ಸಾಲು-ಸಾಲು ಸಂಕಷ್ಟದ ನಡುವೆ ವಿನಯ್ ಗುರೂಜಿ ಮೊರೆ ಹೋದ ಈಶ್ವರಪ್ಪ

By Suvarna NewsFirst Published Feb 24, 2022, 7:05 PM IST
Highlights

* ಸಚಿವ ಕೆಎಸ್ ಈಶ್ವರಪ್ಪಗೆ  ಸಾಲು-ಸಾಲು ಸಂಕಷ್ಟ
* ಸಾಲು-ಸಾಲು ಸಂಕಷ್ಟದ ನಡುವೆ ವಿನಯ್ ಗುರೂಜಿ ಮೊರೆ ಹೋದ ಈಶ್ವರಪ್ಪ 
* ಗೌರಿಗದ್ದೆ ಆಶ್ರಮಕ್ಕೆ ತೆರಳಿ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಈಶ್ವರಪ್ಪ ದಂಪತಿ

ಚಿಕ್ಕಮಗಳೂರು, (ಫೆ.24): ಸಾಲು-ಸಾಲು ಸಂಕಷ್ಟದ ನಡುವೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ಅವರು ಅವಧೂತ ಶ್ರೀ ವಿನಯ್ ಗುರೂಜಿ ಮೊರೆ ಹೋಗಿದ್ದಾರೆ.

ಇಂದು (ಗುರುವಾರ) ಕುಟುಂಬ ಸಮೇತರಾಗಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ತೆರಳಿ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Latest Videos

Flag Row: ರಾಷ್ಟ್ರಧ್ವಜ ವಿವಾದ, ಮುಸ್ಲಿಂ ಗೂಂಡಾ ಹೇಳಿಕೆ, ನಾನು ಸಿಂಹ ರೀ ಎಂದ ಈಶ್ವರಪ್ಪ

ಸಚಿವ ಸ್ಥಾನಕ್ಕೆ ಕುತ್ತು, ಕಾಂಗ್ರೆಸ್ ನಿಂದ ರಾಜೀನಾಮೆಗಾಗಿ ನಿರಂತರ ಹೋರಾಟಗಳ ಹೊಯ್ದಾಟದ ಮಧ್ಯೆ ದಿಢೀರ್ ಆಗಿ ವಿನಯ್ ಗುರೂಜಿ ಅವರನ್ನು ಸಚಿವ ಕೆ ಎಸ್​ ಈಶ್ವರಪ್ಪ ಭೇಟಿ ಮಾಡಿದರು. ಪರಿಸ್ಥಿತಿ ತಿಳಿಯಾಗುತ್ತದೆ, ಧೃತಿಗೆಡದಂತೆ ಕೆಲಸ ನಿರ್ವಹಿಸುವಂತೆ ಸಚಿವ ಈಶ್ವರಪ್ಪಗೆ ವಿನಯ್ ಗುರೂಜಿ ಧೈರ್ಯ ತುಂಬಿದ್ದಾರೆ. ಅವಧೂತ ವಿನಯ್ ಗುರೂಜಿಯಿಂದ ಮಾರ್ಗದರ್ಶನ, ಆಶೀರ್ವಾದ ದೊರೆತ ಬಳಿಕ ಸಚಿವ ಈಶ್ವರಪ್ಪ ದಂಪತಿ ವಾಪಸ್ಸ್ ಆಗಿದ್ದಾರೆ.

