ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಕೋಲಾರಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 40 ಪರ್ಸೆಂಟ್ ಕಮಿಷನ್, ಅದಾನಿ ಹಗರಣ, ಮೀಸಲಾತಿ ಸೇರಿದಂತೆ ಹಲವು ವಿಚಾರಗಳ ಕುರಿತು ಭಾಷಣ ಮಾಡಿರುವ ರಾಹುಲ್ ಗಾಂಧಿ, ಈ ಭ್ರಷ್ಟ ಸರ್ಕಾರ ತೊಲಗಿಸಿ ಕಾಂಗ್ರೆಸ್‌ಗೆ ಅಧಿಕಾರ ನೀಡಲು ಮನವಿ ಮಾಡಿದ್ದಾರೆ.
ಕೋಲಾರ(ಏ.16): ಬಿಜೆಪಿ ಸರ್ಕಾರ ರಾಜ್ಯದಲ್ಲಿ ಏನು ಕೆಲಸ ಮಾಡಿದೆ? ಕೇವಲ 40 ಪರ್ಸೆಂಟ್ ಕಮಿಷನ್ ತಿಂದಿರುವುದು ಬಿಟ್ಟರೆ ಬೇರೇನೂ ಇಲ್ಲ. ಕೇಂದ್ರದಲ್ಲಿ ಪ್ರಧಾನಿ ಮೋದಿ ಉದ್ಯಮಿ ಅದಾನಿಗೆ ಸಹಾಯ ಮಾಡಿದ್ದರೆ, ರಾಜ್ಯದಲ್ಲಿ ಬಡವರ ಹಣವನ್ನು ದೋಚಿದ್ದಾರೆ. ಕರ್ನಾಟಕ ಜನತೆ ಎಚ್ಚೆತ್ತುಕೊಂಡು ಈ ಬಾರಿ ಭ್ರಷ್ಠ ಸರ್ಕಾರವನ್ನ ತೊಲಗಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. ಕೋಲಾರದಲ್ಲಿ ಆಯೋಜಿಸಿದ ಭಾರತ್ ಸಮಾವೇಶಕ್ಕೆ ಆಗಮಿಸಿದ ರಾಹುಲ್ ಗಾಂಧಿ ರಾಜ್ಯ ಬಿಜೆಪಿ ಹಾಗೂ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರ ನಾನು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಅಳಲು ತೋಡಿಕೊಂಡಿದೆ. ಆದರೆ ಪ್ರಧಾನಿ ಯಾವುದೇ ಉತ್ತರ ನೀಡಿದ ಮೌನಕ್ಕೆ ಜಾರಿದ್ದಾರೆ. ಬಿಜೆಪಿ ಸರ್ಕಾರ ಪೊಲೀಸ್ ನೇಮಕಾತಿಯಲ್ಲಿ ಹಣ ಹೊಡೆದಿದೆ, ಶಿಕ್ಷಕರ ನೇಮಕಾತಿಯಲ್ಲಿ ಕಮಿಷನ್ ತಿಂದಿದೆ. ಸಿಕ್ಕ ಸಿಕ್ಕ ಕ್ಷೇತ್ರದಲ್ಲಿ ಹಣ ಕೊಳ್ಳೆ ಹೊಡೆದಿದೆ. ಇಂಜಿನಿಯರ್ ಜಾಬ್ ಹಗರಣ ನಿಮ್ಮ ಕಣ್ಮುಂದೆ ಇದೆ. ಇದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನ ರೇಸ್‌ನಲ್ಲಿರುವ ಕಾಂಗ್ರೆಸ್ ನಾಯಕರ ಪಟ್ಟಿ ಬಹಿರಂಗಪಡಿಸಿದ ಎಂಬಿ ಪಾಟೀಲ್!
ಅದಾನಿ ವಿಚಾರದಲ್ಲಿ ಸಂಸತ್ತಿನಲ್ಲಿ ಧೈರ್ಯದಿಂದ ಪ್ರಶ್ನೆ ಕೇಳಿದ್ದೇನೆ. ಆದರೆ ನನ್ನ ಮೈಕ್ ಆಫ್ ಮಾಡಲಾಗಿದೆ. ಪ್ರಧಾನಿಗಳೇ ನಿಮ್ಮ ಹಾಗೂ ಅದಾನಿ ಸಂಬಂಧ ಏನು? ಅದಾನಿಯ ವಿಮಾನದಲ್ಲಿ ಮೋದಿ ರಿಲಾಕ್ಸ್ ಆಗಿ ಕುಳಿತಿರುವ ಫೋಟೋವನ್ನು ಸಂಸತ್ತಿನಲ್ಲಿ ತೋರಿಸಿ ಪ್ರಶ್ನೆ ಕೇಳಿದ್ದೇನೆ. ಆದರೆ ಉತ್ತರವಿಲ್ಲ. ಬದಲಾಗಿ ನನ್ನ ಧ್ವನಿಯನ್ನೇ ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎಂದು ಕೇಂದ್ರದ ವಿರುದ್ಧ ರಾಹುಲ್ ಹರಿಹಾಯ್ದಿದ್ದಾರೆ.
