ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲು ಮೋದಿ ಅವರಿಗೆ ಯಾವ ನೈತಿಕತೆಯೂ ಇಲ್ಲ: ಸಿಎಂ ಸಿದ್ದರಾಮಯ್ಯ

Published : Aug 08, 2025, 10:51 AM ISTUpdated : Aug 09, 2025, 05:53 AM IST
Karnataka Chief Minister Siddaramaiah (File Photo/ANI)

ಸಾರಾಂಶ

ಮೋದಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ. ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರು (ಆ.08): ಚುನಾವಣಾ ಆಯೋಗದ ದುರುಪಯೋಗ, ಮತ ಕಳವು ಮತ್ತು ಅಧಿಕಾರ ದುರ್ಬಳಕೆಯ ಮೂಲಕ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ. ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಸಂಬಂಧ ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎಂಬುದನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ದಾಖಲೆಗಳ ಸಹಿತ ದೇಶದ ಜನರ ಮುಂದಿಟ್ಟಿದ್ದಾರೆ.

ಈ ಎಲ್ಲಾ ಮಾಹಿತಿಗಳು ಚುನಾವಣಾ ಆಯೋಗವೇ ನೀಡಿದ ದಾಖಲೆಗಳಾಗಿವೆ ಎಂದಿದ್ದಾರೆ. ಮೋದಿ ಅವರ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಜನಾಕ್ರೋಶವಿದ್ದರೂ ಅವರು ಹೇಗೆ ಮತಗಳ್ಳತನದ ಮೂಲಕ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಯಿತು? ಎನ್ನುವುದಕ್ಕೆ ರಾಹುಲ್‌ ಗಾಂಧಿ ಅವರು ಬಿಡುಗಡೆ ಮಾಡಿರುವ ದಾಖಲೆಗಳು ಸಾಕ್ಷಿ. ಹಾಗಾಗಿ ಮೋದಿ ಅವರಿಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ. ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ವಿಸರ್ಜಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ದಾಖಲೆಗಳನ್ನು ರಾಹುಲ್‌ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸುದೀರ್ಘ 6 ತಿಂಗಳ ಕಾಲ ಹಲವು ಮಂದಿ ಅಧ್ಯಯನ ನಡೆಸಿ, ಮತಗಳ್ಳತನದ ಇಂಚಿಂಚೂ ಮಾಹಿತಿಯನ್ನು ಪತ್ತೆ ಹಚ್ಚಲಾಗಿದೆ. ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಕೇವಲ ಮೂರೂವರೆ ಲಕ್ಷ ಮತದಾರರಿರುವ ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷದ 250 ಮತಗಳನ್ನು ಅಕ್ರಮವಾಗಿ ಪಡೆದು ಚುನಾವಣೆಯಲ್ಲಿ ಜಯಿಸಿದೆ ಎಂದು ಸಿಎಂ ಆರೋಪಿಸಿದ್ದಾರೆ.

ಮಹದೇವಪುರದಲ್ಲಿ 5 ರೀತಿ ಚುನಾವಣಾ ಅಕ್ರಮ: ಮಹದೇವಪುರ ಕ್ಷೇತ್ರದಲ್ಲಿ 5 ರೀತಿಯಲ್ಲಿ ಚುನಾವಣಾ ಅಕ್ರಮ ಎಸಗಲಾಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

1. ಒಟ್ಟು 11,965 ಮಂದಿ ನಕಲಿ ಮತದಾರರು ಈ ಕ್ಷೇತ್ರದಲ್ಲಿ ಮತಚಲಾವಣೆ ಮಾಡಿದ್ದಾರೆ. ಒಬ್ಬನೇ ಮತದಾರ ಈ ಕ್ಷೇತ್ರದ ನಾಲ್ಕಾರು ಮತಗಟ್ಟೆಗಳಲ್ಲಿ ಮಾತ್ರವಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕೂಡ ಮತ ಚಲಾವಣೆ ಮಾಡಿರುವುದು ಕಂಡುಬಂದಿದೆ.

