ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಷ್ ಅವರು ಅಚ್ಚರಿ ಎಂಬಂತೆ ಗೆಲುವು ಸಾಧಿಸಿದ್ದು ಇನ್ನೂ ನಿನ್ನೆ ಮೊನ್ನೆ ನಡೆದಂತಿದೆ. ಆಗಲೇ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಅಂದರೆ, ಚುನಾವಣಾ ವರ್ಷಕ್ಕೆ ಸುಮಲತಾ ಅವರು ಕಾಲಿರಿಸಿದ್ದಾರೆ.
ವಿಜಯ್ ಮಲಗಿಹಾಳ
ಬೆಂಗಳೂರು (ಆ.25): ಕಳೆದ ಲೋಕಸಭಾ ಚುನಾವಣೆ ವೇಳೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಷ್ ಅವರು ಅಚ್ಚರಿ ಎಂಬಂತೆ ಗೆಲುವು ಸಾಧಿಸಿದ್ದು ಇನ್ನೂ ನಿನ್ನೆ ಮೊನ್ನೆ ನಡೆದಂತಿದೆ. ಆಗಲೇ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಅಂದರೆ, ಚುನಾವಣಾ ವರ್ಷಕ್ಕೆ ಸುಮಲತಾ ಅವರು ಕಾಲಿರಿಸಿದ್ದಾರೆ. ಮತ್ತೊಂದು ಚುನಾವಣೆ ಎದುರಾಗುವ ಹೊತ್ತಿನಲ್ಲಿ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದಿದೆ. ಕಳೆದ ಬಾರಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲಿಸಿದ್ದ ಕಾಂಗ್ರೆಸ್ ಪಕ್ಷ ಈಗ ಅಧಿಕಾರದಲ್ಲಿದೆ. ಅದರ ಬಲವೂ ವೃದ್ಧಿಯಾಗಿದೆ. ಜೆಡಿಎಸ್ ಬಲ ಕುಗ್ಗಿದೆ. ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುಮಲತಾ ಅವರ ಮುಂದಿನ ಹೆಜ್ಜೆ ಏನಿರುತ್ತದೆ ಎಂಬ ಕುತೂಹಲದೊಂದಿಗೆ ‘ಕನ್ನಡಪ್ರಭ’ ಮುಖಾಮುಖಿಯಾದಾಗ...
* ಚುನಾವಣಾ ವರ್ಷ ಬರುತ್ತಿದ್ದಂತೆಯೇ ಸುಮಲತಾ ಅವರು ತುಸು ಮೌನಕ್ಕೆ ಜಾರಿದ್ದಾರೆ. ರಾಜಕೀಯವಾಗಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರಾ?
ಮೇಲ್ನೋಟಕ್ಕೆ ಹಾಗೆ ಅನ್ನಿಸಬಹುದು. ನನ್ನನ್ನು ಕೆಣಕದ ಹೊರತು ನಾನಾಗಿಯೇ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ. ನಾನು ಆ ವಿಷಯದಲ್ಲಿ ಯಾವತ್ತೂ ಚೌಕಟ್ಟನ್ನು ಮೀರುವುದಿಲ್ಲ. ಸಾಮಾನ್ಯ ರಾಜಕಾರಣಿಯಂತೆ ನಡೆದುಕೊಳ್ಳುವುದಿಲ್ಲ. ಈ ಮೊದಲು ನಾನು ಕೇವಲ ಪಕ್ಷೇತರ ಸದಸ್ಯೆಯಾಗಿದ್ದೆ. ಈಗ ಬಿಜೆಪಿಗೆ ಬೆಂಬಲ ಘೋಷಿಸಿದ್ದೇನೆ. ಹೀಗಾಗಿ, ಕೆಲವೊಮ್ಮೆ ಪಕ್ಷದ ನಾಯಕರನ್ನು ಸಂಪರ್ಕಿಸಿ ಹೇಳಿಕೆಗಳನ್ನು ನೀಡಬೇಕಾಗುತ್ತದೆ.
ಕಾವೇರಿ ಸಮಸ್ಯೆ ಕೇವಲ ರಾಜಕೀಯ ಹೋರಾಟವಲ್ಲ: ಸಂಸದೆ ಸುಮಲತಾ
* ಕಳೆದ ನಾಲ್ಕು ವರ್ಷಗಳಲ್ಲಿ ಮಂಡ್ಯ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ?
