ಇಂದಿನಿಂದ ರಾಜ್ಯದಲ್ಲಿ ಐಟಿ ದಾಳಿಗೆ ಸಿದ್ಧತೆ: ಸುರ್ಜೇವಾಲಾ ಆರೋಪ

By Kannadaprabha NewsFirst Published Apr 5, 2023, 6:02 AM IST
Highlights

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಬಿಜೆಪಿಯು ಬುಧವಾರದಿಂದಲೇ ಕಾಂಗ್ರೆಸ್‌ನ ನಾಯಕರು, ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಮೇಲೆ ಐಟಿ-ಇ.ಡಿ. ದಾಳಿ ನಡೆಸುವ ನೀಚ ಕೆಲಸಕ್ಕೆ ಮುಂದಾಗಿದೆ. 

ಬೆಂಗಳೂರು (ಏ.05): ‘ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಬಿಜೆಪಿಯು ಬುಧವಾರದಿಂದಲೇ ಕಾಂಗ್ರೆಸ್‌ನ ನಾಯಕರು, ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಮೇಲೆ ಐಟಿ-ಇ.ಡಿ. ದಾಳಿ ನಡೆಸುವ ನೀಚ ಕೆಲಸಕ್ಕೆ ಮುಂದಾಗಿದೆ. ಈ ಉದ್ದೇಶಕ್ಕಾಗಿ 1,500ಕ್ಕೂ ಹೆಚ್ಚು ಅಧಿಕಾರಿಗಳು ದೆಹಲಿಯಿಂದ ಕರ್ನಾಟಕದತ್ತ ಈಗಾಗಲೇ ಹೊರಟಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ಮಂಗಳವಾರ ರಾತ್ರಿ ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ‘ಸೋಲಿನ ಭೀತಿಯಿಂದ ಬಿಜೆಪಿಯು ವಾಮಮಾರ್ಗ ಹಿಡಿದಿದೆ’ ಎಂದು ಕಿಡಿ ಕಾರಿದರು.

ಸಿದ್ದರಾಮಯ್ಯ ಮಾತನಾಡಿ, ‘ಚುನಾವಣೆಯಲ್ಲಿ ಕಾಂಗ್ರೆಸ್‌ 150 ಸ್ಥಾನ ಗೆಲ್ಲುವುದು ಪಕ್ಕಾ ಆಗಿದೆ. ಎಲ್ಲಾ ಸಮೀಕ್ಷೆಗಳೂ ಕಾಂಗ್ರೆಸ್‌ಗೆ ಪೂರಕವಾಗಿವೆ. ಹೀಗಾಗಿ ಬಿಜೆಪಿ ಸೋಲುವುದು ಖಚಿತವಾಗಿ ಎಲ್ಲಾ ಶಾಸಕರೂ ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ. ಆದಕಾರಣ ಶತಾಯಗತಾಯ ಕಾಂಗ್ರೆಸ್‌ ಗೆಲುವನ್ನು ತಡೆಯಬೇಕು ಎಂದು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಈ ಪ್ರಯತ್ನದಿಂದ 150 ಸೀಟ್‌ ಗೆಲ್ಲುವ ಕಾಂಗ್ರೆಸ್‌ ಗುರಿಯನ್ನು ತಡೆಯಲಾಗುವುದಿಲ್ಲ’ ಎಂದು ಹೇಳಿದರು.

Latest Videos

ಕಾಂಗ್ರೆಸ್ಸಿಗೆ 60 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು: ಆಕಾಂಕ್ಷಿ ಸಂಖ್ಯೆ 2ಕ್ಕೆ ಇಳಿಸಲು ರಾಹುಲ್‌ ತಾಕೀತು

ಶಿವಕುಮಾರ್‌ ಮಾತನಾಡಿ, ‘ಐಟಿ ಹಾಗೂ ಇ.ಡಿ. ಮೂಲಕ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆದರಿಸಲು ಬರುತ್ತಿದ್ದಾರೆ. ಈಗಾಗಲೇ ರಾಜ್ಯ ಮಟ್ಟದಲ್ಲೇ ಚುನಾವಣಾ ಅಕ್ರಮಕ್ಕೆ ಅಧಿಕಾರಿಗಳು ಸಾಥ್‌ ನೀಡುತ್ತಿದ್ದು, ಕೈ ಕಾರ್ಯಕರ್ತರಿಗೆ ಕರೆ ಮಾಡಿ ಕಾಂಗ್ರೆಸ್‌ ಪರ ಕೆಲಸ ಮಾಡದಂತೆ ಬೆದರಿಕೆ ಹಾಕುತ್ತಿದ್ದಾರೆ. ಇದೀಗ ಕಾಂಗ್ರೆಸ್‌ ನಾಯಕರು, ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಐಟಿ, ಇ.ಡಿ. ದಾಳಿ ಮಾಡುವ ಲಜ್ಜೆಗೆಟ್ಟಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ಕಿಡಿ ಕಾರಿದರು.

1,500 ಕ್ಕೂ ಹೆಚ್ಚು ಅಧಿಕಾರಿಗಳು ಕರ್ನಾಟಕದತ್ತ: ಸುರ್ಜೇವಾಲಾ ಮಾತನಾಡಿ, ‘ಕಾಂಗ್ರೆಸ್‌ ಗುರಿಯಾಗಿಸಿಕೊಂಡು ಈಗಾಗಲೇ ಐಟಿ, ಇ.ಡಿ. ದಾಳಿ ನಡೆಸಲು ಈಗಾಗಲೇ 1,500 ಕ್ಕೂ ಹೆಚ್ಚು ಅಧಿಕಾರಿಗಳು ದೆಹಲಿಯಿಂದ ಕರ್ನಾಟಕದತ್ತ ಪ್ರಯಾಣ ಬೆಳೆಸಿದ್ದಾರೆ. ಸೋಲುವ ಭೀತಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆಗೆ ಯತ್ನ ಮಾಡಿರುವುದು ಉನ್ನತ ಮೂಲಗಳಿಂದ ಖಚಿತವಾಗಿದೆ. ಜನ ಬೆಂಬಲ ಇಲ್ಲದೆ ಕುತಂತ್ರಗಳನ್ನು ಮಾಡಲು ಯತ್ನಿಸುತ್ತಿರುವ ಬಿಜೆಪಿಗೆ ಜನರೇ ಉತ್ತರ ನೀಡುತ್ತಾರೆ’ ಎಂದರು.

ಕಾಂಗ್ರೆಸ್‌ ಗೆದ್ದರೂ ಹೈಕಮಾಂಡ್‌ ಡಿಕೆಶಿಯನ್ನು ಸಿಎಂ ಮಾಡಲ್ಲ: ಸಿದ್ದರಾಮಯ್ಯ

ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!