‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಜೋಶಿ ಅವರು ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಪಕ್ಷದ ಸೋಲಿನ ಭೀತಿಯಿಂದ ಹತಾಶೆ, ನಿರಾಶೆ, ಅಭದ್ರತೆಯಿಂದ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
( ಕನ್ನಡಪ್ರಭ ವಿಶೇಷ ಸಂದರ್ಶನ)
(ವಿಜಯ್ ಮಲಗಿಹಾಳ)
ಬೆಂಗಳೂರು (ಫೆಬ್ರವರಿ 9, 2023): ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದಲ್ಲಿ ಮರಾಠಿ ಪೇಶ್ವೆಗಳ ಡಿಎನ್‌ಎ ಹೊಂದಿರುವ, ಗಾಂಧಿಯನ್ನು ಕೊಂದ ವರ್ಗಕ್ಕೆ ಸೇರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಹುನ್ನಾರ ನಡೆದಿದೆ ಎಂಬ ಜೆಡಿಎಸ್ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಈ ಹೇಳಿಕೆ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು, ವಿಶ್ಲೇಷಣೆಗಳು ನಡೆದರೂ ಕಳೆದ ನಾಲ್ಕು ದಿನಗಳಿಂದ ಪ್ರಹ್ಲಾದ್ ಜೋಶಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು. ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಕಾರಣ ಅವರು ಸಂಸತ್ ಅಧಿವೇಶನದ ಕಾರ್ಯಕಲಾಪಗಳಲ್ಲಿ ವ್ಯಸ್ತರಾಗಿದ್ದರು ಎನ್ನುವುದೂ ಅವರ ಮೌನಕ್ಕೆ ಕಾರಣವಾಗಿರಬಹುದು. ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಜೋಶಿ ಅವರು ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಪಕ್ಷದ ಸೋಲಿನ ಭೀತಿಯಿಂದ ಹತಾಶೆ, ನಿರಾಶೆ, ಅಭದ್ರತೆಯಿಂದ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಇದನ್ನು ಓದಿ: ಬ್ರಾಹ್ಮಣ ಸಿಎಂ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬ್ಯಾಟಿಂಗ್: ಕುಮಾರಸ್ವಾಮಿಗೆ ಸಿ.ಟಿ.ರವಿ ಟಾಂಗ್
ಸಂದರ್ಶನದ ಆಯ್ದ ಭಾಗ ಹೀಗಿದೆ:
* ರಾಜ್ಯದಲ್ಲಿ ಚುನಾವಣಾ ಕಾವು ಏರತೊಡಗಿದೆ. ಬಿಜೆಪಿಯ ಪರಿಸ್ಥಿತಿ ಹೇಗಿದೆ?
-ಬಿಜೆಪಿಯು ಕರ್ನಾಟಕದಲ್ಲಿ ಬಹಳ ಒಳ್ಳೆಯ ಸ್ಥಿತಿಯಲ್ಲಿದೆ. ಹಿಂದಿನ 2008 ಮತ್ತು 2018ರ ಚುನಾವಣೆಗಳಲ್ಲಿ ನಮ್ಮ ಸಂಖ್ಯಾಬಲವು ಬಹುಮತ ಸಾಧಿಸಲು ಬೇಕಾದ ಮ್ಯಾಜಿಕ್ ಸಂಖ್ಯೆಗಿಂತ ಕಡಮೆ ಇತ್ತು. ಆದರೆ, ಈ ಬಾರಿ ನಾವು ಅತ್ಯಂತ ಸ್ಪಷ್ಟವಾಗಿ ದಾಖಲೆಯ ಗೆಲುವನ್ನು ಪಡೆಯುತ್ತೇವೆ. ಇದು ನಿಶ್ಚಿತ. ನಾವು ಪೂರ್ಣ ವಿಶ್ವಾಸ ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ ಸಂಘಟನಾತ್ಮಕ ಮತ್ತು ರಾಜಕೀಯ ಸಿದ್ಧತೆ ನಡೆದಿದೆ.
* ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ಮಾತು ಕೇಳಿಬರುತ್ತಿದೆ ನಿಜವೇ?
-ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ಪರವಾದ ಅಲೆಯಿದೆ. ಅದು ಫಲಿತಾಂಶದ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ. ಕಾದು ನೋಡಿ.
ಇದನ್ನೂ ಓದಿ: ಗಾಂಧಿಯನ್ನು ಕೊಂದ ಬ್ರಾಹ್ಮಣರು, ಆರ್‌ಎಸ್‌ಎಸ್‌ನವರು ದೇಶವನ್ನು ಹಾಳು ಮಾಡ್ತಾರೆ: ಕುಮಾರಸ್ವಾಮಿ
* ಹಿಂದಿನ ಎರಡು ಚುನಾವಣೆಗಳಲ್ಲಿ ಪೂರ್ಣ ಬಹುಮತ ಗಳಿಸದೆ ಇದ್ದರೂ ಅನ್ಯಪಕ್ಷದ ಶಾಸಕರ ಪಕ್ಷಾಂತರದಿಂದ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಯಿತು. ಈ ಬಾರಿಯಾದರೂ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸ ಇದೆಯೇ?
-ಖಂಡಿತಾ ಇದೆ. ಈಗ ಅಪಾರ ಪ್ರಮಾಣದ ನೆರವು ಕೇಂದ್ರ ಸರ್ಕಾರದಿಂದ ಹರಿದು ಬರುತ್ತಿದೆ. ಡಬಲ್ ಎಂಜಿನ್ ಸರ್ಕಾರದಿಂದ ಯಾವ ಮಟ್ಟದ ಅಭಿವೃದ್ಧಿ ಆಗಬಲ್ಲುದು ಎಂಬುದು ಈಗ ನಿರೂಪಿತವಾಗಿದೆ. ಹೀಗಾಗಿ, ಮುಂದಿನ ಬಾರಿ ಪೂರ್ಣ ಬಹುಮತ ಸಿಕ್ಕಲ್ಲಿ ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ತರ ಬದಲಾವಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
* ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ರಾಜ್ಯದಲ್ಲಿ ನಾಯಕರ ಆರೋಪ-ಪ್ರತ್ಯಾರೋಪ ಜೋರಾಗಿದೆಯಲ್ಲವೇ?
-ಚುನಾವಣೆ ಬಂದಾಗ ಆರೋಪ, ಪ್ರತ್ಯಾರೋಪ ಸಹಜ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸುಳ್ಳು ಆರೋಪ ಮಾಡುವುದನ್ನು ತಮ್ಮ ಹವ್ಯಾಸವನ್ನಾಗಿಸಿಕೊಂಡಿವೆ. ಲೋಕಸಭೆಯಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯಾವುದೇ ಆಧಾರಗಳಿಲ್ಲದೆ ಆರೋಪ ಮಾಡಿದರು ಎಂಬುದನ್ನು ನೋಡಬಹುದು. ಸುಳ್ಳು ಆರೋಪ ಮಾಡುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಡಿಎನ್‌ಎಯಲ್ಲೇ ಇದೆ. ಅವರು ಎಷ್ಟೇ ಸುಳ್ಳು ಆಪಾದನೆ ಮಾಡಿದರೂ ಜನತೆಗೆ ಸತ್ಯ ಏನು ಎನ್ನುವುದರ ಸ್ಪಷ್ಟ ಕಲ್ಪನೆ ಇದೆ.
ಇದನ್ನೂ ಓದಿ: ಬ್ರಾಹ್ಮಣ ಪ್ರಹ್ಲಾದ್ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ ಕುಮಾರಸ್ವಾಮಿ
* ಏಕಾಏಕಿ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿಮ್ಮ ವಿರುದ್ಧ ಹರಿಹಾಯುತ್ತಿರುವುದು ಯಾಕೆ?
