Karnataka Assembly Elections 2023: ಪ್ರತಿ ಕ್ಷೇತ್ರಕ್ಕೆ 3 ಹೆಸರು ಕಳಿಸಿ: ಬಿಜೆಪಿ ವರಿಷ್ಠರು

By Kannadaprabha News  |  First Published Apr 5, 2023, 4:00 AM IST

102 ಕ್ಷೇತ್ರಕ್ಕೆ ತ್ರಿವಳಿ ಹೆಸರು ರಾಜ್ಯ ಬಿಜೆಪಿ ಫೈನಲ್‌, ಇಂದು 122 ಕ್ಷೇತ್ರಗಳಿಗೆ ಹೆಸರು ಶಿಫಾರಸಿಗೆ ಕಸರತ್ತು, ಶನಿವಾರ ಬಿಜೆಪಿ ಮೊದಲ ಅಭ್ಯರ್ಥಿ ಪಟ್ಟಿ ಪ್ರಕಟ?


ಬೆಂಗಳೂರು(ಏ.05): ಪ್ರಸಕ್ತ ವಿಧಾನಸಭಾ ಚುನಾವಣೆಗೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕಡ್ಡಾಯವಾಗಿ ಮೂವರು ಆಕಾಂಕ್ಷಿಗಳ ಅಥವಾ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡುವಂತೆ ಬಿಜೆಪಿ ಹೈಕಮಾಂಡ್‌ ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಹೊರವಲಯದ ರೆಸಾರ್ಚ್‌ವೊಂದರಲ್ಲಿ ನಡೆದ ಬಿಜೆಪಿಯ ರಾಜ್ಯ ಕೋರ್‌ ಕಮಿಟಿ ಮತ್ತು ಚುನಾವಣಾ ಸಮಿತಿಗಳ ಸಭೆಯಲ್ಲಿ ಮೊದಲ ದಿನ 102 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಮೂರು ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಬುಧವಾರ ಇನ್ನುಳಿದ 122 ವಿಧಾನಸಭಾ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ.

ಬುಧವಾರ ರಾತ್ರಿ ಅಥವಾ ಗುರುವಾರ ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಮೂರು ಹೆಸರುಗಳನ್ನು ಒಳಗೊಂಡ ಪಟ್ಟಿಯು ಬಿಜೆಪಿ ಹೈಕಮಾಂಡ್‌ಗೆ ತಲುಪಲಿದೆ. ಬಳಿಕ ಶನಿವಾರ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆದು ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಆಖೈರುಗೊಳಿಸಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

Tap to resize

Latest Videos

ರಾಜಕೀಯ ಅಖಾಡಕ್ಕೆ ಧುಮುಕಿದ ಕಿಚ್ಚ ಸುದೀಪ್: ನಾಳೆ ಬಿಜೆಪಿ ಸೇರ್ಪಡೆ ಸಾಧ್ಯತೆ

2 ದಿನ ಸುದೀರ್ಘ ಸಭೆ:

