
ಬೆಂಗಳೂರು (ನ.10): ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಚಾಕು, ಚೂರಿ ಪಾರ್ಸೆಲ್ ಆಗಿದ್ದರೆ ಅದು ಅವರ ಆಕ್ಷನ್‌ಗೆ ರಿಯಾಕ್ಷನ್ ಎಂದು ಗೃಹ ಸಚಿವ ಪ್ರಿಯಾಂಕ್ ಎಂದು ತಿರುಗೇಟು ನೀಡಿದರು.
ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರನ್ನು ಭೇಟಿ ಮಾಡಿದರು. ಬಳಿಕ 'ಚಾಕು ಚೂರಿ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಪಾರ್ಸೆಲ್ ಹಾಕ್ತಿರೋ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರಕ್ರಿಯಿಸಿದರು.
ನೋಡಿ, ಛಲವಾದಿ ನಾರಾಯಣಸ್ವಾಮಿ ಏನು ಹೇಳಿಕೆ ನೀಡಿದ್ರು? ಕಾಂಗ್ರೆಸ್‌ನವರನ್ನ ತುಂಡು ತುಂಡು ಮಾಡಿ ಅರಬ್ಬೀ ಸಮುದ್ರಕ್ಕೆ ಹಾಕ್ತೀವಿ ಅಂದಿದ್ರು. ಹಾಗಾದ್ರೆ ಕಾಂಗ್ರೆಸ್‌ನವರನ್ನು ತುಂಡು ತುಂಡು ಮಾಡಬೇಕೆಂದರೆ ಏನು ಬೇಕಾಗುತ್ತೆ? ಚಾಕು ಚೂರಿಗಳು ತಾನೇ? ಅದನ್ನ ಪಾಪ ಯಾರೋ ನಮ್ಮ ಯೂತ್ ಕಾಂಗ್ರೆಸ್ ಹುಡುಗರು ಕಳಿಸಿಕೊಟ್ಟಿದ್ದಾರೆ. ಹಾಗಂತ ನಾನು ಇದನ್ನ ಸಮರ್ಥನೆ ಮಾಡ್ಕೊಳ್ತಿಲ್ಲ. ಹಾಗೆಲ್ಲ ಕಳಿಸಬಾರದಾಗಿತ್ತು, ಇವರೂ ಹಾಗೆಲ್ಲ ಹೇಳಬಾರದಾಗಿತ್ತು ಎಂದರು.
ನಿಮ್ಮದರಲ್ಲೇ ಲೈವ್ ಬರ್ತಿದೆರಿ ಅವರದು, ಈಗ ನೀವೇ ಹೋಗಿ ನೋಡಿ. ತುಂಡು ತುಂಡು ಮಾಡ್ತಿವಿ ಅನ್ನೋ ಕಲ್ಚರ್ ಸರಿನಾ? ಅಲ್ಲ, ಅವರದು ತಪ್ಪಿದೆ. ಈಗ ಅವರ ಆಕ್ಷನ್‌ಗೆ ರಿಯಾಕ್ಷನ್ ಬಂದಿದೆ. ಈಗ ಚೂರಿ ಕಳಿಸ್ತಿದ್ದಾರೆ ಎಂದರೇ ಹೇಗೆ.. ಅಂಥ ಹೇಳಿಕೆ ನೀಡುವ ಮುನ್ನ ಮುಂದಿನ ಪರಿಣಾಮದ ಬಗ್ಗೆ ಯೋಚಿಸಬೇಕಿತ್ತು ತಾನೇ? ಹೋಗ್ಲಿ ಆ ಹೇಳಿಕೆ ಬಗ್ಗೆ ಕ್ಷಮೆ ಕೇಳಿದ್ರಾ? ಕ್ಷಮೆ ಕೇಳುವ ಬದಲು ಹೇಳಿಕೆ ತಿರುಚಿದ್ದಾರೆ ಅಂತಾ ಹೇಳ್ತಿದ್ದಾರೆ. ಹಾಗಾದ್ರೆ ಲೈವ್ ಮಾಡಿರೋ ನೀವೇ ತಿರುಚಿದ್ದೀರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ಬಹಳ ಜನ ಇದ್ದಾರಲ್ಲಪ್ಪ..
ಕಾಂಗ್ರೆಸ್‌ನವರು ಬಹಳ ಇದ್ದಾರಲ್ಲಪ್ಪ. ಅವರನ್ನೆಲ್ಲ ತುಂಡು ತುಂಡು ಮಾಡೋಕೆ ಬಹಳ ವರ್ಷಗಳೇ ಬೇಕು. 130, 140 ವರ್ಷಗಳ ಇತಿಹಾಸ ಇರೋ ಪಕ್ಷ ನಮ್ದು. ಇಷ್ಟು ದೊಡ್ಡ ಪಕ್ಷನಾ ತುಂಡು ತುಂಡು ಮಾಡೋಕೆ ಸಾಧ್ಯನಾ? ನಮ್ಮ ಹುಡುಗರು ಚಾಕು ಚೂರಿ ಕಳಿಸಿದ್ದು ಸರಿ ಅಂತಾ ನಾನು ಒಪ್ಪಿಕೊಳ್ಳಲ್ಲ. ತುಂಡು ಮಾಡುವ ಬಗ್ಗೆ ಮಾತನಾಡಿದ್ದೇ ಅವರು, ಈಗ ಚಾಕು ಸಂಸ್ಕೃತಿ ನಮ್ಮದು(ಕಾಂಗ್ರೆಸ್‌ನದು) ಅಂಥ ಹೇಗೆ ಹೇಳ್ತಾರೆ. ನಮ್ಮ ಯೂತ್ ಕಾಂಗ್ರೆಸ್ ಹುಡುಗರು ಬಾಯಲ್ಲಿ ಬಂದಿರೋ ಮಾತಾ ಅದು? ಮೊದಲಿಗೆ ಬಂದಿದ್ದೇ ನಾರಾಯಣಸ್ವಾಮಿ ಬಾಯಿಂದ. ತುಂಡು ತುಂಡು ಮಾಡ್ತಿವಿ ಅಂದಿದ್ದಕ್ಕೆ 'ಹೌದಪ್ಪ ಮಾಡು ಮಾಡಿ ತೋರಿಸು ಅಂತಾ ಚಾಕು ಚೂರಿ ಪಾರ್ಸೆಲ್ ಮಾಡಿದ್ದಾರೆ ಎಂದು ಪರೋಕ್ಷವಾಗಿ ಆಕ್ಷನ್‌ಗೆ ರಿಯಾಕ್ಷನ್ ಸಮರ್ಥಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.