
ಮೈಸೂರು (ಆ.08): ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ತನಿಖೆಯನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ, ಬದಲಾಗಿ 'ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಟಾರ್ಗೆಟ್' ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ನಮಗೂ ಕೂಡ ಸೌಜನ್ಯ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲರೂ ಸೌಜನ್ಯ ಪರವಾಗಿದ್ದೇವೆ. ಆದರೆ ಈ ಪ್ರಕರಣವನ್ನು ಮೂರು ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ನಡೆಸಿವೆ. ಇದರ ಬಗ್ಗೆ ಬೇರೆ ಯಾವುದೇ ರೀತಿಯ ತನಿಖೆ ಆಗಬೇಕಿದ್ದರೆ, ಸೌಜನ್ಯ ಅವರ ತಾಯಿ ಹೇಳಲಿ, ನಾವೇ ಅವರ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ' ಎಂದರು.
ಪ್ರತಾಪ್ ಸಿಂಹ ಅವರು, 'ಧರ್ಮಸ್ಥಳದಲ್ಲಿ ಸಾವಿರಾರು ಕೊಲೆಗಳಾಗಿವೆ' ಎಂಬ ಆರೋಪಗಳನ್ನು ತೀವ್ರವಾಗಿ ಖಂಡಿಸಿದರು. 'ಇದು ವಾಸ್ತವದಲ್ಲಿ ಸಾಧ್ಯವೇ? ರಾಜ್ಯ ಸರ್ಕಾರವು ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಆರೋಪಿ ಎಂದು ಈಗಾಗಲೇ ತೀರ್ಮಾನ ಮಾಡಿದಂತಿದೆ. ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಈಗ ಹುಡುಕುತ್ತಿದೆ' ಎಂದು ಆರೋಪಿಸಿದರು.
ವೀರೇಂದ್ರ ಹೆಗ್ಗಡೆ ಅವರನ್ನು ಆರೋಪಿಯಾಗಿ ಬಿಂಬಿಸುವ ಈ ಪ್ರಯತ್ನದ ಹಿಂದೆ ಪಿತೂರಿ ಇದೆ ಎಂದು ಅವರು ಹೇಳಿದರು. 'ಒಂದೇ ಒಂದು ಸಾಕ್ಷ್ಯ ಇಲ್ಲದೆ ವೀರೇಂದ್ರ ಹೆಗ್ಗಡೆ ಅವರನ್ನು ಏಕೆ ಆರೋಪಿ ಸ್ಥಾನಕ್ಕೆ ತರಲಾಗಿದೆ? ಹಿಂದೂ ಸಮಾಜ ಪ್ರಜ್ಞಾವಂತಿಕೆ ಕಳೆದುಕೊಂಡಿದೆ. ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿರುವುದು ಹಿಂದೂ ಸಮಾಜಕ್ಕೆ ಅರ್ಥವಾಗುತ್ತಿಲ್ಲ. ಇದರ ಹಿಂದೆ ಒಂದು ವ್ಯವಸ್ಥಿತ ಪಿತೂರಿ ಇದೆ' ಎಂದು ಹೇಳಿದರು.
'ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಹಿಂದೂಗಳೇ ಅದನ್ನು ನಂಬುತ್ತಿದ್ದಾರೆ. ಇದು ಆರೋಪಿಯನ್ನು ಮೊದಲೇ ನಿರ್ಧರಿಸಿ ಅದಕ್ಕೆ ಬೇಕಾದ ಸಾಕ್ಷ್ಯ ಹುಡುಕುತ್ತಿರುವ ಮೊದಲ ಪ್ರಕರಣ' ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿ ಜನರ ಭಾವನೆಗಳಿಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆಗಳನ್ನು ಹಾಳು ಮಾಡಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಮತ್ತು ಈಗ ನಡೆಯುತ್ತಿರುವ ಹುಡುಕಾಟಕ್ಕೂ ಸಂಬಂಧವೇ ಇಲ್ಲ. ಸರ್ಕಾರವು 'ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನವನ್ನು ಆರಂಭ ಮಾಡಿದೆ' ಎಂದು ಆತಂಕ ವ್ಯಕ್ತಪಡಿಸಿದರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಏಕೆ ಟಾರ್ಗೆಟ್ ಆಗಿದ್ದಾರೆ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಈ ವಿಷಯದಲ್ಲಿ ಅನಾಮಿಕನ ಪೂರ್ವಪರವನ್ನು ಮೊದಲು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ತಮ್ಮ ವಿರುದ್ಧ ವೈಯಕ್ತಿಕ ಹೇಳಿಕೆ ನೀಡುತ್ತಿರುವ ಎಂ. ಲಕ್ಷ್ಮಣ್, ಕೆಪಿಸಿಸಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮುಖಂಡರ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದೇನೆ. ನನ್ನ ಬಗ್ಗೆ ವೈಯಕ್ತಿಕವಾಗಿ ಅವರು ಮಾತನಾಡುವಂತಿಲ್ಲ. ಹಾಗೆ ಮಾತನಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ. ಆ ಮುಠ್ಠಾಳ ವಕ್ತಾರನ ಬಳಿ ನನ್ನ ಬಗ್ಗೆ ಸಾಕ್ಷಿ ಇದ್ದರೆ ನ್ಯಾಯಾಲಯಕ್ಕೆ ಕೊಡಲಿ, ಇಲ್ಲವೇ ಮಾಧ್ಯಮಗಳಿಗೆ ನೀಡಲಿ' ಎಂದು ಸವಾಲು ಹಾಕಿದರು.
ಸಾಕ್ಷಿ ಯಾಕೆ ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತೀರಿ?
ತನ್ನ ಜೀವನದಲ್ಲಿ ಒಂದು ಆರೋಪಕ್ಕೂ ಉತ್ತರ ಕೊಡದ ಕಾಂಗ್ರೆಸ್ ವಕ್ತಾರ, ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ. ಅಲ್ಲದೇ, ಆ ಕಾಂಗ್ರೆಸ್ ವಕ್ತಾರ ಪಾಲಿಕೆ ಚುನಾವಣೆಗೆ ನಿಂತರೂ ಸೋಲುತ್ತಾನೆ ಎಂದು ಭವಿಷ್ಯ ನುಡಿದರು. ಈ ತೀವ್ರ ವಾಗ್ದಾಳಿಯು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.