ಸಾಮಾನ್ಯವಾಗಿ ಹಿಂದಿನ ಚುನಾವಣೆಗಳಲ್ಲಿ ರಾಜ್ಯ ಕೋರ್‌ ಕಮಿಟಿಯು ಎರಡು ಅಥವಾ ಮೂರು ಗಂಟೆಗಳ ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಸಿದ್ಧಪಡಿಸಿ ದೆಹಲಿಗೆ ಕಳುಹಿಸುತ್ತಿತ್ತು. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಎರಡು ದಿನಗಳ ಕಾಲ ಸುದೀರ್ಘ ಕೋರ್‌ ಕಮಿಟಿ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಇಡೀ ದಿನ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈಗಾಗಲೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಸ್ಥಳೀಯ ಮುಖಂಡರ ಹಾಗೂ ಜಿಲ್ಲಾ ಕೋರ್‌ ಕಮಿಟಿಗಳ ಸದಸ್ಯರ ಅಭಿಪ್ರಾಯ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಆ ಮಾಹಿತಿಯನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಬಗ್ಗೆ ರಾಜ್ಯ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಮೂರು ಹೆಸರುಗಳನ್ನು ಶಿಫಾರಸು ಮಾಡಲೇಬೇಕು ಎಂಬ ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕೋರ್‌ ಕಮಿಟಿ ಸಭೆಯ ನಾಯಕರೂ ಸಂದಿಗ್ಧಕ್ಕೆ ಸಿಲುಕಿದರು. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಅಥವಾ ಎರಡು ಹೆಸರುಗಳು ಮಾತ್ರ ಜಿಲ್ಲಾ ಘಟಕಗಳಿಂದ ಶಿಫಾರಸುಗೊಂಡಿದ್ದವು. ಅಂಥ ಕ್ಷೇತ್ರಗಳ ಬಗ್ಗೆ ಮಂಗಳವಾರ ಸಭೆಯಲ್ಲಿ ಪ್ರಸ್ತಾಪವಾದಾಗ ಅಲ್ಲಿಂದಲೇ ಜಿಲ್ಲಾ ನಾಯಕರನ್ನು ಸಂಪರ್ಕಿಸಿ ಇನ್ನಷ್ಟುಹೆಸರುಗಳನ್ನು ಮತ್ತು ಅವರ ವಿವರ ಸಂಗ್ರಹಿಸಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಮಾದರಿಯಲ್ಲಿ ಸ್ಥಳೀಯ ಪದಾಧಿಕಾರಿಗಳು ಹಾಗೂ ಮುಖಂಡರಿಂದ ಯಾರು ಅಭ್ಯರ್ಥಿ ಆಗಬೇಕು ಎಂಬುದರ ಬಗ್ಗೆ ಲಿಖಿತ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಬಳಿಕ ಎಲ್ಲ ಜಿಲ್ಲೆಗಳ ಕೋರ್‌ ಕಮಿಟಿಗಳ ಸದಸ್ಯರನ್ನು ಬೆಂಗಳೂರಿಗೆ ಕರೆಸಿಕೊಂಡು ಶನಿವಾರ ಮತ್ತು ಭಾನುವಾರ ಅವರೊಂದಿಗೆ ರಾಜ್ಯ ನಾಯಕರು ಸಮಾಲೋಚನೆ ನಡೆಸಿದರು. ಇದೀಗ ಮೂರನೇ ಹಂತವಾಗಿ ಎರಡು ದಿನಗಳ ಕಾಲ ರಾಜ್ಯ ಕೋರ್‌ ಕಮಿಟಿ ಸಭೆ ನಡೆಯುತ್ತಿದೆ.

ಸಿದ್ದರಾಮಯ್ಯ ಸಿಎಂ ಆಗಲೆಂದು ಶಬರಿಮಲೆಗೆ ಕಾಲ್ನಡಿಗೆ ಹೊರಟ ಅಭಿಮಾನಿಗಳು..!

ಏ.8ಕ್ಕೆ ಪಟ್ಟಿ ಪ್ರಕಟ

ವಾಸ್ತವಾಂಶ ಆಧರಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. 2 ದಿನಗಳ ಕೋರ್‌ ಕಮಿಟಿ ಮತ್ತು ಚುನಾವಣಾ ಸಮಿತಿಗಳ ಸಭೆ ಬಳಿಕ ಪಕ್ಷದ ಕೇಂದ್ರ ಘಟಕಕ್ಕೆ ಅಭ್ಯರ್ಥಿಗಳ ಪಟ್ಟಿಕಳುಹಿಸಲಾಗುವುದು. ಏ.8ರಂದು ಕೇಂದ್ರದಲ್ಲಿ ಚರ್ಚೆಯಾಗಿ ಪಟ್ಟಿಬಿಡುಗಡೆಯಾಗಲಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!