ ಎಂಬ ಎರಡು ಕುಟುಂಬಗಳು ಇದ್ದಾವ್ರಿ. ಈ ಕುಟುಂಬಗಳೊಳಗೆ ನಡೆದಿರೋದೇ ಫೈಟ್‌ ರಾಜಕಾರಣ. ಗುತ್ತೇದಾರ್‌ ಕುಟುಂಬ ಅಂದ್ರೆ ನಿಮಗೆ ಗೊತ್ತಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌ ಹಾಗೂ ಅವರ ಕಿರಿಯ ಸಹೋದರ ನಿತಿನ್‌ ಗುತ್ತೇದಾರ್‌ ನಡುವಿನ ಫೈಟ್‌. ಬಿಜೆಪಿ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ.

ನಮ್ಮ ತಂದೆಗೆ ವಯಸ್ಸಾಗಿಲ್ಲ, ಇನ್ನು 25ರ ಚಿರಯುವಕನಂತೆ ಕೆಲಸ ಮಾಡುತ್ತಾರೆ: ಬಿಎಸ್‌ವೈ ಪುತ್ರಿ ಅರುಣಾದೇವಿ

ಇನ್ನು ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ಎಂ.ವೈ. ಪಾಟೀಲ್‌ ಮಕ್ಕಳಾದ ಅರುಣ ಪಾಟೀಲ್‌, ಡಾ. ಸಂಜು ಪಾಟೀಲ್‌ ನಡುವೆ ಪಕ್ಷದ ಟಿಕೆಟ್‌ಗಾಗಿ ಭರ್ಜರಿ ಹೋರಾಟ. ಈ ಕಣದಲ್ಲಿ ಕಾಂಗ್ರೆಸ್‌, ಬಿಜೆಪಿ ಎರಡು ಪಕ್ಷಗಳಿಗೂ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಭರ್ಜರಿಯಾಗಿಯೇ ಇದೆ. ಆದರೆ, ಈ ಕುಟುಂಬ ಫೈಟ್‌ ರಾಜಕಾರಣದಿಂದಾಗಿ ಉಳಿದ ಆಕಾಂಕ್ಷಿಗಳು ಮಂಕಾಗಿಬಿಟ್ಟಿದ್ದಾರೆ. ಮಾಲೀಕಯ್ಯ ಸಾಹೇಬ್ರು ಟಿಕೆಟ್‌ಗಾಗಿ ಜಿದ್ದಾಜಿದ್ದಿಗೆ ಇಳಿದಿದ್ದರೆ, ಅವರ ಕಿರಿಯ ಸಹೋದರ ಈ ಸಾರಿ ಟಿಕೆಟ್‌ ನಂದೇ ಅಂತ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಶಾಸಕ ಎಂ.ವೈ. ಪಾಟೀಲ್‌ ಹಿರಿಯ ಪುತ್ರ ಅರುಣ ಪಾಟೀಲ ಟಿಕೆಟ್‌ಗಾಗಿ ಮುಂದಡಿಯಿಟ್ಟಿದ್ದರೆ, ಇದುವರೆಗೂ ಪಾಲಿಟಿಕ್ಸ್‌ನಿಂದ ದೂರ ಇದ್ದ ಡಾ. ಸಂಜು ಪಾಟೀಲ್‌ ಸಹೋದರನಿಗೆ ಸವಾಲ್‌ ಹಾಕಿ ರಸ್ತೆಗೆ ಇಳಿದಿದ್ದಾರೆ. ಅದಾಗಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಪೈಪೋಟಿಗಿಂತ ಎರಡು ಪಕ್ಷಗಳ ಕುಟುಂಬದೊಳಗಿನ ಪೈಪೋಟಿ ಜನರ ಗಮನ ಸೆಳೆದಿದೆ.

- ಆರ್‌.ತಾರಾನಾಥ್‌
- ಅಂಶಿ ಪ್ರಸನ್ನಕುಮಾರ್‌
- ಶೇಷಮೂರ್ತಿ ಅವಧಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