-ನಮ್ಮ ಪಕ್ಷದ ನೀತಿ ಪ್ರಕಾರ ನಾವು ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ. ಹೀಗಾಗಿ, ಆ ಕುರಿತಂತೆ ಮಾತನಾಡಿದ್ದೇನೆ. ಅವರ ಕುಟುಂಬದ ಒಂಬತ್ತು ಮಂದಿ ರಾಜಕಾರಣದಲ್ಲಿದ್ದಾರೆ. ಹಾಗಾಗಿ ನವಗ್ರಹ ಯಾತ್ರೆ ಎಂಬ ಮಾತನ್ನು ಹೇಳಿದ್ದೇನೆ. ನಾನೇನು ತಪ್ಪು ಹೇಳಿಲ್ಲ. ಅವರು ಕೂಡ ನಮ್ಮ ಪಕ್ಷದ ನೀತಿಗೆ ಸಂಬಂಧಿಸಿದಂತೆ ಅಥವಾ ನನ್ನ ಇಲಾಖೆಯ ಬಗ್ಗೆ ಟೀಕೆ ಮಾಡಿದ್ದರೆ ಸ್ವೀಕಾರ ಮಾಡುತ್ತಿದ್ದೆ. ಆದರೆ, ಅವರು ನನ್ನ ಜಾತಿ ಪ್ರಸ್ತಾಪಿಸಿ ಮಾತನಾಡಿದ್ದಾರೆ. ಅವರ ಪಕ್ಷ ಜಾತ್ಯತೀತ ಎಂಬ ಹೆಸರು ಇಟ್ಟುಕೊಂಡಿದೆ. ಜಾತ್ಯತೀತ ದೂರ ಉಳಿಯಿತು. ಆದರೆ, ಕುಟುಂಬಾತೀತವೂ ಆಗಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಟೀಕೆ-ಟಿಪ್ಪಣಿಗಳನ್ನು ಒಂದು ಸಹೃದಯತೆಯಿಂದ ಸ್ವೀಕರಿಸಬೇಕು. ಆದರೆ, ನಾವು ನಿಮ್ಮನ್ನು ಟೀಕೆ ಮಾಡಿದೆ ಎಂಬ ಕಾರಣಕ್ಕಾಗಿ ನನ್ನ ಜಾತಿ ಹೆಸರು ಪ್ರಸ್ತಾಪ ಮಾಡಿ ಟೀಕೆ ಮಾಡುವುದು ಸರಿಯಲ್ಲ.
* ನೀವು ಮರಾಠಿ ಪೇಶ್ವೆಗಳ ಡಿಎನ್‌ಎ ಹೊಂದಿರುವ ಬ್ರಾಹ್ಮಣ ವರ್ಗಕ್ಕೆ ಸೇರಿದವರು, ಗಾಂಧಿ ಕೊಂದ ವರ್ಗಕ್ಕೆ ಸೇರಿದವರು ಎಂದು ಹೇಳುವ ಹಿಂದಿನ ಉದ್ದೇಶ ಏನು? ಇದರಿಂದ ಅವರಿಗೆ ಲಾಭ ಏನಾದರೂ ಇದೆಯೇ?