ಮಂಡ್ಯ ರಾಜಕಾರಣ ಯಾವತ್ತೂ ಭಾವನಾತ್ಮಕವಾದದ್ದು. ಬದಲಾವಣೆಯೇನೂ ಆಗಿಲ್ಲ. ಮಂಡ್ಯ ರಾಜಕಾರಣ ರಾಜ್ಯದ ಇತರ ಭಾಗಗಳ ರಾಜಕಾರಣಕ್ಕಿಂತ ಭಿನ್ನವಾದದ್ದು. ನಾನು ಚುನಾವಣೆ ಎದುರಿಸಿದ್ದ ಸಂದರ್ಭ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರು. ಈಗ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈಗಲೂ ನಾನು ಒಬ್ಬ ಪಕ್ಷೇತರಳಾಗಿಯೇ ಧ್ವನಿ ಎತ್ತುತ್ತಿದ್ದೇನೆ. ನನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ.
* ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಭವಿಷ್ಯ ಇದೆ ಎಂದು ಅನಿಸುತ್ತಾ?
ಬಿಜೆಪಿ ಮೊದಲಿಗಿಂತಲೂ ತನ್ನ ನೆಲೆಯನ್ನು ಹೆಚ್ಚಿಸಿಕೊಂಡಿದೆ. ಕೆಲವು ವರ್ಷಗಳ ಹಿಂದೆ ಬಿಜೆಪಿ ಸಭೆ ನಡೆದರೆ ಅಥವಾ ಬಿಜೆಪಿ ಮುಖಂಡರು ಬಂದರೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿನ ಮತ ಗಳಿಕೆ ಪ್ರಮಾಣ ಗಮನಿಸಿದರೆ ಜನರು ನಿಧಾನವಾಗಿ ಬಿಜೆಪಿಯನ್ನು ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಪರಿಗಣಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ತಳಮಟ್ಟದಿಂದ ಪಕ್ಷವನ್ನು ಕಟ್ಟಬೇಕು. ಇದೊಂದು ಚಾಲೆಂಜ್. ರಿಸ್‌್ಕ. ನಾನು ಬಿಜೆಪಿಯನ್ನು ಬೆಂಬಲಿಸುವ ವೇಳೆ ಇದು ನನಗೆ ಗೊತ್ತಿತ್ತು.
* ನೀವು ಬಿಜೆಪಿಗೆ ಬೆಂಬಲ ನೀಡಿದ್ದು ಮಂಡ್ಯದಲ್ಲಿ ಪಕ್ಷದ ಮತ ಗಳಿಕೆ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣವಾಯಿತೇ?
ನಾನು ಬೆಂಬಲಿಸಿದ್ದರಿಂದಲೇ ಮತ ಗಳಿಕೆ ಹೆಚ್ಚಾಯಿತು ಎಂದು ನಾನು ಹೇಳುವುದಿಲ್ಲ. ಅದೂ ಒಂದು ಕಾರಣವಾಗಿರಬಹುದು. ಪ್ರಧಾನಿ ಮೋದಿ ಅವರು ಮತದಾರರಿಗೆ ಮಾಡಿದ ಮನವಿಯೂ ಕಾರಣ. ಆದರೆ, ಜಿಲ್ಲೆಯ ಜನರಲ್ಲಿ ಜೆಡಿಎಸ್, ಕಾಂಗ್ರೆಸ್ ಹೊರತುಪಡಿಸಿ ಮೂರನೇ ಶಕ್ತಿಯನ್ನಾಗಿ ಬಿಜೆಪಿಯನ್ನು ನೋಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಮರ್ಥ ಮುಖಂಡರನ್ನು ತಯಾರು ಮಾಡಿ ಕಣಕ್ಕಿಳಿಸಿದರೆ ಪಕ್ಷದ ಸಂಘಟನೆ ಇನ್ನೂ ಬಲಗೊಳ್ಳುವ ಅವಕಾಶವಿದೆ.
* ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹಲವು ಉಚಿತ ಕೊಡುಗೆಗಳನ್ನು ಜಾರಿಗೊಳಿಸುವ ಮೂಲಕ ಜನರ ಬೆಂಬಲ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ?
