Karnataka Politics: ಡಿಕೆಶಿ ವ್ಯಕ್ತಿತ್ವ ಏನೆಂದು ಹೇಳ್ತೀನಿ, ಸಂಚಲನ ಮೂಡಿಸಿದ ಜಾರಕಿಹೊಳಿ ಹೇಳಿಕೆ

By Suvarna NewsFirst Published Dec 1, 2021, 6:51 PM IST
Highlights

* ಬೆಳಗಾವಿಯಲ್ಲಿ ರಂಗೇರಿದ ವಿಧಾನಪರಿಷತ್ ಚುನಾವಣೆ
* ಡಿಕೆಶಿ ಬಗ್ಗೆ ಹೇಳಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ
* ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಟಕ್ಕರ್ ಕೊಡಲು ರಮೇಶ್ ಜಾರಕಿಹೊಳಿ ಕಸರತ್ತು

ಬೆಳಗಾವಿ, (ಡಿ.01): ಬಿಜೆಪಿಯ ದೆಹಲಿ ವರಿಷ್ಠರ ಆಶೀರ್ವಾದದಿಂದ ನಾನು ಜೀವಂತ ಇದ್ದೇನೆ, ಇಲ್ಲದಿದ್ರೆ ನನ್ನ ಮುಗಿಸುತ್ತಿದ್ದರು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh Jarkiholi) ಅಚ್ಚರಿ ಹೇಳಿಕೆ ನೀಡಿದ್ದಾರೆ. 

ಹೌದು..ಬೆಳಗಾವಿ(Belagavi) ತಾಲೂಕಿನ ಬೆಳಗುಂದಿಯಲ್ಲಿ ಇಂದು (ಡಿ.01) ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ (MLC Election) ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

Belagavi Parishat Fight: ಚುನಾವಣಾ ಏಜೆಂಟರಾಗಿ ಸತೀಶ್ ಜಾರಕಿಹೊಳಿ ಅಖಾಡಕ್ಕೆ

ನಿಮಗೆ ಬೇಕಿರುವ ಉತ್ತರ ಇಂದು ಸಿಗಲ್ಲ. ಫಲಿತಾಂಶದ ದಿನವಾದ ಡಿಸೆಂಬರ್​ 14ರಂದು ಡಿಕೆ ಶಿವಕುಮಾರ್ ಅವರ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೋರವಾಗಿ ಉತ್ತರ ಕೊಡುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟುಹಾಕಿದರು.

ನಾವು ಈಗ ಚುನಾವಣೆ ಮೂಡ್​ನಲ್ಲಿ ಇದ್ದೇನೆ. ಹತಾಶೆ ಮನೋಭಾವದಿಂದ ಡಿಕೆಶಿ ಟೀಕೆ ಮಾಡಿದ್ದಾರೆ. 1985ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡುತ್ತೇನೆ. ನನ್ನ ವ್ಯಕ್ತಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳುತ್ತೀನಿ ಎಂದ ರಮೇಶ್ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಫಲಿತಾಂಶದ ದಿನ ಎಲ್ಲದಕ್ಕೂ ಉತ್ತರ ಸಿಗಲಿದೆ. ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬ ಏನಿತ್ತು ಎಲ್ಲಾ ಬಹಿರಂಗ ಮಾಡುತ್ತೇನೆ ಎಂದರು.

ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದೇನೆ. ಬ್ಲ್ಯಾಕ್​ಮೇಲ್ ಯಾರು ಮಾಡ್ತಾರೆ ಎಂದು 14ರಂದು ಹೇಳುತ್ತೇನೆ. ಈಗ ಇದ್ದ ಎಂಎಲ್‌ಎ ಉಳಿಸಿಕೊಳ್ಳಲಿ ಆಮೇಲೆ ನೋಡೋಣ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಖನ್ ಜಾರಕಿಹೊಳಿ ಗೆಲ್ಲಿಸಲು ಕಸರತ್ತು
ಹೌದು...ಈಗಾಗಲೇ ಬೆಳಗಾವಿ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಮಹಾಂತೇಶ್ ಕವಂಟಿಗಿಮಠ ಅವರನ್ನ ಕಣಕ್ಕಿಳಿಸಿದೆ. ಆದ್ರೆ, ಇತ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಅಖಾಡಕ್ಕೆ ಇಳಿದಿರುವುದು ಬಿಜೆಪಿ ಮುಖಂಡರಿಗೆ ಇರುಸು ಮುರುಸು ತಂದೊಡ್ಡಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಖನ್ ಜಾರಕಿಹೊಳಿ ಟಿಕೆಟ್ ಕೈ ತಪ್ಪಿದ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಲಖನ್ ಅವರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಪರೋಕ್ಷ ಬೆಂಬಲವೂ ಇದೆ.

ಬೆಳಗಾವಿಯಲ್ಲಿ ಲಖನ್‌ಗೆ ಟಿಕೆಟ್‌ ಕೊಡಿಸಲು ರಮೇಶ್ ಜಾರಕಿಹೊಳಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿಯೂ ಮಾತುಕತೆ ನಡೆಸಿದ್ದರು. ಆದರೆ ಬಿಜೆಪಿ ಹಾಲಿ ಸದಸ್ಯ ಮಹಂತೇಶ ಕವಟಗಿಮಠ ಅವರಿಗೆ ಟಿಕೆಟ್ ನೀಡಿದೆ.‌ ಇದರಿಂದ ಅಸಮಾಧಾನಗೊಂಡ ಲಖನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಟಕ್ಕರ್
ಯೆಸ್...ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಕ್ಕರ್ ಕೊಡಲು ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸಿದ್ದಾರೆ. ಮೊದಲ  ಪ್ರಾಶಸ್ತ್ಯದ ಮತವನ್ನು ಬಿಜೆಪಿಗೆ ಹಾಕಿ, ಎರಡನೇ ಮತ ಕಾಂಗ್ರೆಸ್​​ಗೆ ಹಾಕದಂತೆ ಮನವಿ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್‌ಗೆ ಸಂಷ್ಟ ತಂದೊಡ್ಡಿದೆ. ಆದ್ರೂ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸದಲ್ಲಿದ್ದಾರೆ.

ವಿಧಾನ ಪರಿಷತ್ ಚುನಾವಣೆ ದಿನಾಂಕ
ರಾಜ್ಯ ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಿಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.

click me!