ನೀವು ಯೋಗದಿಂದ ಅಧಿಕಾರಕ್ಕೆ ಬಂದವರೇ ಹೊರತು ಯೋಗ್ಯತೆಯಿಂದ ಬಂದ ಮುಖ್ಯಮಂತ್ರಿ ಅಲ್ಲ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ.
ಮೈಸೂರು (ಸೆ.12): ನೀವು ಯೋಗದಿಂದ ಅಧಿಕಾರಕ್ಕೆ ಬಂದವರೇ ಹೊರತು ಯೋಗ್ಯತೆಯಿಂದ ಬಂದ ಮುಖ್ಯಮಂತ್ರಿ ಅಲ್ಲ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಿಮಗೆ ಧೈರ್ಯವಿದ್ದರೆ ಕಾಂಗ್ರೆಸ್ ಸರ್ಕಾರದ ಅವಧಿಯ ಕಾರ್ಯಕ್ರಮಗಳ ಕುರಿತು ತನಿಖೆಗೆ ಒಳಪಡಿಸಿ ಎಂದು ಸವಾಲು ಹಾಕಿದರು.
ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ಬದಲಿಗೆ ಕಾಂಗ್ರೆಸ್ ವಿರುದ್ಧ ವ್ಯಾಪಕ ಟೀಕೆ ಮಾಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಧಿಕಾರದಲ್ಲಿರುವ ಪಕ್ಷ ಸಮಸ್ಯೆಗಳಿಗೆ ಪರಿಹಾರ ಕಾಣದೆ ಮೋಜಿನ ಔತಣ ಕೂಟ ಆಯೋಜಿಸಿ, ವಿರೋಧ ಪಕ್ಷಗಳನ್ನು ಟೀಕಿಸಲು ಮಾಡಿದ ಕಾರ್ಯಕ್ರಮ ಅದಾಗಿದೆ. ಮುಖ್ಯಮಂತ್ರಿ ಹುದ್ದೆ ಘನತೆಗೆ ತಕ್ಕಂತೆ ಬೊಮ್ಮಾಯಿ ಅವರು ಮಾತನಾಡಿಲ್ಲ. ಧಮ್ ಇದ್ದರೆ, ತಾಕತ್ತಿದ್ದರೆ ಎಂಬ ಪದಗಳನ್ನು ಪ್ರಯೋಗಿಸಿರುವುದು ವಿಷಾದನೀಯ ಎಂದರು.
undefined
Mysuru Dasara 2022 : ಗಜಪಡೆಗಳಿಗೆ ಸಿಡಿಮದ್ದು ತಾಲೀಮಿನ ಹೈಲೈಟ್ಸ್
ವಿರೋಧ ಪಕ್ಷದಲ್ಲಿದ್ದಾಗ ನಿಮಗೆ ಜವಾಬ್ದಾರಿ ಇರಲಿಲ್ಲವೇ? ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆಯೋ ಅದನ್ನು ಕೇಳಲಿಲ್ಲವೇಕೆ? ಆಗಲೂ ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿತ್ತು. ಶೇ. 100ರಷ್ಟುಭ್ರಷ್ಟಾಚಾರ ನಡೆದಿತ್ತು ಎನ್ನುತ್ತೀರಲ್ಲಾ ಯಾವ ನೈತಿಕತೆ ಇದೆ ನಿಮಗೆ? ಈಗಿನ ಸರ್ಕಾರದ ಭ್ರಷ್ಟಾಚಾರವನ್ನು ಧೈರ್ಯವಾಗಿ ಬಯಲಿಗೆ ಎಳೆದಿದ್ದೇವೆ. ನೀವೇನು ಮಾಡುತ್ತಿದ್ದಿರಿ ಎಂದು ಅವರು ಪ್ರಶ್ನಿಸಿದರು.
ನಾವು ಶೇ.100 ರಷ್ಟು ಕಮಿಷನ್ ತಗೊಂಡಿದ್ದರೆ ಮೂರು ವರ್ಷದಿಂದ ನೀವು ಏಕೆ ತನಿಖೆ ನಡೆಸಲಿಲ್ಲ. ನಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಜನರು ಸಂಕಷ್ಟದಲ್ಲಿರುವಾಗ ಬಿಜೆಪಿಯವರು ಮೋಜು ಮಾಡಿದ್ದಾರೆ. ಸಚಿವರ ಶೋಕಾಚರಣೆ ಇದ್ದರೂ ಯಾವ ಪುರುಷಾರ್ಥಕ್ಕೆ ಮೋಜು ಮಾಡುತ್ತಿದ್ದೀರಿ? ಕಾಂಗ್ರೆಸ್ ಬಗ್ಗೆ ಭಯ ಪ್ರಾರಂಭ ಆಗಿರುವುದರಿಂದಲೇ ಅಕ್ಕಿ ಮೋದಿ ಅವರದ್ದು, ಖಾಲಿ ಚೀಲ ಸಿದ್ದರಾಮಯ್ಯ ಅವರದ್ದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಆಹಾರ ಭದ್ರತಾ ಕಾಯ್ದೆ ತಂದಿದ್ದು ನಿಮಗೆ ನೆನಪಿಲ್ಲವೇ ಎಂದು ಪ್ರಶ್ನಿಸಿದರು.