-ನಾನು ಈ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ. ನಾನು ಬ್ರಾಹ್ಮಣ ಜಾತಿಗೆ ಸೇರಿದವನು. ಇದರಲ್ಲಿ ಹಿಂಜರಿಕೆ ಏನೂ ಇಲ್ಲ. ಆದರೆ, ಅದಕ್ಕಿಂತ ಹೆಚ್ಚಾಗಿ ಒಬ್ಬ ಹಿಂದುವಾಗಿ, ಒಬ್ಬ ಹೆಮ್ಮೆಯ ಭಾರತೀಯನಾಗಿ, ಒಬ್ಬ ಹೆಮ್ಮೆಯ ಕನ್ನಡಿಗನಾಗಿ ಕೆಲಸ ಮಾಡಿದ್ದೇನೆ. ನಾನು ಹುಟ್ಟಿನಿಂದ ಯಾವ ಜಾತಿಯವನಾಗಿದ್ದೇನೆ ಎಂಬುದು ಮುಖ್ಯವಲ್ಲ. ಜ್ಞಾನ ಮತ್ತು ಸಂಸ್ಕಾರ ಪಡೆದಿದ್ದು ಒಬ್ಬ ಹಿಂದುವಾಗಿ, ಭಾರತೀಯನಾಗಿ ಮತ್ತು ಕನ್ನಡಿಗನಾಗಿ. ಕುಮಾರಸ್ವಾಮಿ ಅವರ ಮನೆಯಲ್ಲೇ ಟಿಕೆಟ್‌ಗಾಗಿ ತಿಕ್ಕಾಟ ನಡೆದಿದೆ. ಅದು ಸುಳ್ಳೇ? ತಮ್ಮ ಮನೆಯನ್ನೇ ಸರಿ ಇಟ್ಟುಕೊಳ್ಳಲಾರದವರು ನನ್ನ ಒಂದು ಟೀಕೆಗೆ ಇಷ್ಟೊಂದು ಮಾನಸಿಕ ಸ್ಥಿಮಿತತೆ ಯಾಕೆ ಕಳೆದುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
ಇದನ್ನು ಓದಿ: ರಾಜ್ಯಕ್ಕೆ ಈ ಬಾರಿ ಬ್ರಾಹ್ಮಣರೇ ಮುಖ್ಯಮಂತ್ರಿ, 8 ಮಂದಿ ಉಪಮುಖ್ಯಮಂತ್ರಿ! ಎಚ್‌ಡಿಕೆ ಬಾಂಬ್
* ಮುಂಬರುವ ಚುನಾವಣೆಯಲ್ಲಿನ ಸೋಲಿನ ಭೀತಿಯಿಂದ ಕುಮಾರಸ್ವಾಮಿ ಇಂಥ ಹೇಳಿಕೆ ನೀಡುತ್ತಿದ್ದಾರೆಯೇ?
-ಜೆಡಿಎಸ್ ಪಕ್ಷ ಈಗ ರಾಜ್ಯದ ಆರೇಳು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ ಚುನಾವಣೆ ಬಳಿಕ ಅದು ಎರಡು ಅಥವಾ ಮೂರು ಜಿಲ್ಲೆಗಳಿಗೆ ಕುಸಿದರೂ ಆಶ್ಚರ್ಯವಿಲ್ಲ. ಜತೆಗೆ ನಾವೇ ಬಿಜೆಪಿ ಜತೆ ಕೈಜೋಡಿಸುತ್ತೇವೆ, ನೀವೇಕೆ ಬಿಜೆಪಿ ಬೆಂಬಲಿಸುತ್ತೀರಿ ಎಂಬ ಸುಳ್ಳು ಸುದ್ದಿಯನ್ನು ಆ ಪಕ್ಷದ ನಾಯಕರು ಹಬ್ಬಿಸುತ್ತಿದ್ದರು. ಈಗ ನಮ್ಮ ಪಕ್ಷದ ನಾಯಕರ ಎಲ್ಲ ಹೇಳಿಕೆಗಳಿಂದ ತಮ್ಮ ಪಕ್ಷ ಪತನಗೊಳ್ಳಬಹುದು ಎಂಬ ಭೀತಿಗೆ ಒಳಗಾಗಿದ್ದಾರೆ. ಹತಾಶೆ, ನಿರಾಶೆ, ಅಭದ್ರತೆಯಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಹೀಗಾಗಿ, ಇಂಥ ಹೇಳಿಕೆ ನೀಡತೊಡಗಿದ್ದಾರೆ.
