ಮಂಡ್ಯ: ಪಾದಯಾತ್ರೆಯಲ್ಲಿ ರಾಹುಲ್‌ ಸರಳತೆ ಪ್ರದರ್ಶನ: ಮಗುವನ್ನು ಮುದ್ದಿಸಿ ಚಾಕೋಲೇಟ್‌ ನೀಡಿದ ಅಧಿನಾಯಕ..!

Published : Oct 08, 2022, 03:00 AM IST
ಮಂಡ್ಯ: ಪಾದಯಾತ್ರೆಯಲ್ಲಿ ರಾಹುಲ್‌ ಸರಳತೆ ಪ್ರದರ್ಶನ: ಮಗುವನ್ನು ಮುದ್ದಿಸಿ ಚಾಕೋಲೇಟ್‌ ನೀಡಿದ ಅಧಿನಾಯಕ..!

ಸಾರಾಂಶ

ರಾಹುಲ್‌ಗೆ ಬಾವುಟ ಕೊಟ್ಟ ಬಾಲಕಿ, ಪುಟ್ಟ ಮಗುವನ್ನು ಮುದ್ದಿಸಿದ ಅಧಿನಾಯಕ, ಎಳನೀರು ಕುಡಿದು ದಣಿವಾರಿಸಿಕೊಂಡ ರಾಹುಲ್‌, ದಾರಿಯುದ್ದಕ್ಕೂ ಸ್ನ್ಯಾಕ್ಸ್‌ ನೀಡಿದ ಕಾರ್ಯಕರ್ತರು

ನಾಗಮಂಗಲ(ಅ.08):   ದೇವಸ್ಥಾನದ ಪೂಜಾ ಕಾರ್ಯದಲ್ಲಿ ರಾಹುಲ್‌ ಭಾಗಿ. ಬಾಲಕಿಯರಿಗೆ ಹಸ್ತಲಾಘವ ನೀಡಿ ಹೆಜ್ಜೆ ಹಾಕಿದ ಕಾಂಗ್ರೆಸ್‌ ಯುವರಾಜ, ತಂದೆ-ಮಗನ ಫೋಟೋ ನೀಡಿದ ಅಭಿಮಾನಿ, ರಾಹುಲ್‌ಗೆ ಬಾವುಟ ಕೊಟ್ಟ ಬಾಲಕಿ, ಪುಟ್ಟ ಮಗುವನ್ನು ಮುದ್ದಿಸಿದ ಅಧಿನಾಯಕ, ಎಳನೀರು ಕುಡಿದು ದಣಿವಾರಿಸಿಕೊಂಡ ರಾಹುಲ್‌, ದಾರಿಯುದ್ದಕ್ಕೂ ಸ್ನ್ಯಾಕ್ಸ್‌ ನೀಡಿದ ಕಾರ್ಯಕರ್ತರು. ಇವು ತಾಲೂಕಿನ ಕೆ.ಮಲ್ಲೇನಹಳ್ಳಿಯಿಂದ ಅಂಚೆ ಭುವನಹಳ್ಳಿಯವರೆಗೆ ನಡೆದ ಭಾರತ್‌ ಜೋಡೋ ಯಾತ್ರೆ ವೇಳೆ ಕಂಡುಬಂದ ಪ್ರಮುಖ ದೃಶ್ಯಾವಳಿಗಳು.

ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಆರಂಭಗೊಂಡಿದ್ದ ಪಾದಯಾತ್ರೆಯು ಬ್ರಹ್ಮದೇವರಹಳ್ಳಿಯಲ್ಲಿ ಮುಕ್ತಾಯಗೊಂಡ ಬಳಿಕ ಎಂ.ಹೊಸೂರು ಗೇಟ್‌ ಸಮೀಪವಿರುವ ಕೇಂದ್ರೀಯ ಪ್ರಕೃತಿ ಚಿಕಿತ್ಸಾಲಯ ಮುಂಭಾಗದ ವಿಸ್ಡಮ್‌ ಶಾಲೆಯಲ್ಲಿ ರಾಹುಲ್‌ ಗಾಂಧಿ ನೇತೃತ್ವದ ತಂಡ ವಾಸ್ತವ್ಯ ಹೂಡಿತ್ತು.