ವಿರೋದ ಪಕ್ಷದ ನಾಯಕರನ್ನು ಸದೆ ಬಡಿಯುವ ಕೆಲಸ ಮಾಡುತ್ತಿರುವ ಸಿಬಿಐ ಮುಂತಾದ ತನಿಖಾ ಸಂಸ್ಥೆಗಳಿಗೆ ತನಿಖೆಗೆ ವಹಿಸಲಿ. ಕಾಂಗ್ರೆಸ್ ಹಾಗೂ ಈಗಿನ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಯಡಿಯೂರಪ್ಪ ಸಾರಥ್ಯ ಹಾಗೂ ಬೊಮ್ಮಾಯಿ ನೇತೃತ್ವವಾದರೆ ಕಟೀಲ್ ಪಾತ್ರವೇನು? ಅವರು ಭಜನಾ ಮಂಡಳಿ ಅಧ್ಯಕ್ಷರಾಗಲು ಲಾಯಕ್ಕಾಗಿದ್ದಾರೆ ಎಂದು ಅವರು ಟೀಕಿಸಿದರು.
ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದ ಸ್ಮ ೃತಿ ಇರಾನಿ ಅವರಿಗೆ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳೇನು ಎನ್ನುವುದನ್ನು ತಿಳಿಸಬೇಕಿತ್ತು ಎಂದರು. ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಸಮಾವೇಶ ನಡೆದಿದೆ. ಕಾರ್ಯಕ್ರಮಗಳನ್ನೇ ಕೊಟ್ಟಿಲ್ಲವಾದ್ದರಿಂದ ಅವರಿಗೆ ಎದೆಗಾರಿಕೆ ಇಲ್ಲ ಎಂದು ಅವರು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಭಾಸ್ಕರ್‌ಗೌಡ ಮೊದಲಾದವರು ಇದ್ದರು.
ಬೊಮ್ಮಾಯಿಯವರೇ ನಿಮ್ಮ ಯಾವ ಸಾಧನೆ ಬಗ್ಗೆ ಮಾತನಾಡುತ್ತೀರಿ?: ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಳ್ಳಿ ಹಳ್ಳಿಗೆ ಹೋಗಿ ಬಿಜೆಪಿಯ ಸಾಧನೆ ಬಗ್ಗೆ ತಿಳಿಸುವ ಬಗ್ಗೆ ಹೇಳಿದ್ದಾರೆ. ಬೊಮ್ಮಾಯಿಯವರೇ ನಿಮ್ಮ ಯಾವ ಸಾಧನೆ ಬಗ್ಗೆ ಮಾತನಾಡುತ್ತೀರಿ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಯಂತಹ ಸಂವಿಧಾನಾತ್ಮಕವಾದ ಘನತೆಯ ಹುದ್ದೆಯಲ್ಲಿ ಇದ್ದು ಬಸವರಾಜ ಬೊಮ್ಮಾಯಿ ಅವರು ಯಾವುದೋ ಸಿನಿಮಾ ಪಾತ್ರಧಾರಿಯಂತೆ ಮಾತನಾಡುತ್ತಿರುವುದನ್ನು ನೋಡಿದರೆ ನಗು ಬರುತ್ತದೆ ಎಂದಿದ್ದಾರೆ.
Draupadi Murmu: ದಸರಾ ಮಹೋತ್ಸವ ಉದ್ಘಾಟನೆಗೆ ರಾಷ್ಟ್ರಪತಿ ಇದೇ ಮೊದಲು ಆಗಮನ
ಶೇ.40 ಕಮಿಷನ್ ಭ್ರಷ್ಟಾಚಾರದ ಬಗ್ಗೆಯೋ? ಪಠ್ಯ ಪುಸ್ತಕ ತಿರುಚಿದ ಬಗ್ಗೆಯೋ? ಕಿಟಕಿ ಒಳಗಿಂದ ಸಾವರ್ಕರ್ ಬುಲ್‌ಬುಲ್ ಪಕ್ಷಿಯ ಮೇಲೆ ಹೇಗೆ ಹಾರಿಕೊಂಡು ಬಂದರೆಂದೋ? ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿಸಿದ ಬಗ್ಗೆಯೋ? ಅಡುಗೆ ಸಿಲಿಂಡರ್ ಬೆಲೆ 1000 ರೂಪಾಯಿ ದಾಟಿಸಿದ ಬಗ್ಗೆ ಹೇಳುತ್ತೀರೋ? ಸಮಾಜದಲ್ಲಿ ಧರ್ಮದ ಹೆಸರಲ್ಲಿ ಅಶಾಂತಿ ಮೂಡಿಸುವ ಬಗ್ಗೆ ಹೇಳುವಿರೋ? ನಮ್ಮ ಸರ್ಕಾರ ನೇಮಕಾತಿ ಭ್ರಷ್ಟಾಚಾರ ನಡೆಸುತ್ತಿದ್ದು, ಇದೇ ನಮ್ಮ ಸಾಧನೆ ಎನ್ನುವಿರೋ? ಅಕ್ಕಿ, ಬೇಳೆ, ಅಡುಗೆ ಎಣ್ಣೆ ಬೆಲೆ ವಿಪರೀತ ಏರಿಸಿದ್ದೇವೆ ಎನ್ನುವಿರೋ? ನಮ್ಮ ಯೋಗ್ಯತೆಗೆ ಇಷ್ಟುದಿನವಾದರೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವಿರೋ? ದಯಮಾಡಿ ಈ ಮೇಲೆ ತಿಳಿಸಿದ ಯಾವ ಸಾಧನೆ ಬಗ್ಗೆ ಮಾಡುತ್ತೀರಾ ಎಂಬುದನ್ನು ಜನರಿಗೆ ತಿಳಿಸಿ ಎಂದು ಅವರು ಕುಟುಕಿದ್ದಾರೆ.