* ಪರಿಷತ್ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುತ್ತಿರುವ ರೇವಣ್ಣ ಪುತ್ರಗೆ ಸಂಕಷ್ಟ
* ಸೂರಜ್ ರೇವಣ್ಣ ಅವರ ರಾಜಕೀಯ ಜೀವನದ ಮೊದಲ ಹೆಜ್ಜೆಗೆ ವಿಷ್ನ
* ಸೂರಜ್ ರೇವಣ್ಣನವರ ನಾಮಪತ್ರವನ್ನು ತಿರಸ್ಕರಿಸುವಂತೆ ಕೋರಿ ರಿಟ್ ಅರ್ಜಿ
ಬೆಂಗಳೂರು, (ಡಿ.03): ಕರ್ನಾಟಕ ವಿಧಾನ ಪರಿಷತ್ ಚುನಾವಣೆ (Karnataka MLC Election) ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿ ಗೆಲುವಿಗಾಗಿ ಕಸರತ್ತು ನಡೆಸಿವೆ.
ಇದರ ಮಧ್ಯೆ ಹಾಸನ ಪರಿಷತ್ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುತ್ತಿರುವ ಎಚ್ಡಿ ರೇವಣ್ಣನವರ ಮಗ ಡಾ. ಸೂರಜ್ ರೇವಣ್ಣಗೆ (Suraj Revanna) ಸಂಕಷ್ಟ ಎದುರಾಗಿದೆ.
MLC Elections:ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ನಾಮಪತ್ರ ರದ್ದಾಗುತ್ತಾ?
ಈಗಾಗಲೇ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿದ್ದು, ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದ್ರೆ, ಈಗ ಸೂರಜ್ ರೇವಣ್ಣನವರ ನಾಮಪತ್ರವನ್ನು(ಣomination) ತಿರಸ್ಕರಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಕುಂದೂರು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಲ್. ಹರೀಶ್ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಲ್ಸಿ ಅಭ್ಯರ್ಥಿ ಸೂರಜ್ ರೇವಣ್ಣಗೆ ನೋಟಿಸ್ ನೀಡಲಾಗಿದೆ. ಚುನಾವಣಾ ಆಯೋಗಕ್ಕೂ ಹೈಕೋರ್ಟ್ ನೋಟಿಸ್ ನೀಡಿದೆ.
Council Election : ರೇವಣ್ಣ ಪುತ್ರ ಸೂರಜ್ ಕೋಟಿ ಕೋಟಿ ಒಡೆಯ - ಉಳಿದವರ ಆಸ್ತಿ ಎಷ್ಟು..?
ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸುವಾಗ ಸಲ್ಲಿಸಿದ ಅಫಿಡವಿಟ್ನಲ್ಲಿ ತನ್ನ ಮದುವೆ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆಂದು ಆರೋಪ ಕೇಳಿಬಂದಿದೆ. ತಮ್ಮ ಆಸ್ತಿಯನ್ನು ಮಾತ್ರ ಘೋಷಣೆ ಮಾಡಿರುವ ಸೂರಜ್ ರೇವಣ್ಣ ತಮ್ಮ ಪತ್ನಿ, ಆಕೆಯ ಆಸ್ತಿಯ ಮಾಹಿತಿ ನೀಡಿಲ್ಲವೆಂದು ಆರೋಪಿಸಲಾಗಿದೆ. ಮದುವೆ ಕಾಲಂನಲ್ಲಿ ಅನ್ವಯ ಇಲ್ಲ ಎಂದು ಉಲ್ಲೇಖ ಮಾಡಲಾಗಿರುವುದರಿಂದ ಅವರ ನಾಮಪತ್ರ ತಿರಸ್ಕರಿಸುವಂತೆ ತಕರಾರು ಮಾಡಲಾಗಿತ್ತು. ಆದರೆ, ಚುನಾವಣಾಧಿಕಾರಿ ಆ ತಕರಾರನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಎಚ್ಡಿ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ವೃತ್ತಿಯಲ್ಲಿ ವೈದ್ಯರಾಗಿದ್ದು, ಹಾಸನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ವೃತ್ತಿಯಲ್ಲಿ ವೈದ್ಯನಾಗಿರುವ ಸೂರಜ್ ರೇವಣ್ಣ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿರುವಂತೆ 65 ಕೋಟಿಗೂ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ.