ಅಮ್ಮನ ಶೂ ಲೇಸ್ ಕಟ್ಟಿ ಟ್ರೋಲ್‌ಗೆ ಗುರಿಯಾದ ರಾಹುಲ್

ಎರಡನೇ ದಿನದ ಭಾರತ್‌ ಜೋಡೋ ಪಾದಯಾತ್ರೆಯು ಪಟ್ಟಣದ ಹೊರವಲಯದ ಕೆ.ಮಲ್ಲೇನಹಳ್ಳಿಯಿಂದ ಶುಕ್ರವಾರ ಬೆಳಗ್ಗೆ 7.05ಕ್ಕೆ ಆರಂಭಗೊಂಡು ನಾಗಮಂಗಲ ಪಟ್ಟಣ, ಟಿ.ಬಿ.ಬಡಾವಣೆಯ ಬಿಜಿಎಸ್‌ ವೃತ್ತ, ಉಪ್ಪಾರಹಳ್ಳಿ, ತೊಳಲಿ ಕಾಚೇನಹಳ್ಳಿ, ಅಂಚೆಚಿಟ್ಟನಹಳ್ಳಿ ಮಾರ್ಗವಾಗಿ ಬೆಳಗ್ಗೆ 9.55ರ ವೇಳೆಗೆ ಅಂಚೆಭುವನಹಳ್ಳಿಯ ವಿಶ್ರಾಂತಿ ಸ್ಥಳಕ್ಕೆ ತಲುಪಿತು.

ಪಾದಯಾತ್ರೆಯು ನಾಗಮಂಗಲ ಪಟ್ಟಣ ಪ್ರವೇಶಿಸುತ್ತಿದ್ದಂತೆ ಮಂಡ್ಯ ವೃತ್ತದಿಂದ ಟಿ.ಬಿ.ಬಡಾವಣೆಯ ಬಿಜಿಎಸ್‌ ವೃತ್ತದ ರಸ್ತೆಯ ಎರಡೂ ಬದಿಯಲ್ಲಿ ಮತ್ತು ಕಟ್ಟಡಗಳ ಮೇಲ್ಭಾಗದಲ್ಲಿ ಸೇರಿದ್ದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ರಾಹುಲ್‌ ಅವರತ್ತ ಕೈಬೀಸಿ ಪಾದಯಾತ್ರೆಗೆ ಶುಭಹಾರೈಸುವ ಜೊತೆಗೆ ರಾಹುಲ್‌ಗಾಂಧಿ, ಸೋನಿಯಾಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸ್ತೋಮವನ್ನು ಕಂಡು ಉತ್ಸುಕರಾದ ರಾಹುಲ್‌ ಜನರತ್ತ ಕೈಬೀಸಿಕೊಂಡು ಹೆಜ್ಜೆಹಾಕಿದರು. ಗಾಂಧಿ ವೇಷಧಾರಿ ವ್ಯಕ್ತಿಯೊಬ್ಬರು ಕೆ.ಮಲ್ಲೇನಹಳ್ಳಿಯಿಂದ-ಅಂಚೆಭುವನಹಳ್ಳಿವರೆಗೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕುವ ಮೂಲಕ ಎಲ್ಲರ ಗಮನಸೆಳೆದರು.