* ಬ್ರಾಹ್ಮಣ ಎಂಬ ಜಾತಿಯನ್ನು ಹೆಸರಿಸಿ, ನಿಮ್ಮ ಹೆಸರನ್ನು ಪ್ರಸ್ತಾಪಿಸಿ ಇತರ ಸಮುದಾಯಗಳಿಗೆ ಎಚ್ಚರಿಕೆಯಿಂದ ಇರಿ ಎಂದು ಹೇಳುವ ಮೂಲಕ ಕುಮಾರಸ್ವಾಮಿ ರಾಜಕೀಯ ದಾಳ ಉರುಳಿಸಿದ್ದಾರೆಯೇ?
-ನೋಡಿ, ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಜನರು ಜಾತಿ ಹೆಸರು ಹಿಡಿದುಕೊಂಡು ಮತ ಹಾಕುವುದಿಲ್ಲ. ಹಿಂದೆ ವಾಜಪೇಯಿ ಕಾಲದಲ್ಲಿ ಸಾಧನೆಯ ರಾಜಕಾರಣ ನಿಧಾನವಾಗಿ ಆರಂಭವಾಗಿತ್ತು. ಆಗ ನಮಗೆ ಸಂಪೂರ್ಣ ಬಹುಮತ ಇರಲಿಲ್ಲ. ಈಗ ಮೋದಿ ಕಾಲದಲ್ಲಿ ದೇಶ ಮತ್ತು ರಾಜ್ಯದಲ್ಲಿ ಸಾಧನೆಯ ರಾಜಕಾರಣ ಯಶಸ್ವಿಯಾಗಿ ನಡೆಯುತ್ತಿದೆ. ಹೀಗಾಗಿ, ಅವರು ಯಾರ ಹೆಸರು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಈ ರೀತಿಯ ಕೀಳು ಮಟ್ಟದ ಹೇಳಿಕೆಗಳಿಂದ, ಕುತಂತ್ರದಿಂದ ಬಿಜೆಪಿಗೆ ಜನರ ಮತಗಳನ್ನು ತಪ್ಪಿಸಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಾಗುವುದಿಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.
* ಆರ್‌ಎಸ್‌ಎಸ್ ಸಭೆಯಲ್ಲಿ ಮುಂದಿನ ಚುನಾವಣೆ ಬಳಿಕ ನಿಮ್ಮನ್ನು ಮುಖ್ಯಮಂತ್ರಿ ಮಾಡುವ ಚರ್ಚೆ ಏನಾದರೂ ನಡೆದಿದೆಯೇ? ನಡೆದಿದ್ದರೆ ಕುಮಾರಸ್ವಾಮಿ ಅವರಿಗೆ ಹೇಗೆ ಈ ಮಾಹಿತಿ ಸಿಕ್ಕಿತು?
-ಈಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಈಗ ಮುಂದಿನ ಮುಖ್ಯಮಂತ್ರಿ ಚರ್ಚೆ ನಡೆಯುವುದು ಅಪ್ರಸ್ತುತ. ಕುಮಾರಸ್ವಾಮಿ ಅವರು ಹೇಳಿರುವುದೆಲ್ಲ ಅಪ್ರಸ್ತುತ. ಜನರ ದಾರಿ ತಪ್ಪಿಸುವ ಸಲುವಾಗಿ ಹೇಳಿದ್ದಾರೆ. ನಿರಾಧಾರವಾದಂಥ ಮತ್ತು ಕಪೋಲಕಲ್ಪಿತ ವಿಚಾರ ಅದು.
* ಕುಮಾರಸ್ವಾಮಿ ಹೇಳಿರುವಂತೆ ನೀವು ಮಹಾರಾಷ್ಟ್ರ ಮೂಲದ ‘ದೇಶಸ್ಥ ಬ್ರಾಹ್ಮಣ’ ವರ್ಗಕ್ಕೆ ಸೇರಿದವರು ಎನ್ನುವುದು ನಿಜವೇ?
