
ದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಪುಸ್ತಕ (Belonging a journey of love) ಇಂದು ಬಿಡುಗಡೆಯಾಗಿದೆ. ಇದರಲ್ಲಿ ಸೋನಿಯಾ ಅವರು ತಮ್ಮ ಜೀವನದ ಹಲವಾರು ಅಂಶಗಳನ್ನು ಬರೆದಿದ್ದಾರೆ. ತಮ್ಮ ಮತ್ತು ರಾಜೀವ್ ಗಾಂಧಿ ಅವರ ಪ್ರೇಮ ಪ್ರಸಂಗದಿಂದ ಹಿಡಿದು, ಇತ್ತೀಚಿನ ಘಟನೆಗಳನ್ನೆಲ್ಲಾ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿದ ಪುಸ್ತಕವು ಇಂದು ಬಿಡುಗಡೆಗೆ ಬಂದಿದ್ದು, ಅದರಲ್ಲಿ ಸೋನಿಯಾ ಗಾಂಧಿ (Sonia Gandhi) ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಬರೆದಿರುವ ಭಾಗ ಇದೀಗ ವೈರಲ್ ಆಗುತ್ತಿದೆ. ಸೋನಿಯಾ ಗಾಂಧಿ ಅವರು, ತಾವು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಬಗ್ಗೆ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ತಾವಿಬ್ಬರೂ ಭೇಟಿಯಾದಾಗ ಮೋದಿ ಅವರು, ತಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ ಎಂದಿದ್ದಾರೆ.
ನಮ್ಮಿಬ್ಬರ ನಡುವಿನ ವ್ಯತ್ಯಾಸಗಳು ವೈಯಕ್ತಿಕವಲ್ಲ, ಆದರೆ ಸೈದ್ಧಾಂತಿಕ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಇದುವರೆಗೆ ನಾನು ಯಾವುದೇ ನೇರ ಸಂಪರ್ಕ ಹೊಂದಿಲ್ಲ. ಔಪಚಾರಿಕ ಸಭೆಗಳು ಮತ್ತು ಸಾಂದರ್ಭಿಕ ಸಂಕ್ಷಿಪ್ತ ಸಂಭಾಷಣೆಗಳನ್ನು ಹೊರತುಪಡಿಸಿ, ಹೆಚ್ಚು ಸಂವಹನ ನಡೆಸಿಲ್ಲ ಎಂದಿರುವ ಸೋನಿಯಾ, ತಾವಿಬ್ಬರೂ ಹೆಚ್ಚಾಗಿ ಸಂಸತ್ತಿನ ಪ್ರತಿ ಅಧಿವೇಶನದ ನಂತರ ಸ್ಪೀಕರ್ ಕೊಠಡಿಯಲ್ಲಿ ನಡೆಯುವ ಸಭೆ ಸೇರಿದಂತೆ ಔಪಚಾರಿಕ ಸಂಸದೀಯ ಕಾರ್ಯಕ್ರಮಗಳಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಸಭೆಯಲ್ಲಿ ಹಾಜರಿರುತ್ತಾರೆ ಎಂದಿರುವ ಅವರು, "ಇದು ಸಾಮಾನ್ಯವಾಗಿ ಅನೇಕ ಜನರು ಇರುವ ಒಂದು ಸಣ್ಣ ಕೋಣೆ. ಪ್ರಧಾನಿ ಮೋದಿ ನನ್ನ ಮುಂದೆ ಬಂದಾಗ, ನಾವು ಔಪಚಾರಿಕವಾಗಿ ನಮಸ್ತೆಯೊಂದಿಗೆ ಪರಸ್ಪರ ಸ್ವಾಗತಿಸುತ್ತೇವೆ. ಹಿಂದೆ, ವಿವಿಧ ರಾಜಕೀಯ ಪಕ್ಷಗಳ ನಾಯಕರು ನನ್ನ ಜೊತೆ ಉತ್ತಮ ಸಂಬಂಧ ಹೊಂದಿದ್ದರು ಮತ್ತು ಸುಲಭವಾಗಿ ಭೇಟಿಯಾಗುತ್ತಿದ್ದರು. ನೇರವಾಗಿ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದರು. ಆದರೆ ಮೋದಿ ಅವರು ನನ್ನೊಂದಿಗೆ ಕಣ್ಣಿನ ಸಂಪರ್ಕವನ್ನು ತಪ್ಪಿಸಿ ಮಾತನಾಡುತ್ತಾರೆ" ಎಂದಿದ್ದಾರೆ.
ಆಸ್ಪತ್ರೆಯಿಂದ ಹಿಂದಿರುಗಿದ ನಂತರ, ಪ್ರಧಾನಿ ಮೋದಿ ಸಾಂದರ್ಭಿಕವಾಗಿ ತಮ್ಮ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಅವರು ನಡೆಸಿದ ಇತರ ಸಂಭಾಷಣೆಗಳು ಹುಟ್ಟುಹಬ್ಬ ಮತ್ತು ಹೊಸ ವರ್ಷದ ಶುಭಾಶಯಗಳ ಸಮಯದಲ್ಲಿ ಮಾತ್ರ ಎಂಬ ವಿಷ್ಯವನ್ನೂ ರಿವೀಲ್ ಮಾಡಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು, 12 ವರ್ಷಗಳಿಗೂ ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿದ್ದಾರೆ ಮತ್ತು ಮೂರನೇ ಬಾರಿಗೆ ಅಧಿಕಾರದಲ್ಲಿದ್ದಾರೆ. ಇದರ ಹೊರತಾಗಿಯೂ, ತಾವು ಪ್ರಧಾನಿಯೊಂದಿಗೆ ನಿಜವಾದ ಸಂಪರ್ಕವನ್ನು ಹೊಂದಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಸೋನಿಯಾ ಗಾಂಧಿ ಕೂಡ ಪ್ರಸ್ತಾಪಿಸಿದರು. ಅವರು ವಿಭಿನ್ನ ಸೈದ್ಧಾಂತಿಕ ಲೋಕಗಳಿಂದ ಬಂದವರು ಮತ್ತು ಪ್ರಧಾನಿ ಮೋದಿ ಅವರ ಭಾರತದ ದೃಷ್ಟಿಕೋನವು ಅವರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅವರು ಬರೆದಿದ್ದಾರೆ. "ಭಾರತದ ಬಗ್ಗೆ ನಾನು ಕಲಿತದ್ದು ನನ್ನ ಕುಟುಂಬ ಸದಸ್ಯರು, ಅವರ ಸೇವಾ ಜೀವನ ಮತ್ತು ಅನೇಕ ಜನಾಂಗಗಳು, ಸಂಸ್ಕೃತಿಗಳು, ಭಾಷೆಗಳು ಮತ್ತು ನಂಬಿಕೆಗಳ ಜನರನ್ನು ಒಳಗೊಂಡ ರಾಷ್ಟ್ರದ ಮೇಲಿನ ಅವರ ನಂಬಿಕೆಯಿಂದ ಬಂದಿದೆ. ಇದು ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಆಧರಿಸಿದೆ" ಎಂದು ಅವರು ಬರೆದಿದ್ದಾರೆ. ಭಾರತದ ಬಗ್ಗೆ ನರೇಂದ್ರ ಮೋದಿಯವರ ದೃಷ್ಟಿಕೋನವು ಆರ್‌ಎಸ್‌ಎಸ್ ಸಿದ್ಧಾಂತಗಳು ಮತ್ತು ಅವರ ಸ್ವಂತ ಬಾಲ್ಯದ ಅನುಭವಗಳಿಂದ ರೂಪುಗೊಂಡಿದೆ ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.