ಶುಕ್ರವಾರ ಬೆಳಗ್ಗೆ ಪಾದಯಾತ್ರೆಗೂ ಮುನ್ನ ತಾವು ವಾಸ್ತವ್ಯ ಹೂಡಿದ್ದ ಎಂ.ಹೊಸೂರು ಗೇಟ್‌ ಬಳಿಯಿರುವ ಶ್ರೀ ಮೋರಿಚನ್ನಾಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ ರಾಹುಲ್‌ಗಾಂಧಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾದರು. ಈ ವೇಳೆ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ತಿರುನಾರಾಯಣ ಅಯ್ಯಂಗಾರ್‌ ರಾಹುಲ್‌ ಗಾಂಧಿ ಅವರಿಗೆ ಹೂಮಾಲೆ ಹಾಕಿ ಆಶೀರ್ವದಿಸಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಬಡಗೂಡಮ್ಮ ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿದ್ದ ನಾಲ್ಕು ಮಂದಿ ಬಾಲಕಿಯರ ಬಳಿ ತೆರಳಿದ ರಾಹುಲ್‌ ಅವರಿಗೆ ಹಸ್ತಲಾಘವ ನೀಡುವುದರೊಂದಿಗೆ ಯಾತ್ರೆ ಜೊತೆಗೂಡಿಸಿಕೊಂಡರು. ಅವರೊಂದಿಗೆ ಮಾತನಾಡಿಕೊಂಡು ಕೆಲದೂರದವರೆಗೆ ಹೆಜ್ಜೆಹಾಕಿದರು. ಟಿ.ಬಿ.ಬಡಾವಣೆಯ ಬಿಜಿಎಸ್‌ ವೃತ್ತದಲ್ಲಿ ನೆರೆದಿದ್ದ ಜನರನ್ನು ಕಂಡು ಸಾಮಾನ್ಯ ವ್ಯಕ್ತಿಯಂತೆ ಜನರತ್ತ ತೆರಳಿ ಹಸ್ತಲಾಘವ ನೀಡಿ ಮಾತನಾಡಿಸುತ್ತಿದ್ದಂತೆ ಜನರು ಸೆಲ್ಫಿಗಾಗಿ ಮುಗಿಬೀಳುತ್ತಿದ್ದರು. ಈ ವೇಳೆ ರಾಹುಲ್‌ಗಾಂಧಿ ಅವರ ರಕ್ಷಣೆಗಾಗಿ ಪೊಲೀಸರು ಹರಸಾಹಸಪಡುವಂತಾಯಿತು.

ಟಿ.ಬಿ.ಬಡಾವಣೆಯ ಬಿಜಿಎಸ್‌ ವೃತ್ತಕ್ಕೆ ಪಾದಯಾತ್ರೆ ಬರುತ್ತಿದ್ದಂತೆ ಅಭಿಮಾನಿ ಯುವಕನೊಬ್ಬ ‘ಅಂದಿನ ಪ್ರಧಾನಿ ರಾಜೀವ್‌ಗಾಂಧಿ-ಮುಂದಿನ ಪ್ರಧಾನಿ ರಾಹುಲ್‌ಗಾಂಧಿ ಹೆಸರಿನ ರಾಜೀವ್‌ ಮತ್ತು ರಾಹುಲ್‌ ಅವರ ದೊಡ್ಡದಾದ ಫೋಟೋವನ್ನು ಉಡುಗೊರೆಯಾಗಿ ನೀಡುತ್ತಿದ್ದಂತೆ ಅಭಿಮಾನಿಗೆ ಹಸ್ತಲಾಘವ ನೀಡಿದರು.

ಆ ನಂತರ ಪೊಲೀಸ್‌ ವಸತಿಗೃಹದ ಬಳಿಗೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಭಾರತಾಂಬೆ ವೇಷ ಧರಿಸಿ ನಿಂತಿದ್ದ ಪುಟ್ಟಬಾಲಕಿಯನ್ನು ಕಂಡ ರಾಹುಲ್‌ ಅಲ್ಲಿಗೆ ತೆರಳಿ ಬಾಲಕಿ ಮತ್ತವರ ತಾಯಿಯನ್ನು ಮಾತನಾಡಿಸಿದರು. ಈ ವೇಳೆ ಆ ಪುಟ್ಟಬಾಲಕಿ ತಾನು ಹಿಡಿದಿದ್ದ ತ್ರಿವರ್ಣ ಧ್ವಜವನ್ನು ರಾಹುಲ್‌ಗಾಂಧಿ ಅವರಿಗೆ ನೀಡಿದಳು. ಪ್ರೀತಿಯಿಂದ ಬಾವುಟ ಸ್ವೀಕರಿಸಿದ ರಾಹುಲ್‌ ಅದೇ ಧ್ವಜವನ್ನು ತಾಯಿ ಮಗುವಿಗೆ ನೀಡಿ ಮುಂದೆ ಸಾಗಿದರು.

