
ಮಂಗಳೂರು : ‘ಎಲ್ಲ ರೋಗಕ್ಕೂ ಮದ್ದಿದೆ. ಆದರೆ, ಅಸೂಯೆಗೆ ಮದ್ದಿಲ್ಲ’ ಎಂದಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ತಮ್ಮ ವಿರುದ್ಧದ ಬಿಜೆಪಿ ನಾಯಕರು ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ‘ಯಾರಿಗಾದರೂ ಈ ಕುರಿತು ಸಂಶಯ ಇದ್ದರೆ ಗುರುವಾರ ಬೆಳಗ್ಗೆಯೇ ನನ್ನ ಕಚೇರಿಯಲ್ಲಿ ಲಭ್ಯ ಇರುತ್ತೇನೆ. ಬರಹ ರೂಪದಲ್ಲಿ ನೀಡಿದರೆ ಸಕಾರಾತ್ಮಕ ಉತ್ತರ ದೊರೆಯಲಿದೆ, ಈ ಬಗ್ಗೆ ಸಕಾರಾತ್ಮಕ ಚರ್ಚೆಗೂ ಸಿದ್ಧನಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ವಿದೇಶ ಪ್ರವಾಸ ಮುಗಿಸಿ ಮಂಗಳೂರಿಗೆ ಆಗಮಿಸಿದ ಅವರು ಬುಧವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಹಾಗೂ ಮಾಜಿ ಸ್ಪೀಕರ್ ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ್ದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರು..
‘ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ತಮ್ಮ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿ, ಯಾರಿಗಾದರೂ ಈ ಕುರಿತು ಸಂಶಯ ಇದ್ದರೆ ಗುರುವಾರ ಬೆಳಗ್ಗೆ ನನ್ನ ಕಚೇರಿಯಲ್ಲಿ ಲಭ್ಯ ಇರುತ್ತೇನೆ. ಬರಹ ರೂಪದಲ್ಲಿ ನೀಡಿದರೆ ಸಕಾರಾತ್ಮಕ ಉತ್ತರ ದೊರೆಯಲಿದೆ. ಈ ಬಗ್ಗೆ ಸಕಾರಾತ್ಮಕ ಚರ್ಚೆಗೂ ಸಿದ್ಧನಿದ್ದೇನೆ. ಯಾವ ಸಂಶಯದ ಬಗ್ಗೆ ಏನೇ ಕೇಳುವುದಿದ್ದರೂ ಲಿಖಿತವಾಗಿಯೇ ಕೊಡಬೇಕು. ಎಲ್ಲರೂ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಲಿಖಿತವಾಗಿ ಏನನ್ನು ನೀಡುತ್ತಾರೋ ಅದರ ಬಗ್ಗೆ ಮಾತ್ರ ವಿಚಾರ ಮಾಡುತ್ತೇನೆ. ಎಲ್ಲಿಯೋ ಕುಳಿತು ಆರೋಪ ಮಾಡಿದರೆ ಅದಕ್ಕೆ ಉತ್ತರ ಕೊಡಲು ಆಗಲ್ಲ, ಲಿಖಿತವಾಗಿ ನೀಡಿದರೆ ಮಾತ್ರ ಉತ್ತರ ಕೊಡುತ್ತೇನೆ. ತನಿಖೆಗೆ ಕೊಡಬೇಕೋ, ಬೇಡವೊ ಎಂದು ತೀರ್ಮಾನ ಮಾಡುತ್ತೇನೆ’ ಎಂದರು.
‘ಎಲ್ಲ ರೋಗಗಳಿಗೆ ಮದ್ದು ಇದೆ, ಆದರೆ ಅಸೂಯೆಗೆ ಮದ್ದೇ ಇಲ್ಲ. ಈಗ ಕರ್ನಾಟಕ ಶಾಸಕಾಂಗದ ಬಗ್ಗೆ ರಾಜ್ಯ, ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗೌರವ ವ್ಯಕ್ತವಾಗುತ್ತಿದೆ. ಇಷ್ಟೆಲ್ಲ ಒಳ್ಳೆಯ ಕಾರ್ಯ ಆಗುವಾಗ ಅದಕ್ಕೆ ದೃಷ್ಟಿ ಬೊಟ್ಟು ಇಟ್ಟಂತೆ ಆರೋಪ ಮಾಡಿದ್ದಾರೆ’ ಎಂದು ವಿಷಾದಿಸಿದರು.
‘ರಾಜಕೀಯ ವ್ಯಕ್ತಿಗಳು ಏನೂ ಬೇಕಾದರೂ ಆರೋಪ ಮಾಡಬಹುದು. ಅದೇ ರೀತಿ ನನಗೂ ಬಹಳಷ್ಟು ಹೇಳುವುದಕ್ಕಿದೆ. ಆದರೆ, ಸಂವಿಧಾನಬದ್ಧ ಸ್ಪೀಕರ್ ಸ್ಥಾನದಲ್ಲಿದ್ದು ಆ ರೀತಿ ಮಾತನಾಡಲು ಆಗಲ್ಲ. ನಾನೀಗ ಪ್ರತಿಪಕ್ಷದ ಮಿತ್ರ. ನಮ್ಮ ಶಾಸಕರಿಗೆ ಏನೆಲ್ಲ ಒಳ್ಳೆಯದಾಗಬೇಕು, ಯಾವುದೆಲ್ಲ ಸವಲತ್ತು ಕೊಡಬೇಕೋ ಅದನ್ನು ಕೊಡುವುದು ನನ್ನ ಕರ್ತವ್ಯ. ಅದನ್ನೇ ಮಾಡುತ್ತಿದ್ದು, ಮುಂದೆ ಕೂಡ ಅದನ್ನೇ ಮಾಡುತ್ತೇನೆ. ಇಂತಹ ಆರೋಪ ಮಾಡಿ ನನಗೆ ಡ್ಯಾಮೇಜ್ ಮಾಡಿದರೆ ಅದರಿಂದ ಅವರಿಗೆ ಸಂತೋಷ ಆಗುವುದಾದರೆ ಆಗಲಿ. ದಿನವೂ ಒಂದೊಂದು ಮಾತನಾಡಲಿ. ನನಗೆ ಯಾವುದೇ ಬೇಸರ ಇಲ್ಲ’ ಎಂದು ಬೇಸರದಿಂದಲೇ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.