ಅಫಿಡವಿಟ್ ಪ್ರಕಾರ, ಸೂರಜ್ ರೇವಣ್ಣನವರ ಹೆಸರಲ್ಲಿ ರೂ. 3.53 ಕೋಟಿ ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಡಾ. ಸೂರಜ್ ತಮ್ಮ ತಾತ-ಅಜ್ಜಿ, ಅತ್ತೆಯಂದಿರು, ಹಾಗೂ ತಂದೆ-ತಾಯಿಯಿಂದ ಸುಮಾರು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಸೂರಜ್ ಅವರ ಬಳಿ ಸುಮಾರು 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ಕೆಜಿ ಬೆಳ್ಳಿಯಿದೆ. ಆದರೆ, ಅವರು ತಮ್ಮ ಅಫಿಡವಿಟ್ನಲ್ಲಿ ತಮ್ಮ ಪತ್ನಿಯ ಹೆಸರಲ್ಲಿರುವ ಆಸ್ತಿಯನ್ನು ಬಹಿರಂಗಪಡಿಸಿರಲಿಲ್ಲ. ಹಾಗೇ, ಮದುವೆಯಾಗಿದೆ ಎಂಬ ಬಗ್ಗೆಯೂ ಉಲ್ಲೇಖಿಸಿರಲಿಲ್ಲ.
ಸೂರಜ್ ರೇವಣ್ಣ 2020ರಲ್ಲಿ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಇದುವರೆಗೂ ವಿಧಾನಸಭೆ, ವಿಧಾನ ಪರಿಷತ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸೂರಜ್ ರೇವಣ್ಣ ಇದೀಗ ಎಂಎಲ್ಸಿ ಚುನಾವಣೆ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದ್ರೆ, ಆರಂಭದಲ್ಲಿ ವಿಘ್ನ ಎದುರಾಗಿದ್ದು, ಮುಂದೆ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಈ ಹಿಂದೆಯೇ ಹೇಳಿದ್ದ ವಕೀಲ
ಸೂರಜ್ ರೇವಣ್ಣ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಮರೆಮಾಚಿದ್ದಾರೆ ಎಂದು ವಕೀಲ ಜಿ.ದೇವರಾಜೇಗೌಡ ಅವರು ಗಂಭೀರ ಆರೋಪ ಮಾಡಿದ್ದರು.
ನಾಮಪತ್ರದೊಂದಿಗೆ (Nomination) ಸೂರಜ್ ರೇವಣ್ಣ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಮರೆಮಾಚಿದ್ದಾರಂತೆ. ಜತೆಗೆ ಅವರ ಹೆಸರಿನ ಚಾಲ್ತಿ ಖಾತೆಯೊಂದರ ಹಣದ ವಿವರವನ್ನೂ ಮುಚ್ಚಿಟ್ಟಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೇನೆ. ಅವರು ಕ್ರಮ ಕೈಗೊಳ್ಳದಿದ್ದರೆ ಶುಕ್ರವಾರ ಬೆಳಗ್ಗೆ ಹೈಕೋರ್ಟ್ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸುತ್ತೇನೆ. ಜನಪ್ರತಿನಿಧಿ ಕಾಯ್ದೆಯ ಅನ್ವಯ ಸೂರಜ್ ಮಾಡಿರುವುದು ಅಪರಾಧವಾಗುತ್ತದೆ. ಅವರ ನಾಮಪತ್ರ ತಿರಸ್ಕೃತ ಆಗಬೇಕಾಗುತ್ತದೆ ಎಂದು ಹೇಳಿದ್ದರು.