ನಾನು ಇಂಥ ಉಚಿತ ಕೊಡುಗೆಗಳನ್ನು ವಿರೋಧಿಸುತ್ತೇನೆ. ಮಹಿಳೆಯರಿಗೆ ಎಷ್ಟುನೆರವು ನೀಡಿದರೂ ತಪ್ಪಲ್ಲ. ಆದರೆ, ಯಾವುದೇ ದೂರದೃಷ್ಟಿಇಲ್ಲದೆ, ಆರ್ಥಿಕವಾಗಿ ಎಂಥ ಪರಿಣಾಮ ಬೀರಲಿದೆ ಎಂಬುದನ್ನು ಯೋಚಿಸದೆ ಚುನಾವಣಾ ಉದ್ದೇಶಕ್ಕಾಗಿ ಇಂಥ ಉಚಿತ ಕೊಡುಗೆ ಘೋಷಿಸಿ ಜಾರಿಗೊಳಿಸುತ್ತಿರುವುದು ಸರಿಯಲ್ಲ. ಆರ್ಥಿಕ ಚಟುವಟಿಕೆ ಹೆಚ್ಚಿಸಬೇಕು ಎಂಬ ಉದ್ದೇಶವಿದ್ದರೆ ಇಂಥ ಯೋಜನೆಗಳನ್ನು ಅನುಷ್ಠಾನಗೊಳಿಸಬಾರದು. ಅದರ ಬದಲು ಉಚಿತ ಆರೋಗ್ಯ ಸಂರಕ್ಷಣೆ, ಶಿಕ್ಷಣ ನೀಡಬೇಕು. ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಬೇಕು. ಈ ಮೂರನ್ನು ಮಾಡಲು ಎಷ್ಟುಬೇಕಾದರೂ ಹಣ ನೀಡಲಿ.
* ಈಗ ನೀವು ಬಿಜೆಪಿಗೆ ಬೆಂಬಲ ಘೋಷಿಸಿದ್ದೀರಿ. ಚುನಾವಣೆ ವೇಳೆ ಆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುತ್ತೀರಲ್ಲವೇ?
ಹೌದು. ನನ್ನ ಲೋಕಸಭಾ ಸದಸ್ಯತ್ವದ ಅವಧಿ ಮುಗಿದ ಬಳಿಕ ಸೇರ್ಪಡೆಯಾಗುತ್ತೇನೆ.
* ಬಿಜೆಪಿಗೆ ಬೆಂಬಲ ಘೋಷಿಸಿ ಹಲವು ತಿಂಗಳಾಯಿತು. ಈಗ ನಿಮ್ಮ ನಿರ್ಧಾರ ತಪ್ಪು ಎಂಬ ಭಾವನೆ ಬಂದಿದೆಯೇ?
ಇಲ್ಲ ಇಲ್ಲ. ನಾನು ಇದರ ರಿಸ್‌್ಕ (ಅಪಾಯ) ಗೊತ್ತಿದ್ದೇ ನಿರ್ಧಾರ ತೆಗೆದುಕೊಂಡೆ. ನಾನು ಬಿಜೆಪಿ ತತ್ವ ಸಿದ್ಧಾಂತದಲ್ಲಿ ಮತ್ತು ನರೇಂದ್ರ ಮೋದಿ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ಮಂಡ್ಯಕ್ಕೆ ಸೀಮಿತವಾಗಿ ಇದು ಅಪಾಯ ಎಂಬುದು ಗೊತ್ತಿತ್ತು. ನನಗೆ ಇದು ವೈಯಕ್ತಿಕವಾಗಿ ಲಾಭ ತಂದು ಕೊಡಲಿಕ್ಕಿಲ್ಲ ಎಂಬುದನ್ನೂ ಆಲೋಚಿಸಿದ್ದೆ. ಆದರೆ, ನಾನು ಕೇವಲ ನನ್ನ ರಾಜಕೀಯ ಲಾಭಕ್ಕಾಗಿ ಈ ನಿರ್ಧಾರ ಕೈಗೊಳ್ಳಲಿಲ್ಲ. ವಿಶಾಲ ದೃಷ್ಟಿಕೋನದಿಂದ ಈ ತೀರ್ಮಾನಕ್ಕೆ ಬಂದಿದ್ದೇನೆ.
* ಅಪಾಯ ಅಂತ ಗೊತ್ತಿದ್ದರೂ ಬಿಜೆಪಿ ಬೆಂಬಲಿಸುವ ಧೈರ್ಯ ಹೇಗೆ ಮಾಡಿದಿರಿ?
ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಸದಸ್ಯೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇ ದೊಡ್ಡ ಅಪಾಯವಾಗಿತ್ತು. ಅದೂ ಮುಖ್ಯಮಂತ್ರಿಗಳ ಪುತ್ರನ ವಿರುದ್ಧ. ಸಚಿವರು ಹಾಗೂ ಎಂಟು ಮಂದಿ ಜೆಡಿಎಸ್ ಶಾಸಕರಿರುವ ಕ್ಷೇತ್ರ. ಇಡೀ ರಾಜ್ಯ ಸರ್ಕಾರದ ಆಡಳಿತ ಯಂತ್ರವನ್ನೇ ಎದುರು ಹಾಕಿಕೊಂಡು ಕಣಕ್ಕಿಳಿದಿದ್ದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಬಹುದು. ಆದರೆ, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲುವುದು ಅಪರೂಪ. ನಾನು ಕಳೆದ ಬಾರಿ ಅಂತ ಅಪಾಯ ಎದುರು ಹಾಕಿಕೊಂಡ ಮೇಲೆ ಇದನ್ನೂ ಎದುರಿಸುವ ನಿರ್ಧಾರಕ್ಕೆ ಬಂದೆ.
* ನೀವು ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಅನುಕೂಲವಾಯಿತೆ?
ಬಿಜೆಪಿಗೆ ಬೆಂಬಲ ನೀಡುವ ಮೊದಲೂ ನನಗೆ ಕೇಂದ್ರ ಸರ್ಕಾರದ ಬಾಗಿಲು ತೆರೆದೇ ಇತ್ತು. ಯಾವುದೇ ಸಚಿವರ ಭೇಟಿಗೂ ಬೆಂಬಲ ಸಿಗುತ್ತಿತ್ತು. ಯಾವತ್ತೂ ತೊಂದರೆ ಆಗಿಲ್ಲ. ಅದರಿಂದ ನನ್ನ ಕ್ಷೇತ್ರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಕೆಲಸಗಳು ಸುಗಮವಾಗಿ ಆಗಿವೆ. ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ನಾನು ಬಿಜೆಪಿ ಬೆಂಬಲಿಸುವುದಕ್ಕೆ ಇದು ಕೂಡ ಒಂದು ಕಾರಣ.
* ನೀವೇ ಹೇಳಿದಂತೆ ಮಂಡ್ಯಕ್ಕೆ ಸೀಮಿತವಾಗಿ ಬಿಜೆಪಿಗೆ ಬೆಂಬಲ ನೀಡುವುದು ಅಪಾಯ ಎಂಬುದು ನಿಮಗೆ ಗೊತ್ತಿತ್ತು. ಇದೇ ಕಾರಣಕ್ಕಾಗಿ ನೀವು ಮುಂದಿನ ಬಾರಿ ಮಂಡ್ಯ ಕ್ಷೇತ್ರ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತೀರಂತೆ?
ನಾನು ರಾಜಕೀಯದಿಂದಲೇ ದೂರ ಇದ್ದೆ. ಮಂಡ್ಯ ನನ್ನ ಹೃದಯಕ್ಕೆ ತೀರಾ ಹತ್ತಿರ. ಅಂಬರೀಷ್ ಅವರು ಐದು ಬಾರಿ ಈ ಜಿಲ್ಲೆಯಿಂದ ಸ್ಪರ್ಧಿಸಿ ಗೆದ್ದಿದ್ದರು. ನಾನು ರಾಜಕೀಯದಲ್ಲಿ ಇದ್ದೇನೆ ಎಂದರೆ ಅದಕ್ಕೆ ಮಂಡ್ಯ ಕಾರಣ. ಸದ್ಯದ ಪರಿಸ್ಥಿತಿಯಲ್ಲಿ ನಾನು ಬೇರೆ ಯಾವುದೇ ಕ್ಷೇತ್ರದ ಅವಕಾಶ ಎದುರು ನೋಡುತ್ತಿಲ್ಲ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಸುದ್ದಿಯನ್ನು ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಕ್ಷೇತ್ರದ ಸುಮಾರು ಜನರು ಬಂದು ಈ ಬಗ್ಗೆ ನನ್ನನ್ನು ಕೇಳಿದರು. ಪಕ್ಷದಿಂದಲೂ ಯಾರೂ ಈ ಬಗ್ಗೆ ನನಗೆ ಹೇಳಿಲ್ಲ. ನಾನೂ ಬೇರೆ ಕ್ಷೇತ್ರವನ್ನು ಪರಿಗಣಿಸುತ್ತಿಲ್ಲ.
