
ನವದೆಹಲಿ(ಮಾ.24): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿ ಭಾಷಣ ವಿವಾದಕ್ಕೀಡಾಗಿದೆ. ಹಲವು ಭಾಷಣದ ವಿರುದ್ಧ ದೂರು ದಾಖಲಾಗಿದೆ. ವಿಚಾರಣೆಗಳು ನಡೆಯುತ್ತಿದೆ. ಈಗಾಗಲೇ ತಾವು ಆಡಿದ ಮಾತಿಗೆ ಕೋರ್ಟ್‌ನಲ್ಲಿ ಕ್ಷಮೆ ಕೇಳಿದ ಘಟನೆಗಳು ಇವೆ. ಆದರೂ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಾಠ ಕಲಿತಿಲ್ಲ. ಇದರ ಪರಿಣಾಮ ಇದೀಗ ಮೋದಿ ಸಮುದಾಯವನ್ನೇ ನಿಂದಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಕೋರ್ಟ್ ತೀರ್ಪು ನೀಡಿತ್ತು. 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದರ ಪರಿಣಾಮ ಇಂದು ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹರಾಗಿದ್ದಾರೆ. ಇತ್ತ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ.ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಆರೋಪ ಸಾಬೀತಾಗಿ ಕೋರ್ಟ್ ಶಿಕ್ಷೆ ನೀಡಿದ ಬೆನ್ನಲ್ಲೇ ಅನರ್ಹರಾದ ನಾಯಕ ಲಿಸ್ಟ್ ದೊಡ್ಡದೇ ಇದೆ. ಈ ಪಟ್ಟಿಗೆ ಇದೀಗ ರಾಹುಲ್ ಗಾಂಧಿ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿಗೂ ಮೊದಲು ಲಾಲು ಪ್ರಸಾದ್ ಯಾದವ್ ಸೇರಿದಂತೆ ಹಲವು ನಾಯಕರು ಅನರ್ಹಗೊಂಡಿದ್ದಾರೆ.
ಲಾಲು ಪ್ರಸಾದ್ ಯಾದವ್
ಮೇವು ಹಗರಣ ಲಾಲು ಪ್ರಸಾದ್ ಯಾದವ್ ಅವರ ರಾಜಕೀಯ ಜೀವನ ಅಂತ್ಯಗೊಳಿಸಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆದು 2013ರಲ್ಲಿ ಸಿಬಿಐ ಕೋರ್ಟ್ ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿತ್ತು. ಇಷ್ಟೇ ಅಲ್ಲ 5 ವರ್ಷ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಲಾಲು ಪ್ರಸಾದ್ ಅವರ ಲೋಕಸಭಾ ಸ್ಥಾನ ಅನರ್ಹ ಮಾಡಲಾಗಿತ್ತು.
ರಾಹುಲ್ ಗಾಂಧಿ ಅನರ್ಹ ಪ್ರಕರಣ, ಬಿಜೆಪಿಯಿಂದ ಸರ್ವಾಧಿಕಾರಿಗೂ ಮೀರಿದ ಧೋರಣೆ, ಕಾಂಗ್ರೆಸ್ ಆರೋಪ
ರಶೀದ್ ಮಸೂದ್
ಕಾಂಗ್ರೆಸ್ ಸಂಸದ ರಶೀದ್ ಮಸೂದ್ ಮೇಲಿದ್ದ ಎಂಬಿಬಿಎಸ್ ಹಗರಣ ತೀವ್ರ ಸಂಕಷ್ಟ ತಂದೊಡ್ಡಿತ್ತು. ಎಂಬಿಬಿಎಸ್ ಹಗರಣದಲ್ಲಿ ರಶೀದ್ ಮಸೂದ್ ದೋಷಿ ಎಂದು ಸಾಬೀತಾಗಿದ್ದು. ಉತ್ತರ ಪ್ರದೇಶದಿಂದ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿದ್ದ ರಶೀದ್ ಮಸೂದ್‌ಗೆ 2013ರಲ್ಲಿ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.ಇದರ ಬೆನ್ನಲ್ಲೇ ರಶೀದ್ ಮಸೂದ್ ಸ್ಥಾನದಿಂದ ಅನರ್ಹರಾಗಿದ್ದರು.