-ನೋಡಿ ನಾನು ಹೆಮ್ಮೆಯ ಭಾರತೀಯ, ಹೆಮ್ಮೆಯ ಕನ್ನಡಿಗ. ಹುಟ್ಟಿನಿಂದ ಬ್ರಾಹ್ಮಣ ಹೌದು. ಅದಕ್ಕೆ ಕೀಳರಿಮೆ ಏನೂ ಇಲ್ಲ. ನಮ್ಮ ಮೂಲ ಊರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಲಗೋಡು. ನಮ್ಮ ತಂದೆ ಏಳನೆಯ ತರಗತಿವರೆಗೆ ಕಲಿತಿದ್ದು ಅಲ್ಲಿಯೇ. ನಂತರ ಹುಬ್ಬಳ್ಳಿಗೆ ಬಂದು ಎಸ್‌ಎಸ್‌ಎಲ್‌ಸಿ ಮುಗಿಸಿದರು. ಮುಂದೆ ಅವರು ಬಿಜಾಪುರಕ್ಕೆ ಹೋದಾಗ ನಾನು ಅಲ್ಲಿ ಹುಟ್ಟಿದ್ದು. ಕಳೆದ ನೂರೈವತ್ತು ವರ್ಷಗಳಿಂದ ನಮ್ಮ ಕುಟುಂಬದ ಹಿನ್ನೆಲೆ ಕರ್ನಾಟಕದ್ದು. ಇವೆಲ್ಲ ಸಂಗತಿಗಳನ್ನು ಚರ್ಚೆ ಮಾಡುವ ಅಗತ್ಯವಿಲ್ಲ.
* ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ವೇಳೆ ಹೈಕಮಾಂಡ್ ಮಟ್ಟದಲ್ಲಿ ನಿಮ್ಮ ಹೆಸರು ಮೊದಲಿಗೆ ಪ್ರಸ್ತಾಪವಾಗಿತ್ತಂತೆ ಹೌದೆ?
-ಇದು ನಮ್ಮ ಪಕ್ಷದ ಆಂತರಿಕ ವಿಚಾರ. ರಾಷ್ಟ್ರೀಯ ನಾಯಕರು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ತೀರ್ಮಾನ ಮಾಡಿದ್ದಾರೆ. ಆದಾಗಿ ಎರಡು ವರ್ಷಗಳಾಗುತ್ತಿದೆ. ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ.
* ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯನ್ನು ಹೊಂದಿಲ್ಲವೇ?
-ನಾನು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ.
* ಈಗ ನಿಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೂ ಕುಮಾರಸ್ವಾಮಿ ಅವರ ಪಕ್ಷದ ನಾಯಕರು ಮಾಡಿದ್ದಾರೆ?
-ಕುಮಾರಸ್ವಾಮಿ ಅವರು ಮಾಡಿರುವ ಟೀಕೆ ಬಗ್ಗೆ ಜನರು ತಿರುಗಿಬಿದ್ದ ನಂತರ ಭ್ರಷ್ಟಾಚಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆ ಪತ್ರ ನನಗೆ ಬರೆದಿದ್ದೂ ಅಲ್ಲ. ಅದರಲ್ಲಿ ಸತ್ಯಾಂಶ ಇದ್ದರೆ ಪತ್ರದಲ್ಲಿ ಬ್ಲರ್ ಮಾಡಿ ಕೊಡುವಂಥ ಅಗತ್ಯ ಏನಿತ್ತು? ಅದರಲ್ಲಿ ಡಾಕ್ಟರ್ ಎಂದು ನಮೂದಿಸಲಾಗಿದೆ. ನಾನು ಡಾಕ್ಟರ್ ಅಲ್ಲವೇ ಅಲ್ಲ. ಕನಿಷ್ಠ ಡಾಕ್ಟರ್ ಎನ್ನುವುದನ್ನಾದರೂ ಅಳಿಸಬೇಕಾಗಿತ್ತು. ಇವರಿಗೆ ಪ್ರಿಂಟ್ ಮಾಡುವುದೂ ಗೊತ್ತಿಲ್ಲ, ಅಳಿಸುವುದೂ ಗೊತ್ತಿಲ್ಲ. ಇವರು ರಾಜ್ಯವನ್ನು ಆಳುತ್ತಾರೆ.