* ಕಳೆದ ಬಾರಿಯ ರಾಜಕೀಯ ಚಿತ್ರಣಕ್ಕೂ ಈ ಬಾರಿಯ ರಾಜಕೀಯ ಚಿತ್ರಣಕ್ಕೂ ವ್ಯತ್ಯಾಸವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೀವು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಯಶಸ್ಸು ಕಾಣಬಹುದೇ ಎಂಬ ಅನುಮಾನ ಪಕ್ಷದ ನಾಯಕರಲ್ಲಿ ಮೂಡಿದೆಯಂತೆ?
ನೋಡಿ, ಕಳೆದ ಬಾರಿ ನಾನು ಪಕ್ಷೇತರಳಾಗಿ ಸ್ಪರ್ಧಿಸುವ ವೇಳೆ ನಿರ್ಧಾರ ನನ್ನದೇ ಆಗಿತ್ತು. ಆಗ ಪಕ್ಷ ಇರಲಿಲ್ಲ. ಈಗ ಒಂದು ಪಕ್ಷ ಅಂತ ಬಂದ ಮೇಲೆ ನಾನೊಬ್ಬಳೇ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಪಕ್ಷ ಕೂಡ ಇದನ್ನೆಲ್ಲ ಪರಿಗಣಿಸುತ್ತದೆ. ಈ ಎಲ್ಲ ಅಂಶಗಳ ಬಗ್ಗೆಯೂ ಚರ್ಚಿಸಿ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಆದರೆ, ನನ್ನ ಆಯ್ಕೆ ಮಂಡ್ಯ. ಮಂಡ್ಯ ಕಾರಣಕ್ಕಾಗಿಯೇ ನಾನು ರಾಜಕೀಯದಲ್ಲಿ ಇದ್ದೇನೆ. ಆದರೆ ಅಂತಿಮ ನಿರ್ಧಾರ ಬಿಜೆಪಿಯದ್ದು.
* ಮಂಡ್ಯದಿಂದಲೇ ಮತ್ತೆ ಸ್ಪರ್ಧಿಸುವುದಾದರೆ ಆ ಜಿಲ್ಲೆಯಲ್ಲಿ ಬಲಾಢ್ಯವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಎದುರಿಸುವ ವಿಶ್ವಾಸ ಇದೆಯೇ?
ನನಗೆ ನಂಬಿಕೆಯಿದೆ. ಕಳೆದ ಬಾರಿಯೂ ಇದೇ ರೀತಿ ಪ್ರಶ್ನೆ ಎದುರಾಗಿತ್ತು. ಆಡಳಿತಾರೂಢ ಜೆಡಿಎಸ್ ವಿರುದ್ಧ ಹೇಗೆ ಸ್ಪರ್ಧಿಸುತ್ತೀರಿ ಎಂದು ಹಲವು ಜನರು ಕೇಳಿದ್ದರು. ಇಂಥದನ್ನು ಊಹಿಸುವುದಕ್ಕೆ ಆಗುವುದಿಲ್ಲ. ಜನರು ಈ ಅವಧಿಯಲ್ಲಿ ನನ್ನ ಕೆಲಸ ಗಮನಿಸಿದ್ದಾರೆ. ನನ್ನ ವಿರುದ್ಧ ಒಂದೇ ಒಂದು ಆರೋಪ, ಕಪ್ಪು ಚುಕ್ಕೆ ಇಲ್ಲ. ನಾನು ವಿಭಿನ್ನ. ಇತರ ರಾಜಕಾರಣಿಗಳ ರೀತಿ ಇಲ್ಲ ಎಂಬುದು ಜನಕ್ಕೆ ಗೊತ್ತಿದೆ. ಅವರು ನೋಡಿದ್ದಾರೆ. ಹಾಗಂತ ಗ್ಯಾರಂಟಿ ಎಂಬುದಾಗಿ ಹೇಳಲ್ಲ. ಆದರೆ, ಕೆಲಸ ನೋಡಿ ಬೆಂಬಲಿಸುವ ವಿಶ್ವಾಸವಿದೆ. ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಮಟ್ಟದ ರಾಜಕಾರಣ ಪ್ರಮುಖವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮನಾಗಿ ಮತ್ತೊಬ್ಬ ನಾಯಕ ಇಲ್ಲ. ಜನರಿಗೆ ಮೋದಿ ನಾಯಕತ್ವದ ಬಗ್ಗೆ ಅಪಾರ ನಂಬಿಕೆಯಿದೆ.