ಪಟ್ಟಣದ ಹೊರವಲಯ ಮದಲಹಳ್ಳಿ ಗೇಟ್‌ಬಳಿ ಒಂದೂವರೆ ವರ್ಷದ ಪುಟ್ಟಮಗುವಿನೊಂದಿಗೆ ಬಂದಿದ್ದ ತಂದೆಯನ್ನು ಕಂಡ ರಾಹುಲ್‌ ಮಗುವನ್ನು ಎತ್ತಿಕೊಂಡು ಗಲ್ಲ ಹಿಡಿದು ಮುದ್ದಿಸಿದರು. ಅಲ್ಲದೆ ಸ್ವತಃ ರಾಹುಲ್‌ ಅವರೇ ಆ ತಂದೆ-ಮಗುವಿನ ಫೋಟೋ ತೆಗೆಯುವ ಮೂಲಕ ನಾನೊಬ್ಬ ಸರಳವ್ಯಕ್ತಿ ಎನಿಸಿಕೊಂಡರು.

ಎಪಿಎಂಸಿ ಯಾರ್ಡ್‌ ಬಳಿ ಭಾರತ ಜೋಡೋ ಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ನೊಂದಿಗೆ ನೀಲಿ ಬಣ್ಣದ ಶಾಲು ಧರಿಸಿ ನಿಂತಿದ್ದ ದಲಿತ ಸಂಘಟನೆಯ ಹಲವು ಮುಖಂಡರನ್ನು ಕಂಡ ರಾಹುಲ್‌ಗಾಂಧಿ ಅವರನ್ನು ಕರೆದು ಮಾತನಾಡಿಸಿದ ನಂತರ ಮುಖಂಡ ಎಂ.ನಾಗರಾಜಯ್ಯ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಕೆಲದೂರ ಹೆಜ್ಜೆಹಾಕುವ ವೇಳೆ ನಾಗರಾಜಯ್ಯ ಅವರಿಂದ ಒಂದಷ್ಟುಮಾಹಿತಿ ಪಡೆದುಕೊಂಡರು. ದೇಶದ ಭವಿಷ್ಯದ ದೃಷ್ಟಿಯಿಂದ ಈ ಪಾದಯಾತ್ರೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಸ್ತುತ ಸನ್ನಿವೇಶಕ್ಕೆ ಈ ಯಾತ್ರೆ ಅತ್ಯಗತ್ಯವಾಗಿದೆ ಎಂದು ನಾಗರಾಜಯ್ಯ ತಿಳಿಸಿದರು.

ಪೂರ್ಣಕುಂಭ ಸ್ವಾಗತ: 

ತಾಲೂಕಿನ ಅಂಚೆಚಿಟ್ಟನಹಳ್ಳಿ ಸಮೀಪ ಪಾದಯಾತ್ರೆ ಆಗಮಿಸುತ್ತಿದ್ದಂತೆ ಸ್ಥಳೀಯ ಸ್ತ್ರೀ ಶಕ್ತಿ ಸಂಘಗಳ ಹಲವು ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ರಾಹುಲ್‌ಗಾಂಧಿ ನೇತೃತ್ವದ ಕೈ ನಾಯಕ ತಂಡಕ್ಕೆ ಆರತಿ ಬೆಳಗಿ ಭವ್ಯ ಸ್ವಾಗತ ಕೋರಿದರು. ಈ ವೇಳೆ ನೆರೆದಿದ್ದ ಗ್ರಾಮಸ್ಥರೊಂದಿಗೆ ಕೆಲ ನಿಮಿಷ ಮಾತನಾಡಿ ಮುಂದೆ ಹೆಜ್ಜೆಹಾಕಿದರು.

