Karnataka Congress: ಚುನಾವಣೆ ಸಿದ್ಧತೆಗೆ ದಿಲ್ಲಿಯಿಂದಲೇ ಟೀಂ..!

By Kannadaprabha News  |  First Published Feb 25, 2022, 6:43 AM IST

*  ರಣತಂತ್ರ ರೂಪಿಸಿ, ಚುನಾವಣೆ ಗೆಲ್ಲಲು ಕ್ರಮ ಸೂಚಿಸುವ ತಂಡ
*  ರಾಜ್ಯ ನಾಯಕರ ಜತೆಗಿನ ರಾಹುಲ್‌ ಗಾಂಧಿ ಸಭೆಯಲ್ಲಿ ನಿರ್ಧಾರ
*  ಪದಾಧಿಕಾರಿಗಳ ನೇಮಕಕ್ಕೆ ರಾಹುಲ್‌ ಗಾಂಧಿ ನಿಶಾನೆ
 


ಬೆಂಗಳೂರು(ಫೆ.25):  ಎರಡು ವರ್ಷಗಳಿಂದ ನೆನೆಗುದಿಗೆಗೆ ಬಿದ್ದಿರುವ ಕೆಪಿಸಿಸಿ ಪದಾಧಿಕಾರಿಗಳ(KPCC Officers) ನೇಮಕಕ್ಕೆ ಕೊನೆಗೂ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ(Rahul Gandhi) ಅವರು ಹಸಿರು ನಿಶಾನೆ ತೋರಿದ್ದಾರೆ. ಕೂಡಲೇ ಪದಾಧಿಕಾರಿಗಳ ನೇಮಕ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ಕೆಪಿಸಿಸಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನೇಮಕ ನಡೆಯಬೇಕಿತ್ತು. ವಿವಿಧ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಹಲವು ಬಾರಿ ನೇಮಕ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

ರಾಜ್ಯದಲ್ಲಿ(Karnataka) ಮುಂಬರುವ ಸಾರ್ವತ್ರಿಕ ಚುನಾವಣೆ(General Election) ಸಿದ್ಧತೆಗಾಗಿ ಹೈಕಮಾಂಡ್‌ ಕಡೆಯಿಂದಲೇ ರಾಜ್ಯಕ್ಕೆ ‘ಚುನಾವಣಾ ಸಿದ್ಧತಾ ತಂಡ’ ಕಳುಹಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ರಾಜ್ಯ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಕಾಂಗ್ರೆಸ್ ನಲ್ಲಿ ಒಳಬೇಗುದಿ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡ ರಾಹುಲ್

ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಶಮನಗೊಳಿಸುವ ಹಾಗೂ ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯಗತಾಯ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗುರುವಾರ ರಾಹುಲ್‌ ಗಾಂಧಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ರಾಜ್ಯ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

ಈ ವೇಳೆ ಮುಂಬರುವ ಚುನಾವಣೆ ದೃಷ್ಟಿಯಿಂದ ಅಧ್ಯಯನ ನಡೆಸಲು, ರಣತಂತ್ರ ರೂಪಿಸಲು ಹಾಗೂ ಚುನಾವಣೆಯಲ್ಲಿ ಗೆಲ್ಲಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೆಪಿಸಿಸಿ, ಎಐಸಿಸಿಗೆ(AICC) ಸಲಹೆ ನೀಡಲು ಅನುವಾಗುವಂತೆ ಚುನಾವಣಾ ಸಿದ್ಧತಾ ತಂಡ ರಚನೆಯಾಗಲಿದೆ. ಈ ತಂಡ ಕಾಲ ಕಾಲಕ್ಕೆ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಸರ್ಕಾರದ(BJP Government) ವಿರುದ್ಧದ ಯಾವೆಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಎಂಬ ಬಗ್ಗೆ ವರದಿ ನೀಡಲಿದೆ ಎಂದು ತಿಳಿದು ಬಂದಿದೆ.

ನಾವೆಲ್ಲ ಒಟ್ಟಾಗಿದ್ದೇವೆ ಎಂದ ಕೈ ನಾಯಕರು:

ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲೆಂದು ಕರೆದಿದ್ದ ಸಭೆಯಲ್ಲಿ ರಾಹುಲ್‌ ಗಾಂಧಿ ಈ ವಿಚಾರ ಎತ್ತುವ ಮೊದಲೇ ‘ನಾವೆಲ್ಲ ಒಟ್ಟಾಗಿದ್ದೇವೆ’ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಸ್ವಯಂ ಘೋಷಿಸಿಕೊಂಡಿದ್ದಾರೆ.

‘ನಾವೆಲ್ಲ ಒಟ್ಟಾಗಿದ್ದೇವೆ. ಡಿ.ಕೆ. ಶಿವಕುಮಾರ್‌(DK Shivakumar), ಸಿದ್ದರಾಮಯ್ಯ ಸೇರಿ ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಎದುರಿಸಲು ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ನಡೆದ ಅಧಿವೇಶನ, ಮೇಕೆದಾಟು ಪಾದಯಾತ್ರೆಯಲ್ಲೂ ಇದು ಸಾಬೀತಾಗಿದೆ’ ಎಂದು ಹೇಳಿಕೊಂಡರು.