* ಮುಂದಿನ ಬಾರಿ ನೀವು ಸ್ಪರ್ಧಿಸುವುದು ಖಚಿತ ತಾನೇ?
ನೋಡೋಣ (ನಗುವಿನೊಂದಿಗೆ). ನಾನು ಅಷ್ಟುಪ್ಲ್ಯಾನಿಂಗ್ ಮಾಡುವುದಿಲ್ಲ. ನಾನು ಪಕ್ಕಾ ರಾಜಕಾರಣಿ ಅಲ್ಲ. ರಾಜಕೀಯ ಎನ್ನುವ ಏಣಿಯನ್ನು ಒಂದು ಬಾರಿ ಹತ್ತಿದ ಮೇಲೆ ಇಳಿಯುವುದು ಕಷ್ಟಎಂಬ ಮಾತಿದೆ. ರಾಜಕಾರಣಕ್ಕೆ ಪ್ರವೇಶ ದ್ವಾರವಿದೆ ಹೊರತು ನಿರ್ಗಮನ ದ್ವಾರವಿಲ್ಲ ಎನ್ನುತ್ತಾರೆ. ನಾನು ನನ್ನ ಅವಕಾಶವನ್ನು ಮುಕ್ತವಾಗಿರಿಸಿಕೊಳ್ಳಲು ಬಯಸುತ್ತೇನೆ. ಪಕ್ಷೇತರ ಸಂಸದೆಯಾಗಿ ಸಾಧ್ಯವಾದಷ್ಟುಸಮರ್ಥವಾಗಿ ಕೆಲಸ ಮಾಡಿದ ತೃಪ್ತಿ, ಸಮಾಧಾನ ನನಗಿದೆ.
* ಕಳೆದ ವಿಧಾನಸಭಾ ಚುನಾವಣೆಯಲ್ಲೇ ನೀವು ರಾಜ್ಯ ರಾಜಕಾರಣಕ್ಕೆ ಬರುತ್ತೀರಿ ಎಂಬ ಮಾತು ಕೇಳಿಬಂದಿತ್ತು? ಮುಂದೆಯೂ ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲವೇ?
ಇಲ್ಲ. ಮಂಡ್ಯದಿಂದಲೋ ಅಥವಾ ಮದ್ದೂರಿನಿಂದಲೋ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಆಸೆಯಿದೆಯೇ ಎಂದು ಬಿಜೆಪಿ ನಾಯಕರು ಕೇಳಿದರು. ಆದರೆ, ನಾನು ನಿರಾಕರಿಸಿದೆ.
* ಒಂದು ವೇಳೆ ಮುಂದಿನ ಚುನಾವಣೆ ಕಾಂಗ್ರೆಸ್ ನಿಮಗೆ ಆಹ್ವಾನ ನೀಡಿದರೆ ಏನು ಮಾಡುವಿರಿ?
ಕಾಂಗ್ರೆಸ್ ಆಹ್ವಾನ ನೀಡುತ್ತಾರೆ ಎಂಬ ನಿರೀಕ್ಷೆ ಇಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮಂಡ್ಯ ರಾಜಕಾರಣ ಯಾವ ಆಯಾಮ ಪಡೆದುಕೊಳ್ಳುತ್ತಿದೆ ಎಂಬುದನ್ನು ಗಮನಿಸಿಕೊಂಡು ಬಂದಿದ್ದೇನೆ. ನಾನು ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಬಿಜೆಪಿಗೆ ಬೆಂಬಲ ನೀಡಿದ್ದೇನೆ.
* ಪುತ್ರ ಅಭಿಷೇಕ್‌ನನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆದಿದೆಯೇ?