ಪಾದಯಾತ್ರೆ ಸಾಗುವ ದಾರಿಯುದ್ದಕ್ಕೂ ಅಲ್ಲಲ್ಲಿ ನಿರ್ಮಿಸಿದ್ದ ಸ್ಟಾಲ್‌ಗಳಲ್ಲಿ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಜನರಿಗೆ ಕಾಫಿ ಟೀ. ಬಜ್ಜಿ ಬೋಂಡ, ಚಿಕ್ಕನ್‌ ಕಬಾಬ್‌ ಮತ್ತು ಲಘು ಉಪಹಾರ ನೀಡಿ ಕಳುಹಿಸಿದರು. ಎಳನೀರು ಕುಡಿದು ದಣಿವಾರಿಸಿಕೊಂಡ ರಾಹುಲ್‌:ಪಾದಯಾತ್ರೆ ಸಾಗುವ ಮಾರ್ಗಮಧ್ಯೆ ತೊಳಲಿ ಕೆರೆ ಪಕ್ಕದಲ್ಲಿರುವ ಸುಂದರವಾದ ಬಾಳೆ ತೋಟವನ್ನು ಕಂಡ ರಾಹುಲ್‌ಗಾಂಧಿ ದಿಢೀರ್‌ ತೋಟಕ್ಕೆ ತೆರಳಿದರು. ತೋಟದ ಮಾಲೀಕ ಕೊಟ್ಟಎಳನೀರು ಕುಡಿದು ದಣಿವಾರಿಸಿಕೊಂಡ ರಾಹುಲ್‌ ಅಲ್ಲಿನ ಪರಿಸರವನ್ನು ಕಂಡು 25 ನಿಮಿಷಗಳ ಕಾಲ ವಿಶ್ರಾಂತಿ ಪಡೆದರೆ, ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಅಲ್ಲಿಯೇ ಉಪಹಾರ ಸೇವಿಸಿದರು. ಕೆಲ ಮುಖಂಡರು ಟೀ ಕುಡಿದರು.

ಕುಟುಂಬಸ್ಥರನ್ನು ಪರಿಚಯಿಸಿದ ಚಲುವರಾಯಸ್ವಾಮಿ: ಪಾದಯಾತ್ರೆ ಸಾಗುವ ಮಾರ್ಗಮಧ್ಯೆ ಕಾಚೇನಹಳ್ಳಿ ಸಮೀಪದ ರಸ್ತೆಬದಿ ನಿಂತಿದ್ದ ಪತ್ನಿ ಧನಲಕ್ಷ್ಮೇ, ಪುತ್ರ ಸಚ್ಚಿನ್‌, ಸಹೋದರ ಲಕ್ಷ್ಮೇಕಾಂತ್‌ ಪುತ್ರರಾದ ಸುನೀಲ್‌, ರವಿ ಅವರನ್ನು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ರಾಹುಲ್‌ಗಾಂಧಿ ಅವರಿಗೆ ಪರಿಚಯಿಸಿಕೊಟ್ಟರು. ಚಲುವರಾಯಸ್ವಾಮಿ ಕುಟುಂಬಸ್ಥರನ್ನು ರಾಹುಲ್‌ ಪ್ರೀತಿಯಿಂದ ಮಾತನಾಡಿಸಿ ಹೆಜ್ಜೆಹಾಕಿದರು.

ವಿಶ್ರಾಂತಿ ಬಳಿಕ ಮುಂದುವರಿದ ಪಾದಯಾತ್ರೆ:

ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಗುಡಾರದಲ್ಲಿ ರಾಹುಲ್‌ಗಾಂಧಿ ಮತ್ತವರ ತಂಡ ವಿಶ್ರಾಂತಿ ಪಡೆದು ಮಧ್ಯಾಹ್ನ 4 ಗಂಟೆಗೆ ಮತ್ತೆ ಪಾದಯಾತ್ರೆಯನ್ನು ಮುಂದುವರಿಸಿ ಬೆಳ್ಳೂರಿನತ್ತ ಹೆಜ್ಜೆಹಾಕಿದರು.