ಒಗ್ಗಟ್ಟು ಮಂತ್ರಕ್ಕೆ ರಾಹುಲ್‌ ಸೂಚನೆ:

ಆದಾಗ್ಯೂ ರಾಹುಲ್‌ ಗಾಂಧಿ ಅವರು, ‘ನಾಯಕರೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕು. ಸಾಮೂಹಿಕ ನಾಯಕತ್ವದಡಿ ಸಮಷ್ಠಿಯಾಗಿ ಕೆಲಸ ಮಾಡದಿದ್ದರೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗುವ ಬಿಜೆಪಿಯನ್ನು ಎದುರಿಸುವುದು ಕಷ್ಟವಾಗಲಿದೆ. ಹೀಗಾಗಿ ಎಲ್ಲಾ ನಾಯಕರೂ ಒಟ್ಟಾಗಿ ಚುನಾವಣೆ ಎದುರಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳು ಎದುರಾದರೂ ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಬಹಿರಂಗ ಹೇಳಿಕೆ ವಿರುದ್ಧ ಕ್ರಮ ಎಚ್ಚರಿಕೆ:

ಇನ್ನು ಪಕ್ಷದ ನಾಯಕರು ಹಾಗೂ ನಿರ್ಧಾರಗಳ ಬಗ್ಗೆ ಬಹಿರಂಗವಾಗಿ ವಿರುದ್ಧದ ಹೇಳಿಕೆಗಳನ್ನು ನೀಡುವ ಬಗ್ಗೆ ರಾಹುಲ್‌ ಗಾಂಧಿ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆಗಳನ್ನು ಸಹಿಸುವುದಿಲ್ಲ. ಪಕ್ಷದ ಸೂಚನೆ ಮೀರಿ ಯಾರಾದರೂ ಹೇಳಿಕೆಗಳನ್ನು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅವರು ಎಷ್ಟೇ ದೊಡ್ಡ ನಾಯಕರಾದರೂ ಕ್ಷಮೆಯಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಸೇರಿದಂತೆ ಹಲವರು ಹಾಜರಿದ್ದರು.

ಪದೇ ಪದೇ ರಾಜ್ಯಕ್ಕೆ ಬನ್ನಿ: ರಾಹುಲ್‌ಗೆ ಆಹ್ವಾನ

ಬೆಂಗಳೂರು: ರಾಜ್ಯ ನಾಯಕರು ಕೆಲ ಸಲಹೆಗಳನ್ನು ನೀಡಿದ್ದು, ಚುನಾವಣೆಯ ಅಭ್ಯರ್ಥಿಗಳಿಗೆ ಟಿಕೆಟ್‌ ಬೇಗ ಘೋಷಣೆ ಮಾಡಿ ಸಿದ್ಧತೆಗೆ ಕಾಲಾವಕಾಶ ನೀಡಬೇಕು. ಜತೆಗೆ ರಾಹುಲ್‌ ಗಾಂಧಿ ಅವರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರಬೇಕು. ಹೈಕಮಾಂಡ್‌ ಪ್ರತಿನಿಧಿಗಳು ನಿರಂತರವಾಗಿ ರಾಜ್ಯದ ಮೇಲೆ ನಿಗಾ ಇಡಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲು ಹೈಕಮಾಂಡ್‌ ಪ್ರತಿನಿಧಿಗಳು ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ಭಾನುವಾರ ಮೇಕೆದಾಟು ಪಾದಯಾತ್ರೆಗೆ(Mekedatu Padayatra) ಚಾಲನೆ ನೀಡಲು ಒಪ್ಪಿದ್ದಾರೆ.

ರಾಜ್ಯ ಕಾಂಗ್ರೆಸಿಗರ ಒಳ ಬೇಗುದಿ ತಣಿಸಲು ರಾಹುಲ್‌ ಸಭೆ: ಸಿದ್ದು, ಡಿಕೆಶಿ ಸೇರಿ 15 ನಾಯಕರ ದಂಡು ದಿಲ್ಲಿಗೆ!

ಕಾಂಗ್ರೆಸ್‌ನಲ್ಲಿ ಯಾವುದೇ ಒಳ ಜಗಳ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು ಹೈಕಮಾಂಡ್‌ಗೆ ಅರ್ಪಿಸುತ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.  

ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೊಮ್ಮಾಯಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಬಿಜೆಪಿ ಸರ್ಕಾರ ಶೇ.40 ರಷ್ಟು ಕಮಿಷನ್‌ ಸರ್ಕಾರ. ಬಿಟ್‌ಕಾಯಿನ್‌ ಹಗರಣ ಬೊಮ್ಮಾಯಿ ಮನೆ ಬಾಗಿಲಿಗೆ ಬಂದು ನಿಂತಿದೆ. ಇವೆಲ್ಲವನ್ನೂ ರಾಜ್ಯದ ಜನರ ಗಮನಕ್ಕೆ ತರುವ ಕೆಲಸವನ್ನು ಪಕ್ಷ ಮಾಡಲಿದೆ. ಒಗ್ಗಟ್ಟಿನಿಂದ ಹೋರಾಡಲು ಸಭೆಯಲ್ಲಿ ಸೂಚಿಸಲಾಗಿದೆ ಅಂತ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ. 
 

click me!