ಕುಮಾರಸ್ವಾಮಿ ಕೆಲಸ ಮಾಡದ್ದಕ್ಕೆ ಜನ ನನ್ನ ಗೆಲ್ಲಿಸಿದ್ರು: ಶಾಸಕ ಸಿ.ಪಿ.ಯೋಗೇಶ್ವರ್

By Kannadaprabha News  |  First Published Jan 13, 2025, 7:21 PM IST

ಕಳೆದ ಆರು ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿದ್ದ ಕುಮಾರಸ್ವಾಮಿ ಅಭಿವೃದ್ಧಿ ಕುರಿತು ಚಿಂತಿಸಲಿಲ್ಲ. ಅವರ ಅವಧಿಯಲ್ಲಿ ತಾಲೂಕು ಅಧ್ವಾನವಾಗಿದ್ದು, 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಚನ್ನಪಟ್ಟಣ ಉಪಚುನಾವಣೆ ಧರ್ಮ ಅಧರ್ಮದ ನಡುವಿನ ಚುನಾವಣೆಯಾಗಿತ್ತು. 


ಚನ್ನಪಟ್ಟಣ (ಜ.13): ಕಳೆದ ಆರು ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿದ್ದ ಕುಮಾರಸ್ವಾಮಿ ಅಭಿವೃದ್ಧಿ ಕುರಿತು ಚಿಂತಿಸಲಿಲ್ಲ. ಅವರ ಅವಧಿಯಲ್ಲಿ ತಾಲೂಕು ಅಧ್ವಾನವಾಗಿದ್ದು, 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಚನ್ನಪಟ್ಟಣ ಉಪಚುನಾವಣೆ ಧರ್ಮ ಅಧರ್ಮದ ನಡುವಿನ ಚುನಾವಣೆಯಾಗಿತ್ತು. ಅವರು ಏನೂ ಕೆಲಸ ಮಾಡದಿದ್ದಕ್ಕೆ ಜನ ನನ್ನನ್ನು ಗೆಲ್ಲಿಸಿದರು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು. ತಾಲೂಕಿನ ತಿಟ್ಟಮಾರನಹಳ್ಳಿ ಬಳಿ ಚೇತನ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಅಭಿನಂದನೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಆರು ವರ್ಷಗಳ ಆಡಳಿತಾವಧಿಯಲ್ಲಿ ಕುಮಾರಸ್ವಾಮಿ ಒಂದು ದಿನವೂ ಬಂದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮೀಟಿಂಗ್ ಮಾಡಿಲಿಲ್ಲ. ಕೆಲವು ಪುಡಾರಿಗಳನ್ನು, ಒಂದಿಬ್ಬರು ಗುತ್ತಿಗೆದಾರರನ್ನು ಕಟ್ಟಿಕೊಂಡು ತಿರುಗಿದರೆ ಹೊರತು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಿಲ್ಲ ಎಂದು ಆರೋಪಿಸಿದರು. ಕುಮಾರಸ್ವಾಮಿ ಅವಧಿಯಲ್ಲಿ ತಾಲೂಕಿನ ಮೇಲೆ ಯಾರ ಹಿಡಿತವೂ ಇರಲಿಲ್ಲ. ಅವರು ಒಂದು ದಿನವೂ ಹಳ್ಳಿಗಳಿಗೆ ಹೋಗಲಿಲ್ಲ. ಅವರಿಗೆ ಗ್ರಾಮಗಳ ಹೆಸರೇ ಗೊತ್ತಿಲ್ಲ. ಕುಮಾರಸ್ವಾಮಿ ಡವ್ ಗಿರಾಕಿ ಎಂದು ಜನರಿಗೆ ಗೊತ್ತು. ಚುನಾವಣೆ ಸಮಯದಲ್ಲಿ ಬರೀ ಭಾವನಾತ್ಮವಾಗಿ ಮಾತನಾಡುತ್ತಾರೆ. ಅದಕ್ಕೆ ಉಪಚುನಾವಣೆಯಲ್ಲಿ ಅವರು ಮನೆ-ಮನೆಗೆ ತಿರುಗಿದರೂ ಅವರನ್ನು ಜನ ತಿರಸ್ಕರಿಸಿದರು ಎಂದರು.