ಸೋನಿಯಾ ಬರ್ತಾರೆ, ಒಟ್ಟಿಗೆ ನಡೆಯೋಣ ಬನ್ನಿ: ಡಿಕೆಶಿ

ಭೋಜನ ವಿಶ್ರಾಂತಿ ನಂತರ 4 ಗಂಟೆಗೆ ಪುನರಾರಂಭಗೊಂಡ ಪಾದಯಾತ್ರೆಯು ವಡೇರಪುರ ಗೇಟ್‌, ಚಿಕ್ಕಜಟಕ ಗೇಟ್‌, ಹೊಸಮನೆ ಸರ್ಕಲ್‌, ಬೆಳ್ಳೂರು ಕ್ರಾಸ್‌ ಮೂಲಕ ಬೆಳ್ಳೂರು ಪಟ್ಟಣಕ್ಕೆ ತೆರಳಿ ಶುಕ್ರವಾರದ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲಾಯಿತು. ಬೆಳ್ಳೂರಿನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿದ ರಾಹುಲ್‌ಗಾಂಧಿ ಮತ್ತು ಕಾಂಗ್ರೆಸ್‌ ಮುಖಂಡರು ಭಾಷಣ ಮಾಡಿದ ನಂತರ ರಾತ್ರಿ ವಾಸ್ತವ್ಯಕ್ಕಾಗಿ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಗೈರು

ಸರ್ವಪಕ್ಷಗಳ ಸಭೆ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಿದ್ದರೆ, ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿದ್ದರಿಂದ ಶುಕ್ರವಾರದ ಪಾದಯಾತ್ರೆಗೆ ಇಬ್ಬರು ನಾಯಕರು ಗೈರುಹಾಜರಾಗಿದ್ದರು. ತಾಲೂಕಿನ ಮುಸ್ಲಿಂ ಬಾಂಧವರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಎನ್‌.ಚಲುವರಾಯಸ್ವಾಮಿ ಆಪ್ತ ಚಾಮರಾಜಪೇಟೆ ಶಾಸಕ ಜಮೀರ್‌ಅಹಮ್ಮದ್‌ ಕೂಡ ತಾಲೂಕಿನಲ್ಲಿ ನಡೆದ ಎರಡು ದಿನದ ಪಾದಯಾತ್ರೆಯಲ್ಲಿ ಭಾಗವಹಿಸದೆ ಗೈರುಹಾಜರಾಗಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜಿತ್‌ಸಿಂಗ್‌ ಸುರ್ಜೇವಾಲ, ಪಕ್ಷದ ನಾಯಕರಾದ ಜಯರಾಂ ರಮೇಶ್‌, ದಿಗ್ವಿಜಯಸಿಂಗ್‌, ವೇಣುಗೋಪಾಲ್‌, ಪ್ರಿಯಾಂಕ್‌ ಖರ್ಗೆ, ಉಮಾಶ್ರೀ, ಆರ್‌.ಧ್ರುವನಾರಾಯಣ್‌, ರಿಜ್ವಾನ್‌ ಹರ್ಷದ್‌, ಕೆಪಿಸಿಸಿ ಉಪಾಧ್ಯಕ್ಷರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ರಮೇಶ್‌ಬಾಬು ಬಂಡಿಸಿದ್ದೇಗೌಡ, ಮಾಗಡಿ ಬಾಲಕೃಷ್ಣ, ಕೆ.ಬಿ.ಚಂದ್ರಶೇಖರ್‌ ಸೇರಿದಂತೆ ಹಲವು ಮುಖಂಡರು ರಾಹುಲ್‌ಗಾಂಧಿ ಅವರಿಗೆ ಸಾಥ್‌ ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