Karnataka Politics : ರಾಜಕೀಯವನ್ನೇ ಬಿಡುವ ಮಾತನಾಡಿದ ಸಿದ್ದರಾಮಯ್ಯ

By Kannadaprabha NewsFirst Published Dec 4, 2021, 7:14 AM IST
Highlights
  • ಬಡವರಿಗೆ ಸೂರು ಕೊಡದ, ಜನ ವಿರೋಧಿ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ
  • ಜನತೆ ಸರ್ಕಾರದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ 

 ಶಿವಮೊಗ್ಗ(ಡಿ.04): ಬಡವರಿಗೆ ಸೂರು ಕೊಡದ, ಜನ ವಿರೋಧಿ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ (BJP Govt)  . ಜನತೆ ಸರ್ಕಾರದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ದೂರಿದರು.  ಪರಿಷತ್‌ ಚುನಾವಣೆ (MLC Election) ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಸರ್ಜಿ ಕನ್ವೆನ್ಷನ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ (Congress) ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ (BJP) ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಒಂದಾದರೂ ಮನೆ ಕಟ್ಟಿಕೊಟ್ಟಿದ್ದಾರಾ?, ಕೆ.ಎಸ್‌. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮಂತ್ರಿ ಅಂತೆ. ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಯಡಿಯೂರಪ್ಪ ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಅಂತಾ ಪತ್ರ ಬರಿತಾರೆ. ರಾಜ್ಯಪಾಲರಿಗೆ ಪತ್ರ ಬರೆದು ಕೂತು ಬಿಡ್ತು ಗಿರಾಕಿ. ಸ್ವಾಭಿಮಾನ ಇದ್ದಿದ್ದರೆ ಯಡಿಯೂರಪ್ಪ ವಿರುದ್ಧ ಪ್ರತಿಭಟಿಸಿ ರಾಜಿನಾಮೆ ನೀಡಬೇಕಿತ್ತು ಎಂದು ಮೂದಲಿಸಿದರು.

ಸಚಿವ ಈಶ್ವರಪ್ಪ (Eshwarappa) ಬ್ರೈನ್‌ಗೂ ನಾಲಿಗೆಗೂ ಲಿಂಕ್‌ ಹೋಗಿಬಿಟ್ಟಿದೆ. ನಾನು ಇದನ್ನು ಅನೇಕ ಬಾರಿ ಹೇಳಿದ್ದೇನೆ. ಈ ಮನುಷ್ಯನಿಗೆ ವಿವೇಚನೆಯೇ ಇಲ್ಲವಾಗಿದೆ. 40 ಪರ್ಸೆಂಟ್‌ ಲಂಚ ಕೊಡಬೇಕು ಅಂತಾ ಕಂಟ್ರಾಕ್ಟರ್‌ ಸಂಘದ ಅಧ್ಯಕ್ಷರೇ ಹೇಳಿದ್ದಾರೆ. ಬರೀ ದುಡ್ಡು ಹೊಡೆಯುವುದೇ ಇವರ ಕೆಲಸ ಎಂದು ದೂರಿದರು.

ಈಶ್ವರಪ್ಪನವರಿಗೆ ಕೇಳಿ 12 ವರ್ಷ ನಾನು ಹಣಕಾಸು ಸಚಿವನಾಗಿದ್ದೆ. ಎಲ್ಲ ಇಲಾಖೆಗಳಿಗೂ ಎಲ್‌ಓಸಿ ನೀಡಿದ್ದೇನೆ. ಯಾವುದಾದರೂ ಗುತ್ತಿಗೆದಾರರು ಒಂದು ಪೈಸೆ ತಗೊಂಡಿದ್ದೀನಿ ಎಂದು ಹೇಳಲಿ, ಆ ಕ್ಷಣ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ. ನಾಚಿಕೆ ಗೆಟ್ಟ ಸರ್ಕಾರ. ಮಾನ ಮರಾರ‍ಯದೆ ಇಲ್ಲದ ಸರ್ಕಾರ. ನೀವು ಬಿಜೆಪಿಗೆ (BJP) ಮತ ನೀಡಿದರೆ ಲಂಚ ತಗೊಳ್ಳುವ ಸರ್ಕಾರಕ್ಕೆ ಮತ ನೀಡಿದಂತೆ ಆಗುತ್ತದೆ. ನೀವು ಅವರನ್ನು ಸೋಲಿಸಿದರೆ ಲಂಚ ತಗೆದುಕೊಳ್ಳುವ ಸರ್ಕಾರವನ್ನು ಕಿತ್ತು ಎಸೆಯುತ್ತೇನೆ ಎಂದು ಹೇಳಿದಂತಾಗುತ್ತದೆ. ಚುನಾವಣೆಯಲ್ಲಿ (Election) ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದರು.

