
ಶಿವಮೊಗ್ಗ (ಅ.30): ಬಿಹಾರ ವಿಧಾನಸಭಾ ಚುನಾವಣೆ ಮುಗಿದ ನಂತರ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ರಾಜಕೀಯ ವಲಯದಲ್ಲಿ ನಡೆಯುತ್ತಿರುವ ನವೆಂಬರ್ ಕ್ರಾಂತಿಯನ್ನು ಶಾಂತಿಯುತವಾಗಿ ಬಗೆಹರಿಸಲಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಸೇರಿದಂತೆ ಯಾವುದೇ ನಿರ್ಧಾರವಿರಲಿ ಹೈಕಮಾಂಡ್‌ನ ತೀರ್ಮಾನವೇ ಅಂತಿಮವಾಗಿರುತ್ತದೆ. ರಾಜ್ಯದ ನಾಯಕರ ನಡುವೆ ಸಿಎಂ ವಿಚಾರವಾಗಿ ಏನು ಒಪ್ಪಂದ ಆಗಿದೆ ಎಂಬುದು ನನಗೆ ತಿಳಿದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ದಲಿತ ನಾಯಕ ಅಥವಾ ಹಿಂದುಳಿದ ವರ್ಗದ ನಾಯಕರ ಆಯ್ಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಅನುಭವಿ ರಾಜಕಾರಣಿಗಳು ಸಿಎಂ ಸ್ಥಾನಕ್ಕೆ ಅಪೇಕ್ಷೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಮತಗಳ್ಳತನದಿಂದಲೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು. ಮತಗಳ್ಳತನವನ್ನು ಪಕ್ಷದ ವರಿಷ್ಠರಾದ ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಪತ್ತೆಹಚ್ಚಿದ್ದು ಇದರ ವಿರುದ್ಧ ದೇಶಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಮತಗಳ್ಳತನ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು. ಬಿಜೆಪಿ ಅಧಿಕಾರ ಹಿಡಿಯಲು ಅನುಸರಿಸುತ್ತಿರುವ ವಾಮಮಾರ್ಗದಲ್ಲಿ ಮತಗಳ್ಳತನವೂ ಒಂದು. ದೇಶವಾಸಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಅನಧಿಕೃತ ಮತದಾರರನ್ನು ಪಟ್ಟಿಯಿಂದ ವಜಾ ಮಾಡಲು ಅಗತ್ಯ ವಾತಾವರಣ ರೂಪಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 25 ಸಾವಿರ ಸಹಿ ಸಂಗ್ರಹ ಮಾಡುವ ಉದ್ದೇಶ ಹೊಂದಲಾಗಿದೆ. ಪಕ್ಷದ ಪ್ರಮುಖರು, ಕಾರ್ಯಕರ್ತರು ಮನೆಮನೆ ಭೇಟಿ ನೀಡಿ ಸಹಿ ಸಂಗ್ರಹಿಸುವ ಜೊತೆಗೆ ಪಕ್ಷದ ಕಾರ್ಯಕ್ರಮ ಜನರಿಗೆ ತಿಳಿಸಿ ಎಂದು ಹೇಳಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಧ್ವನಿ ಎತ್ತಲು ಕರೆ ನೀಡಿದ ಶಾಸಕರು, ಯೋಜನೆ ಬಗ್ಗೆ ಕೆಲವು ಪರಿಸರವಾದಿಗಳು ಅನಗತ್ಯ ಹುಯಿಲು ಎಬ್ಬಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಇಂತಹ ಯೋಜನೆಗಳ ಅನುಷ್ಠಾನ ಅಗತ್ಯವಾಗಿದ್ದು ಪಕ್ಷದ ಯುವ ಘಟಕ ಯೋಜನೆ ಪರವಾಗಿ ಹೋರಾಟ ರೂಪಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆ ಉಪಯೋಗ ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.