ನನಗೆ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ಸರಕಾರದ ಬೋರ್ಡ್ ಬಗ್ಗೆ , ಮೊದಲು ನಿಮ್ಮ ಮತ್ತು ಸಚಿವರ ಕಚೇರಿಗಳು ಹಾಗೂ ಮನೆ ಮುಂದೆ ಈ ಬೋರ್ಡ್ ಹಾಕಿಸಿ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು (ಸೆ.26): “ನನಗೆ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ” ಎಂದು ಸರ್ಕಾರಿ ಕಚೇರಿಗಳಲ್ಲಿ ರಾಜ್ಯ ಸರ್ಕಾರ ಬೋರ್ಡ್ ಹಾಕಿಸುತ್ತಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ಮೊದಲು ನಿಮ್ಮ ಮತ್ತು ಸಚಿವರ ಕಚೇರಿಗಳು ಹಾಗೂ ಮನೆ ಮುಂದೆ ಈ ಬೋರ್ಡ್ ಹಾಕಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರಕಾರ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ. ಸರ್ಕಾರಿ ಗುತ್ತಿಗೆದಾರರು ಲಂಚದ ಆರೋಪ ಮಾಡಿರುವುದು ಸಚಿವರ ಮೇಲೆ, ಅಧಿಕಾರಿಗಳ ಮೇಲೆ ಅಲ್ಲ. ಅಧಿಕಾರಿಗಳನ್ನು ತೋರಿಸಿ ಲಂಚ/ಕಮಿಷನ್ ಆರೋಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಲಂಚಾವತಾರ ನಾಟಕದಲ್ಲಿ ಅಧಿಕಾರಿಗಳದ್ದು ಪೋಷಕ ಪಾತ್ರ, ಇಲಾಖಾ ಸಚಿವರದ್ದೇ ಮುಖ್ಯ ಪಾತ್ರ. ಸಚಿವರಿಂದ ರಕ್ಷಣೆಯ ಅಭಯ ಇಲ್ಲದೆ ಯಾವ ಅಧಿಕಾರಿಯೂ ಲಂಚಕ್ಕೆ ಕೈಯೊಡ್ಡುವ ಸಾಹಸ ಮಾಡುವುದಿಲ್ಲ. ಸಚಿವರು ಪ್ರಾಮಾಣಿಕವಾಗಿದ್ದಾಗ ಸರ್ಕಾರಿ ಅಧಿಕಾರಿಗಳು ಕೂಡಾ ಪ್ರಾಮಾಣಿಕವಾಗಿರುತ್ತಾರೆ. ಸಚಿವರು ಭ್ರಷ್ಟರಾದಾಗ 'ಯಥಾ ರಾಜಾ ತಥಾ ಪ್ರಜಾ' ಅಷ್ಟೆ ಎಂದಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳೇ, ಈ ಬೋರ್ಡ್ ಬರೆಸಿ ಹಾಕುವ ನಾಟಕಗಳನ್ನೆಲ್ಲ ನಿಲ್ಲಿಸಿ. ಮೊದಲು 40% ಕಮಿಷನ್ ಆರೋಪವೂ ಸೇರಿದಂತೆ ಸಚಿವರುಗಳ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಿ. ಸರ್ಕಾರಿ ಕಚೇರಿಗಳಲ್ಲಿ "ಲಂಚ ಕೊಡಬೇಕಾಗಿಲ್ಲ" ಎಂಬ ಬೋರ್ಡ್ ಅಳವಡಿಸುವ ಮೊದಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ. ನೊಂದ ಜನರು ದೂರು ಕೊಟ್ಟರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಿ.
“ನನಗೆ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ” ಎಂದು ಸರ್ಕಾರಿ ಕಚೇರಿಗಳಲ್ಲಿ ರಾಜ್ಯ ಸರ್ಕಾರ ಬೋರ್ಡ್ ಹಾಕಿಸುತ್ತಂತೆ, ಮುಖ್ಯಮಂತ್ರಿ ಅವರೇ, ಮೊದಲು ನಿಮ್ಮ ಮತ್ತು ಸಚಿವರ ಕಚೇರಿಗಳು ಹಾಗೂ ಮನೆ ಮುಂದೆ ಈ ಬೋರ್ಡ್ ಹಾಕಿಸಿ. 1/5 pic.twitter.com/ymZWb6j5DH
— Siddaramaiah (@siddaramaiah)ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ:
ಖಾಸಗಿ ಸಂಸ್ಥೆಯೊಂದು ಭ್ರಷ್ಟಾಚಾರ ಮುಕ್ತ ಅಭಿಯಾನದ ಅಂಗವಾಗಿ ಅಕ್ಟೋಬರ್ 2ರಿಂದ 20ರವರೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ‘ನನಗೆ ಯಾರು ಲಂಚ ಕೊಡಬೇಕಿಲ್ಲ. ನಾನು ಭ್ರಷ್ಟಅಧಿಕಾರಿಯಾಗಲಾರೆ’ ಎಂಬ ನಾಮಫಲಕ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದು, ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಅವರ ಕಚೇರಿಯು ಆಡಳಿತ ಮತ್ತು ಸುಧಾರಣಾ ಇಲಾಖೆಗೆ ಸೂಚನೆ ನೀಡಿದೆ.
ನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟಅಧಿಕಾರಿಯಾಗಲಾರೆ: ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕಲು ಆದೇಶ
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಹೊರಡಿಸಿದ್ದು, ಸಿಟಿಜನ್ ಎನ್‌ಕ್ವೈರಿ ಕೌನ್ಸಿಲ್ ಮತ್ತು ಸಿಇಸಿ ಟ್ರಸ್ವ್ ವತಿಯಿಂದ ಅ.2ರಿಂದ 20ರ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ ಆಯೋಜಿಸಿದ್ದು ಈ ಅವಧಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಂದ ನನಗೆ ಯಾರು ಲಂಚ ಕೊಡಬೇಕಿಲ್ಲ. ನಾನು ಭ್ರಷ್ಟಅಧಿಕಾರಿಯಾಗಲಾರೆ ಎಂಬ ನಾಮಫಲಕ ಅಳವಡಿಸಲು ಆದೇಶ ಹೊರಡಿಸುವ ಮೂಲಕ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ ಯಶಸ್ವಿಗೊಳಿಸಲು ಮನವಿ ಮಾಡಿದೆ. ಈ ಮನವಿ ಪತ್ರವು ಸ್ವಯಂವೇದ್ಯವಾಗಿದ್ದು ಅದರಂತೆ ಮುಂದಿನ ಅಗತ್ಯ ಕ್ರಮ ವಹಿಸಬೇಕೆಂದು ಸೂಚಿಸಿದ್ದಾರೆ.