Rajya Sabha Election: ಕೊನೆವರೆಗೆ ಕಾದು ನೋಡುವ ತಂತ್ರಕ್ಕೆ ಜೆಡಿಎಸ್‌ ಶರಣು

By Govindaraj S  |  First Published Jun 5, 2022, 3:00 AM IST

ಜೂ.10ರಂದು ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಸೋಲುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಅರಿತಿದ್ದರೂ ಜೆಡಿಎಸ್‌ ಕೊನೆಯ ಕ್ಷಣದವರೆವಿಗೂ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. 


ಬೆಂಗಳೂರು (ಜೂ.05): ಜೂ.10ರಂದು ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಸೋಲುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಅರಿತಿದ್ದರೂ ಜೆಡಿಎಸ್‌ ಕೊನೆಯ ಕ್ಷಣದವರೆವಿಗೂ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಸಿಂಗಾಪುರ ಪ್ರವಾಸದಿಂದ ಹಿಂತಿರುಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದ ಕೆಲವು ಮುಖಂಡರ ಜತೆ ಸಮಾಲೋಚನೆ ನಡೆಸಿದರು. ರಾಜ್ಯಸಭೆ ಚುನಾವಣೆ ಕಣಕ್ಕಿಳಿದಿರುವ ಕುಪೇಂದ್ರ ರೆಡ್ಡಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಸಾ.ರಾ.ಮಹೇಶ್‌ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. 

ಕೊನೆಯ ಕ್ಷಣದಲ್ಲಿ ರಾಜಕೀಯ ಮೇಲಾಟ ನಡೆದು ಕಾಂಗ್ರೆಸ್‌ ನಿಲುವಿನಲ್ಲಿ ಬದಲಾವಣೆಯಾಗಬಹುದೇ ಎಂಬುದರ ಕುರಿತು ನೋಡೋಣ ಎಂಬುದರ ಕುರಿತು ಸಭೆಯಲ್ಲಿ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ. ಕುಪೇಂದ್ರ ರೆಡ್ಡಿ ಅವರು ತೆರೆಮರೆಯಲ್ಲಿ ಕಾಂಗ್ರೆಸ್‌ ನಾಯಕರ ಜತೆ ಕಸರತ್ತು ನಡೆಸುತ್ತಿದ್ದು, ಅವಿರತ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಇದಕ್ಕೆ ಜೆಡಿಎಸ್‌ನ ಕೆಲವು ನಾಯಕರು ಸಹ ಸಾಥ್‌ ನೀಡಿದ್ದಾರೆ ಎಂದು ಹೇಳಲಾಗಿದೆ. ಜೂ.10ರ ಫಲಿತಾಂಶವೇ ಸ್ಪಷ್ಟಉತ್ತರ ನೀಡಲಿದೆ.

Tap to resize

Latest Videos

Cabinet reshuffle ಒಡಿಶಾ ರಾಜಕೀಯದಲ್ಲಿ ಸಂಚಲನ, ಸಂಪುಟದ ಎಲ್ಲಾ ಸಚಿವರು ರಾಜೀನಾಮೆ!

ಜಲಧಾರೆ ಕಾರ್ಯಕ್ರಮ, ವಿಧಾನಪರಿಷತ್‌ ಚುನಾವಣೆಯಿಂದಾಗಿ ಸತತ ಓಡಾಟ ನಡೆಸಿದ್ದರಿಂದ ಬಳಲಿದ್ದ ಕುಮಾರಸ್ವಾಮಿ ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳಿದ್ದರು. ರಾಜ್ಯಸಭೆ ಚುನಾವಣೆಯ ಉಸ್ತುವಾರಿ ದೇವೇಗೌಡ ಅವರೇ ವಹಿಸಿಕೊಂಡಿದ್ದರಿಂದ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಪ್ರವಾಸ ಬೆಳೆಸಿದ್ದರು. ಆದರೆ, ದೇವೇಗೌಡರ ಪ್ರಯತ್ನ ಯಾವುದೇ ಪ್ರಯೋಜನವಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಟ್ಟು ಬಿಡದೆ ಎರಡನೇ ಅಭ್ಯರ್ಥಿಯಿಂದ ನಾಮಪತ್ರವನ್ನು ಹಿಂತೆಗೆದುಕೊಂಡಿಲ್ಲ. ಆಡಳಿತಾರೂಢ ಬಿಜೆಪಿಯಿಂದ ಮತಗಳು ಬರುವುದಿಲ್ಲ ಎಂಬುದು ಖಾತರಿಯಾಗಿದ್ದರಿಂದ ಜೆಡಿಎಸ್‌, ಕಾಂಗ್ರೆಸ್‌ನ ಮತಗಳ ಮೇಲೆಯೇ ಅವಲಂಬಿತವಾಗಿದೆ.

'ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೀತಿಲ್ಲ, ಬದಲಿಗೆ ತಮ್ಮ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ತಿದ್ದಾರೆ'

ನಾಮಪತ್ರ ಹಿಂಪಡೆಯುವ ಕೊನೆಯ ದಿನದವರೆಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್‌ನ ಅಧಿ ನಾಯಕಿ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿದ್ದರು. ಅಲ್ಲದೇ, ಜೆಡಿಎಸ್‌ನ ರಾಜ್ಯ ನಾಯಕರು ಸಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದರು. ಆದರೂ ಪ್ರಯತ್ನ ಫಲಪ್ರದವಾಗಲಿಲ್ಲ. ಈಗ ಚುನಾವಣೆಯವರೆವಿಗೂ ಕಾದು ನೋಡೋಣ ಎಂಬ ನಿಲುವಿಗೆ ಜೆಡಿಎಸ್‌ ಬದ್ಧವಾಗಿದೆ.

click me!