ಅಭಿವೃದ್ಧಿಗೆ, ಸಂಬಳ ಕೊಡಲು ದುಡ್ಡ ಸಿಗೋದಿಲ್ಲ. ಆ ಯಡಿಯೂರಪ್ಪ (Yediyurappa) ಎಲ್ಲೋ ಹಡಬಟ್ಟಿದುಡ್ಡು ತಂದು ಸಿಎಂ ಆದರು. ಅವರಿಗೆ ಯಾವಾಗಲೂ ಮುಂಬಾಗಿಲ ಮೂಲಕ ಬಂದು ಸಿಎಂ ಆಗಿ ಗೊತ್ತೇ ಇಲ್ಲ. ಎಂದೂ ಹಿಂಬಾಗಿಲ ಮೂಲಕ ಬರಬಾರದು. ಲಜ್ಜೆಗೆಟ್ಟಕರ್ನಾಟಕದ ಬಿಜೆಪಿಯಂತಹ ಮಾನಗೆಟ್ಟಸರ್ಕಾರ ದೇಶದಲ್ಲಿ ಎಲ್ಲಿಯೂ ಸಿಗೋದಿಲ್ಲ. 17 ಜನ ಶಾಸಕರನ್ನು 25-30 ಕೋಟಿ ಕೊಟ್ಟು ಕೊಂಡು ಕೊಂಡರು. ನಿಮ್ಮ ಜಿಲ್ಲೆಯವರು ಮಾಡಿದ ಈ ಕೆಲಸಕ್ಕಾಗಿ. ನೀವೆಲ್ಲ ತಲೆ ತಗ್ಗಿಸಬೇಕು. ಆಪರೇಷನ್‌ ಕಮಲ ಮಾಡುವುದು ಸಾಹಸ ಎಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಏನು ಹೇಳಿದರು. ಅಚೇ ದಿನ ಆಯೆಂಗೆ ಎಂದರು. ಅಡುಗೆ ಅನಿಲ, ಪೆಟ್ರೋಲ, ಡೀಸೆಲ್‌, ಅಡಿಗೆ ಎಣ್ಣೆ, ಕಬ್ಬಿಣ ಎಲ್ಲದರ ಬೆಲೆ ಏನಾಯಿತು? ಸಾಮಾನ್ಯ ಜನ ಬದುಕಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಮುಂದೆ ಬಿಜೆಪಿ (BJP) ಸರ್ಕಾರವನ್ನು ಅಧಿಕಾರಕ್ಕೆ ತರಬಾರದು. ಪರಿಷತ್‌ ಚುನಾವಣೆಯಲ್ಲಿ (Election) ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆರ್‌. ಪ್ರಸನ್ನಕುಮಾರ್‌ ಸ್ಪರ್ಧಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಅತಿ ಹೆಚ್ಚು ಮತ ಚಲಾಯಿಸಬೇಕು. ಯಡಿಯೂರಪ್ಪ ಮತ್ತು ಈಶ್ವರಪ್ಪಗೆ ಮುಖಭಂಗ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ (DK Shivakumar), ಶಾಸಕ ಬಿ.ಕೆ. ಸಂಗಮೇಶ್‌, ಅಭ್ಯರ್ಥಿ ಆರ್‌. ಪ್ರಸನ್ನಕುಮಾರ್‌, ಮಾಜಿ ಶಾಸಕರಾದ ಹೆಚ್‌.ಎಂ. ಚಂದ್ರಶೇಕರಪ್ಪ, ಮಧುಬಂಗಾರಪ್ಪ, ಕಾಂಗ್ರೆಸ್‌ Congress) ಜಿಲ್ಲಾಧ್ಯಕ್ಷ ಹೆಚ್‌.ಎಸ್‌. ಸುಂದರೇಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೃಷಿ ಕಾಯ್ದೆ ಜಾರಿಗೆ ತರುವ ಮೊದಲು ಕೃಷಿ ಆದಾಯ ಡಬ್ಬಲ್‌ ಮಾಡುತ್ತೇನೆ ಎಂದರು. ಯಾರಿಗಾದರೂ ಎರಡು ಪಟ್ಟು ಆಯಿತಾ? ರೈತರೇ ಹೇಳಲಿ. 400 ರು. ಇದ್ದ ಅಡುಗೆ ಅನಿಲ ದರ 200 ರು. ಆಯ್ತಾ? ಇಲ್ಲ. 1000 ರು. ಆಯ್ತು. ಇನ್ನು 60 ರು. ಇದ್ದ ಪೆಟ್ರೋಲ್‌ 110 ರು. ಆಯ್ತು. ಎಲೆಕ್ಷನ್‌ನಲ್ಲಿ ಸೋತ ಮೇಲೆ 10 ರು. ಇಳಿಸಿದರು. ಸೀಮೆಂಟ್‌, ಕಬ್ಬಿಣದ ಬೆಲೆ ಕೇಳಿದಿರಾ? ಶ್ರೀಮಂತರ ಹೊರತಾಗಿ ಬಡವರಾರ‍್ಯರೂ ಮನೆ ಕಟ್ಟುವಂತಿಲ್ಲ. ಗೊಬ್ಬರದ ದರ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.

- ಸಿದ್ಧರಾಮಯ್ಯ, ವಿರೋಧ ಪಕ್ಷ ನಾಯಕ

ಕಾಂಗ್ರೆಸ್‌ ಕಳೆದ ಬಾರಿಯೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ, ಮತ್ತೆ ಈ ಬಾರಿಯೂ ಸ್ಪರ್ಧಿಸಲು ಅವಕಾಶ ನೀಡಿದೆ. ಪಕ್ಷದೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಅನುಧಾನ ಹಂಚುವ ಕೆಲಸ ಮಾಡಿದ್ದೇನೆ. ಹೋರಾಟಗಳಲ್ಲೂ ಭಾಗವಹಿಸಿದ್ದೇನೆ. ಈ ಭಾರಿಯೂ ನನ್ನನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಸೇವೆಸಲ್ಲಿಸಲು ಅವಕಾಶ ನೀಡಿ.

- ಆರ್‌. ಪ್ರಸನ್ನಕುಮಾರ್‌, ವಿಧಾನಪರಿಷತ್‌ ಚುನಾವಣಾ ಅಭ್ಯರ್ಥಿ

click me!