2. ಒಟ್ಟು 40,009 ಮಂದಿ ನಕಲಿ ವಿಳಾಸದ ಮತದಾರರನ್ನು ಈ ಕ್ಷೇತ್ರದಲ್ಲಿ ಪತ್ತೆ ಮಾಡಲಾಗಿದೆ. ಮನೆಯ ನಂಬರ್‌ “0” ಎಂದು ನಮೂದಾಗಿರುವ ಸಾವಿರಾರು ಮತದಾರರು, ತಂದೆ ಮತ್ತು ಪತಿಯ ಹೆಸರಿನ ಜಾಗದಲ್ಲಿ ಅರ್ಥವೇ ಇಲ್ಲದಂತೆ ಮನಸೋಇಚ್ಛೆ ಇಂಗ್ಲೀಷ್‌ ಅಕ್ಷರಗಳನ್ನು ನಮೂದಿಸಿರುವುದು ಹೀಗೆ ನಕಲಿ ವಿಳಾಸ ನೀಡಿ ಮತಗಳ್ಳತನ ನಡೆಸಲಾಗಿದೆ.

3. 10,452 ಮಂದಿ ಮತದಾರರು ಒಟ್ಟಿಗೆ ಬೆರಳೆಣಿಕೆಯಷ್ಟು ಸಂಖ್ಯೆಯ ವಿಳಾಸದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿದೆ. ಸಿಂಗಲ್‌ ಬೆಡ್‌ ರೂಂ ಮನೆಯ ವಿಳಾಸ ನೀಡಿ 80 ಜನ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. 68 ಮಂದಿ ಮತದಾರರ ಗುರುತಿನ ಚೀಟಿಯಲ್ಲಿ ಒಂದು ಖಾಸಗಿ ಕ್ಲಬ್‌ನ ವಿಳಾಸವಿದೆ. ಈ ಬಗ್ಗೆ ಅಲ್ಲಿ ವಿಚಾರಣೆ ನಡೆಸಿದಾಗ ಯಾರೊಬ್ಬರೂ ಅಲ್ಲಿ ವಾಸವಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ.

4. 4,132 ಮಂದಿಯ ಗುರುತಿನ ಚೀಟಿಯಲ್ಲಿ ಫೋಟೋಗಳೇ ಲಭ್ಯವಿಲ್ಲ ಅಥವಾ ಫೋಟೋಗಳನ್ನು ಗುರುತಿಸಲು ಸಾಧ್ಯವಾಗದಂತೆ ನಮೂದಿಸಲಾಗಿದೆ.

5. ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ 33,692 ಮಂದಿಯ ವಯಸ್ಸು 60 ರಿಂದ 90 ವರ್ಷಕ್ಕೂ ಮೇಲ್ಪಟ್ಟಿದ್ದು, ಇವೆಲ್ಲವೂ ಈ ಹಗರಣದ ಆಳ, ಅಗಲವನ್ನು ತೋರಿಸುತ್ತದೆ.

ದಾಖಲೆ ಆಗಲೇ ಕೊಟ್ಟಿದ್ದರೆ ಬೇಗೆ ಬಯಲು ಮಾಡ್ತಿದ್ದೆವು: ರಾಹುಲ್‌ ಗಾಂಧಿ ಅವರು ಕೇಳಿದ ಮತದಾರರ ಎಲೆಕ್ಟ್ರಾನಿಕ್ ಮಾಹಿತಿ ಮತ್ತು ಸಿಸಿಟಿವಿ ದಾಖಲೆಗಳನ್ನು ನೀಡಿ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದರೆ ಈ ಹಗರಣವನ್ನು ಚುನಾವಣೆ ನಡೆದ ಕೆಲ ದಿನಗಳಲ್ಲೇ ಬಹಿರಂಗಪಡಿಸಲು ಸಾಧ್ಯವಿತ್ತು. ಮಾಹಿತಿ ಮುಚ್ಚಿಡುವ ಏಕೈಕ ಉದ್ದೇಶದೊಂದಿಗೆ ಆಯೋಗವು ತನ್ನ ನಿಯಮಗಳನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿಕೊಂಡಿದೆ. ಇದು ಮಹದೇವಪುರ ಕ್ಷೇತ್ರಕ್ಕೆ ಸೀಮಿತವಾದ ಹಗರಣವಲ್ಲ, ಇಡೀ ದೇಶದಲ್ಲೇ ಇದೇ ಮಾದರಿಯ ಮತಗಳ್ಳತನ ಮಾಡಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