
ದಾವಣಗೆರೆ/ಶಿರಾ (ಜ.07): ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ರಾಜಕೀಯ ಸಂಸ್ಕೃತಿಯನ್ನೇ ಬದಲಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಭಿಪ್ರಾಯಪಟ್ಟಿದ್ದಾರೆ. ತುಮಕೂರು ಜಿಲ್ಲೆ ಶಿರಾದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ನವರು ಅಣ್ಣ ತಮ್ಮಂದಿರ ನಡುವೆ ಜಗಳ ತಂದಿಟ್ಟರು. ಜಾತಿ-ಜಾತಿ ಎಂದು ಒಡೆದು ಆಳುವ ನೀತಿ ಕಾಂಗ್ರೆಸ್‌ನವರದ್ದು, ಕಾಂಗ್ರೆಸ್‌ನವರು ಜಾತಿ, ಧರ್ಮದ ಹೆಸರಲ್ಲಿ ತುಷ್ಟೀಕರಣ ಮಾಡಿದರು. ಆದರೆ, ಮೋದಿಯವರು ದೇಶದ ಪ.ಜಾತಿ, ಪ.ಪಂಗಡ, ಮಹಿಳೆಯರು ಮತ್ತು ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ 80 ಕೋಟಿ ಜನರಿಗೆ ಉಚಿತ ರೇಷನ್ ಕೊಟ್ಟಿದ್ದಾರೆ. ದೇಶದ 12 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಾಣ, 50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ನೀಡಿದ್ದಾರೆ. ಮೋದಿ ಸರ್ಕಾರ ದೇಶದಲ್ಲಿ ಅನೇಕ ಬದಲಾವಣೆ ತರುತ್ತಿದೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಮೂಲಕ ಆಯಾ ಪ್ರಾದೇಶಿಕ ಭಾಷೆಯಲ್ಲೂ ಉನ್ನತ ವ್ಯಾಸಂಗದ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಆಯಾ ಮಾತೃಭಾಷೆಯಲ್ಲೇ ಸ್ಥಳೀಯರು ಪರೀಕ್ಷೆ ಬರೆಯುವ ಮೂಲಕ ಮಾತೃಭಾಷೆ ಜಾರಿಗೊಳಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ರಾಜ್ಯದಲ್ಲೂ ರಿಪೋರ್ಟ್ ಕಾರ್ಡ್ ಆಧಾರದಲ್ಲಿ ಚುನಾವಣೆ: ಜೆ.ಪಿ.ನಡ್ಡಾ
ಕರ್ನಾಟಕ ನಂಬರ್ 1: ಇದಕ್ಕೂ ಮೊದಲು, ದಾವಣಗೆರೆಯ ತ್ರಿಶೂಲ ಕಲಾಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವೃತ್ತಿಪರರು ಮತ್ತು ಕೀ ಓಟರ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ 90 ಲಕ್ಷ ಕೋಟಿ ಒಪ್ಪಂದ ಮಾಡಿಕೊಂಡಿದೆ. ಎನ್‌ಇಪಿ ಜಾರಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯೊಂದಿಗೆ ಪ್ರಚಾರಕ್ಕೆ ಬರುತ್ತವೆ. ಆದರೆ, ನಾವು ನಮ್ಮ ಆಡಳಿತಾವಧಿಯ ಸಾಧನೆ ರಿಪೋರ್ಚ್ ಕಾರ್ಡ್‌ನೊಂದಿಗೆ ಜನರ ಬಳಿ ಬರುತ್ತಿದ್ದೇವೆ ಎಂದರು. ಇದೇ ವೇಳೆ, ಸಿದ್ದು ವಿರುದ್ಧ ಹರಿಹಾಯ್ದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯನ್ನು ನಾಯಿ ಎಂದು ಕರೆದು ಕರ್ನಾಟಕದ ಜನರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೆಕ್ ಬೌನ್ಸ್ ಕೇಸು ಇತ್ಯರ್ಥಕ್ಕೆ 10 ಲಕ್ಷ ತಂದಿದ್ದೆ: ಪಿಡಬ್ಲ್ಯುಡಿ ಎಂಜಿನಿಯರ್ ಜಗದೀಶ್
ಕುರುಬರಿಗೆ ಎಸ್ಟಿ ಮೀಸಲಾತಿ ನೀಡಿ: ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಾಗಿನೆಲೆ ಶ್ರೀ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮನವಿ ಮಾಡಿದರು. ಹರಿಹರ ತಾ. ಬೆಳ್ಳೂಡಿ ಗ್ರಾಮದ ಕಾಗಿನೆಲೆ ಪೀಠಕ್ಕೆ ಭೇಟಿ ನೀಡಿದ್ದ ಜೆ.ಪಿ.ನಡ್ಡಾ ಅವರಿಗೆ ಹಾಲುಮತ ಸಮಾಜವು ಎಸ್‌ಟಿ ಮೀಸಲಾತಿಗಾಗಿ ನಡೆಸಿಕೊಂಡು ಬಂದ ಹೋರಾಟ, ಎಸ್‌ಟಿ ಮೀಸಲಾತಿ ಪಡೆಯಲು ಸಮಾಜ ಹೊಂದಿರುವ ಅರ್ಹತೆ ಬಗ್ಗೆ ಸವಿಸ್ತಾರವಾಗಿ ಸ್ವಾಮೀಜಿ ವಿವರಿಸಿದರು. ಕುರುಬ ಸಮಾಜದ ಎಸ್‌ಟಿ ಮೀಸಲಾತಿ ಬೇಡಿಕೆ ಇಂದು ನಿನ್ನೆಯದಲ್ಲ. ಹಲವಾರು ದಶಕಗಳ ಬೇಡಿಕೆ ಇದಾಗಿದೆ. ಎಸ್‌ಟಿ ಮೀಸಲಾತಿಯನ್ನು ಹಾಲುಮತ ಸಮಾಜಕ್ಕೆ ನೀಡಿದರೆ ಸಹಾಯವಾಗುತ್ತದೆ ಎಂದು ಶ್ರೀಗಳು ನಡ್ಡಾ ಗಮನಕ್ಕೆ ತಂದರು. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.