ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಇಸ್ರೋ ತಂಡವನ್ನು ಅಭಿನಂದಿಸಲು ಶನಿವಾರ ಖುದ್ದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಬಿಜೆಪಿ ಸಿದ್ಧತೆ ಕೈಗೊಂಡಿದ್ದು, ಒಂದು ಕಿ.ಮೀ. ದೂರ ರೋಡ್ ಶೋ ಆಯೋಜಿಸಲು ಮುಂದಾಗಿದೆ.
ಬೆಂಗಳೂರು (ಆ.25): ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಇಸ್ರೋ ತಂಡವನ್ನು ಅಭಿನಂದಿಸಲು ಶನಿವಾರ ಖುದ್ದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಬಿಜೆಪಿ ಸಿದ್ಧತೆ ಕೈಗೊಂಡಿದ್ದು, ಒಂದು ಕಿ.ಮೀ. ದೂರ ರೋಡ್ ಶೋ ಆಯೋಜಿಸಲು ಮುಂದಾಗಿದೆ. ಈ ರೋಡ್ ಶೋ ವೇಳೆ ಪಕ್ಷದ ಬದಲು ಕೇವಲ ಪ್ರಧಾನಿ ಮತ್ತು ಇಸ್ರೋ ವಿಜ್ಞಾನಿಗಳಿಗೆ ಮಾತ್ರ ಘೋಷಣೆ ಹಾಕಬೇಕು ಎಂಬ ಸೂಚನೆಯನ್ನು ಕಾರ್ಯಕರ್ತರಿಗೆ ರವಾನಿಸಲು ನಿರ್ಧರಿಸಲಾಗಿದೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಆಗಮನ ಸಂಬಂಧ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ಬೈರತಿ ಬಸವರಾಜ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇತರರು ಭಾಗಿಯಾಗಿದ್ದರು. ಬಳಿಕ ಈ ಮುಖಂಡರು ಮೋದಿ ಅವರನ್ನು ಸ್ವಾಗತಿಸುವ ಹಾಗೂ ರೋಡ್ ಶೋ ನಡೆಸುವ ಸ್ಥಳದ ಪರಿಶೀಲನೆಯನ್ನೂ ನಡೆಸಿದರು.
ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್, ಹೆಬ್ಬಾರ್, ಬೈರತಿ
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಅಶೋಕ್, ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರಿಗೆ ಸ್ವಾಗತ ಕೋರುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಪ್ರಧಾನಿಗಳು ಭೇಟಿ ನೀಡಲಿದ್ದಾರೆ. ಒಂದು ಕಿ.ಮೀ.ನಷ್ಟು ದೂರ ರೋಡ್ ಶೋ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಮೋದಿ ಸ್ವಾಗತ ಮತ್ತು ರೋಡ್ ಶೋ ವೇಳೆ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದುಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೇ, ಪ್ರಧಾನಿ ಮತ್ತು ಇಸ್ರೋ ವಿಜ್ಞಾನಿಗಳಿಗೆ ಮಾತ್ರ ಘೋಷಣೆ ಹಾಕಲು ಸೂಚಿಸಲಾಗಿದೆ. ರೋಡ್ ಶೋ ಮಾಡುವ ಉದ್ದೇಶದಿಂದ ಶಾಸಕ ಮುನಿರಾಜು ಜತೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ವಾಹನ ಸಂಚಾರ ಬದಲಾವಣೆ: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಗರದ ಇಸ್ರೋ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಸುಗಮ ಸಂಚಾರ ಹಾಗೂ ಸುರಕ್ಷತೆಯ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ಕೆಲ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ.
ಆ.26ರಂದು ಮುಂಜಾನೆ 4.30ರಿಂದ ಬೆಳಗ್ಗೆ 9.30ರವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ(ಮೇಖ್ರಿ ವೃತ್ತ) ಸಿ.ವಿ.ರಾಮನ್ ರಸ್ತೆ, ಯಶವಂತಪುರ ಮೇಲ್ಸೇತುವೆ, ತುಮಕೂರು ರಸ್ತೆ(ಯಶವಂತಪುರ-ನಾಗಸಂದ್ರ), ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆಪಾಳ್ಯ ಜಂಕ್ಷನ್-ಸುಮನಹಳ್ಳಿ), ಗುಬ್ಬಿ ತೋಟದಪ್ಪ ರಸ್ತೆ ಹಾಗೂ ಜಾಲಹಳ್ಳಿ ಕ್ರಾಸ್ ರಸ್ತೆ ಬಳಸುವ ಬದಲು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಕೋರಲಾಗಿದೆ.
ಕಾಂಗ್ರೆಸ್‌ಗೆ ಎಷ್ಟು ಜನರ ಬರ್ತಾರೆಂದು ಕಾಲವೇ ಹೇಳುತ್ತದೆ: ಡಿಕೆಶಿ
ಅಂತೆಯೇ ನಗರದೊಳಗೆ ಮುಂಜಾನೆ 4ರಿಂದ ಬೆಳಗ್ಗೆ 11ರವರೆಗೆ ಭಾರೀ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಸಂಚಾರ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.