Tap to resize

Latest Videos

ದಲಿತರ ಸ್ಮಶಾನ, ನಿವೇಶನ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಶಾಸಕ ಸಿ.ಪಿ.ಯೋಗೇಶ್ವರ್

ಕುಮಾರಸ್ವಾಮಿ ವೇದಾಂತ ಹೇಳ್ತಾರೆ, ನಾಟಕ ಮಾಡ್ತಾರೆ. ಕಳೆದ 6 ವರ್ಷ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಲಜೀವನ್ ಮಿಷನ್ ಸಂಪೂರ್ಣ ವಿಫಲವಾಗಿದೆ. ಜನರಿಗೆ ಸರಿಯಾಗಿ ಕುಡಿಯುವ ನೀರು ಕೊಟ್ಟಿಲ್ಲ. ನಾನು ಹಳ್ಳಿಹಳ್ಳಿಗೆ ಹೋದಾಗ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ತಿದ್ದಾರೆ. ಅವರ ಅವಧಿಯಲ್ಲಿ ತಾಲೂಕಿನ ಕೆರೆಗಳನ್ನು ತುಂಬಿಸಲು ಆಸಕ್ತಿ ತೋರಲಿಲ್ಲ. ಆದರೆ, ನಾನು ಶಾಸಕನಾದ ಕೂಡಲೇ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಂಡಿದ್ದೇನೆ. ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ನಗರದ ಯುಜಿಡಿ ಸಮಸ್ಯೆ, ಕಸದ ಸಮಸ್ಯೆ, ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳಿಳನ್ನು ಬಗೆಹರಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.

ಆನೆ ಹಾವಳಿ ಸಮಸ್ಯೆಗೂ ಕ್ರಮ: ಪ್ರಸ್ತುತ ನಾನು ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ. ಇದರಿಂದ ಸರ್ಕಾರ ಜೀವಂತವಾಗಿದೆ ಎಂದು ಜನರಿಗೆ ಗೊತ್ತಾಗುತ್ತಿದೆ. ಜಿಲ್ಲೆಯಲ್ಲಿ ಆನೆ ಹಾವಳಿ ತೀವ್ರವಾಗಿದ್ದು, ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈಗಾಗಲೇ ಎರಡು ಆನೆಗಳನ್ನು ಹಿಡಿಯಲಾಗಿದೆ. ನಮ್ಮ ಅವಧಿಯಲ್ಲಿ ಆನೆ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲ ಭರವಸೆ ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್, ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಸ್.ಆರ್.ಪ್ರಮೋದ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಂಗನಾಥ್, ನಗರಸಭೆ ಅಧ್ಯಕ್ಷ ವಾಸಿಲ್ ಅಲಿಖಾನ್, ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ನಗರ ಬ್ಲಾಕ್ ಅಧ್ಯಕ್ಷ ಸುನಿಲ್, ಮುಖಂಡರಾದ ಎಸ್.ಲಿಂಗೇಶ್ ಕುಮಾರ್, ದಿನೇಶ್, ಎ.ಸಿ.ವೀರೇಗೌಡ, ಆರ್.ಎಂ. ಮಲವೇಗೌಡ ಇತರರಿದ್ದರು.

ಯೋಗೇಶ್ವರ್‌ಗೆ ತಾಕತ್ತಿದ್ದರೆ ಜೆಡಿಎಸ್‌ ಶಾಸಕರನ್ನು ಸೆಳೆಯಲಿ: ಪುಟ್ಟರಾಜು ಸವಾಲು

19ಕ್ಕೆ ಮತದಾರರಿಗೆ ಅಭಿನಂದನಾ ಸಮಾರಂಭ: ಚನ್ನಪಟ್ಟಣ ಉಪಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ ಮತದಾರರಿಗೆ ಜ.೧೯ರಂದು ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಆಗಮಿಸಲಿದ್ದಾರೆ. ಸಮಾವೇಶದ ಮೂಲಕ ಧನ್ಯವಾದ ತಿಳಿಸಿ ಕ್ಷೇತ್ರದ ಬೇಡಿಕೆಗಳನ್ನ ಸಿಎಂ ಮುಂದೆ ಇಡೋಣ. ಹಾಲಿನ ದರ ಹೆಚ್ಚಳ ಸೇರಿದಂತೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

click me!