ಅದಾನಿ ವಿಚಾರ ಪ್ರಶ್ನೆ ಕೇಳಿದರೆ ಸಂಸತ್ತಿನಿಂದ ಅನರ್ಹ ಮಾಡಿದ್ದಾರೆ. ಇದರಿಂದ ನಾನು ಭಯದಿಂದ ಮೌನವಾಗುತ್ತೇನೆ ಅಂದುಕೊಂಡರು. ನಾನು ಇವರಿಗೆಲ್ಲಾ ಹೆದರುವ ಮನುಷ್ಯ ಅಲ್ಲ. ಮುಂದೆ ಕೂಡ ಅದಾನಿ, ಮೋದಿ ವಿರುದ್ಧ ಮಾತನಾಡುತ್ತೇನೆ. ಎಲ್ಲೀಯವರೆಗೆ ಮೋದಿಯಿಂದ ಉತ್ತರ ಸಿಗುವುದಿಲ್ಲವೋ ಅಲ್ಲಿಯವರೆಗೆ ಪ್ರಶ್ನೆ ಕೇಳುತ್ತಾ ಇರುತ್ತೇನೆ. 20 ಸಾವಿರ ಕೋಟಿ ಶೆಲ್ ಕಂಪನಿ ಹಣದ ಪ್ರಶ್ನೆ ಮಾಡಿದ್ದೇನೆ. ಇದಕ್ಕೂ ಉತ್ತರವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅದಾನಿ ಕಂಪನಿಯಲ್ಲಿ ಚೀನಾದ ಡೈರೆಕ್ಟರ್ ಕೂತಿದ್ದಾರೆ. ಚೀನಾ ವ್ಯಕ್ತಿ ಈ ಕಂಪನಿಯಲ್ಲಿ ಯಾಕೆ? ಇದರ ಬಗ್ಗೆ ಅದಾನಿ ಉತ್ತರ ಕೊಡಬೇಕು. ನಾನು ಪ್ರಶ್ನೇ ಮಾಡಿದಾಗ ಒಬಿಸಿ ವಿಚಾರ ಕೆದಕಿ ಮರೆಮಾಚುತ್ತಾರೆ. ಒಬಿಸಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಮೋದಿ ಸಮುದಾಯಕ್ಕೆ ಅವಮಾನ ಪ್ರಕರಣದ ಕುರಿತು ಮಾತನಾಡಿದ್ದಾರೆ.
ಶೆಟ್ಟರ್, ಬೊಮ್ಮಾಯಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸದ ಕಾಂಗ್ರೆಸ್..!
ಒಬಿಸಿ ಕುರಿತು ಬಿಜೆಪಿ ಸುಳ್ಳು ಹೇಳಿಕೆ ನೀಡುತ್ತಿದೆ. ಅತೀ ದೊಡ್ಡ ಸವಾಲು ಇರುವುದು ಜನಸಂಖ್ಯೆ ಯಾರದ್ದು ಹೆಚ್ಚು ಎಂದು ತಿಳಿದುಕೊಳ್ಳಬೇಕು. ಒಬಿಸಿ, ಎಸ್‌ಸಿ ಎಸ್‌ಟಿ ಅಧಿಕಾರಿಗಳು ಕೇಂದ್ರ ಇಲಾಖೆಯಲ್ಲಿ ಶೇಕಡಾ 7 ರಷ್ಟು ಮಾತ್ರ ಇದ್ದಾರೆ. ಭಾರತದಲ್ಲಿ ಒಬಿಸಿ ದಲಿತರು ಎಷ್ಟು ಜನ ಇದ್ದಾರೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಏನು ಕೆಲಸ ಕೊಟ್ಟಿದ್ದೀರೀ? 2011ರಲ್ಲಿ ಯುಪಿಎ ಸರ್ಕಾರ ಜನಗಣತಿ ಮಾಡಿದೆ. ಅಂಕಿ ಅಂಶಗಳು ಅದರಲ್ಲಿ ಇದೆ. ಮೋದಿ ಅವರೇ ಒಬಿಸಿ ಬಗ್ಗೆ ಪ್ರೀತಿ ಇದ್ದರೆ ವರದಿ ಬಿಡುಗಡೆ ಮಾಡಿ. ಆಗ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ ವರದಿ ಬಿಡುಗಡೆಮಾಡಿಲ್ಲ ಎಂದರೆ ಒಬಿಸಿಗೆ ಮಾಡಿದ ಅವಮಾನ. SC-ST ಜನಸಂಖ್ಯೆ ಅನುಗುಣವಾಗಿ ಅವರಿಗೆ ಅವಕಾಶ ಕೊಡಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ರೈತರಿಗೆ, ಕಾರ್ಮಿಕರು, ಬಡವರಿಗೆ ಸಹಾಯ ಮಾಡುತ್ತದೆ. ಮೋದಿ ಬ್ಯಾಂಗ್ ಬಾಗಿಲನ್ನು ಉದ್ಯಮಿಗಳಿಗೆ ತೆರೆದಿದ್ದಾರೆ. ಕಾಂಗ್ರೆಸ್ ಜನರಿಗೆ ಬ್ಯಾಂಕ್ ಕೊಡುತ್ತೇವೆ ಎಂದರು.
ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಕರ್ನಾಟಕ ಜನತೆ ಕಾಂಗ್ರೆಸ್‌ನ್ನು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರಬೇಕು. ಆದರೆ ಈ ಬಿಜೆಪಿ ಪಕ್ಷ ಈಗಾಲೇ ಜೇಬಿಗೆ ಇಳಿಸಿಕೊಂಡಿರುವ 40 ಪರ್ಸೆಂಟ್ ಕಮಿಷನ್ ಹಣದಲ್ಲಿ ಸರ್ಕಾರ ಬೀಳಿಸುವ ಪ್ರಯತ್ನ ಮಾಡಬಹದು. ಆದರೆ 150 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಸುಭದ್ರ ಸರ್ಕಾರ ರಚಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.