ಸದ್ಯಕ್ಕೆ ಅಭಿಷೇಕ್ ರಾಜಕೀಯಕ್ಕೆ ಬರುವ ಉದ್ದೇಶ ಹೊಂದಿಲ್ಲ. ಚಿತ್ರರಂಗದಲ್ಲಿ ಮುಂದುವರೆದಿದ್ದಾನೆ. ಅವನಿಗೆ ರಾಜಕೀಯಕ್ಕೆ ಬರುವ ಇಚ್ಛೆ ಇದ್ದರೆ ಬರಲಿ. ನಾನು ಆತನನ್ನು ಕರೆತರುವ ಪ್ರಯತ್ನ ಮಾಡುವುದಿಲ್ಲ. ನಮ್ಮ ಕುಟುಂಬದಲ್ಲಿ ಒಬ್ಬರು ಮಾತ್ರ ರಾಜಕೀಯದಲ್ಲಿ ಇರುತ್ತಾರೆ. ಅಭಿಷೇಕ್ ಬರುವುದಾದರೆ ನಾನು ರಾಜಕೀಯದಲ್ಲಿ ಇರುವುದಿಲ್ಲ.
* ಕಾವೇರಿ ನದಿ ನೀರಿನ ಸಮಸ್ಯೆ ಮತ್ತೆ ಉದ್ಭವಿಸಿದೆಯಲ್ಲ?
ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ಕಾವೇರಿ ನದಿ ನೀರಿನ ಸಮಸ್ಯೆ ಇಷ್ಟುಸುದೀರ್ಘ ಕಾಲ ಮುಂದುವರೆಯುತ್ತಿರಲಿಲ್ಲ. ಬ್ರಿಟಿಷ್ ಕಾಲದಿಂದಲೂ ಈ ಸಮಸ್ಯೆ ಇದೆ. ಮುಂದಿನ ಪೀಳಿಗೆಗೆ ತೊಂದರೆಯಾಗದಂತೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಎಂಬ ಉದ್ದೇಶದಿಂದ ಯಾರೊಬ್ಬರೂ ಇದುವರೆಗೆ ತೆರೆದ ಹೃದಯದಿಂದ ಪ್ರಯತ್ನ ಮಾಡಲಿಲ್ಲ. ಪರಿಹಾರದ ಬದಲು ಇದೊಂದು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವಿನ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ. ದುರದೃಷ್ಟಕರ ಎಂದರೆ ಈ ವಿವಾದ ಮುಂದಿಟ್ಟುಕೊಂಡು ಚುನಾವಣಾ ಸಮಯದಲ್ಲಿ ಅಥವಾ ಬೇರೆ ಬೇರೆ ಕಾರಣಗಳಿಗಾಗಿ ಸಮಸ್ಯೆಯನ್ನು ಜೀವಂತವಾಗಿಡುವ ಪ್ರಯತ್ನ ನಡೆದಿದೆ. ರೈತರ ಹಿತ ಗಮನದಲ್ಲಿ ಇಟ್ಟುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ್ಞಛಿಛಿd ಟ್ಛ ಠಿhಛಿ hಟ್ಠ್ಟ. ಸರ್ಕಾರ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೋಡಬೇಕು.
* ಸಂಕಷ್ಟ ಸೂತ್ರವನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆಯಲ್ಲ?
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆಯನ್ನೇ ಅನುಸರಿಸಿಕೊಂಡು ಬರಲಾಗಿದೆ. ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ, ನ್ಯಾಯಾಲಯದಲ್ಲಿ ನಮ್ಮ ವಾದವನ್ನು ಸಮರ್ಥವಾಗಿ ಮುಂದಿಡುವಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಸಂಕಷ್ಟಸೂತ್ರ ಎಂದರೆ ನೀರು ಎಷ್ಟುಸಂಗ್ರಹವಿದೆ ಎಂಬುದನ್ನೂ ಪರಿಗಣಿಸಬೇಕಲ್ಲವೇ? ನಮ್ಮಲ್ಲಿ ಅಗತ್ಯ ನೀರಿನ ಸಂಗ್ರಹಣೆ ಇಲ್ಲದಿದ್ದರೂ ನೀರು ಬಿಡಬೇಕು ಎಂದರೆ ಹೇಗೆ ಸರಿ ಎಂಬುದೇ ನನಗೆ ಅರ್ಥವಾಗುತ್ತಿಲ್ಲ.
ಹೆದ್ದಾರಿ ಸಮಸ್ಯೆಗಳು ನೂರಾರು, ಪರಿಹಾರ ಶೂನ್ಯ: ಯೋಜನಾಧಿಕಾರಿಗೆ ಸಂಸದೆ ಸುಮಲತಾ ಕ್ಲಾಸ್
* ನಮ್ಮಲ್ಲಿ ನೀರು ಇಲ್ಲದಿದ್ದರೂ ಈಗ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದೆ. ಇದನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ?