ಅಶೋಕ್ ಚಾಂಡೆಲ್
ಹಿಮಾಚಲ ಪ್ರದೇಶದ ಹಮೀರ್‌ಪುರ್ ಕ್ಷೇತ್ರದ ಬಿಜೆಪಿ ಶಾಸಕ ಅಶೋಕ್ ಚಾಂಡೆಲ್ 2019ರಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಅಶೋಕ್ ಚಾಂಡೆಲ್‌ಗೆ ಕೋರ್ಟ್ ಜಿವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಅಶೋಕ್ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಕುಲ್ದೀಪ್ ಸೆನೆಗರ್
ಇತ್ತೀಚೆಗೆ ದೇಶದಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಬಿಜೆಪಿಯ ಶಾಸಕ ಕುಲ್ದೀಪ್ ಸಿಂಗ್ ಸೆನೆಗರ್ ದೋಷಿ ಎಂದು ಸಾಬೀತಾಗಿತ್ತು. ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಕುಲ್ದೀಪ್ ಸಿಂಗ್ ಸೆನೆಗರ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಬಾಯಿಗೆ ಬಂದಂತೆ ಮಾತನಾಡುವ ಪ್ರವೃತ್ತಿಗೆ ಎಚ್ಚರಿಕೆಯ ಗಂಟೆ: ಪ್ರತಾಪ್ ಸಿಂಹ
ಅಬ್ದುಲ್ ಅಜಮ್
ಸಮಾಜವಾದಿ ಪಾರ್ಟಿ ನಾಯಕ ಅಬ್ದುಲ್ ಅಜಮ್ 15 ವರ್ಷದ ಹಳೇ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಪ್ರಕರಣದಲ್ಲಿ ಅಬ್ದುಲ್ ಅಜಮ್ ಮೇಲಿನ ಆರೋಪ ಸಾಬೀತಾಗಿತ್ತು. ಹೀಗಾಗಿ ಉತ್ತರ ಪ್ರದೇಶ ವಿಧಾಸಭೆ ಶಾಸಕ ಸ್ಥಾನ ರದ್ದು ಮಾಡಿತ್ತು.
ಮೊಹಮ್ಮದ್ ಫೈಜಲ್
ಜನವರಿ 13 ರಂದು ಲಕ್ಷದ್ವೀಪದ ಶಾಸಕ ಮೊಹಮ್ಮದ್ ಫೈಜಲ್ ಮೇಲಿನ ಕೊಲೆ ಯತ್ನ ಆರೋಪ ಸಾಬೀತಾಗಿತ್ತು. ಸೆಶನ್ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮೊಹಮ್ಮದ್ ಫೈಜಲ್ ಶಾಸಕ ಸ್ಥಾನ ಅನರ್ಹಗೊಂಡಿತ್ತು. ಆದರೆ ಸೆಶನ್ ಕೋರ್ಟ್ ನೀಡಿದ ತೀರ್ಪಿನ್ನು ಕೇರಳ ಹೈಕೋರ್ಟ್ ರದ್ದು ಮಾಡಿತ್ತು.. ಹೀಗಾಗಿ ಚುನಾವಣಾ ಆಯೋಗ, ಮೊಹಮ್ಮದ್ ಫೈಜಲ್ ಅನರ್ಹತೆಯನ್ನು ವಾಪಸ್ ತೆಗೆದುಕೊಂಡಿತು.
ಇದೀಗ ರಾಹುಲ್ ಗಾಂಧಿಗೆ ಇದೇ ಕಾನೂನು ಅವಕಾಶವಿದೆ. ಹೈಕೋರ್ಟ್ ಮೂಲಕ ಸೂರತ್ ಕೋರ್ಟ್ ನೀಡಿದ ತೀರ್ಪಿಗೆ ತಡೆಯಾಜ್ಞೆ ತರುವುದು ಅಥವಾ ಈ ತೀರ್ಪನ್ನು ರದ್ದು ಮಾಡುವಂತೆ ಮನವಿ ಸಲ್ಲಿಸುವ ಅವಕಾಶವಿದೆ. ಹೈಕೋರ್ಟ್ ರಾಹುಲ್ ಗಾಂಧಿ ಪರವಾಗಿ ತೀರ್ಪು ನೀಡಿದರೆ, ಚುನಾವಣಾ ಆಯೋಗ ಅನರ್ಹತೆಯನ್ನು ವಾಪಸ್ ತೆಗೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.