ಮಹಿಳೆಯರ ಬಗ್ಗೆ ಬಿಜೆಪಿಗೆ ಅಗೌರವ: ಕುಮಾರಸ್ವಾಮಿ

By Kannadaprabha NewsFirst Published Jan 6, 2023, 11:00 PM IST
Highlights

2 ಪಕ್ಷಗಳೂ ಆರೋಪ-ಪ್ರತ್ಯಾರೋಪದಲ್ಲಿ ಕಾಲಹರಣ, ಜನರಲ್ಲಿ ಅರಿವು ಮೂಡಿಸಲು ಜೆಡಿಎಸ್‌ ಪಂಚರತ್ನ ರಥಯಾತ್ರೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 

ಬೀದರ್‌(ಜ.06):  ಬಿಜೆಪಿ ನಾಯಕರು ಮಹಿಳೆಯರ ಬಗ್ಗೆ ಅಪಾರ ಗೌರವದ ಮಾತನಾಡುತ್ತಾರೆ. ಆದರೆ, ಅವರೆಲ್ಲರೂ ನಡೆದುಕೊಳ್ಳುವುದೇ ಬೇರೆಯಾಗಿದೆ. ಹುಸಿ ಗೌರವ ಅವರದ್ದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು. ಗುರುವಾರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಯ ನಿಮಿತ್ತ ಪ್ರವಾಸ ಕೈಗೊಂಡ ಸಂದರ್ಭ ಭೇಟಿಯಾದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರು ಮಾತೃ ಭೂಮಿ ನಮಸ್ತೆ ಸದಾ ವಾಸ್ತಲ್ಯ ಎಂದು ಹಾಡುವರು. ಆದರೆ, ನಾಡಿನಲ್ಲಿ ಮಹಿಳೆಯರನ್ನು ಅವರ ಬಿಜೆಪಿ ಯಾವ ರೀತಿ ನಡೆಸಿಕೊಳ್ಳುತಿದ್ದಾರೆ ಎಂಬುವುದನ್ನು ಗಮನಿಸಬಹುದಾಗಿದೆ ಎಂದು ವ್ಯಂಗವಾಡಿದರು.

ರಾಜ್ಯದ ಮಹಿಳೆಯರಿಗೆ ಈ ಸರ್ಕಾರದಿಂದ ರಕ್ಷಣೆಯಾಗುತ್ತಿಲ್ಲ ಎನ್ನುವುದಕ್ಕೆ ನಡೆಯುತ್ತಿರುವ ಘಟನೆಗಳು ಸಾಕ್ಷಿಯಾಗಿವೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ಆದರೆ, ಇವುಗಳ ಪರಿಹಾರದ ಬಗ್ಗೆ ಚಿಂತನೆ ಮಾಡದೇ ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಆಡಳಿತಾರೂಢ ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ಕಾಲಹರಣ ಮಾಡುತ್ತಿವೆ ಎಂದು ದೂರಿದರು.

ಈಶ್ವರ ಖಂಡ್ರೆ ರಾಜಕೀಯ ಸನ್ಯಾಸ ಪಡೆಯಲಿ: ಡಿಕೆಸಿ ಆಗ್ರಹ

ರಾಜ್ಯದಲ್ಲಿ ಜನರು ಎದುರಿಸುವ ಸಮಸ್ಯೆಗಳನ್ನು ಪತ್ತೆ ಹಚ್ಚಿ ಪರಿಹಾರದ ಕುರಿತು ಜನರಲ್ಲಿ ಅರಿವು ಮೂಡಿಸಲು ಜೆಡಿಎಸ್‌ನಿಂದ ಪಂಚರತ್ನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಶಾಸಕ ಬಂಡೆಪ್ಪ ಖಾಶೆಂಪೂರ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ ಮತ್ತಿತರ ಮುಖಂಡರು ಇದ್ದರು.

ಕ್ರೇನ್‌ ಮೂಲಕ ಹೂವಿನ ಹಾರ:

ಬೀದರ್‌ ನಗರದಲ್ಲಿ ಗುರುವಾರ ನಡೆದ ಪಂಚರತ್ನ ರಥಯಾತ್ರೆ ಬೀದರ್‌ಗೆ ಆಗಮಿಸುತ್ತಲೇ ಪಕ್ಷದ ಕಾರ್ಯಕರ್ತರು ಸೇಬು ಸೇರಿದಂತೆ ಇನ್ನಿತರ ಹಣ್ಣು ಹಾಗೂ ಪುದೀನಾವುಳ್ಳ ದೊಡ್ಡ ಹೂವಿನ ಹಾರವು ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಬಂಡೆಪ್ಪ ಖಾಶೆಂಪೂರ ಅವರಿಗೆ ಕ್ರೇನ್‌ ಮೂಲಕ ಹಾಕಿದರು ಅಲ್ಲದೇ ಹೂವಿನ ಸುರಿಮಳೆಗೈದರು.

ಪಂಚರತ್ನ ಯಾತ್ರೆ ನಗರದ ಗುಂಪಾ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ನಯಾ ಕಮಾನ, ಹಳೆ ನಗರ, ಡಾ.ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಗಣೇಶ ಮೈದಾನಕ್ಕೆ ತೆರಳಿ ವೇದಿಕೆ ಕಾರ್ಯಕ್ರಮದಲ್ಲಿ ಸಮಾರೋಪಗೊಂಡಿತು. ನಂತರ ಯಾತ್ರೆ ಬೀದರ್‌ ತಾಲೂಕಿನ ಬೆನಕನಳ್ಳಿ, ಚಾಂಬೋಳ ಹಿಪ್ಪಳಗಾಂವ್‌ ಮೂಲಕ ಜನವಾಡಾ ಗ್ರಾಮಕ್ಕೆ ತೆರಳಿ ಗ್ರಾಮ ವಾಸ್ತವ್ಯ ಮಾಡಿದರು.

click me!