ನಾನು ಈ ವಿಷಯದಲ್ಲಿ ರಾಜಕೀಯವಾಗಿ ಮಾತನಾಡಲು ಬಯಸುವುದಿಲ್ಲ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಚ್‌ಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಅದನ್ನು ಪ್ರಶ್ನಿಸದೆ, ವಿರೋಧಿಸುವ ಪ್ರಯತ್ನ ಮಾಡದೆ ನೀರು ಬಿಟ್ಟಿದ್ದು ಸರಿಯಲ್ಲ. ಕನಿಷ್ಠ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ? ತರಾತುರಿಯಲ್ಲಿ ನೀರು ಬಿಡುವ ಅಗತ್ಯ ಏನಿತ್ತು? ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆಯ ಎಂಟು ಜಿಲ್ಲೆಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರಿನ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಕೃಷಿಗೆ ಬಿಟ್ಟುಬಿಡಿ. ಕುಡಿಯುವುದಕ್ಕೇ ನೀರು ಇರುವುದಿಲ್ಲ. ಹೀಗಾಗಿ, ಇದು ಕೇವಲ ಒಂದು ರಾಜಕೀಯ ಪಕ್ಷ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಅಲ್ಲ. ಎಲ್ಲ ರಾಜಕೀಯ ಪಕ್ಷಗಳೂ, ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದರೆ ಮಾತ್ರ ಎದುರಿಸಲು ಸಾಧ್ಯ.
* ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಿದಲ್ಲಿ ಈ ಕಾವೇರಿ ನದಿ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಗಬಹುದಲ್ಲವೇ?
ಇಲ್ಲಿನ ಆಡಳಿತಾರೂಢ ಸರ್ಕಾರ ಸುಲಭವಾಗಿ ಕೇಂದ್ರ ಸರ್ಕಾರದತ್ತ ಬೆರಳು ತೋರುತ್ತದೆ. ಅದರೆ, ಇದು ಸರಿಯಲ್ಲ. ಮೇಕೆದಾಟು ಯೋಜನೆಗೆ ಪರಿಸರ ಸಂಬಂಧಿ ಅನುಮತಿ ನಮ್ಮಲ್ಲೂ ಸಿಗಬೇಕಿದೆ. ತಮಿಳುನಾಡು ಸರ್ಕಾರದ ಸಹಕಾರ ಇಲ್ಲದೆ ನಾವು ಈ ಯೋಜನೆ ಜಾರಿಗೊಳಿಸುವುದು ಸಾಧ್ಯವೇ ಇಲ್ಲ ಎನ್ನಬಹುದು. ಹೀಗಾಗಿಯೇ ಈಗಿರುವ ಕೆಆರ್‌ಎಸ್ ಅಣೆಕಟ್ಟೆಯಲ್ಲಿನ ಹೂಳು ತೆಗೆಯುವ ಬಗ್ಗೆ ನಾನು ಕೇಂದ್ರ ಜಲಶಕ್ತಿ ಸಚಿವರ ಬಳಿ ಪ್ರಸ್ತಾಪ ಇರಿಸಿದ್ದೆ. ಹೂಳು ತೆಗೆದರೆ ಸುಮಾರು 25 ಅಡಿ ಆಳದಷ್ಟುಹೆಚ್ಚುವರಿ ಸಾಮರ್ಥ್ಯ ಸಿಗುತ್ತದೆ. ವಿಚಿತ್ರ ಎಂದರೆ, ತಮಿಳುನಾಡು ಸರ್ಕಾರ ಇದನ್ನೂ ವಿರೋಧಿಸಿದೆ. ಕಾವೇರಿ ವಿಷಯದಲ್ಲಿ ತಮಿಳುನಾಡು ಸರ್ಕಾರ ತುಂಬಾ ಪೂರ್ವಭಾವಿಯಾಗಿ ಸಿದ್ಧತೆ ಕೈಗೊಳುತ್ತದೆ. ನಮ್ಮ ಸರ್ಕಾರವೂ ಮೊದಲೇ ಸಭೆ ಕರೆಯಬೇಕಿತ್ತು. ಆ ರಾಜ್ಯಕ್ಕೆ ನೀರು ಬಿಟ್ಟು ಬಳಿಕ ಸಭೆ ಕರೆದಿರುವುದು ಸರಿಯಲ್ಲ.