ಧ್ವಜ ಸಂಕಟದಲ್ಲಿ ಈಶ್ವರಪ್ಪ
ಸಚಿವ ಕೆ.ಎಸ್ ಈಶ್ವರಪ್ಪ ಕೇಸರಿ ಬಾವುಟವೇ ಮುಂದೊಂದು ದಿನ ರಾಷ್ಟ್ರಧ್ವಜ ಆಗಬಹುದು ಎಂಬ ಬಗ್ಗೆ ಹೇಳಿಕೆ ನೀಡಿದ್ದರು. ಈಗಲ್ಲ. 100, 200 ವರ್ಷಗಳ ನಂತರ ಹೀಗಾಗಬಹುದು ಎಂದು ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದರು. ಈ ಕುರಿತು ಕಾಂಗ್ರೆಸ್ ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿತ್ತು. ಅಲ್ಲದೇ, ಅಹೋರಾತ್ರಿ ಧರಣಿ ನಡೆಸಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸೌಧದ ಹೊರಗೂ ಹೋರಾಟಕ್ಕೆ ಕಾಂಗ್ರೆಸ್ ನಾಯಕರು (Congress Peotest) ಕರೆ ನೀಡಿದ್ದರು.  ತಾಲೂಕು ಕೇಂದ್ರ, ವಿಧಾನಸಭಾ ಕ್ಷೇತ್ರದಲ್ಲಿ ಧರಣಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ಹೊರಡಿಸಿದ್ದರು. ಅದರಂತೆ ಫೆಬ್ರವರಿ 21) ರಾಜ್ಯಾದ್ಯಂತ ಈಶ್ವರಪ್ಪ (KS Eshwarappa) ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. 

ಸಚಿವ ಸ್ಥಾನಕ್ಕೆ ಕುತ್ತು,
ಅಧಿವೇಶನ ಮುಗಿಯುತ್ತಿದ್ದಂತೆ ಸಚಿವ ಸಂಪುಟ ಸರ್ಜರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆಯಂತೆ. ಹೈಕಮಾಂಡ್​ಗೆ ಸಿಎಂ ಐವರು ಸಚಿವರನ್ನು ಕೈ ಬಿಡುವ ಬಗ್ಗೆ ಲಿಸ್ಟ್​ ಕಳುಹಿಸಿದ್ದರು. ವರಿಷ್ಠರು ಈ ಲಿಸ್ಟ್​​ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐವರು ಪ್ರಮುಖ ಸಚಿವರಿಗೆ ಶೀಘ್ರವೇ ಗೇಟ್ ಪಾಸ್​ ಸಿಗಲಿದೆ. 

ಈ ಐವರ ಹಿಟ್‌ ಲಿಸ್ಟ್‌ನಲ್ಲಿ ಈಶ್ವರಪ್ಪನವರ ಹೆಸರು ಸಹ ಇದ್ದು, ಅವರನ್ನ ಬೊಮ್ಮಾಯಿ ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ. ಬಜೆಟ್ ಆದ ಬಳಿಕ ಇದು  ಬಗ್ಗೆ ಹೈಕಮಾಂಡ್ ತೀರ್ಮಾನಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ವಿವದಾತ್ಮಕ ಹೇಳಿಕೆಗಳು
ಹೌದು...ಪ್ರಮುಖವಾಗಿ ಹೇಳಿಕೆ ನೀಡುವ ಭರದಲ್ಲಿ ಈಶ್ವರಪ್ಪನವರು ವಿವಾದಾತ್ಮಕ ಹೇಳಿಕೆಗಳು ನೀಡುತ್ತಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ. ಅಲ್ಲದೇ ಸ್ವಪಕ್ಷದ ನಾಯಕರಿಗೂ ಮುಜುಗರವನ್ನುಂಟು ಮಾಡಿಸುವ ಹೇಳಿಕೆಗಳು ಈಶ್ವರಪ್ಪನವರನ್ನ ಕಾಡತೊಡಗಿವೆ.  ಹೀಗೆ ಸಾಲು-ಸಾಲು ಸಂಕಷ್ಟಗಳು ಕಾಡುತ್ತಿರುವುದರಿಂದ ಈಶ್ವರಪ್ಪನವರು ಪರಿಹಾರ ಕಂಡುಕೊಳ್ಳಲು ವಿನಯ್ ಗುರೂಜಿ ಮೊರೆ ಹೋಗಿದ್ದಾರೆ.
 

click me!