ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಇತ್ತೀಚಿನ ಕಾರ್ಯವೈಖರಿಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದು, ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಸೊರಬ ತಾಲೂಕು ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಹೇಳಿದರು.
ಶಿವಮೊಗ್ಗ (ಸೆ.26): ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಇತ್ತೀಚಿನ ಕಾರ್ಯವೈಖರಿಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದು, ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಸೊರಬ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಸಿದ್ದರಾಮಯ್ಯನವರ ಪಟ್ಟ ಶಿಷ್ಯರಾಗಿರುವ ರಾಜು ತಲ್ಲೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ನಿಜಕ್ಕೂ ಬೇಸರ ತರಿಸುತ್ತಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸಹ ಸಹಕಾರ ನೀಡುತ್ತಿಲ್ಲ. ಪಕ್ಷದಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವೂ ಆಗುತ್ತಿಲ್ಲ. ವಿಸಿಟಿಂಗ್ ಕಾರ್ಡ್‌ಗಾಗಿ ಕೆಲವರು ಪಕ್ಷದಲ್ಲಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಅಧ್ಯಕ್ಷರು ಪದಾಧಿಕಾರಿಗಳನ್ನು ನೇಮಿಸಲು ಮುಂದಾಗಿಲ್ಲ. ಸಂಘಟನೆಯಲ್ಲಿ ತೊಡಗಿಕೊಳ್ಳದವರ ರಾಜೀನಾಮೆ ಪಡೆಯಬೇಕು ಎಂದು ಕೆಪಿಸಿಸಿ ಹಾಗೂ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೆಲ್ಲವು ಬೇಸರ ತರಿಸಿದೆ ಎಂದು ಎಂದು ಆರೋಪಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ದೇವದಾಸಿಯರು ಹೊಲಿದಿದ್ದ ಕವದಿಯನ್ನು ಗಿಫ್ಟ್ಕೊಟ್ಟ ಸುಧಾಮೂರ್ತಿ
ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಅವರಿಂದ ಪಕ್ಷ ಚೇತರಿಕೆ ಕಾಣದು ಎಂಬ ಸತ್ಯ ಅರಿವಾಗಿದೆ. ವ್ಯಕ್ತಿ ಪೂಜೆಯಲ್ಲಿ ಅವರು ನಿರತರಾದಂತಿದೆ. ಪಕ್ಷಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಿಲ್ಲ. ಇದೀಗ ತಾವು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದೇನೆ. ಇನ್ನೂ ಕೆಲವೇ ದಿನಗಳಲ್ಲಿ ಸೊರಬ ತಾಲೂಕಿನ ಸುಮಾರು 500ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ರಾಜಿನಾಮೆ ನೀಡಲಿದ್ದಾರೆ.
Chikkamagaluru: ಆರ್ಎಸ್ಎಸ್ ಮುಖಂಡನ ಕಾರಿನ ಮೇಲೆ 'ಕಿಲ್ ಯು' ಜಿಹಾದಿ ಬರಹ
ಬೇರೆ ಬೇರೆ ಪಕ್ಷದವರು ನನ್ನನ್ನು ಸಂಪರ್ಕಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸುತ್ತಿದ್ದಾರೆ. ಮುಂದಿನ ನಡೆ ಏನು ಎಂಬುದನ್ನು ಸದ್ಯ ತೀರ್ಮಾನಿಸಿಲ್ಲ. ಆದರೆ ಮತ್ತೆ ಮಾತೃಪಕ್ಷ ಬಿಜೆಪಿಗೆ ಹೋಗಲು ಚಿಂತನೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಜಯ್‌ಕುಮಾರ್, ಎಂ.ಪಿ. ಗಿರೀಶ್, ನವೀನ್, ಪ್ರಶಾಂತ್ ಉಪಸ್ಥಿತರಿದ್ದರು.